ಭಾನುವಾರ, ಜನವರಿ 19, 2020
28 °C

4 ಬೋಟ್, ಹಿಟಾಚಿ ಯಂತ್ರ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಲೂರು: ತಾಲ್ಲೂಕಿನ ಶೆಟ್ಟಿಗೆರೆ ಗ್ರಾಮದ ಸಮೀಪ ಯಗಚಿ ಜಲಾಶಯದ ಹಿನ್ನೀರಿನಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಗಳ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸೋಮವಾರ ದಾಳಿ ನಡೆಸಿ ನಾಲ್ಕು ಬೋಟ್ ಮತ್ತು ಒಂದು ಹಿಟಾಚಿ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.ಹಲವು ದಿನಗಳಿಂದ ಶೆಟ್ಟಿಗೆರೆ ದೇವಿರಮ್ಮ ದೇವಾಲಯದ ಹಿಂಭಾಗದಲ್ಲಿರುವ ಯಗಚಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಬೋಟ್‌ಗಳ ಮೂಲಕ ಅಕ್ರಮವಾಗಿ ಮರಳು ತೆಗೆಯಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ತಹಶೀಲ್ದಾರ್ ರವಿಚಂದ್ರ ನಾಯಕ್ ಮತ್ತು ಸಿಪಿಐ ಆರ್. ಶ್ರೀಕಾಂತ್, ನೇತೃತ್ವದಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಸೋಮವಾರ ದಿಢೀರ್ ದಾಳಿ ನಡೆಸಿದಾಗ ಮರಳು ದಂಧೆಕೋರರು ಬೋಟ್ ಮತ್ತು ಹಿಟಾಚಿ ಯಂತ್ರಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.ಬೋಟ್ ಮೂಲಕ ಜಲಾಶಯದ ಮಧ್ಯಭಾಗಕ್ಕೆ ತೆರಳುವ ಮರಳು ದಂಧೆಕೋರರು ಬೋಟ್‌ನಿಂದ ಜಲಾಶಯದವರೆಗೆ ಸೇತುವೆಯಂತ ಪೈಪ್‌ಗಳನ್ನು ಜೋಡಿಸಿಕೊಂಡು ನದಿಯ ಮಧ್ಯಭಾಗದಲ್ಲಿ ಯಂತ್ರದ ಮೂಲಕ ಮರಳನ್ನು ಮೇಲಕ್ಕೆತ್ತಿ ಪೈಪ್ ಮೂಲಕ ಮರಳನ್ನು ದಡಕ್ಕೆ ಸಾಗಿಸಿ ಅಲ್ಲಿಂದ ಲಾರಿಗಳ ಮೂಲಕ ಮರಳನ್ನು ಸಾಗಿಸುತ್ತಿದ್ದರು.ತಾಲ್ಲೂಕಿನ ಯಗಚಿ ನದಿ, ಯಗಚಿ ಅಣೆಕಟ್ಟೆಯ ಹಿನ್ನೀರಿನ ವ್ಯಾಪ್ತಿಯಲ್ಲಿರುವ ಗೋವಿನಹಳ್ಳಿ, ಶೆಟ್ಟಿಗೆರೆ, ಕೂಡ್ಲೂರು ಸೇರಿದಂತೆ ಹಲವೆಡೆ ಅಕ್ರಮವಾಗಿ ಮರಳು ತೆಗೆಯುತ್ತಿರುವ ಪ್ರಕರಣಗಳು ವರದಿಯಾಗಿದ್ದು, ಅಕ್ರಮ ಮರಳು ದಂಧೆಗೆ ಶೀಘ್ರವೇ ಕಡಿವಾಣ ಹಾಕಲಾಗುವುದು ಎಂದು ತಹಶೀಲ್ದಾರ್ ರವಿಚಂದ್ರ ನಾಯಕ್ `ಪ್ರಜಾವಾಣಿ'ಗೆ ತಿಳಿಸಿದರು. ದಾಳಿ ಸಂದರ್ಭದಲ್ಲಿ ಹಳೇಬೀಡು ಪಿಎಸ್‌ಐ ರವಿಕುಮಾರ್, ಎಎಸ್‌ಐ ಚಂದ್ರಪ್ಪ ಇದ್ದರು.

ಪ್ರತಿಕ್ರಿಯಿಸಿ (+)