ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹೃತನ ಸುಖಾಂತ್ಯ ಬಿಡುಗಡೆ

Last Updated 15 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಅಪಹರಣ ಪ್ರಕರಣವನ್ನು 24 ಗಂಟೆಯೊಳಗೆ ಭೇದಿಸಿರುವ ಕೆ.ಆರ್. ಪುರ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅಪಹೃತರನ್ನು ಸುರಕ್ಷಿತವಾಗಿ ಕರೆತರುವ ಮೂಲಕ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ.

ಕೆ.ಆರ್.ಪುರ ಬಳಿಯ ಅಯ್ಯಪ್ಪನಗರ ನಿವಾಸಿ ಮಲ್ಲೇಶ್‌ಗೌಡ (45) ಅಪಹರಣಗೊಂಡಿದ್ದ ವ್ಯಕ್ತಿ. ಆನಂದ (36), ಗೋಪಾಲರೆಡ್ಡಿ (44), ಪ್ರಭಾಕರ (38), ಜಗನ್‌ಮೋಹನ್ (31) ಮತ್ತು ಗೋವಿಂದ (42) ಬಂಧಿತರು. ಪ್ರಕರಣದ ಪ್ರಮುಖ ಆರೋಪಿಗಳಾದ ಚಂದ್ರ ಮತ್ತು ಗೋಪಿ ತಲೆಮರೆಸಿಕೊಂಡಿದ್ದಾರೆ.

ಆರೋಪಿ ಚಂದ್ರ ಮತ್ತು ಮಲ್ಲೇಶ್‌ಗೌಡ ಪರಿಚಿತರಾಗಿದ್ದು, ಒಟ್ಟಾಗಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಈ ನಡುವೆ ಹಣಕಾಸಿನ ವಿಷಯವಾಗಿ ಪರಸ್ಪರರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಇದರಿಂದ ಕೋಪಗೊಂಡಿದ್ದ ಚಂದ್ರ, ಮಲ್ಲೇಶ್‌ಗೌಡ ಅವರನ್ನು ಅಪಹರಿಸುವ ಸಂಚು ರೂಪಿಸಿದ್ದ.
 
ಪೂರ್ವಯೋಜಿತ ಸಂಚಿನಂತೆ ಆತ ಜಮೀನು ವ್ಯವಹಾರದ ಬಗ್ಗೆ ಮಾತನಾಡುವ ನೆಪದಲ್ಲಿ ಶುಕ್ರವಾರ ಬೆಳಿಗ್ಗೆ ಮಲ್ಲೇಶ್‌ಗೌಡ ಅವರನ್ನು ಹಳೆ ಮದ್ರಾಸ್ ರಸ್ತೆಗೆ ಕರೆಸಿಕೊಂಡಿದ್ದ. ನಂತರ ಇತರೆ ಆರೋಪಿಗಳ ಜತೆ ಸೇರಿ ಅವರನ್ನು ಅಪಹರಿಸಿ ಮೆಜೆಸ್ಟಿಕ್ ಬಳಿಯ ವಸತಿಗೃಹವೊಂದರಲ್ಲಿ ಕೂಡಿ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಮಲ್ಲೇಶ್‌ಗೌಡ ಅವರ ಪತ್ನಿ ಭಾಗ್ಯಲಕ್ಷ್ಮೀ ಅವರಿಗೆ ಕರೆ ಮಾಡಿದ ಚಂದ್ರ, ಹತ್ತು ಲಕ್ಷ ರೂಗೆ ಬೇಡಿಕೆ ಇಟ್ಟಿದ್ದ. ಹಣವನ್ನು ವಸತಿಗೃಹದ ಬಳಿ ತರುವಂತೆ ಸೂಚಿಸಿದ್ದ. ಭಾಗ್ಯಲಕ್ಷ್ಮೀ ಕುಟುಂಬ ಸದಸ್ಯರು ಹಣದೊಂದಿಗೆ ವಸತಿಗೃಹದ ಬಳಿಗೆ ಹೋಗುವ ವೇಳೆಗೆ ಆರೋಪಿಗಳು ಮಲ್ಲೇಶ್‌ಗೌಡ ಅವರನ್ನು ಬೇರೆಡೆಗೆ ಕರೆದೊಯ್ದಿದ್ದರು. ಇದರಿಂದ ಆತಂಕಗೊಂಡ ಭಾಗ್ಯಲಕ್ಷ್ಮೀ ರಾತ್ರಿ ವೇಳೆಗೆ ದೂರು ನೀಡಿದರು ಎಂದು ಪೊಲೀಸರು ಹೇಳಿದ್ದಾರೆ.

ಈ ದೂರು ಆಧರಿಸಿ ಕೂಡಲೇ ಕಾರ್ಯೋನ್ಮುಖರಾದ ಕೆ.ಆರ್.ಪುರ ಇನ್‌ಸ್ಪೆಕ್ಟರ್ ವಿ.ಕೆ.ವಾಸುದೇವ್ ಮತ್ತು ಸಿಬ್ಬಂದಿ, ಅಪಹರಣಕಾರರ ಮೊಬೈಲ್ ಕರೆಗಳ ಮಾಹಿತಿ ಸಂಗ್ರಹಿಸಿ, ಅವರು ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿರುವುದನ್ನು ಪತ್ತೆ ಮಾಡಿದರು. ಶನಿವಾರ ಸಂಜೆಯ ವೇಳೆಗೆ ಪುಟ್ಟಪರ್ತಿಗೆ ತೆರಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಮಲ್ಲೇಶ್‌ಗೌಡ ಅವರನ್ನು ರಕ್ಷಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಮಲ್ಲೇಶ್‌ಗೌಡ ಮತ್ತು ಆರೋಪಿಗಳನ್ನು ಭಾನುವಾರ ಬೆಳಿಗ್ಗೆ ನಗರಕ್ಕೆ ಕರೆದುಕೊಂಡು ಬರಲಾಯಿತು. ಬಂಧಿತರನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಆರೋಪಿಗಳಿಗೆ ಜಾಮೀನು ನಿರಾಕರಿಸಿದರು. ಆ ನಂತರ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.

ಆತಂಕ ದೂರ: `ದೂರು ನೀಡುತ್ತಿದ್ದಂತೆ ಸ್ಪಂದಿಸಿದ ಪೊಲೀಸರು ಪತಿಯನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಕುಟುಂಬ ಸದಸ್ಯರೆಲ್ಲ ಆತಂಕಗೊಂಡಿದ್ದೆವು. ಇದೀಗ ಪತಿ ಯಾವುದೇ ಪ್ರಾಣಾಪಾಯವಿಲ್ಲದೆ ಮನೆಗೆ ಮರಳಿರುವುದರಿಂದ ಆತಂಕ ನಿವಾರಣೆಯಾಗಿದೆ~ ಎಂದು ಭಾಗ್ಯಲಕ್ಷ್ಮೀ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT