ಸೋಮವಾರ, ಏಪ್ರಿಲ್ 19, 2021
25 °C

40 ಮೆ.ವಾ ವಿದ್ಯುತ್, 10 ಸಾವಿರ ಲೀಟರ್ ಡೀಸೆಲ್ ಉತ್ಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರದ ಘನತ್ಯಾಜ್ಯ ಬಳಸಿ ವಿದ್ಯುತ್ ಬಯೋ ಡೀಸೆಲ್ (ಜೈವಿಕ ಇಂಧನ) ಉತ್ಪಾದನಾ ಘಟಕ ಆರಂಭಿಸುವ ಮಹತ್ವದ ನಿರ್ಣಯಕ್ಕೆ ಮಂಗಳವಾರ ನಗರಸಭೆ ಸಾಮಾನ್ಯಸಭೆ ಸರ್ವಾನುಮತದ ಒಪ್ಪಿಗೆ ನೀಡಿತು.ನಗರದಲ್ಲಿ ಪ್ರತಿ ದಿನ 110ರಿಂದ 120 ಟನ್ ಘನತ್ಯಾಜ್ಯ ಸಂಗ್ರಹವಾಗುತ್ತಿದೆ. ಘನತ್ಯಾಜ್ಯ ಬಳಸಿ ವಿದ್ಯುತ್, ಬಯೋ ಡೀಸೆಲ್ ಉತ್ಪಾದನೆ ಮಾಡುವ ದಿಸೆಯಲ್ಲಿ ನಗರಸಭೆ ರಾಜ್ಯದಲ್ಲೇ ಮೊದಲ ಹೆಜ್ಜೆ ಇಟ್ಟಂತಾಗಿದೆ. ಈ ವಿದ್ಯುತ್ ಘಟಕವನ್ನು ನಗರಕ್ಕೆ ತರುವಲ್ಲಿ ಆಯುಕ್ತೆ ರೋಹಿಣಿ ಸಿಂಧೂರಿ ವಿಶೇಷ ಪ್ರಯತ್ನವನ್ನು ಈಚೆಗೆ `ಪ್ರಜಾವಾಣಿ~ ವರದಿ ಮಾಡಿತ್ತು. ಆಯುಕ್ತರ ಪ್ರಯತ್ನಕ್ಕೆ ಸಭೆಯಲ್ಲಿ ಸದಸ್ಯರು ಅಭಿನಂದನೆ ಸಲ್ಲಿಸಿದರು.ಅಜ್ಜಗೊಂಡನಹಳ್ಳಿಯಲ್ಲಿ ನಿರ್ಮಾಣ ಪ್ರಕ್ರಿಯೆಯಲ್ಲಿರುವ ಘನತ್ಯಾಜ್ಯ ಸಂಸ್ಕರಣಾ ಘಟಕದ ಪ್ರದೇಶದಲ್ಲೇ ಈ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಲು ಬೇಕಾಗುವ ಜಾಗ ನೀಡಲು ಸಭೆ ಅನುಮೋದನೆ ನೀಡಿತು. ನಗರಸಭೆ ಒಪ್ಪಿಗೆಯನ್ನು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.ವಿದ್ಯುತ್ ಘಟಕ ಸ್ಥಾಪಿಸಲು ಗುತ್ತಿಗೆ ಆಧಾರದಲ್ಲಿ ಐದು ಎಕರೆ ಭೂಮಿ ಕಂಪೆನಿಗೆ ನೀಡಲಾಗುವುದು. ಪ್ರತಿ ದಿನ 40 ಮೆಗಾವಾಟ್ ವಿದ್ಯುತ್, 10 ಸಾವಿರ ಲೀಟರ್ ಬಯೋ ಡೀಸೆಲ್ ಉತ್ಪಾದನೆ ಮಾಡಲಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಕಂಪೆನಿಯೊಂದಿಗೆ ಪರಸ್ಪರ ಒಪ್ಪಂದಕ್ಕೆ ಬರಬೇಕು. ಸರ್ಕಾರ ಅನುಮತಿ ನೀಡಿದ ಏಳೆಂಟು ತಿಂಗಳಲ್ಲಿ ಘಟಕ ತಲೆಎತ್ತಲಿದೆ ಎಂದು ಸಿಂಧೂರಿ ಸಭೆಗೆ ಮಾಹಿತಿ ನೀಡಿದರು.ವಿದ್ಯುತ್ ಘಟಕ ಸ್ಥಾಪಿಸಲು ಮುಂದಾಗಿರುವ ಬೆಂಗಳೂರಿನ ಶಮ್‌ಗಿರ್ ರಿನೀವಬಲ್ ಎನರ್ಜಿ ಖಾಸಗಿ ಕಂಪೆನಿ ಸಿಬ್ಬಂದಿ ಯೋಜನೆ ಕುರಿತು ಸಾಮಾನ್ಯ ಸಭೆಗೆ ಪ್ರಾತ್ಯಕ್ಷಿಕೆ ಮೂಲಕ ವಿವರ ನೀಡಿದರು. ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ, ಅದರ ಪ್ರಯೋಜನ ಕುರಿತು ಹೇಳಿದರು. ಪ್ರಾತ್ಯಕ್ಷಿಕೆ ವೀಕ್ಷಿಸಿದ ಸದಸ್ಯರು ಸರ್ವಾನುಮತದಿಂದ ಯೋಜನೆಗೆ ಅನುಮೋದನೆ ನೀಡಿದರು.ಸ್ವಚ್ಛತೆ ಕಾಪಾಡಲು ನಗರದ ಪ್ರಮುಖ ರಸ್ತೆಗಳಲ್ಲಿ ಕಸ ಸಂಗ್ರಹ ಡಬ್ಬಿಗಳನ್ನು ಇಡಲು ಸಭೆ ಅನುಮೋದನೆ ನೀಡಿತು. ಪ್ರಾಯೋಗಿಕವಾಗಿ ನಗರದ ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಅಶೋಕ ನಗರ ರಸ್ತೆಗಳಲ್ಲಿ ಯೋಜನೆ ಜಾರಿಗೆ ಬರಲಿದೆ. ಅಲ್ಲದೆ ರೂ. 20 ಲಕ್ಷ ವೆಚ್ಚದಲ್ಲಿ ಹೊಸ ಜೆಸಿಬಿ ವಾಹನ ಖರೀದಿ, ನಗರಸಭೆಯ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರವನ್ನು ಸಾರ್ವಜನಿಕರಿಗೆ ಬಾಡಿಗೆ ನೀಡಲು ಸಭೆ ಅನುಮೋದಿಸಿತು.ಆಸ್ಪತ್ರೆಗೆ ನೋಟಿಸ್: ಜನನ, ಮರಣ ಪ್ರಮಾಣ ಪತ್ರಗಳಲ್ಲಿ ಹೆಸರುಗಳನ್ನು ತಪ್ಪು ತಪ್ಪಾಗಿ ಬರೆಯಲಾಗುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗಿದೆ. ತಿದ್ದುಪಡಿ ಮಾಡಿಸಿಕೊಳ್ಳಲು ಬೆಂಗಳೂರಿಗೆ ಅಲೆಯಬೇಕಾಗಿದೆ ಎಂದು ಸದಸ್ಯರಾದ ನಯಾಜ್ ಅಹಮ್ಮದ್, ಹಫೀಜ್, ತರುಣೇಶ್ ದೂರಿದರು. ಇದು ಚರ್ಚೆಗೆ ಗ್ರಾಸವಾಗಿ ಸಭೆಯಲ್ಲಿ ಗೊಂದಲ, ಗದ್ದಲ ಮೂಡಿಸಿತು.ಖಾಸಗಿ ಆಸ್ಪತ್ರೆಗಳಲ್ಲಿ ಕೇರಳದ ನರ್ಸ್‌ಗಳು ಹೆಚ್ಚಿದ್ದಾರೆ. ಭಾಷೆ ಗೊತ್ತಿಲ್ಲದ ಕಾರಣ ಹೆಸರು ತಪ್ಪು ತಪ್ಪಾಗಿ ಬರೆದು ಕಳಿಸುತ್ತಾರೆ. ಆಸ್ಪತ್ರೆಯಲ್ಲಿ ಬರೆಯುವ ಹೆಸರು ಸರಿಪಡಿಸಲು ನಗರಸಭೆಗೆ ಅಧಿಕಾರ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಈ ತಪ್ಪಿಗೆ ಖಾಸಗಿ ಆಸ್ಪತ್ರೆಗಳನ್ನು ಹೊಣೆ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಹುಟ್ಟಿದ ದಿನಾಂಕ, ಹೆಸರು ತಪ್ಪು ನಮೂದಿಸುವ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೋಟಿಸ್ ನೀಡುವುದಾಗಿ ಅಧ್ಯಕ್ಷೆ ದೇವಿಕಾ ಪ್ರಕಟಿಸಿದರು.ಕೈ ಮುಗಿದ ಎಂಜಿನಿಯರ್‌ಗೆ ನೋಟಿಸ್

ತುಮಕೂರು: `ದಯವಿಟ್ಟು ನಗರಸಭೆ ಕರ್ತವ್ಯದಿಂದ ಬಿಡುಗಡೆಗೊಳಿಸಿ~ ಎಂದು ಕಿರಿಯ ಎಂಜಿನಿಯರ್ ಶಿವಕುಮಾರ್ ಕೈಮುಗಿದು ಸವಾಲು ಎಸೆದ ಘಟನೆಗೆ ಸಾಮಾನ್ಯಸಭೆ ಸಾಕ್ಷಿಯಾಯಿತು.ಸದಸ್ಯರ ಆರೋಪಗಳಿಗೆ ಕೇರ್ ಮಾಡದ ಈ ಎಂಜಿನಿಯರ್ ನನಗೂ ಇಲ್ಲಿ ಕೆಲಸ ಮಾಡಲು ಇಷ್ಟ ಇಲ್ಲ. ಇಲ್ಲಿಂದ ಹೊರಗೆ ಕಳುಹಿಸಿ ಎಂದು ಹೇಳಿ ಆಯುಕ್ತರು, ಅಧ್ಯಕ್ಷರ ಉತ್ತರಕ್ಕೂ ಕಾಯದೇ ತಮ್ಮ ಆಸನಕ್ಕೆ ಹೋಗಿ ಕುಳಿತರು.ಶಿವಕುಮಾರ್ ಕಾರ್ಯವೈಖರಿಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. `ಶಿವಕುಮಾರ್ ವರ್ತನೆ ರೌಡಿಯಂತೆ ಇರುತ್ತದೆ. ಕುಡುಕರಂತೆ ಮಾತನಾಡುತ್ತಾರೆ. ಸದಸ್ಯರ ದೂರವಾಣಿ ಕರೆ ಸ್ವೀಕರಿಸಲ್ಲ. ಇಂಥವರು ನಗರಸಭೆಗೆ ಬೇಕಾಗಿಲ್ಲ. ಕರ್ತವ್ಯದಿಂದ ಬಿಡುಗಡೆಗೊಳಿಸಿ~ ಎಂದು ಸದಸ್ಯರಾದ ಹಫೀಜ್, ರಾಜಣ್ಣ, ನಯಾಜ್ ಒತ್ತಾಯಿಸಿದರು.ಇದಕ್ಕೆ ಉತ್ತರಿಸಿದ ಶಿವಕುಮಾರ್, ದಯವಿಟ್ಟು ಇಲ್ಲಿಂದ ಬಿಡುಗಡೆಗೊಳಿಸಿ ಎಂದು ಕೈಮುಗಿದರು. ಇದು ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ಇದು ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.ಚರ್ಚೆ, ವಾಗ್ವಾದ, ಆರೋಪ, ಗದ್ದಲದ ಕಾರಣ ಅಧ್ಯಕ್ಷೆ ದೇವಿಕಾ ಅವರು ಎಂಜಿನಿಯರ್ ಶಿವಕುಮಾರ್ ಅವರನ್ನು ನಗರಸಭೆ ಕರ್ತವ್ಯದಿಂದ ಬಿಡುಗಡೆಗೊಳಿಸಲು ಆದೇಶಿದರು. ತಕ್ಷಣವೇ ತಪ್ಪು ತಿದ್ದುಕೊಂಡ ಅವರು, ಕರ್ತವ್ಯದಿಂದ ಬಿಡುಗಡೆಗೊಳಿಸುವ ಅಧಿಕಾರ ನಗರಸಭೆ ಆಯುಕ್ತರಿಗೆ ಇಲ್ಲ. ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದ ಈ ಹಿಂದಿನ ಆಯುಕ್ತರ ಆದೇಶ ಇನ್ನೂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಹೀಗಾಗಿ ಅಧಿಕಾರಿಗೆ ತಿಳುವಳಿಕೆ ನೋಟಿಸ್ ನೀಡಲಷ್ಟೇ ಅಧಿಕಾರ ಇದೆ ಎಂದರು. ಆಗ ಸದಸ್ಯರೆಲ್ಲರೂ ಮೌನವಾದರು.ಪ್ರತಿಯೊಂದಕ್ಕೂ ಲೆಕ್ಕದ ಕಡತ ಕೇಳಿದ ಸದಸ್ಯರೊಬ್ಬರ ವರ್ತನೆಗೆ ಆಯುಕ್ತೆ ರೋಹಿಣಿ ಸಿಂಧೂರಿ ಸುಸ್ತಾಗಿ ತಲೆ ಮೇಲೆ ಕೈಹೊತ್ತು ಕೂತರು. ಸದಸ್ಯರು ಗಂಭೀರವಾಗಿ ಚರ್ಚೆ ಮಾಡಬೇಕು. ಸಣ್ಣ ವಿಷಯಗಳನ್ನೇ ದೊಡ್ಡದು ಮಾಡಿ ಸಭೆ ಗೊಂದಲಕ್ಕೆ ದೂಡಬೇಡಿ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.