ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ಜಿಲ್ಲಾ ಕಚೇರಿಯೇ ದೂರ

Last Updated 3 ಡಿಸೆಂಬರ್ 2013, 11:01 IST
ಅಕ್ಷರ ಗಾತ್ರ

ರಾಯಚೂರು: ಅಂಗವಿಕಲರ ಅಭಿವೃದ್ಧಿ, ಅನುಕೂಲತೆಗೆ ಸರ್ಕಾರ ವಿವಿಧ ಯೋಜನೆ ರೂಪಿಸಿ ಜಾರಿ ಮಾಡುತ್ತದೆ. ಆದರೆ, ವಾಸ್ತವಿಕವಾಗಿ ಸಂಕಷ್ಟದಲ್ಲಿರುವ, ಸಹಾಯ ಹಸ್ತಕ್ಕೆ ಎದುರು ನೋಡುವ ಅಂಗವಿಕಲರಿಗೆ ತಲುಪುತ್ತಿರುವುದು ಕಡಿಮೆಯೇ.

ಅದರಲ್ಲೂ ರಾಯಚೂರು ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿರುವ ಅಂಗವಿಕಲರಿಗೆ ಸರ್ಕಾರದ ಸೌಕರ್ಯ, ಯೋಜನೆ ಬಗ್ಗೆ ಮಾಹಿತಿ, ಪ್ರಯೋಜನ ಪಡೆಯುವುದು ಕಷ್ಟ ಎಂಬ ವಾತಾವರಣವಿದೆ. ಅಂಗವಿಕಲರಲ್ಲಿಯೇ ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಒಬ್ಬರ ಸಮಸ್ಯೆ ಇನ್ನೊಬ್ಬರ ಸಮಸ್ಯೆಗಿಂತ ವಿಭಿನ್ನ ಮತ್ತು ಅಷ್ಟೇ ಗಂಭೀರ.

ಜೀವನದಲ್ಲಿ ಸಾಧನೆ ಮಾಡುವ ಛಲ, ತಾವು ಅಂಗವಿಕಲರಲ್ಲ. ತಮಗೂ ಸಾಮರ್ಥ್ಯವಿದೆ. ಅವಕಾಶ ಕೊಡಿ, ಸೌಕರ್ಯ ಕೊಡಿ ಎಂಬ ಆಶಯ ಅಂಗವಿಕಲರಲ್ಲಿದ್ದರೂ ತಮಗೆ ದೊರಕಬೇಕಾದ ಸೌಕರ್ಯಗಳ ಬಗ್ಗೆ ತಿಳಿಯಲು, ಸರ್ಕಾರದ ಯೋಜನೆ ಉಪಯೋಗ ಪಡೆಯಲು ಪರದಾಡಬೇಕಾದ ಸ್ಥಿತಿ ಇದೆ.

ಕಿಷ್ಕಿಂದೆಯಲ್ಲಿ ಜಿಲ್ಲಾ ಅಂಗವಿಕಲ ಅಧಿಕಾರಿಗಳ ಕಚೇರಿ: ಜಿಲ್ಲೆಯ ಅಂಗವಿಕಲರಿಗೆ ಸೂಕ್ತ ರೀತಿ ಲಭ್ಯವಾಗಿ ಅವರ ಕಷ್ಟಕ್ಕೆ ಸ್ಪಂದಿಸಬೇಕಾದ ಜಿಲ್ಲಾ ಅಂಗವಿಕಲ ಅಧಿಕಾರಿಗಳ ಕಚೇರಿಯೇ ನಗರದ ಸಿಯಾತಲಾಬ್ ಬಡಾವಣೆ ಇಕ್ಕಟ್ಟಾದ ಕಿಷ್ಕಿಂದೆಯಂಥ ಸ್ಥಳದಲ್ಲಿದೆ. ಕಚೇರಿ ಕಟ್ಟಡ ಅಚ್ಚುಕಟ್ಟಾಗಿದೆ. ಆದರೆ, ಈ ಕಚೇರಿಗೆ ಸಾಮಾನ್ಯ ಜನರು ಹೋಗಬೇಕಾದರೆ ಕಷ್ಟ ಪಡುವಂತ ಸ್ಥಿತಿ ಇದೆ.  ಇನ್ನು ಅಂಗವಿಕಲರಿಗೆ ಇನ್ನೂ ಕಷ್ಟ. ಅದರಲ್ಲೂ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಸ್‌ನಲ್ಲಿ ಬರುವ ಅಂಗವಿಕಲರು ಆಟೊರಿಕ್ಷಾಕ್ಕೆ 50 ₨ ಕೊಟ್ಟು ವಿಳಾಸ  ಹುಡುಕಿಕೊಂಡು ಈ ಕಚೇರಿ ತಲುಪಬೇಕಾದ ಸ್ಥಿತಿ ಇದೆ.

ಜಿಲ್ಲಾಡಳಿತ ಕಚೇರಿ, ತಹಶೀಲ್ದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆಯಂಥ ಕಚೇರಿ ಕಟ್ಟಡಗಳು ಪ್ರಮುಖ ರಸ್ತೆ ಮತ್ತು ಬಸ್‌ ನಿಲ್ದಾಣಕ್ಕೆ ಹತ್ತಿರ ಇವೆ. ಆದರೆ, ಅಂಗವಿಕಲರು ಕಚೇರಿಗೆ ಬರಲು ಯಾವುದೇ ಅಡ್ಡಿ ಆಗದೇ ಇರುವ ಪ್ರದೇಶ, ಬಸ್‌ ನಿಲ್ದಾಣಕ್ಕೆ ಹತ್ತಿರ ಇರುವ ಪ್ರದೇಶದಲ್ಲಿ ಇರಬೇಕು. ಆದರೆ, ಇಲ್ಲಿ ತದ್ವಿರುದ್ಧವಾಗಿದೆ.

ಜಿಲ್ಲಾ ಅಂಗವಿಕಲ ಅಧಿಕಾರಿಗಳೇ ಇಲ್ಲ! ಜಿಲ್ಲೆಯಲ್ಲಿ ಅಂಗವಿಕಲರ ಜಿಲ್ಲಾ ಮಟ್ಟದ ಕಚೇರಿ ಇದೆ. ಜಿಲ್ಲಾ ಮಟ್ಟದ ಅಧಿಕಾರಿ ಹುದ್ದೆಯೂ ಇದೆ. ಆದರೆ, ಈಗ ಈ ಹುದ್ದೆಯಲ್ಲಿ ಕಾಯಂ ಅಧಿಕಾರಿಗಳಿಲ್ಲ. ಪ್ರಭಾರ ಅಧಿಕಾರಿಗಳೇ ಆ ಹುದ್ದೆ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಾಗಿ ಕಚೇರಿಯಷ್ಟೇ ಅಲ್ಲ. ಅಧಿಕಾರಿಗಳು ಇಲ್ಲದೇ ಅಂಗವಿಕಲರಿಗೆ ಮತ್ತೊಂದು ವೈಕಲ್ಯವೇ ಸೃಷ್ಟಿಯಾಗುವಂಥ ಸ್ಥಿತಿ ಇದೆ.

ಜಿಲ್ಲೆಯಲ್ಲಿ ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಸುಮಾರು 10,000 ಅಂಗವಿಕಲರಿದ್ದಾರೆ. ಆದರೆ, ಅಂಗವಿಕಲರ ಸಂಘದ ಸಂಘಟನೆ ಮಾಹಿತಿ ಪ್ರಕಾರ 35,000ಕ್ಕೂ ಹೆಚ್ಚು ಇದ್ದಾರೆ ಎನ್ನುವ ಮಾಹಿತಿ ಇದೆ.

ಅಂಗವಿಕಲರ ಅಹವಾಲು: ಜಿಲ್ಲೆಯಲ್ಲಿ 7 ಶಾಸಕರಿದ್ದಾರೆ. ಪ್ರತಿ ವರ್ಷ ಶಾಸಕರಿಗೆ ತಲಾ 10 ಲಕ್ಷ, ಸಂಸದರಿಗೆ 15 ಲಕ್ಷ ₨ ಅಂಗವಿಕಲರಿಗೆ ಖರ್ಚು ಮಾಡಲು ಬಜೆಟ್‌ ಇರುತ್ತದೆ. ಈ ಕುರಿತು ಅಂಗವಿಕಲರಿಗೆ ಇಲಾಖೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಬಜೆಟ್ ಇದೆ ಎಂಬುದು ಅಧಿಕಾರಿ, ಸಿಬ್ಬಂದಿಗೆ ಗೊತ್ತಿದೆ. ಆದರೆ, ಅಂಗವಿಕಲರಿಗೆ ಹೇಗೆ ತಲುಪಿಸಬೇಕು ಎಂಬ ವಿಧಾನ ಗೊತ್ತಿಲ್ಲ. ಅಧಿಕಾರಿ ಸಿಬ್ಬಂದಿಗೆ ತರಬೇತಿ ನೀಡಬೇಕು. ಸ್ಥಳೀಯ ಸಂಸ್ಥೆಯಲ್ಲಿ ನಿಗದಿಪಡಿಸಿದ ಶೇ 3ರಷ್ಟು ಅನುದಾನದ ಸಮರ್ಪಕ ಬಳಕೆ ಅಂಗವಿಕಲರಿಗೆ ಆಗಬೇಕು. ಉದ್ಯೋಗದಲ್ಲಿ ಶೇ 3ರಷ್ಟು ಮೀಸಲಾತಿ ಸೌಕರ್ಯ ಕಲ್ಪಿಸಬೇಕು, ಎಲ್ಲ ರೀತಿ ಅಂಗವಿಕಲರಿಗೆ ಪ್ರತ್ಯೇಕ ಶಾಲೆ ತೆರೆಯಬೇಕು. ಸದ್ಯ ಬಹಳ ಕಡೆ ಅಂಧ ಮಕ್ಕಳ ವಸತಿ ಶಾಲೆ ಕಾಣುತ್ತವೆ. ಅದೇ ರೀತಿ ಬುದ್ಧಿ ಮಾಂದ್ಯರು, ಕೈ.ಕಾಲು ಊನ ಹೊಂದಿದವರು ಸೇರಿದಂತೆ ಎಲ್ಲ ರೀತಿ ಅಂಗವಿಕಲರಿಗೆ ಪ್ರತ್ಯೇಕ ವಸತಿ ಶಾಲೆ ಸರ್ಕಾರ ಸ್ಥಾಪನೆ ಮಾಡಬೇಕು ಎಂಬುದು ಅಂಗವಿಕಲರ ಬಹುದಿನಗಳ ಅಹವಾಲು ಮತ್ತು ಅಳಲಾಗಿದೆ.

ಅಂಧ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗುವ ರೀತಿ ಅವರ ಪಠ್ಯಕ್ಕೆ ಅನುಕೂಲ ಆಗುವ ಬ್ರೈಲ್ ಲಿಪಿ, ಸಲಕರಣೆಗಳು ಲಭ್ಯ ಆಗಬೇಕು. ಗ್ರಾಮೀಣ ಪ್ರದೇಶಕ್ಕೆ ಅಧಿಕಾರಿಗಳು, ಸಿಬ್ಬಂದಿ ತೆರಳಿ ಸೌಕರ್ಯಗಳ ತಿಳಿಸಬೇಕು. ಅಂಗವಿಕಲ ವ್ಯಕ್ತಿ ಇರುವ ಕುಟುಂಬದ ಸಾಮಾನ್ಯ ಜನರಿಗೇ ಅಂಗವಿಕಲರಿಗೆ ಸರ್ಕಾರದಿಂದ ದೊರಕುವ ಯೋಜನೆಗಳ ಸೌಲಭ್ಯಗಳ ಬಗ್ಗೆ ಗೊತ್ತಿರುವುದಿಲ್ಲ. ಇನ್ನು ಆ ಮನೆಯಲ್ಲಿರುವ ಅಂಗವಿಕಲರಿಗೆ ಗೊತ್ತೇ ಆಗುವುದಿಲ್ಲ. ಆಡಳಿತ ಯಂತ್ರದಿಂದಲೇ ಈ ಸಮಸ್ಯೆ ಹೋಗಲಾಡಬೇಕು ಎಂದು ಅಂಗವಿಕಲರ ಒತ್ತಾಯ ಆಗಿದೆ.

ಅಂಗವಿಕಲರೇ ಇರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು(ವಿಆರ್‌ಡಬ್ಲ್ಯು) ಪ್ರತಿ ಪಂಚಾಯಿತಿಗೆ ಒಬ್ಬರಂತೆ ಜಿಲ್ಲೆಯಲ್ಲಿ 164 ಜನ ಇದ್ದಾರೆ. ತಾಲ್ಲೂಕು ಮಟ್ಟದಲ್ಲಿ 5 ಜನ(ಎಂಆರ್‌ಡ್ಲಬ್ಯೂ) ಇದ್ದಾರೆ. ಇವರಿಗೆ ಪ್ರತಿ ತಿಂಗಳು ₨ 1500 ಮಾತ್ರ ಗೌರವಧನ ದೊರಕುತ್ತಿದ್ದು, ಈ ಗೌರವ ಧನ ಉಪಜೀವನಕ್ಕೂ ಕಷ್ಟ. ಹೆಚ್ಚಳ ಮಾಡಬೇಕು ಎಂಬುದೂ ಪ್ರಮುಖ ಒತ್ತಾಯಗಳಲ್ಲೊಂದಾಗಿದೆ.

ಅಧಿಕಾರಿಗಳಿಂದ ಉಪೇಕ್ಷೆ ಸರಿಯಲ್ಲ: ಅಂಗವಿಕಲರು ಯಾವುದೇ ಕೆಲಸಕ್ಕೆ ತಹಸೀಲ್ದಾರ, ಪಂಚಾಯಿತಿ, ಇಲಾಖೆ ಕಚೇರಿಗೆ ಹೋದಾಗ ಅಧಿಕಾರಿ– ಸಿಬ್ಬಂದಿ ಉಪೇಕ್ಷೆ ಈಚೆಗೆ ಹೆಚ್ಚು. ಅಧಿಕಾರಿಗಳಿದ್ದರೂ ಸಾಹೇಬ್ರು ಊರಲಿಲ್ಲ. ಸರ್ಕಾರ ಆದೇಶ ಮಾಡಿದೆ ಸರಿ. ಆದರೆ, ಆದೇಶ ಪತ್ರ ಕಚೇರಿಗೆ ಬಂದಿಲ್ಲ ಎಂದು ಹೀಗೆ ಸುಳ್ಳು ಹೇಳುವುದು. ಪದೇ ಪದೇ ಅಲೆದಾಡಿಸುವ ಬವಣೆ ತಪ್ಪಬೇಕು. ಅಧಿಕಾರಿಗಳೇ ಉಪೇಕ್ಷೆ ಮಾಡಿದರೆ ಸರ್ಕಾರದ ಅನುಕೂಲತೆಗಳು ಅಂಗವಿಕಲರಿಗೆ ಹೇಗೆ ತಲುಪಬೇಕು ಎಂಬ ಪ್ರಶ್ನೆ ಅಂಗವಿಕಲ ಶಿವಾನಂದ ಎಂಬುವವರದು.

ಹೇಳಿಕೆ: ಮೊದಲು ಅಂಗವಿಕಲರು ಶಿಕ್ಷಣ ಪಡೆಯಬೇಕು. ಕೌಟುಂಬಿಕ ವಾತಾವಾರಣ, ಆರ್ಥಿಕ ಸ್ಥಿತಿಗತಿ ಹಿನ್ನೆಲೆಯಲ್ಲಿ ಬಹುತೇಕ ಅಂಗವಿಕಲರ ಬದುಕು ಸಂಕಷ್ಟದಲ್ಲಿಯೇ ಇರುತ್ತದೆ. ಆದಾಗ್ಯೂ ಪಾಲಕರು, ಸಮಾಜ ಅಂಗವಿಕಲರನ್ನು ಉಪೇಕ್ಷೆ ಮಾಡಬಾರದು. ಯಾವುದೇ ರೀತಿ ಅಂಗವೈಕಲ್ಯವಿದ್ದರೂ ಅಂಥವರಿಗೆ ಮೊದಲು ಶಿಕ್ಷಣ ಕೊಡಿಸಬೇಕು. ಅಂಗವಿಕಲರು ಶಿಕ್ಷಣ ಪಡೆದಾಗ ಮಾತ್ರ ಸರ್ಕಾರದ ಸೌಕರ್ಯ ಮತ್ತು ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ ಎಂದು ರಾಜ್ಯ ಅಂಗವಿಕಲರ ಸಂಘದ ಉಪಾಧ್ಯಕ್ಷ ಹಾಗೂ ಮಾಣಿಕ ಪ್ರಭು ಅಂಧಮಕ್ಕಳ ವಸತಿ ಶಾಲೆ ಮುಖ್ಯಗುರು ಕುಪೇಂದ್ರ ಆಶಯ ವ್ಯಕ್ತಪಡಿಸುತ್ತಾರೆ.

ರಾಜ್ಯ ಸರ್ಕಾರ ಉದ್ಯೋಗ, ಸ್ಥಳೀಯ ಸಂಸ್ಥೆ ಅನುದಾನದಲ್ಲಿ ಶೇ 3ರಷ್ಟು ಹಾಗೂ ಕೇಂದ್ರ ಸರ್ಕಾರ ಶೇ 5ರಷ್ಟು ಮೀಸಲಾತಿ ಕಲ್ಪಿಸಿದೆ. ಅವುಗಳ ಪ್ರಯೋಜನ ಪಡೆಯಬೇಕು. ಕೇವಲ ಬಸ್‌ಪಾಸ್‌, ಸಾಲ ಪಡೆಯುವುದಕ್ಕೆ ಮಾತ್ರ ತಮ್ಮ ಪ್ರಯತ್ನವನ್ನು ಅಂಗವಿಕಲರು ಸೀಮಿತಗೊಳಿಸಿಕೊಳ್ಳಬಾರದು ಎಂಬುದು ತಮ್ಮ ಮನವಿಯಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಶೇ 3ರಷ್ಟು ಅನುದಾನ ಅಂಗವಿಕಲರಿಗೆ ದೊರಕುತ್ತಿದೆ. ಆದರೆ, ಶಿಕ್ಷಣಕ್ಕೆ ಆದ್ಯತೆ ಕೊಡಬೇಕಿದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು

ಸದ್ಯ ಜಿಲ್ಲಾ ಅಂಗವಿಕಲರ ಅಭಿವೃದ್ಧಿ ಇಲಾಖೆಗೆ ಸಿಡಿಪಿಒ ವೀರನಗೌಡ ಅವರೇ ಪ್ರಭಾರ ಅಧಿಕಾರಿಯಾಗಿದ್ದಾರೆ. ಸಾದಿಕ್ ಹುಸೇನ್ ಜಿಲ್ಲಾ ಸಂಯೋಜಕರಾಗಿದ್ದಾರೆ. ಅಂಗವಿಕಲರ ಒತ್ತಾಯ ಹಿನ್ನೆಲೆಯಲ್ಲಿ ಅಂಗವಿಕಲರ ಕಚೇರಿ ಸ್ಥಳಾಂತರಕ್ಕೆ  ಜಿಲ್ಲಾಧಿಕಾರಿ ಎಸ್‌.ಎನ್ ನಾಗರಾಜು ಅವರು ಸೂಚಿಸಿದ್ದಾರೆ. ತಹಸೀಲ್ದಾರ ಕಚೇರಿ ಹತ್ತಿರದ ಹಳೆಯ ನಗರಸಭೆ ಕಟ್ಟಡಕ್ಕೆ ಸ್ಥಳಾಂತರಕ್ಕೆ ಬುಧವಾರ ನಡೆದ ಅಂಗವಿಕಲರ ದಿನಾಚರಣೆ ಸಭೆಯಲ್ಲಿ ಭರವಸೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಮಾಣಿಕ ಪ್ರಭು ಅಂಧಮಕ್ಕಳ ವಸತಿ ಶಾಲೆ 7–8 ವರ್ಷದಿಂದ ಕೆಲಸ ಮಾಡುತ್ತಿದೆ. 60ಕ್ಕೂ ಹೆಚ್ಚು ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದೆ. ಇದು ಖಾಸಗಿ ಸಂಸ್ಥೆ. ದಾನಿಗಳು, ಮಾಣಿಕಪ್ರಭು ಸಂಸ್ಥಾನದಿಂದ ನಡೆಯುತ್ತಿದೆ.

ಆದರೆ, ಸರ್ಕಾರದಿಂದ ಅಂಗವಿಕಲ ಶಾಲೆಗಳು ಇಲ್ಲ. ಅಂಗವಿಕಲ, ಬುದ್ಧಿಮಾಂದ್ಯ, ಇತರ ಅಂಗ ಊನ ಹೊಂದಿದ ಅಂಗವಿಕಲರ ಶಿಕ್ಷಣ ದೊರಕಲು ವಿಶೇಷ ಮಕ್ಕಳ ವಸತಿ ಶಾಲೆ ಸ್ಥಾಪನೆ ಸರ್ಕಾರದಿಂದ ಆಗಬೇಕು. ಇಲ್ಲದೇ ಇದ್ದರೆ, ಭವಿಷ್ಯದಲ್ಲಿ ಕಷ್ಟ. ಉಳ್ಳವರು ಮಹಾನಗರದಲ್ಲಿರುವ ಖಾಸಗಿ ಸಂಸ್ಥೆಗಳ ಅಂಗವಿಕಲ ವಸತಿ ಶಾಲೆಯಲ್ಲಿ ಶಿಕ್ಷಣ ಕೊಡಿಸುತ್ತಾರೆ. ಬಡವರ ಅಂಗವಿಕಲ ಮಕ್ಕಳಿಗೆ ಕಷ್ಟ. ಸರ್ಕಾರ ಗಮನಹರಿಸಬೇಕು ಎಂಬ ಕೂಗು ಅಂಗವಿಕಲ ಸಮುದಾಯದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT