ಶುಕ್ರವಾರ, ಮೇ 7, 2021
24 °C

52 ವೈದ್ಯರ ವಿರುದ್ಧ ಮೊಕದ್ದಮೆ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಸ್ಥಾನದಲ್ಲಿ ವಾಸಿಸದೇ ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ಲೋಪ ಎಸಗಿರುವುದಲ್ಲದೇ, ಸುಳ್ಳು ಮಾಹಿತಿ ನೀಡಿ ವಿಶೇಷ ಭತ್ಯೆ ಪಡೆಯುತ್ತಿದ್ದ ಆರೋಪದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳ 52 ಮಂದಿ ವೈದ್ಯರ ವಿರುದ್ಧ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು ಸೋಮವಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳ ಎಲ್ಲ ವೈದ್ಯರು ಕೇಂದ್ರ ಸ್ಥಾನದಲ್ಲಿ ವಾಸಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2009ರ ಡಿಸೆಂಬರ್‌ನಲ್ಲಿ ಆದೇಶ ಹೊರಡಿಸಿತ್ತು. ಕೇಂದ್ರ ಸ್ಥಾನದಲ್ಲಿ ಇರುವುದಕ್ಕಾಗಿ ವೈದ್ಯರಿಗೆ ತಿಂಗಳಿಗೆ ರೂ. 10,000ದಿಂದ ರೂ. 15,000ದವರೆಗೆ ವಿಶೇಷ ಭತ್ಯೆಯನ್ನೂ ನೀಡಲು ಕ್ರಮ ಕೈಗೊಳ್ಳಲಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ 99 ಸರ್ಕಾರಿ ವೈದ್ಯರ ಪೈಕಿ 52 ಮಂದಿ ಕೇಂದ್ರ ಸ್ಥಾನದಲ್ಲಿ ವಾಸ ಮಾಡುವುದೇ ಇಲ್ಲ. ಆದರೂ, ಸುಳ್ಳು ಮಾಹಿತಿ ನೀಡಿ ಭತ್ಯೆ ಪಡೆದಿದ್ದಾರೆ ಎಂಬುದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.

2011ರ ಆಗಸ್ಟ್ 1ರಿಂದ 2012ರ ಫೆಬ್ರುವರಿ 29ರವರೆಗಿನ ಅವಧಿಯಲ್ಲಿ 52 ವೈದ್ಯರು ಅಕ್ರಮವಾಗಿ ರೂ. 29.49 ಲಕ್ಷ  ವಿಶೇಷ ಭತ್ಯೆ ಪಡೆದಿದ್ದಾರೆ. ತಲಾ ರೂ. 70,000ದವರೆಗೂ ಭತ್ಯೆ ಜೇಬಿಗಿಳಿಸಿದ್ದಾರೆ. ಆದರೆ, ತಮ್ಮ ಅನುಕೂಲಕ್ಕೆ ತಕ್ಕಂತೆ ನಗರ ಪ್ರದೇಶಗಳಲ್ಲಿ ವಾಸ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ್ದರು ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.

ಮೊದಲ ಪ್ರಕರಣ: ವೈದ್ಯರು ಕೇಂದ್ರ ಸ್ಥಾನದಲ್ಲಿ ವಾಸಿಸದೇ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದರ ಜೊತೆಯಲ್ಲೇ ಸರ್ಕಾರದಿಂದ ವಿಶೇಷ ಭತ್ಯೆಯನ್ನೂ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲೋಕಾಯುಕ್ತ ಪೊಲೀಸರಿಗೆ ಲಭ್ಯವಾಗಿತ್ತು. ಈ ಮಾಹಿತಿಯ ಬೆನ್ನುಹತ್ತಿದ ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್‌ಪಿ ಎಂ.ಕೃಷ್ಣಪ್ಪ ಅವರು, ಮೊದಲಿಗೆ ಜಿಲ್ಲಾ ಆರೋಗ್ಯ ಅಧಿಕಾರಿಗೆ (ಡಿಎಒ) ಪತ್ರ ಬರೆದು ಜಿಲ್ಲೆಯಲ್ಲಿರುವ ವೈದ್ಯರು ಮತ್ತು ಅವರು ವಾಸಿಸುತ್ತಿರುವ ಸ್ಥಳಗಳ ಅಧಿಕೃತ ಮಾಹಿತಿ ತರಿಸಿಕೊಂಡಿದ್ದರು. 52 ವೈದ್ಯರು ಕೇಂದ್ರ ಸ್ಥಾನದಲ್ಲಿ ವಾಸಿಸುವುದಿಲ್ಲ ಎಂಬ ವಿವರ ಡಿಎಚ್‌ಒ ನೀಡಿದ ಮಾಹಿತಿಯಲ್ಲಿತ್ತು. ಕೆಲ ದಿನಗಳ ನಂತರ ಮತ್ತೊಂದು ಪತ್ರ ಬರೆದ ಕೃಷ್ಣಪ್ಪ ಅವರು, ಕೇಂದ್ರ ಸ್ಥಾನದಲ್ಲಿ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಭತ್ಯೆ ಪಡೆಯುತ್ತಿರುವ ವೈದ್ಯರ ವಿವರ ಕೋರಿದರು. ಆಗ ಪ್ರತಿಕ್ರಿಯೆ ನೀಡಿದ ಡಿಎಚ್‌ಒ ಎಲ್ಲ 99 ವೈದ್ಯರೂ ವಿಶೇಷ ಭತ್ಯೆ ಪಡೆಯುತ್ತಿರುವುದಾಗಿ ವಿವರ ನೀಡಿದರು. ಅಕ್ರಮವಾಗಿ ಭತ್ಯೆ ಪಡೆಯುತ್ತಿರುವ ವೈದ್ಯರ ಕುರಿತು ಮತ್ತಷ್ಟು ಪರಿಶೀಲನೆ ನಡೆಸಿದಾಗ, ಈ ವೈದ್ಯರು ಹೊರ ಊರುಗಳಲ್ಲಿ ವಾಸಿಸುವುದರಿಂದ ಕೆಲವೇ ಗಂಟೆಗಳ ಕಾಲ ಆಸ್ಪತ್ರೆಯಲ್ಲಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ ಎಂಬುದು ಖಚಿತವಾಗಿತ್ತು.

ಪ್ರಾಥಮಿಕ ಹಂತದ ತನಿಖೆಯಲ್ಲಿ 52 ವೈದ್ಯರ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಾಧಾರಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 13(1)(ಸಿ) (ಅಧಿಕಾರ ದುರುಪಯೋಗ, ಸಾರ್ವಜನಿಕ ಹಣದ ದುರ್ಬಳಕೆ) ಮತ್ತು ಭಾರತೀಯ ದಂಡ ಸಂಹಿತೆ ಕಲಂ 420 (ವಂಚನೆ) ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಕೇಂದ್ರ ಸ್ಥಾನದಲ್ಲಿ ವಾಸಿಸದೇ ಸರ್ಕಾರ ಮತ್ತು ಸಾರ್ವಜನಿಕರನ್ನು ವಂಚಿಸುತ್ತಿದ್ದ ವೈದ್ಯರ ವಿರುದ್ಧ ಮೊದಲ ಬಾರಿಗೆ ಮೊಕದ್ದಮೆ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.