ಗುರುವಾರ , ಮೇ 13, 2021
17 °C

71 ತ್ವರಿತ ವಿಲೇವಾರಿ ಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರ ಪ್ರಕರಣಗಳು

ನವದೆಹಲಿ (ಪಿಟಿಐ): ಅಧಿಕಾರಿಗಳ ಭ್ರಷ್ಟಾಚಾರ ಕಡಿವಾಣ ಹಾಕಲು ಕಠಿಣ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ, ಭ್ರಷ್ಟಾಚಾರ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ 71 ಸಿಬಿಐ ವಿಶೇಷ ತ್ವರಿತ ವಿಲೇವಾರಿ ನ್ಯಾಯಾಲಯಗಳನ್ನು ಸ್ಥಾಪಿಸಲು ಮುಂದಾಗಿದೆ.ಮೂರು ತಿಂಗಳ ಅವಧಿಯಲ್ಲಿ ಕಾನೂನು ಕ್ರಮಗಳನ್ನು ಕೈಗೊಳ್ಳಲು ಈ ನ್ಯಾಯಾಲಯಗಳಿಗೆ ಅವಕಾಶ ನೀಡಲಾಗಿದೆ. ತನ್ಮೂಲಕ ವಿಚಕ್ಷಣ ಆಡಳಿತವನ್ನು ಬಿಗಿಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ.

ತನ್ನ ನಿರ್ಧಾರಗಳನ್ನು ಶೀಘ್ರವೇ ಸರ್ಕಾರಿ ಆದೇಶದ ಮೂಲಕ ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದ ಸಚಿವರ ಸಮಿತಿ ನೀಡಿದ್ದ ಶಿಫಾರಸುಗಳ ಪ್ರಕಾರ ಸರ್ಕಾರ ಈ ಕ್ರಮ ಕೈಗೊಂಡಿದೆ.ಚಳಿಗಾಲದ ಸಂಸತ್ ಅಧಿವೇಶದ ಸಂದರ್ಭದಲ್ಲಿ ಹೊಸ ನೀತಿ ಮತ್ತು ಮಸೂದೆಯೊಂದನ್ನು ಜಾರಿಗೆ ತರುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ಇನ್ನೂ ಹೆಚ್ಚು ಪಾರದರ್ಶಕತೆ ಕಾಪಾಡಿಕೊಳ್ಳಲಾಗುವುದೆಂದು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಹಾಗೂ ಸಿಬ್ಬಂದಿ ಖಾತೆ ಸಚಿವ ವಿ.ನಾರಾಯಣ ಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸಚಿವರ ಸಮಿತಿ ಸಲ್ಲಿಸಿದ್ದ ಮೊದಲ ವರದಿಯಲ್ಲಿನ ಅನೇಕ ಶಿಫಾರಸುಗಳಿಗೆ ಪ್ರಧಾನ ಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಅಣ್ಣಾ ಹಜಾರೆ ಅವರ ಪ್ರತಿಭಟನೆ ನಂತರ ಭ್ರಷ್ಟಾಚಾರ ನಿಯಂತ್ರಿಸಲು ಕಠಿಣ ಕಾನೂನು  ರೂಪಿಸಲು ಮುಂದಾಗಿರುವಿರಾ ಎನ್ನುವ ಪ್ರಶ್ನೆಗೆ, ಜನವರಿ 6ರಂದೇ ಪ್ರಣವ್ ಮುಖರ್ಜಿ ನೇತೃತ್ವದಲ್ಲಿ ಸಚಿವರ ಸಮಿತಿಯನ್ನು ರಚನೆ ಮಾಡಲಾಗಿತ್ತು ಎಂದು ನಾರಾಯಣಸ್ವಾಮಿ ಸ್ಪಷ್ಟನೆ ನೀಡಿದರು.ಭ್ರಷ್ಟಾಚಾರ ನಿಯಂತ್ರಿಸುವುದಕ್ಕೆ ಸರ್ಕಾರ ಬದ್ಧವಾಗಿದ್ದು, ಅದಕ್ಕಾಗಿಯೇ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜತೆಗೆ ಅಣ್ಣಾ ಹಜಾರೆ ಅವರ ಸಲಹೆಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.