ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ 63 ಕೋಟಿ: ಈಗ 1,894 ಕೋಟಿ!

2015ರೊಳಗೆ ಸಿಂಗಟಾಲೂರು ಯೋಜನೆ ಪೂರ್ಣ: ಪಾಟೀಲ
Last Updated 18 ಜುಲೈ 2013, 7:02 IST
ಅಕ್ಷರ ಗಾತ್ರ

ಬೆಂಗಳೂರು: ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ 1992ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡುವಾಗ ಅಂದಾಜಿಸಿದ ವೆಚ್ಚ ರೂ 63.62 ಕೋಟಿ. ಸದ್ಯ ಯೋಜನೆಗೆ ಮಾಡಲಾಗಿರುವ ಪರಿಷ್ಕೃತ ಅಂದಾಜಿನ ಮೊತ್ತ ರೂ 1,894.50 ಕೋಟಿ!

ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಪರಿಷತ್ತಿನಲ್ಲಿ ಬುಧವಾರ ಈ ಮಾಹಿತಿ ನೀಡಿದರು. ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದರು. `ಅಗತ್ಯವಾದ ಅನುದಾನ ಒದಗಿಸಿ 2015ರ ಡಿಸೆಂಬರ್ ಒಳಗೆ ಯೋಜನೆಯನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ' ಎಂದು ಮಾಹಿತಿ ನೀಡಿದರು.

`ಯೋಜನೆಗೆ 1992ರ ಸೆಪ್ಟೆಂಬರ್ 19ರಂದು ಮಂಜೂರಾತಿ ಸಿಕ್ಕರೂ ಕಾಮಗಾರಿ ಆರಂಭವಾಗಿದ್ದು 1997-98ರಲ್ಲಿ. 2000ರಲ್ಲಿ ಯೋಜನೆಗೆ ರೂ 595 ಕೋಟಿ ಪರಿಷ್ಕೃತ ಅಂದಾಜು ಮಾಡಲಾಗಿತ್ತು. ಅದೀಗ ರೂ 1,894.50 ಕೋಟಿ ಮೊತ್ತವನ್ನು ತಲುಪಿದೆ' ಎಂದು ವಿವರಿಸಿದರು.

`ಕಾಮಗಾರಿ ಆರಂಭವಾದ ಬಳಿಕ ಇಲ್ಲಿಯವರೆಗೆ ಯೋಜನೆಗೆ ರೂ 1,014.81 ಕೋಟಿ ವ್ಯಯಿಸಲಾಗಿದೆ. ಈ ಯೋಜನೆ ಪೂರ್ಣಗೊಂಡಾಗ 1,70,236 ಎಕರೆ ಪ್ರದೇಶ ನೀರಾವರಿ ಸೌಲಭ್ಯ ಪಡೆಯಲಿದೆ. ಸದ್ಯ 28,452 ಎಕರೆ ಪ್ರದೇಶಕ್ಕೆ ನೀರಾವರಿ ಅನುಕೂಲ ಕಲ್ಪಿಸಲಾಗಿದೆ' ಎಂದು ಹೇಳಿದರು.

`ಯೋಜನೆ ಅನುಷ್ಠಾನಕ್ಕಾಗಿ ಹೂವಿನಹಡಗಲಿ ತಾಲ್ಲೂಕಿನ ಅಲ್ಲಿಪುರ, ಮುಂಡರಗಿ ತಾಲ್ಲೂಕಿನ ಬಿದರಳ್ಳಿ ಮತ್ತು ಗುಮ್ಮಗೋಳ ಗ್ರಾಮಗಳು ಮುಳುಗಡೆ ಆಗುತ್ತಿದ್ದು, ಪುನರ್‌ವಸತಿ ಕಾಮಗಾರಿಗಳು ನಡೆದಿವೆ. ಪುನರ್‌ವಸತಿಗಾಗಿ ಒಟ್ಟಾರೆ ರೂ 109.91 ಕೋಟಿ ಮೀಸಲಿಡಲಾಗಿದ್ದು, ಇದುವರೆಗೆ ರೂ 34.58 ಕೋಟಿ ಖರ್ಚು ಮಾಡಲಾಗಿದೆ' ಎಂದು ಮಾಹಿತಿ ನೀಡಿದರು.

`ದಶಕದಿಂದ ಯೋಜನೆ ತೆವಳುತ್ತಾ ಸಾಗಿರುವುದರಿಂದ ವೆಚ್ಚವೂ ಹೆಚ್ಚಾಗುತ್ತಿದ್ದು, ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ತಂದು, ಸರ್ಕಾರ ರೈತರ ನೆರವಿಗೆ ಬರಬೇಕು' ಎಂದು ಹೊರಟ್ಟಿ ಆಗ್ರಹಿಸಿದರು.

`ಬಲದಂಡೆ ಯೋಜನೆ ಈಗಾಗಲೇ ಅನುಷ್ಠಾನಗೊಂಡಿದ್ದು, ಎಡದಂಡೆ ಕಾಮಗಾರಿ ತೀವ್ರಗತಿಯಲ್ಲಿ ನಡೆದಿದೆ. ಯಾವುದೇ ಕಾಲಕ್ಕೂ ಕಾಮಗಾರಿ ಅವಧಿ ವಿಸ್ತರಣೆ ಮಾಡದೆ ಕಾಲಮಿತಿಯಲ್ಲಿ ಮುಗಿಸಲಾಗುವುದು. ಯೋಜನೆಗೆ ಯಾವುದೇ ರೀತಿಯಲ್ಲಿ ಹಣಕಾಸಿನ ತೊಂದರೆ ಇಲ್ಲ' ಎಂದು ಸಚಿವರು ಹೇಳಿದರು. `ಯೋಜನೆ ಪೂರ್ಣಗೊಂಡ ಬಳಿಕ ಗದಗ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ರೈತರಿಗೆ ಅದರ ಲಾಭ ತಟ್ಟಲಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT