ಮಂಗಳವಾರ, ಮಾರ್ಚ್ 2, 2021
28 °C

7 ಸಾವಿರ ಹೆಕ್ಟೇರ್‌ ಭೂಮಿಗೆ ಶೀಘ್ರ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

7 ಸಾವಿರ ಹೆಕ್ಟೇರ್‌ ಭೂಮಿಗೆ ಶೀಘ್ರ ನೀರು

ಉಡುಪಿ: ‘ವಾರಾಹಿ ಯೋಜನೆಯ ಎಡದಂಡೆ ಕಾಲುವೆಯ 30 ಕಿ.ಮೀ ವರೆಗಿನ ಕಾಮಗಾರಿಯನ್ನು ಮೂರರಿಂದ ನಾಲ್ಕು ತಿಂಗಳ ಒಳಗೆ ಪೂರ್ಣಗೊಳಿಸಿ ಸುಮಾರು ಏಳು ಸಾವಿರ ಹೆಕ್ಟೇರ್‌ ಕೃಷಿ ಭೂಮಿಗೆ ನೀರು ಹರಿಸಲಾಗುತ್ತದೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.ವಾರಾಹಿ ಯೋಜನಾ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಿದ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಹೊಸಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.‘ಕಾರಣಾಂತರಗಳಿಂದ ಈ ಯೋಜನೆ ಬಹಳಷ್ಟು ವಿಳಂಬ­ವಾಗಿದೆ. ಪೂರ್ಣಗೊಳಿಸಿ ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿರುವ ಯೋಜನೆಯಲ್ಲಿ ವಾರಾಹಿ ಸಹ ಸೇರಿದೆ. ಆದ್ದರಿಂದ ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಅಲ್ಲದೆ ಕಳೆದ ಹತ್ತು ತಿಂಗಳಲ್ಲಿ ಈ ಕಾಮಗಾರಿಯಲ್ಲಿ ಸಾಕಷ್ಟು ಪ್ರಗತಿಯೂ ಆಗಿದೆ. 17 ಕಿ.ಮೀ. ಉದ್ದದ ಪ್ರಮುಖ ಕಾಲುವೆಯ ಕಾಮಗಾರಿ (ಕಾಮನ್‌ ಕ್ಯಾನಲ್‌) ಆಗಿದೆ. 30 ಕಿ.ಮೀ ಉದ್ದದ ಎಡದಂಡೆ ಕಾಲುವೆಯ ಕಾಮಗಾರಿಯೂ ಪ್ರಗತಿಯಲ್ಲಿದೆ. ಇನ್ನು 40ರಿಂದ 60 ಕೆಲಸದ ದಿನಗಳಲ್ಲಿ ಎಡದಂಡೆ ಕಾಲುವೆ, ವಿತರಣಾ ನಾಲೆಗಳ ಕೆಲಸವೂ  ಪೂರ್ಣವಾಗಿ ನೀರು ಹರಿಯಲಿದೆ’ ಎಂದರು.30 ಕಿ.ಮೀನಿಂದ 45.5 ಕಿ.ಮೀ ವರೆಗಿನ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗುತ್ತದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ. 4/1 ಮತ್ತು 6/1 ನೋಟಿಸ್‌ ನೀಡಲಾಗಿದೆ. ಬಲದಂಡೆ ಕಾಲುವೆ ಕಾಮಗಾರಿ ಕಾರ್ಯ­ಸಾಧುವೆ ಎಂಬುದರ ಬಗ್ಗೆ ಯೋಚಿಸಬೇಕಿದೆ. ಎಷ್ಟು ಭೂಮಿ ಬೇಕು. ಇದರಲ್ಲಿ ಎಷ್ಟು ಪ್ರಮಾಣದ ಅರಣ್ಯ ಭೂಮಿ ಬರುತ್ತದೆ ಎಂಬ ವಿಷಯದ ಬಗ್ಗೆ ಮಾಹಿತಿ ಕಲೆ ಹಾಕಿದ ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.ವಾರಾಹಿ ಯೋಜನೆಗೆ ಈಗಾಗಲೇ 569 ಕೋಟಿ ರೂಪಾಯಿ ಖರ್ಚಾಗಿದೆ. ಕಾಮಗಾರಿ ಸಂಪೂರ್ಣವಾಗಲು ಇನ್ನೂ 300 ಕೋಟಿ ರೂಪಾಯಿ ಬೇಕು. ಆದರೆ ಹಣಕಾಸಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಹೇಳಿದರು. ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಕಳಪೆ ಕಾಮಗಾರಿ ಅಥವಾ ಅಕ್ರಮದ ಬಗ್ಗೆ ಅನುಮಾನ ಬಂತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಭಾಗದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿ ವಾರಾಹಿ ಯೋಜನೆಯಲ್ಲಿ ಅಕ್ರಮ ಮತ್ತು ಅವ್ಯವಹಾರ ನಡೆದಿರುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಅಕ್ರಮ ಇರುವುದು ಗೊತ್ತಾದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು.ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಅವಕಾಶ

ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ವಾರಾಹಿ ಯೋಜನೆಗೆ ಚಾಲನೆ ನೀಡಲಾಯಿತು. ಆದರೆ ಈಗ ಸಕ್ಕರೆ ಕಾರ್ಖಾನೆ ಮುಚ್ಚಿದೆ. ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ನೆರವು ನೀಡುತ್ತಿದೆ. ಆದ್ದರಿಂದ ಕಾರ್ಖಾನೆಯನ್ನು ಪುನಹ ಆರಂಭಿಸಲು ಅವಕಾಶ ಇದೆ ಎಂದು ಪಾಟೀಲ್‌ ಹೇಳಿದರು.ನಾಲೆ ಕಾಮಗಾರಿ ವೇಳೆ ಕಲ್ಲುಗಳನ್ನು ಒಡೆಯಲು ಸ್ಫೋಟ ನಡೆಸಿದಾಗ ಅಕ್ಕಪಕ್ಕದ ಮನೆಗಳಿಗೆ ಹಾನಿ ಆಗಿರುವ ಬಗ್ಗೆ ಸ್ಥಳೀಯರು ಅಳಲು ತೋಡಿಕೊಂಡರು. ಮೂರು ಎಕರೆ ಜಮೀನನ್ನು ವಶಪಡಿಸಿಕೊಂಡರೂ ಪರಿಹಾರದ ಹಣ ನೀಡಿಲ್ಲ ಎಂದು ಮಹಿಳೆಯೊಬ್ಬರು ದೂರಿದರು. ಪರಿಹಾರದ ಮೊತ್ತ ವಿತರಣೆ ಆಗದಿರುವ ಪ್ರಕರಣ ಇದ್ದರೆ ಅದನ್ನು ಪರಿಗಣಿಸಿ ಪರಿಹರಿಸಲಾಗುತ್ತದೆ ಎಂದರು.ಸಚಿವ ವಿನಯ ಕುಮಾರ್‌ ಸೊರಕೆ, ಶಾಸಕರಾದ ಪ್ರಮೋದ್‌ ಮಧ್ವರಾಜ್‌, ಗೋಪಾಲ ಪೂಜಾರಿ, ಪ್ರತಾಪ್‌ಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಗುರುಪಾದಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ ರುದ್ರಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ, ಉಪ ವಿಭಾಗಾಧಿಕಾರಿ ಯೋಗೇಶ್ವರ್‌, ತಹಶೀಲ್ದಾರ್‌ ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.