ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾತನ ಮೊಗದಲ್ಲಿ ನೆಮ್ಮದಿಯ ನಗು

Last Updated 31 ಆಗಸ್ಟ್ 2011, 6:40 IST
ಅಕ್ಷರ ಗಾತ್ರ

ಹರಪನಹಳ್ಳಿ: ಜಿಲ್ಲೆಯಲ್ಲಿಯೇ ಅತಿಹೆಚ್ಚು ಮೆಕ್ಕೆಜೋಳದ ಉತ್ಪಾದನೆಯಲ್ಲಿ ದೈತ್ಯರು ಎನಿಸಿಕೊಂಡಿದ್ದ ತಾಲ್ಲೂಕಿನ ರೈತರು ಈಗ ಚೆಂಡು ಹೂವಿನ ಬೆಳೆಯತ್ತ ಆಕರ್ಷಿತರಾಗುವ ಮೂಲಕ ಸದ್ದಿಲ್ಲದೆ, ಪುಷ್ಪಕೃಷಿಯತ್ತ ಮಗ್ಗಲು ಬದಲಾಯಿಸಿದ್ದಾರೆ.

ತಾಲ್ಲೂಕಿನ ತೆಲಿಗಿ ಗ್ರಾಮದ ಬಳಿ ಸ್ಥಾಪಿಸಲಾಗಿರುವ `ಕಟ್ರಾ ಫೈಟೋಕೆಮ್ ಕಂಪೆನಿ~ ಮೊದಲು ತೆಲಿಗಿ ಹಾಗೂ ಕಸಬಾ ಹೋಬಳಿಯ ಕೆಲ ಭಾಗದಲ್ಲಿ ಮಾತ್ರ ಚೆಂಡು ಹೂವು ಬೆಳೆಯಲು ರೈತರ ಮನವೊಲಿಸಿತಾದರೂ, ನಿರೀಕ್ಷಿತ ಪ್ರಮಾಣದಲ್ಲಿ ಹೂವು ಬೆಳೆಯಲು ರೈತರು ಮುಂದಾಗಿಲ್ಲ. ಚೆಂಡು ಹೂವು ಬೆಳೆಯಲು ಯೋಗ್ಯ ಭೂಫಲವತ್ತತೆ, ಹೇಳಿ ಮಾಡಿಸಿದ ಹವಾಗುಣ ಹೊಂದಿರುವ ಈ ಪ್ರದೇಶದಲ್ಲಿ ಕಂಪೆನಿ ಕಾರ್ಖಾನೆಯನ್ನೇನೊ ಆರಂಭಿಸಿತು. ಆದರೆ, ಬೆಳೆ ಬೆಳೆದ ರೈತರಿಗೆ ಶ್ರಮಧಾರಿತ ಬೆಲೆ ಒದಗಿಸುವಲ್ಲಿ ಮುಂದಾಗದ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತರು ಸೀಮಿತ ಪ್ರದೇಶದಲ್ಲಿ ಮಾತ್ರ ಚೆಂಡು ಹೂವು ಬೆಳೆಯುತ್ತಿದ್ದರು. ಯಾವಾಗ ತುಮಕೂರು ಹಾಗೂ ತಿಪಟೂರು ಭಾಗದ ಕಾರ್ಖಾನೆಯ ಅಧಿಕಾರಿಗಳು ತಾಲ್ಲೂಕಿಗೆ ಲಗ್ಗೆ ಹಾಕಿ, ಪೈಪೋಟಿಯಲ್ಲಿ ಬೆಲೆ ಏರಿಕೆಗೆ ಮುಂದಾದರೋ, ಆಗ ರೈತರು ಇತರೆ ಬೆಳೆಗಳಿಂತ ಚೆಂಡು ಹೂವು ಬೆಳೆಯಲು ಮುಂದಾದರು.

 ತಾಲ್ಲೂಕಿನ ಒಟ್ಟಾರೆ 792ಹೆಕ್ಟೇರ್ ಪ್ರದೇಶದ ಪುಷ್ಪಕೃಷಿಯಲ್ಲಿ ಮುಕ್ಕಾಲು ಭಾಗದಷ್ಟು ಅಂದರೆ, 460ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಪಿ.ಜೆ. ಮಾರ್ಗೋ, ಎಫ್1-ಹೈಬ್ರೀಡ್ ಸೇರಿದಂತೆ ವಿವಿಧ ತಳಿಯ ಚೆಂಡು ಹೂವು ಬೆಳೆಯಲಾಗಿದೆ. ಕಸಬಾ ಹೋಬಳಿಯ ಹಾರಕನಾಳು, ಹುಲಿಕಟ್ಟೆ, ಗೋವೇರಹಳ್ಳಿ, ಮಾಚಿಹಳ್ಳಿ, ಕಲ್ಲಹಳ್ಳಿ, ತೊಗರಿಕಟ್ಟೆ, ತೆಲಿಗಿ ಹೋಬಳಿಯ ದುಗ್ಗಾವತಿ, ತೆಲಿಗಿ, ಗುಂಡಗತ್ತಿ, ಮಾಚಿಹಳ್ಳಿ, ತುಂಬಿಗೇರಿ, ಶಿರಗಾನಹಳ್ಳಿ, ಕಡತಿ ಹಾಗೂ ಅರಸೀಕೆರೆ ಹೋಬಳಿಯ ಜಂಗಮತುಂಬಿಗೇರಿ, ಹಿರೇಮೇಗಳಗೇರಿ ಸೇರಿದಂತೆ ವಿವಿಧೆಡೆಗಳಲ್ಲಿ ಬೆಳೆಯಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಸುವರ್ಣಭೂಮಿ ಯೋಜನೆಯ ಪ್ರೋತ್ಸಾಹ ಧನಕ್ಕೂ ಚೆಂಡು ಹೂವನ್ನು ಪರಿಗಣಿಸಲಾಗಿದೆ ಎನ್ನುತ್ತಾರೆ ಇಲಾಖೆಯ ಹಿರಿಯ ನಿರ್ದೇಶಕ ರಾಜೇಂದ್ರಪ್ರಸಾದ್.

ಅಬ್ಬಾಬ್ಬ ಅಂದರೂ, ಪ್ರತಿ ಎಕರೆಗೆ ಗೊಬ್ಬರ, ಬೀಜ, ಕಾರ್ಮಿಕರ ವೇತನ ಸೇರಿದಂತೆ ್ಙ 12ರಿಂದ 15ಸಾವಿರ  ವೆಚ್ಚವಾಗಬಹುದು. ಎಕರೆಗೆ ಸರಾಸರಿ 14ರಿಂದ 18ಟನ್‌ನಷ್ಟು ಇಳುವರಿ ಬರುತ್ತದೆ. ಪ್ರತಿ ಟನ್‌ಗೆ ್ಙ 4,500ಗಳಿಗೆ ಕಂಪೆನಿಯವರೆ ಜಮೀನಿಗೆ ಬಂದು ಖರೀಸುತ್ತಾರೆ. ಇದರಿಂದ ರೈತರಿಗೆ ಮಾರುಕಟ್ಟೆಗೆ ಪರದಾಡವುದು ತಪ್ಪಿದೆ. ಎಕರೆಗೆ ಏನಿಲ್ಲವೆಂದರೂ, ಕನಿಷ್ಠ 40ಸಾವಿರಕ್ಕೂ ಅಧಿಕ ನಿವ್ವಳ ಲಾಭ ಕೈ ಸೇರುತ್ತದೆ ಎನ್ನುತ್ತಾರೆ 5ಎಕರೆಯಲ್ಲಿ ಚೆಂಡು ಹೂವಿನ ಸಸಿ ನಾಟಿ ಮಾಡಿರುವ ತೆಲಿಗಿ ಗ್ರಾಮದ ರೈತ ರಹಮತ್ ಉಲ್ಲಾ.

ದಸರಾ, ದೀಪಾವಳಿ ಹಾಗೂ ಗಣೇಶೋತ್ಸವದಂತಹ ಹಬ್ಬ-ಹರಿದಿನಗಳಲ್ಲಿ ಅಲಂಕಾರಿಕ್ಕೆ ಮಾತ್ರ ಬಳಕೆಯಾಗುತ್ತಿದ್ದ ಚೆಂಡು ಹೂ, ಔಷಧ ಹಾಗೂ ಬಣ್ಣ ತಯಾರಿಕೆಯ ಅಂಶಗಳನ್ನು ಹೊಂದಿದೆ. ಜತೆಗೆ, ಭೂಫಲವತ್ತತೆಯ ಹೆಚ್ಚಳ ಹಾಗೂ ಆರ್ಥಿಕವಾಗಿ ಲಾಭದ ಬೆಳೆಯಾದ್ದರಿಂದ ರೈತರ ಬದುಕಿನಲ್ಲಿ ಭರವಸೆಯ ಹೊಸಬೆಳಕು ಮೂಡಿಸಿದೆ. ಸಾಂಪ್ರದಾಯಿಕ ಬೆಳೆ ಪದ್ಧತಿ ಹಾಗೂ ಬೀಜೋತ್ಪಾದೆಯಂತಹ ಕೃಷಿ `ಲಾಭಕ್ಕಿಂತ ವೆಚ್ಚವೇ ಅಧಿಕ~ವಾದ್ದರಿಂದ ಸಾಲದ ಬರೆಯಲ್ಲಿ ರೈತ ಪರಿತಪಿಸುತ್ತಿದ್ದ.  ಸಣ್ಣ ಪ್ರಮಾಣದ ನೀರಾವರಿ ಸೌಲಭ್ಯ, ಹೆಚ್ಚು ಔಷಧೋಪಚಾರ ರಹಿತವಾಗಿರುವ ಹಾಗೂ ಅಲ್ಪಾವಧಿಯಲ್ಲಿಯೇ ಕೈತುಂಬಾ ಲಾಭ ತಂದುಕೊಡುವ ಸಂಜೀವಿನಿಯಾಗಿ ಕಾಣಿಸಿಕೊಂಡಿದ್ದರಿಂದ ಚೆಂಡು ಹೂವಿನ ಬೆಳೆಯತ್ತ ರೈತರು ಈಗ ಹೆಜ್ಜೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT