ಸೋಮವಾರ, ಜೂನ್ 14, 2021
27 °C

4.2 ಕೋಟಿ ಯೋಜನೆ: ಬಾರದ ಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧುಗಿರಿ: ತಾಲ್ಲೂಕಿನಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ರೂ. 4.2 ಕೋಟಿ  ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಎಇಇ ಲೋಕೇಶ್ ತಿಳಿಸಿದರು.ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ನಾಗಮ್ಮ ಅಧ್ಯಕ್ಷತೆಯಲ್ಲಿ ನಡೆದ 2010-11ನೇ ಸಾಲಿನ ಜಮಾಬಂದಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ತಾಲ್ಲೂಕಿಗೆ ರೂ. 20 ಲಕ್ಷ ಹಣ ಬಿಡುಗಡೆಯಾಗಿದ್ದು, ಇದು ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ತಲುಪಿದೆ. ಆ ಹಣ ಏನಾಗಿದೆ ಎಂದು ತಿಳಿದಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.ಇಲ್ಲಿಯವರೆಗೆ 54 ಕೊಳವೆಬಾವಿ ಕೊರೆಸಲಾಗಿದೆ. 12 ಕೊಳವೆ ಬಾವಿಗಳಿಗೆ ಹಳೆಯ ಪಂಪು ಮತ್ತು ಮೋಟಾರು ಅಳವಡಿಸಲಾಗಿದೆ. 18 ಕೊಳವೆಬಾವಿಗಳಿಗೆ ರಾಷ್ಟ್ರೀಯ ಕುಡಿಯುವ ನೀರಿನ ಯೋಜನೆಯಡಿ ಪಂಪ್ ಮೋಟಾರ್ ಅಳವಡಿಸಲಾಗಿದೆ. ಇನ್ನುಳಿದ 24 ಕೊಳವೆಬಾವಿಗಳಿಗೆ ಪಂಪು ಮೋಟಾರ್ ಅಳವಡಿಸಲು ಹಣ ನೀಡುವಂತೆ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.ಶಾಸಕರ ನೇತೃತ್ವದ ಕಾರ್ಯಪಡೆಯ ಸಭೆಗಳು ನಡೆದರೂ ಯಾವುದೇ ಪ್ರತಿಫಲ ದೊರೆತಿಲ್ಲ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ನೀರಿನ ಅಭಾವ ಎದುರಿಸಬೇಕಾಗುತ್ತದೆ. ಹಾಲಿ 28 ನೂತನ ಬೋರ್‌ವೆಲ್ ಕೊರೆಸಬೇಕಾದ ಅವಶ್ಯಕತೆ ಇದೆ ಎಂದು ವಿವರಿಸಿದರು.

 

2010-11ನೇ ಸಾಲಿನಲ್ಲಿ 17 ಇಲಾಖೆಗಳ ವಿವಿಧ ಲೆಕ್ಕ ಶೀರ್ಷಿಕೆಯಡಿ ರೂ. 39.98 ಕೋಟಿ ಜಮೆಯಾಗಿದ್ದು, ರೂ. 39.08 ಕೋಟಿ ಖರ್ಚಾಗಿದೆ ಎಂದರು. ಮುಖ್ಯ ಲೆಕ್ಕಾಧಿಕಾರಿ ರಾಮಚಂದ್ರಯ್ಯ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಬಿ.ಜಯದೇವ್, ಇಒ ಎಚ್.ಡಿ.ಮಹಾಲಿಂಗಯ್ಯ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.