ಸೋಮವಾರ, ಏಪ್ರಿಲ್ 12, 2021
25 °C

87 ಲಕ್ಷ ವೆಚ್ಚ; ಪಾಳು ಬಿದ್ದ ಚಿಕ್ಕನಾಯಕನಹಳ್ಳಿಕ್ರೀಡಾಂಗಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದ್ಘಾಟನೆಗೂ ಮುನ್ನವೆ ನಿರ್ವಹಣೆಯಿಲ್ಲದೆ ಅನಾಥವಾಗಿರುವ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕ್ರೀಡಾಂಗಣ ಈಗ ಅನೈತಿಕ ಚಟುವಟಿಕೆಯ ತಾಣವಾಗಿದೆ.ಶಾಲಾ- ಕಾಲೇಜುಗಳಿಗೆ ಹತ್ತಿರ. ರಸ್ತೆ ಸಮೀಪದಲ್ಲಿದೆ ಎಂಬ ಕಾರಣದಿಂದ ಚಿಕ್ಕನಾಯಕನಹಳ್ಳಿ ಹೊರ ವಲಯದ ನಾಲ್ಕು ಎಕರೆ ಪ್ರದೇಶದಲ್ಲಿ ರೂ. 87 ಲಕ್ಷ ವೆಚ್ಚದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣವಾಗಿ ವರ್ಷ ಕಳೆಯುತ್ತಾ ಬಂದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ.ರೂ. 36.20 ಲಕ್ಷ ವೆಚ್ಚದಲ್ಲಿ ಪೆವಿಲಿಯನ್, 250 ಮಂದಿ ಕೂರುವ ಗ್ಯಾಲರಿ, ಪುರುಷ-ಮಹಿಳಾ ಆಟಗಾರರಿಗಾಗಿ ಪ್ರತ್ಯೇಕ ಡ್ರೆಸ್ಸಿಂಗ್ ಕೊಠಡಿ, ಶೌಚಾಲಯ, ಸಿಬ್ಬಂದಿಗಾಗಿ ವಿಶ್ರಾಂತಿ ಕೊಠಡಿ, ಕ್ರೀಡಾಂಗಣ ನಿರ್ವಹಣೆಗಾಗಿ ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದೆ.ನೆಲ ಸಮತಟ್ಟು ಮಾಡಲು ರೂ. 13.5 ಲಕ್ಷ, 200 ಮೀಟರ್ ಟ್ರ್ಯಾಕ್ ನಿರ್ಮಾಣ, ಕ್ರೀಡಾಂಕಣ ನಿರ್ಮಿಸಲು ರೂ. 2 ಲಕ್ಷ, ನೀರು ಸರಬರಾಜು ಕಾಮಗಾರಿಗೆ ರೂ. 2.80 ಲಕ್ಷ, ಕ್ರೀಡಾಂಗಣದ ಸುತ್ತಲೂ ಬೇಲಿ ನಿರ್ಮಾಣಕ್ಕೆ ರೂ. 12.20 ಲಕ್ಷ, ತಡೆಗೋಡೆ ನಿರ್ಮಿಸಲು ರೂ. 20 ಲಕ್ಷ ವೆಚ್ಚ ಮಾಡಲಾಗಿದೆ.ಮೂರು ವರ್ಷದ ಹಿಂದೆ ಶಂಕುಸ್ಥಾಪನೆಗೊಂಡಿದ್ದು, ಕಾಮಗಾರಿಗಳು ನಿಗದಿತ ಅವಧಿಯಲ್ಲೇ ಮುಗಿದಿವೆ. 2011ರ ನವೆಂಬರ್‌ನಲ್ಲೇ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ ಮಾಡಿದೆ. ಆದರೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ತನ್ನ ಸುಪರ್ದಿಗೆ ಪಡೆದಿಲ್ಲ.ತಾಲ್ಲೂಕು ಆಡಳಿತ ಕಳೆದ ಎರಡು ವರ್ಷದಿಂದ ರಾಷ್ಟ್ರೀಯ ಹಬ್ಬಗಳನ್ನು ಇದೇ ಕ್ರೀಡಾಂಗಣದಲ್ಲಿ ಆಚರಿಸುತ್ತಿದೆ. ಒಂದು ವರ್ಷದ ಹಿಂದೆ ಗುತ್ತಿಗೆದಾರರು ಇಲ್ಲಿನ ಕಟ್ಟಡಗಳ ಕಾಮಗಾರಿ ಪೂರೈಸಿ ಲೋಕೋಪಯೋಗಿ ಇಲಾಖೆಗೆ 4 ಕೊಠಡಿಗಳ ಕೀಲಿ ನೀಡಿ ಕೈತೊಳೆದುಕೊಂಡಿದ್ದಾರೆ.ಲೋಕೋಪಯೋಗಿ ಇಲಾಖೆಯು ಕಟ್ಟಡದ ಹಸ್ತಾಂತರಕ್ಕೆ ಯುವಜನಸೇವೆ ಮತ್ತು ಕ್ರೀಡಾ ಇಲಾಖೆಗೆ ಪತ್ರ ಬರೆದು ಹಲವು ತಿಂಗಳು ಕಳೆದರೂ ಈವರೆಗೂ ಹಸ್ತಾಂತರ ಪ್ರಕ್ರಿಯೆ ನಡೆದಿಲ್ಲ. ಕಟ್ಟಡ ಅನಾಥವಾಗಿದ್ದು, ಅನೇಕ ಕೊಠಡಿಗಳಲ್ಲಿ ಕಿಟಕಿಗಳ ಗಾಜು ಕಿಡಿಗೇಡಿಗಳ ದಾಳಿಗೆ ಸಿಕ್ಕು ಪುಡಿಯಾಗಿವೆ.ಕ್ರೀಡಾಂಗಣದ ಸುತ್ತ ಬೆಳಕಿನ ವ್ಯವಸ್ಥೆಯಿಲ್ಲದೆ ಕುಡುಕರು ತಮ್ಮ ಆವಾಸಸ್ಥಾನವನ್ನಾಗಿಸಿಕೊಂಡಿದ್ದಾರೆ. ಒಂದು ಕೊಠಡಿಯ ಬೀಗ ಮುರಿಯಲಾಗಿದೆ. ಶೌಚಾಲಯದ ಬಾಗಿಲು ಕೀಳಲಾಗಿದೆ. ಕೈ ತೊಳೆಯುವ ಸಿಂಕ್ ಕಾಣದಾಗಿದೆ.ಕುಡಿದ ಬಾಟಲಿಗಳ ಚೂರು, ಸಿಗರೇಟ್ ತುಂಡು ಚೆಲ್ಲಾಡಿವೆ. ನೀರಿನ ಸಂಪಿನ ಮುಚ್ಚಳದ ಬೀಗವೇ ನಾಪತ್ತೆಯಾಗಿದೆ. ಆಟದ ಮೈದಾನದಲ್ಲಿ 200 ಮೀಟರ್ ಟ್ರ್ಯಾಕ್‌ನ ಸುಳಿವೇ ಇಲ್ಲದಾಗಿದೆ. ಮೈದಾನದ ಬಹುತೇಕ ಜಾಗ ಮುಳ್ಳು ಗಿಡಗಳಿಂದ ತುಂಬಿದೆ. ಮೈದಾನದೊಳಕ್ಕೆ ಅಕ್ರಮ ಪ್ರವೇಶ ನಿರ್ಬಂಧಕ್ಕಾಗಿ ಇರಬೇಕಿದ್ದ ಚೈನ್‌ಲಿಂಕ್ ಬೇಲಿ ಎರಡು ಭಾಗದಲ್ಲಿ ಮಾತ್ರ ಇದೆ. ಉಳಿದಂತೆ ಕ್ರೀಡಾಂಗಣದ ಒಂದು ದಿಕ್ಕಿನಲ್ಲಿ ಕೆರೆ ಪ್ರದೇಶ; ಮತ್ತೊಂದು ದಿಕ್ಕಿನಲ್ಲಿ ತೋಟವಿದ್ದು ಈ ಭಾಗದಿಂದ ಸಲೀಸಾಗಿ ಯಾರು ಬೇಕಾದರೂ ಒಳಕ್ಕೆ ಬರಬಹುದಾಗಿದೆ.ಕ್ರೀಡಾ ಚಟುವಟಿಕೆಗಳಿಗೆ ನೆಲೆಯಾಗಬೇಕಿದ್ದ ಮೈದಾನ ನಾಡಹಬ್ಬಗಳ ಆಚರಣೆಗೆ ಮಾತ್ರ ಸೀಮಿತವಾಗಿದೆ. ವಿಶ್ವಪರಿಸರ ದಿನಾಚರಣೆಯಂದು ಅರಣ್ಯ ಇಲಾಖೆ ಕ್ರೀಡಾಂಗಣ ಕಟ್ಟಡದ ಮುಂದಿನ ರಸ್ತೆಯ ನಡುವೆಯೇ ಸಸಿ ನೆಡಲು ದೊಡ್ಡ ಗುಂಡಿ ತೆರೆದು ಹಾಗೆ ಬಿಟ್ಟಿದೆ.ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಪತ್ರ ಬರೆದಿದ್ದರೂ ತನ್ನ ವಶಕ್ಕೆ ಪಡೆದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ನಾಗರಾಜ್ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.