ಭಾನುವಾರ, ಜೂನ್ 13, 2021
28 °C

31ಕ್ಕೆ ಯಡಿಯೂರಪ್ಪಗೆ ಅಭಿನಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿಮಾನಿ ಬಳಗ ನಗರದ ಎನ್‌ಇಎಸ್ ಕ್ರೀಡಾಂಗಣದಲ್ಲಿ ಮಾರ್ಚ್ 31ರಂದು ಅಭಿನಂದನಾ ಸಮಾರಂಭ ಹಮ್ಮಿಕೊಂಡಿದೆ.

ಜಿಲ್ಲೆಯ ಅಭಿವೃದ್ಧಿಗೆ ಯಡಿಯೂರಪ್ಪ ಮಹತ್ವದ ಕೊಡುಗೆ ನೀಡಿದ್ದಾರೆ. ಕಳೆದ 60 ವರ್ಷಗಳಲ್ಲಿ ಜಿಲ್ಲೆಯಲ್ಲಿ ಆಗದ ಅಭಿವೃದ್ಧಿ ಕೆಲಸ ಅವರ ಅಧಿಕಾರಾವಧಿಯಲ್ಲಿ ನಡೆದಿದೆ. ಇಂತಹ ಸಾಧಕರು ಇನ್ನಷ್ಟು ವರ್ಷ ಅಧಿಕಾರದಲ್ಲಿರಬೇಕು. ಅವರನ್ನು ನೈತಿಕವಾಗಿ ಬೆಂಬಲಿಸುವ ದೃಷ್ಟಿಯಿಂದ ಪಕ್ಷಾತೀತವಾಗಿ ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾರ್ಚ್ 31ರಂದು ಸಂಜೆ 4ಕ್ಕೆ ಯಡಿಯೂರಪ್ಪ ಅವರನ್ನು ಅಭಿನಂದಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದ್ದು, ಜಿಲ್ಲೆ ಹಾಗೂ ರಾಜ್ಯದ ಹೆಸರಾಂತ ಸಾಂಸ್ಕೃತಿಕ ತಂಡಗಳು ಪ್ರದರ್ಶನ ನೀಡಲಿವೆ ಎಂದರು.

ಸುಮಾರು 1.50 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ  ಜನರನ್ನು ಕರೆತರಲು ಯಾವುದೇ ಬಸ್  ವ್ಯವಸ್ಥೆ ಮಾಡಿಲ್ಲ.  ಸ್ವಯಂ  ಪ್ರೇರಿತವಾಗಿಯೇ,  ಯಡಿಯೂರಪ್ಪ  ಅಭಿಮಾನಿಗಳು  ಆಗಮಿಸುತ್ತಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸದಾನಂದಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಜನಪ್ರತಿನಿಧಿಗಳನ್ನು, ವಿವಿಧ ಸಂಘ-ಸಂಸ್ಥೆಯ ಮುಖಂಡರನ್ನು ಆಹ್ವಾನಿಸಲಾಗುವುದು ಎಂದು ಅಭಿಮಾನಿ ಬಳದ ಸಂಚಾಲಕರೂ ಆದ ಕೆಪಿಎಸ್‌ಸಿ ಮಾಜಿ ಸದಸ್ಯ ರುದ್ರೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಏಸುದಾಸ್, ಚೂಡಾನಾಯ್ಕ, ರಾಜಶೇಖರ್, ತಲ್ಕೀನ್ ಅಹಮದ್, ಎಚ್.ಸಿ. ಬಸವರಾಜಪ್ಪ, ಶಾಂತವೀರನಾಯ್ಕ, ಬಳ್ಳೇಕೆರೆ ಸಂತೋಷ್, ಶಿವಪ್ಪ, ಐಡಿಯಲ್ ಗೋಪಿ ಮತ್ತಿತರರು ಉಪಸ್ಥಿತರಿದ್ದರು.

ಕರೆದಿಲ್ಲ; ಹೋಗಲ್ಲ: ಈಶ್ವರಪ್ಪ

ಮಾರ್ಚ್ 31ರಂದು ನಗರದಲ್ಲಿ ನಡೆಯುತ್ತಿರುವ ಬಿ.ಎಸ್. ಯಡಿಯೂರಪ್ಪ ಅಭಿನಂದನಾ ಸಮಾರಂಭದ ಬಗ್ಗೆ  ತಮಗೆ ಏನೂ ತಿಳಿದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದರು.

ಸಮಾರಂಭಕ್ಕೆ ಕರೆದರೇ ಹೋಗುತ್ತೀರಾ? ಎಂಬ ಪ್ರಶ್ನೆಗೆ, `ಹೋಗುವುದಿಲ್ಲ~ ಎಂದಷ್ಟೇ ಚುಟುಕಾಗಿ ಉತ್ತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.