ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆ ಎಂಬ ಹತಾಶ ಮಾರ್ಗ

Last Updated 5 ನವೆಂಬರ್ 2011, 19:30 IST
ಅಕ್ಷರ ಗಾತ್ರ

ದಿನ ಬೆಳಗಾಗುತ್ತಿದ್ದಂತೆಯೇ ಆತ್ಮಹತ್ಯೆಯಂತಹ ತಲ್ಲಣ ಮೂಡಿಸುವ ಸುದ್ದಿಗಳನ್ನು ಓದಲು, ಕೇಳಲು ಯಾರೂ ಬಯಸುವುದಿಲ್ಲ. ಆದರೂ ವಿಧಿ ಇಲ್ಲ. ಇದಕ್ಕೆ ವೈರುಧ್ಯವೋ ಎಂಬಂತೆ ದಿನೇ ದಿನೇ ಆತ್ಮಹತ್ಯೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇನ್ನೂ ಮೀಸೆ ಚಿಗುರಿರದ ಯುವಕರು, ಭಗ್ನಪ್ರೇಮಿಗಳು, ಸಾಲ ತೀರಿಸಲಾಗದೆ ಕಂಗೆಟ್ಟ ರೈತರು, ಮಾನಸಿಕ ಖಿನ್ನತೆ ಅನುಭವಿಸುವವರು, ಮಾದಕ ದ್ರವ್ಯ ವ್ಯಸನಿಗಳು, ಮಾರಕ ರೋಗಗಳಿಂದ ನರಳುತ್ತಿರುವವರು, ಶೋಷಣೆಯಿಂದ ಬೇಸತ್ತ ದಾದಿಯರು, ಅಷ್ಟೇ ಏಕೆ ಆತ್ಮಹತ್ಯೆ ಪದದ ಅರ್ಥವೇ ಗೊತ್ತಿರದ ಎಳೆ ಜೀವಗಳೂ ಸಾವಿಗೆ ಬಾಯೊಡ್ಡುವ ಸಾಹಸ ತೋರುವಾಗ ನಮ್ಮ ಸಮಾಜಕ್ಕೇನಾಗಿದೆ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. 

 ವಿಶ್ವದಲ್ಲಿ ಪ್ರತಿ ವರ್ಷ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಆತ್ಮಹತ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ. ಭಾರತದ್ಲ್ಲಲಂತೂ ಪ್ರತಿ ಗಂಟೆಗೆ ಹದಿನೈದು ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಸುಮಾರು 239 ಪುರುಷರು ಮತ್ತು 130 ಮಹಿಳೆಯರು ಪ್ರತಿದಿನ ಆತ್ಮಹತ್ಯೆಯ ಹಾದಿ ತುಳಿಯುತ್ತಾರೆ. 2010ರಲ್ಲಿ ಭಾರತದಲ್ಲಿ 1,34,599 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ವರದಿ ಎಚ್ಚರಿಕೆ ಗಂಟೆ ಮೊಳಗಿಸಿದೆ. 

 ಆತ್ಮಹತ್ಯೆಯ ಪ್ರಮುಖ ಕಾರಣಗಳಾದ ಕೌಟುಂಬಿಕ ಸಮಸ್ಯೆ ಶೇ 23.7ರಷ್ಟು ಕೊಡುಗೆಯನ್ನು ನೀಡಿದರೆ, ಕಾಯಿಲೆಗಳು ಶೇ 21.1ರಷ್ಟು ಕೊಡುಗೆ ನೀಡುತ್ತವೆ ಎಂದು ಎನ್‌ಸಿಆರ್‌ಬಿ ವರದಿ ತಿಳಿಸಿದೆ. ಆತ್ಮಹತ್ಯೆ ವೈಯಕ್ತಿಕ ವಿಚಾರವಾದರೂ ಅದರ ಹಿಂದಿನ ಕಾರಣಗಳು ಹಲವು. ಬದುಕನ್ನು ಅರ್ಥೈಸಿಕೊಳ್ಳುವುದರಲ್ಲೇ ಜನ ಎಡವಿದ್ದಾರೆ. `ಸರಳ ಬದುಕು, ವಿಶಾಲ ಯೋಚನೆ~ ಎಂಬ ಆದರ್ಶ ತತ್ವಗಳನ್ನು ಮೂಲೆಗೆ ತಳ್ಳಿದ ಮನುಷ್ಯ ಸರಕು ಸಂಸ್ಕೃತಿಯ ದಾಸನಾಗಿ ಬದುಕನ್ನು ಸಂಕೀರ್ಣಗೊಳಿಸಿಕೊಂಡಿದ್ದಾನೆ. 

ಬೆಂಗಳೂರು ಸೇರಿದಂತೆ ಮಹಾ ನಗರಗಳಲ್ಲಿ ಆತ್ಮಹತ್ಯೆ ಸಂಖ್ಯೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುವುದಕ್ಕೆ ಇದೇ ಕಾರಣ. ಬೆಂಗಳೂರು ನಗರವೊಂದರಲ್ಲೇ ಕಳೆದ ವರ್ಷ 1778 ಆತ್ಮಹತ್ಯಾ ಪ್ರಕರಣಗಳು ನಡೆದಿವೆ. ಅಡ್ಡಾದಿಡ್ಡಿಯಾಗಿ ಬೆಳೆದ ನಗರ, ಯಾಂತ್ರಿಕ ಬದುಕು, ಕಚೇರಿಯ ಒತ್ತಡ, ಹೆಚ್ಚುತ್ತಿರುವ ಜೀವನ ವೆಚ್ಚ, ಇವೆಲ್ಲವೂ ಮೆಟ್ರೊ ನಗರಗಳಲ್ಲಿ ಆತ್ಮಹತ್ಯೆಗಳಿಗೆ ಪ್ರಮುಖ ಕಾರಣ. ಇವುಗಳ ಜತೆಗೆ ವಿಚ್ಛೇದನ, ಅಭದ್ರತೆ, ಪೈಪೋಟಿ ಎಲ್ಲವೂ ತಂತಮ್ಮ ಕೊಡುಗೆ ನೀಡುತ್ತಲೇ ಬಂದಿವೆ. 

ದಾದಿಯರ ಆತ್ಮಹತ್ಯೆ
ರೈತರು, ವಿದ್ಯಾರ್ಥಿಗಳಂತೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಾಲಿಗೆ ಇದೀಗ ದಾದಿಯರೂ ಸೇರಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳ ಆಡಳಿತ ಮಂಡಳಿ ನೀಡುವ ಮಾನಸಿಕ ಹಿಂಸೆಯನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿರುವ ಯುವದಾದಿಯರ ಸಂಖ್ಯೆ ಈಗ ಹೆಚ್ಚುತ್ತಿದೆ.

ಮುಂಬೈಯ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನ ಏಷ್ಯನ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ದಾದಿಯಾಗಿದ್ದ 23ರ ಹರೆಯದ ಕೇರಳದ ಬೀನಾ ಬೇಬಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಆಸ್ಪತ್ರೆಯ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದು ಈ ಪಟ್ಟಿಗೆ ಇತ್ತೀಚೆಗಿನ ಹೊಸ ಸೇರ್ಪಡೆಯಾಗಿದೆ.

ಆದರೆ ಬೀನಾ ಪ್ರಕರಣದಲ್ಲಿ ಆಸ್ಪತ್ರೆಯ ಉಳಿದ ದಾದಿಯರು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಆಸ್ಪತ್ರೆ ಎದುರು ಧರಣಿ ಕುಳಿತರು. ಬಾಂಡ್ ಅವಧಿ ಮುಗಿದರೂ ಶೈಕ್ಷಣಿಕ ದಾಖಲೆ ಪತ್ರಗಳನ್ನು ನೀಡದೇ ಇರುವುದು, ವೈದ್ಯರು ತಪ್ಪು ಮಾಡಿದರೂ ಅದನ್ನು ದಾದಿಯರ ಮೇಲೆ ಹೊರಿಸುವುದು, ರಾತ್ರಿ ಪಾಳಿಯ ಮುಗಿದರೂ ಮಾರನೇ ದಿನವೇ ದಿನದ ಪಾಳಿಗೆ ನೇಮಿಸುವುದು, ಕತ್ತೆಯಂತೆ ದುಡಿದರೂ ಕಡಿಮೆ ವೇತನ ನೀಡುವುದು... ಖಾಸಗಿ ಆಸ್ಪತ್ರೆಗಳ ಇಂತಹ ಕಾರ್ಯವೈಖರಿಯ ವಿರುದ್ಧ ಪ್ರತಿಭಟನೆ ನಡೆಸಿದ ದಾದಿಯರ ಮೇಲೆ ಪೊಲೀಸ್ ಹಲ್ಲೆಯೂ ನಡೆಯಿತು. ದಾದಿಯರು ಧರಣಿ ಮುಂದುವರಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಕೇರಳ ಸರ್ಕಾರ, ಮಹಾರಾಷ್ಟ್ರ ಸರ್ಕಾರದೊಡನೆ ನಡೆಸಿದ ಮಾತುಕತೆಯ ಪರಿಣಾಮವಾಗಿ ಪ್ರತಿಭಟನೆ ಕೊನೆಗೊಂಡಿತು. ಇಂತಹ ಅದೆಷ್ಟೋ ಆಸ್ಪತ್ರೆಗಳು ನಮ್ಮ ದೇಶದಲ್ಲಿವೆ. ಅಲ್ಲಿನ ವ್ಯವಸ್ಥೆಯನ್ನು ಸರಿಪಡಿಸುವವರು ಯಾರು?



 ಹಳ್ಳಿಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. 90ರ ದಶಕದಲ್ಲಿ ಪತ್ರಕರ್ತ ಸಾಯಿನಾಥ್ ವರದಿ ಮಾಡುವವರೆಗೆ ರೈತರ ಆತ್ಮಹತ್ಯೆಯ ಬಗ್ಗೆ ಯಾರೂ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಬರ, ಪ್ರವಾಹ, ಸಾಲ, ಕೈಕೊಡುವ ಬೆಳೆಯಿಂದಾಗಿ ಕಂಗಾಲಾಗುವ ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. 2009ರಲ್ಲಿ ಕನಿಷ್ಠ 17368 ಮಂದಿ ರೈತರು ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಎನ್‌ಸಿಆರ್‌ಬಿ ವರದಿ ಗ್ರಾಮಗಳ ನಿಜಸ್ಥಿತಿಯತ್ತ ಬೆಳಕು ಚೆಲ್ಲುತ್ತದೆ.

ಆದರೆ ಕ್ಷುಲ್ಲಕ ಕಾರಣಗಳಿಗೂ ಆತ್ಮಹತ್ಯೆಯಂತಹ ಸಾಹಸಕ್ಕೆ ಮುನ್ನುಗ್ಗುವವರ ಸಂಖ್ಯೆ ಕಡಿಮೆಯೇನಲ್ಲ. ಪ್ರೀತಿ, ಪ್ರೇಮದ ಹೆಸರಲ್ಲಿ ಬದುಕನ್ನೇ ಕೊನೆಗೊಳಿಸುವ ಅಪಕ್ವ ನಿರ್ಧಾರವನ್ನು ಇಂದು ಯುವಜನ ತಳೆಯುತ್ತಿರುವುದು ಬೇಸರದ ಸಂಗತಿ. ಮಾಧ್ಯಮಗಳ ಅತಿಯಾದ ಪ್ರಭಾವವೂ ಇದಕ್ಕೆ ಕಾರಣವೆಂದರೆ ತಪ್ಪಲ್ಲ. ಪ್ರತಿದಿನ ಶೇ 11ರಷ್ಟು ಆತ್ಮಹತ್ಯೆಗಳಿಗೆ ಭಗ್ನ ಪ್ರೇಮವೇ ಕಾರಣ. ಯುವಜನತೆಗೆ ಮಾರ್ಗದರ್ಶನದ ಕೊರತೆ ಇದೆ ಎಂಬುದಕ್ಕೆ ಇದು  ಉದಾಹರಣೆ. 

`ಬದಲಾದ ಜೀವನಶೈಲಿಗೆ ಒಗ್ಗಿಕೊಳ್ಳಲಾಗದೆ ಯುವಕರು ಆತ್ಮಹತ್ಯೆಯತ್ತ ವಾಲುತ್ತಿದ್ದಾರೆ. ಜೀವನ ವೆಚ್ಚ ಹೆಚ್ಚಳ, ಮಾದಕ ದ್ರವ್ಯ ವ್ಯಸನ ಮತ್ತು ಮದ್ಯಪಾನದಂತಹ ಕೆಟ್ಟ ಚಟಗಳೂ ಸಾಕಷ್ಟು ಕೊಡುಗೆ ನೀಡುತ್ತವೆ~ ಎಂದು ಖ್ಯಾತ ಮಾನಸಿಕ ತಜ್ಞರಾದ ಡಾ. ಸಿ. ಆರ್. ಚಂದ್ರಶೇಖರ್ ಅಭಿಪ್ರಾಯಪಡುತ್ತಾರೆ.

ಇದೇ ವೇಳೆ ಆತ್ಮಹತ್ಯೆಗೆ ಅನಕ್ಷರತೆಯೇ ಕಾರಣ ಎಂಬ ವಾದವೂ ಸರಿಯಲ್ಲ. 2010ರಲ್ಲಿ ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ 38,444 ಮಂದಿ ಅನಕ್ಷರಸ್ಥರು ಎಂದು ವರದಿ ತಿಳಿಸಿದ್ದರೂ ಐಐಟಿಯಂತಹ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು, ಸಾಫ್ಟ್‌ವೇರ್ ಇಂಜಿನಿಯರ್‌ಗಳು, ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರೂ ಕೂಡ ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವುದು ಮೇಲಿನ ವಾದವನ್ನು ತಳ್ಳಿ ಹಾಕುತ್ತದೆ. ಅಷ್ಟೇ ಏಕೆ ಸಾಕ್ಷರತೆಯ್ಲ್ಲಲಿ ಮುಂದಿರುವ ಕೇರಳ ಕೂಡ ಆತ್ಮಹತ್ಯೆಯ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿದೆ. ಖಾಸಗಿ ಹಣಕಾಸು ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿ ದರಕ್ಕೆ ಸಾಲ ಮಾಡಿ ಬಸವಳಿದ ಅದೆಷ್ಟೋ ಕುಟುಂಬಗಳು ಒಂದರ ಹಿಂದೆ ಒಂದರಂತೆ ಸಾಮೂಹಿಕ ಆತ್ಮಹತ್ಯೆಗೆ ಶರಣಾದ ಸರಣಿ ಘಟನೆಗಳು ಇನ್ನೂ ಮನಃಪಟಲದಿಂದ ಮರೆಯಾಗದೇ ಉಳಿದಿವೆ.

ಮಕ್ಕಳ ಆತ್ಮಹತ್ಯೆ: ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಗೊಳ್ಳುವ ಏಪ್ರಿಲ್, ಮೇ ತಿಂಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ಸುದ್ದಿ ಹೆಚ್ಚೆಚ್ಚು ಕೇಳಿಬರುತ್ತದೆ. ಇವರಲ್ಲಿ ಬಹುಪಾಲು ಮಂದಿ  14 ಕ್ಕಿಂತಲೂ ಕಡಿಮೆ ವಯಸ್ಸಿನವರು ಎಂದು ವರದಿ ಸ್ಪಷ್ಟಪಡಿಸುತ್ತದೆ. ಕಳೆದ ಒಂದು ವರ್ಷದಲ್ಲಿಯೇ ಬೆಂಗಳೂರು ನಗರದಲ್ಲಿ  118 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗ್ದ್ದಿದ್ದಾರೆ. ಒಂದೆಡೆ ಪಠ್ಯಕ್ರಮದ ಒತ್ತಡ, ಇನ್ನೊಂದೆಡೆ ಹೆತ್ತವರ ಒತ್ತಡ. ಇವುಗಳ ನಡುವೆ ನಲುಗುವ ಮಕ್ಕಳು ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದರೂ ಪಠ್ಯಕ್ರಮದ ಭಾರ ತಗ್ಗಿಸುವುದಕ್ಕೆ ಸರ್ಕಾರ, ಶಿಕ್ಷಣತಜ್ಞರು ಯಾವುದೇ ಕ್ರಮಕೈಗೊಳ್ಳದೇ ಇರುವುದು ಖೇದದ ಸಂಗತಿಯಾಗಿದೆ.

ಪರಿಹಾರ: ಎನ್‌ಸಿಆರ್‌ಬಿ ಹೊರತಂದಿರುವ ವರದಿಗಳು ಎಚ್ಚರಿಕೆಯ ಗಂಟೆಯನ್ನು ಒಂದೆಡೆ ಮೊಳಗಿಸುತ್ತಿದ್ದರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗದೆ ಅದೆಷ್ಟೋ ಪ್ರಕರಣಗಳು ಮರೆಯಾಗುತ್ತವೆ ಎಂದು ವರದಿಯೊಂದು ತಿಳಿಸಿದೆ. ವಿಶ್ವಸಂಸ್ಥೆಯ ಘೋಷಣೆಯ ಪ್ರಕಾರ ಸೆ.10ರಂದು `ಆತ್ಮಹತ್ಯೆ ತಡೆ~ ದಿನವನ್ನಾಗಿ ಆಚರಿಸಲಾಗುತ್ತಿದ್ದರೂ ಕೂಡ ದಿನೇ ದಿನೇ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ರಾಷ್ಟ್ರೀಯ ಆರೋಗ್ಯ ನೀತಿ ರೂಪಿಸುವ ಅಗತ್ಯ ಇದೆ.

ಪ್ರತಿಯೊಬ್ಬ ವ್ಯಕ್ತಿ ಮಾನಸಿಕವಾಗಿ ದೃಢವಾಗಬೇಕಾದುದು ಪ್ರಸ್ತುತ ಪರಿಸ್ಥಿತಿಯಲ್ಲಿ ಅತ್ಯಗತ್ಯ. ಸಮಸ್ಯೆಗಳು ಬಂದಾಗ ಅದಕ್ಕೆ ದಾಸನಾಗದೆ ಅದನ್ನು ಎದುರಿಸುವ ಮನೋಧೈರ್ಯ ಬೆಳೆಸಿಕೊಳ್ಳಬೇಕು. ಖಿನ್ನತೆ ಕಂಡುಬಂದಲ್ಲಿ ಆರಂಭದಲ್ಲೇ ಮಾನಸಿಕ ತಜ್ಞರನ್ನು ಭೇಟಿಯಾದಲ್ಲಿ ಕಾಯಿಲೆಯಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ.

ಇದರಲ್ಲಿ ಕುಟುಂಬದ ಪಾತ್ರ ಮಹತ್ವವಾದದ್ದು. ಎಳೆಯ ವಯಸ್ಸಿನಿಂದಲೇ ಮಕ್ಕಳಲ್ಲಿ ಆತ್ವವಿಶ್ವಾಸ ತುಂಬುವ ಕಾರ್ಯವನ್ನು ಹೆತ್ತವರು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಅಕ್ಷರಮಾಲೆಯ ಜತೆಗೆ ಬದುಕನ್ನು ಎದುರಿಸುವ ಕಲೆಗಳನ್ನೂ ಪಠ್ಯಕ್ರಮದಲ್ಲಿ ಅಳವಡಿಸಬೇಕು. 

 ಮಾನಸಿಕವಾಗಿ ಬಳಲಿದವರಿಗೆ ಸಹಾಯ ನೀಡಲು ವೈದ್ಯಕೀಯ ಸಮಾಲೋಚನಾ ಕೇಂದ್ರಗಳು ಮತ್ತು ಸಹಾಯ್‌ಯಂತಹ ಸಂಸ್ಥೆಗಳ ನೆರವು ದೊರೆಯುವಂತಾಗಬೇಕು. ಆಸ್ಪತ್ರೆಗಳಂತೆ ಆಪ್ತ ಸಲಹಾ ಸಂಸ್ಥೆಗಳ ಸಂಖ್ಯೆಯೂ ಹೆಚ್ಚಾಗಬೇಕು. ಜನರಿಗೆ ಇವುಗಳ ಸಂಪರ್ಕ ಸುಲಭವಾಗಬೇಕಲ್ಲದೆ ಇವುಗಳ ಸೇವೆ ಸದಾ ದೊರೆಯುವಂತಿರಬೇಕು.  

 ಇವುಗಳೆಲ್ಲದರ ಜತೆಗೆ ಆತ್ಮಹತ್ಯೆಯಂತಹ ಪ್ರಕರಣಗಳ ಜಾಡು ಹಿಡಿದು ಕೆದಕಿ ಅವುಗಳನ್ನೇ ದೊಡ್ಡ ಸುದ್ದಿ ಎಂದು ಪ್ರಸಾರ ಮಾಡುವ ವಿದ್ಯುನ್ಮಾನ ಮಾಧ್ಯಮಗಳು, ನಿರಾಸೆ ಹುಟ್ಟಿಸುವ ಇಂಥ ಕಾರ್ಯಕ್ರಮಗಳ ಬದಲು ಬದುಕಿನಲ್ಲಿ ಎದುರಾದ ನೂರೆಂಟು ಕಷ್ಟಗಳನ್ನು ಧೈರ್ಯವಾಗಿ ಎದುರಿಸಿ ಬದುಕುತ್ತಿರುವ ಜನರನ್ನು ಸಂದರ್ಶಿಸಿ ಕಾರ್ಯಕ್ರಮ ಪ್ರಸಾರ ಮಾಡಲಿ. ಅದರಿಂದ ಹತಾಶ ಬದುಕಿಗೆ ಸ್ಫೂರ್ತಿಯಾದರೂ ದೊರಕೀತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT