ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

250 ಹೆಕ್ಟರ್ ಪ್ರದೇಶದಲ್ಲಿ ಅಲಂಕಾರಿಕ ಹೂವಿನ ಬೆಳೆ....

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ದೇವನಹಳ್ಳಿ: ರೇಷ್ಮೆ ಬೆಲೆ ಕುಸಿತದಿಂದ ನಷ್ಟ ಅನುಭವಿಸುತ್ತಾ, ಕಂಗಾಲಾಗಿದ್ದ ತಾಲ್ಲೂಕಿನ ಕೆಲವು ರೈತರು `ಚೀನಾ ಆಸ್ಟರ್~ ಅಥವಾ ಬಟನ್ಸ್ ಹೂವು ಬೆಳೆದು ಆ ನಷ್ಟವನ್ನು ಸರಿದೂಗಿಸಿಕೊಳ್ಳುತ್ತಿದ್ದಾರೆ !
ಬಹಳ ಹಿಂದಿನಿಂದಲೂ ತಾಲ್ಲೂಕಿನಲ್ಲಿ ಬಟನ್ಸ್ ಹೂವು ಬೆಳೆಯಲಾಗುತ್ತಿದೆ.

ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 250 ಹೆಕ್ಟೇರ್ ಪ್ರದೇಶದಲ್ಲಿ `ಚೀನಾ ಆಸ್ಟರ್~ ಹೂವಿನ ಬೆಳೆಯಿದೆ. ಈಗ ಹೂವು ಕೊಯ್ಲಾಗುವ ಹಂತದಲ್ಲಿದೆ. ಒಟ್ಟು ವಾರ್ಷಿಕ 3000ಟನ್ ಹೂವಿನ ಇಳುವರಿ ನಿರೀಕ್ಷೆ ಇದೆ. ಕಳೆದ ವರ್ಷಕ್ಕಿಂತ 100ಹೆಕ್ಟೇರ್ ಪ್ರದೇಶದಲ್ಲಿ ಹೂವನ್ನು ಬೆಳೆಯಲಾಗಿದ್ದು, ಹೆಚ್ಚಿನ ಇಳುವರಿ ಬರಬಹುದೆಂದು ಇಲಾಖೆ ತಿಳಿಸಿದೆ.

ವಾಣಿಜ್ಯ ತಳಿಗಳು: ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ (ಐಐಎಚ್‌ಆರ್)ಅಭಿವೃದ್ಧಿಪಡಿಸಿರುವ  ಪೂರ್ಣಿಮಾ ವೈಲೆಟ್ ಕುಷನ್, ಕಾಮಿನಿ, ಶಶಾಂಕ್ ಹಾಗೂ ಪೂಲ್ ಗಣೇಶ ವೈಟ್, ಪೂಲ್ ಗಣೇಶ ಪಿಂಕ್, ಪೂಲ್ ಗಣೇಶ ವೈಲೆಟ್, ಪೂಲ್ ಗಣೇಶ ಪರ್ಪಲ್‌ಗಳು ವಾಣಿಜ್ಯ ತಳಿಗಳು. ಈ ಎಲ್ಲ ತಳಿಗಳನ್ನು ದೇವನಹಳ್ಳಿ ತಾಲ್ಲೂಕಿನಲ್ಲಿ ಬೆಳೆಯಲಾಗುತ್ತಿದೆ.

ಇವುಗಳಲ್ಲಿ  ಚೀನಾ ಅಸ್ಟರ್(ಬಟನ್) ಬಹಳ ಜನಪ್ರಿಯ ತಳಿ. ಇದು  ಅಲ್ಪಾವದಿ ಹೂವಿನ ಬೆಳೆ. ರೈತರಿಗೆ ಅತಿ ಕಡಿಮೆ ವೆಚ್ಚದಲ್ಲಿ ತ್ವರಿತವಾಗಿ ಬೆಳೆಯುವ ಹೂವು. ಹಾಗಾಗಿ ಹೆಚ್ಚು ಜನಪ್ರಿಯವಾಗಿದೆ. ಈ ಹೂವನ್ನು ಬಿಡಿ ಯಾಗಿ ಮತ್ತು ಕತ್ತರಿಸಿದ ಹೂಗಳ ಗುಚ್ಛ(ಕಟ್ ಫ್ಲವರ್) ರೂಪದಲ್ಲಿ ಮಾರಾಟ ಮಾಡಲಾಗುತ್ತದೆ.  ಹೆಚ್ಚು ದಿನ ತಾಳಿಕೆ ಗುಣ ಹೊಂದಿರುವುದರಿಂದ ಬೊಕೆ ಹಾಗೂ ಇಕೆಬಾನ ತಯಾರಿಕೆಯಲ್ಲಿ  ಕಟ್ ಫ್ಲವರ್‌ಗಳನ್ನು ಹೆಚ್ಚು ಬಳಸುತ್ತಾರೆ.

ಮಣ್ಣು ಹಾಗೂ ಬಿತ್ತನೆ ಕಾಲ: ಬಟನ್ಸ್ ಅಥವಾ ಆಸ್ಟರ್ ಹೂವನ್ನು ಯಾವುದೇ ಮಣ್ಣಿನಲ್ಲೂ ಬೆಳೆಯಬಹುದು.  ನೀರು ಬಸಿಯುವ ಕೆಂಪುಗೋಡು ಮಣ್ಣು ಹೂವು ಬೆಳೆಯಲು ಸೂಕ್ತವಾಗಿದೆ. ಸ್ವಲ್ಪ ಲೆಕ್ಕಾಚಾರದಲ್ಲಿ ಹೂವನ್ನು ಬೆಳೆಯುವ ರೈತರಾದರೆ ಈ ಹೂವನ್ನು ವರ್ಷವಿಡೀ ಬೆಳೆಯಬಹುದು.

ಸಾಮಾನ್ಯವಾಗಿ ಮುಂಗಾರು ತಿಂಗಳಲ್ಲಿ ಅಂದರೆ ಮೇ-ಜೂನ್‌ನಲ್ಲಿ ಸಸಿ ನಾಟಿ ಮಾಡಿದರೆ ಇಳುವರಿ ಹೆಚ್ಚು. ಹಿಂಗಾರಿನಲ್ಲಿ ಜನವರಿ ಮತ್ತು ಫೆಬ್ರವರಿ ಸಸಿ ನಾಟಿಯ ಸಮಯ. ಈ ಕಾಲದಲ್ಲಿ ನಾಟಿ ಮಾಡಿದರೆ ಇಳುವರಿ ಸ್ವಲ್ಪ ಕಡಿಮೆ ಎನ್ನುವುದು ರೈತರ ಅಭಿಪ್ರಾಯ.

ತಾಲ್ಲೂಕಿನ ಮಿಸಗಾನಹಳ್ಳಿಯ ರೈತ ಎಂ.ಮಕಲಪ್ಪ, ನಾಲ್ಕು ವರ್ಷಗಳಿಂದ ನಿರಂತರವಾಗಿ ಪುಷ್ಪ ಕೃಷಿಯಲ್ಲಿ ತೊಡಗಿದ್ದಾರೆ. ಈ ವರ್ಷ 20 ಗುಂಟೆಯಲ್ಲಿ 5 ಸಾವಿರ ಆಸ್ಟರ್ ಸಸಿ ನಾಟಿ ಮಾಡಿದ್ದಾರೆ. ನೀರಾವರಿ ವ್ಯವಸ್ಥೆ ಉತ್ತಮವಾಗಿದೆ. `ಸಕಾಲದಲ್ಲಿ ಗಿಡಗಳಿಗೆ  ಗೊಬ್ಬರ, ನೀರು ಪೂರೈಸಿದ್ದೇನೆ. ನಾಟಿ ಮಾಡಿದ 50ನೇ ದಿನದಿಂದ ಹೂವು ಬಿಡಲು ಆರಂಭವಾಯಿತು. 60-65 ದಿನದಿಂದ ಹೂವು ಕೊಯ್ಯಲು ಆರಂಭಿಸಿದೆ~ ಎನ್ನುತ್ತಾರೆ ಮಕಲಪ್ಪ.

ಅರ್ಧ ಎಕರೆಯಲ್ಲಿ ಸಸಿ ನಾಟಿ, ಗೊಬ್ಬರ, ಕೀಟ ನಾಶಕ, ಎಲ್ಲ ಸೇರಿ ಒಟ್ಟು 15 ಸಾವಿರ ರೂಪಾಯಿ ಖರ್ಚಾಗಿದೆ. ಈಗಾಗಲೇ 28ಸಾವಿರ ರೂಪಾಯಿ ಕೈ ಸೇರಿದೆ. ಕೊಯ್ಲು ಶುರುವಾದಾಗಿನಿಂದ ದಿನ ಬಿಟ್ಟು ದಿನ ಕೊಯ್ಲು ಮಾಡಿದ್ದಾರೆ. ಗೌರಿ - ಗಣೇಶ ಹಬ್ಬದ ಹೊತ್ತಿಗೆ 11 ಬಾರಿ ಕೊಯ್ಲು ಮಾಡಿದ್ದಾರೆ.

`ವರಮಹಾಲಕ್ಷ್ಮಿ, ಗೌರಿ ಗಣೇಶ ಸಂದರ್ಭದಲ್ಲಿ ಕೆ.ಜಿ ಹೂವಿಗೆ 50 ರಿಂದ 60ರೂ. ಬೆಲೆ ಇಟ್ಟು ಮಾರಾಟ ಮಾಡಿದ್ದೆ. ಈಗ ಸ್ವಲ್ಪ ಕಡಿಮೆಯಾಗಿದೆ(30-40 ರೂ.). ಮಾರುಕಟ್ಟೆ ಬೆಲೆ ಸಿಗುತ್ತೆ ತೊಂದರೆ ಇಲ್ಲ, ಕಳೆದ ವರ್ಷ ಇದೇ ಭೂಮಿಯಲ್ಲಿ ಇಷ್ಟೇ ಗುಂಟೆಯಲ್ಲಿ ಆಸ್ಟರ್ ಹೂ ಬೆಳೆದಿದ್ದೆ. 1.50 ಲಕ್ಷರೂ ಲಾಭಗಳಿಸಿದ್ದೆ~ ಎಂದು ಕಳೆದ ವರ್ಷದ ಲೆಕ್ಕಾಚಾರವನ್ನು ಹೋಲಿಕೆ ಮಾಡಿ ಹೇಳುತ್ತಾರೆ ಮಕಲಪ್ಪ.

ಬೆಂಗಳೂರು ಇಲ್ಲವೇ ಚಿಕ್ಕಬಳ್ಳಾಪುರದಲ್ಲಿ  ಈ ಹೂವಿನ ಮಾರುಕಟ್ಟೆ ಇರುವುದರಿಂದ, ಸಾಗಾಣೆ ಅಷ್ಟು ದೊಡ್ಡ ಸಮಸ್ಯೆಯಾಗಿಲ್ಲ. ಈ ಎರಡೂ ಮಾರುಕಟ್ಟೆಯಿಂದ ಹೊರರಾಜ್ಯ ಮತ್ತು ವಿದೇಶಗಳಿಗೆ ಹೂವು ರಫ್ತಾಗುತ್ತದೆ. ಹಾಗಾಗಿ ಹೂವಿನ ಮಾರುಕಟ್ಟೆಗೆ ಯಾವುದೇ ಸಮಸ್ಯೆಯಾಗಿಲ್ಲ ಎನ್ನುತ್ತಾರೆ ಅವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT