ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಾಧನೋತ್ಸವ; ಸಂಗೀತ ಉತ್ಸವ

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ಕರ್ನಾಟಕ ಸಂಗೀತ ಕಛೇರಿ ಎಂದರೆ ಸಾಮಾನ್ಯವಾಗಿ ತ್ಯಾಗರಾಜರ ಕೀರ್ತನೆಗಳಿಗೆ ಮೊದಲ ಆದ್ಯತೆ. ಕಲಾವಿದರು ತಮ್ಮ ಸಂಗೀತ ಕಛೇರಿಗಳಲ್ಲಿ ಸುಪ್ರಸಿದ್ಧ ವರ್ಣ ಹಾಡಿದ ನಂತರ ತ್ಯಾಗರಾಜರ ಮಧ್ಯಮ ವಿಳಂಬ ಮತ್ತು ವಿಳಂಬ ಕಾಲದ ಕೃತಿ, ಕೀರ್ತನೆಗಳನ್ನು ಪ್ರಸ್ತುತಪಡಿಸುವುದು ವಾಡಿಕೆ.

ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರಾದ ತ್ಯಾಗರಾಜರು ಸಾವಿರಾರು ಕೀರ್ತನೆಗಳನ್ನು ಬೇರೆ ಬೇರೆ ರಾಗಗಳಲ್ಲಿ ರಚಿಸಿ ವಾಗ್ಗೇಯಕಾರರು ಎನಿಸಿಕೊಂಡವರು. ಇವರ ಪಂಚರತ್ನ ಕೃತಿಗಳಂತೂ ಬಹಳ ಜನಪ್ರಿಯ. ಶ್ರೀರಾಮನ ಪರಮ ಭಕ್ತರಾಗಿದ್ದ ತ್ಯಾಗರಾಜರು ರಾಮನ ಮೇಲೆ ಸಾಕಷ್ಟು ಕೃತಿ ಕೀರ್ತನೆಗಳನ್ನು ರಚಿಸಿದ್ದಾರೆ.

ತ್ಯಾಗರಾಜರ ಕೀರ್ತನೆಗಳಿಗೆ ಸೊಗಸಾದ ಆಲಾಪ, ಸುಮಧುರ ಸ್ವರಪುಂಜಗಳ ಮೂಲಕ ವಿವಿಧ `ಸಂಗತಿ~ಗಳನ್ನು ಹಾಡಿ, ಚಿಟ್ಟೆಸ್ವರ, ನೆರವಲ್‌ನೊಂದಿಗೆ ಹಾಡಿದರೆ ಅದರ ಕಂಪು ಮನತಣಿಸುತ್ತದೆ. `ಮನೋಧರ್ಮ ಸಂಗೀತ~ಕ್ಕೂ ಕೀರ್ತನೆಗಳು ಕರ್ಣಾನಂದಕರ.

ಮೇಳಕರ್ತ ರಾಗಗಳಾದ ಮಾಯಾಮಾಳವಗೌಳ, ಶಂಕರಾಭರಣ, ಮೇಚ ಕಲ್ಯಾಣಿ, ಖರಹರಪ್ರಿಯ, ಷಣ್ಮುಖಪ್ರಿಯ, ಕಾಮವರ್ಧಿನಿ ಮುಂತಾದ ರಾಗಗಳಲ್ಲಿ ತ್ಯಾಗರಾಜರು ರಚಿಸಿದ ಕೀರ್ತನೆಗಳು ಬಹಳ ಅರ್ಥಗರ್ಭಿತ. ಜನ್ಯರಾಗಗಳಾದ ಹಂಸಧ್ವನಿ, ಮೋಹನ, ಮಲಹರಿ, ಗೌಳ ಮುಂತಾದ ರಾಗಗಳ ಕೀರ್ತನೆಗಳೂ ಸಹ ತ್ಯಾಗರಾಜರಿಂದ ರಚಿತವಾಗಿದ್ದು ಸಂಗೀತ ಕಛೇರಿಗಳನ್ನು ಕಳೆಕಟ್ಟಿಸುತ್ತವೆ.

ತ್ಯಾಗರಾಜರ ಆರಾಧನೆ ಪ್ರತಿವರ್ಷ ಕರ್ನಾಟಕ, ತಮಿಳುನಾಡು, ಆಂಧ್ರಗಳಲ್ಲಿ ಸಂಗೀತ ಪ್ರಿಯರು ನಡೆಸಿ ಅವರಿಗೆ ನಮನ ಸಲ್ಲಿಸುವುದು ವಾಡಿಕೆ. ತಂಜಾವೂರಿನಲ್ಲಿ ನಡೆಯುವ ತ್ಯಾಗರಾಜರ ಆರಾಧನೆ ವಿಶ್ವವಿಖ್ಯಾತ. ಸಂಗೀತ ಸಂಸ್ಥೆಗಳಲ್ಲದೆ ಮನೆ ಮನೆಗಳಲ್ಲೂ ತ್ಯಾಗರಾಜರ ಆರಾಧನೆ ನಡೆಯುತ್ತದೆ.

ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಆರಾಧನೆಯೂ ತಿಂಗಳ ಕಾಲ ನಡೆಯುತ್ತದೆ. ಇದು ಒಂದು ರೀತಿಯಲ್ಲಿ ಸಂಗೀತ ಸಾಧಕರಿಗೆ ಸಲ್ಲಿಸುವ ನಮನವೂ ಹೌದು.

ಅಂದ ಹಾಗೆ ನಗರದ ಬನಶಂಕರಿ ಎರಡನೇ ಹಂತದಲ್ಲಿರುವ ಶ್ರೀರಾಮ ಲಲಿತ ಕಲಾ ಮಂದಿರ ಜ.26ರಂದು ಬೆಳಿಗ್ಗೆ 10 ಗಂಟೆಗೆ ದೇವಗಿರಿ ವೆಂಕಟೇಶ್ವರ ದೇವಸ್ಥಾನದಲ್ಲಿ ತ್ಯಾಗರಾಜರ ಮತ್ತು ಪುರಂದರದಾಸರ ದಿನಾಚರಣೆ ಏರ್ಪಡಿಸಿದೆ. ಹಿರಿಯ ಸಂಗೀತ ಕಲಾವಿದರು ಇದರಲ್ಲಿ ಭಾಗವಹಿಸುವರು. ಈ ಸಂಗೀತ ಸಂಸ್ಥೆ ಕಳೆದ 57 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಸತತ ಸೇವೆ ಸಲ್ಲಿಸುತ್ತಿದ್ದು, ಹಿರಿಯ ಕಿರಿಯ ಸಂಗೀತ ಕಲಾವಿದರಿಗೆ ವೇದಿಕೆ ಒದಗಸುತ್ತಿದೆ.

ಫೆಬ್ರುವರಿ ಒಂದರಿಂದ ಸಂಗೀತ ಉತ್ಸವ

ಸದಾ ಒಂದಲ್ಲ ಒಂದು ಸಂಗೀತ ಕಾರ್ಯಕ್ರಮ ಏರ್ಪಡಿಸಿ ನಾಡಿನ ಶಾಸ್ತ್ರೀಯ ಸಂಗೀತದ ಕಲಾವಿದರ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಒದಗಿಸುತ್ತಿದೆ. ಇತ್ತೀಚೆಗಷ್ಟೇ ಸಂಕ್ರಾಂತಿ ಸಂಗೀತೋತ್ಸವವನ್ನು ಅದ್ಧೂರಿಯಾಗಿ ಪೂರೈಸಿದ ಸಂಸ್ಥೆ ಮತ್ತೆ ಅಂಥದ್ದೇ ಒಂದು 12 ದಿನಗಳ ಬೃಹತ್ ಸಾಂಸ್ಕೃತಿಕ ಉತ್ಸವ ಏರ್ಪಡಿಸಲು ಸಿದ್ಧತೆ ನಡೆಸುತ್ತಿದೆ.  ಸಂಗೀತ ಪ್ರೇಮಿಗಳಿಗೆ ನಾದದ ರಸದೌತಣ ನೀಡುತ್ತಾ ಬಂದಿರುವ ಸಂಸ್ಥೆ ಈ ಬಾರಿ ಹೆಸರಾಂತ ಕಲಾವಿದರ ಗಾಯನ ವಾದನ ಕಛೇರಿ ಏರ್ಪಡಿಸಿ ಸಂಗೀತ ರಸಿಕರ ಮನತಣಿಸಲಿದೆ. ಫೆಬ್ರುವರಿ 1ರಿಂದ 12ರವರೆಗೆ ಏರ್ಪಡಿಸಿರುವ ಈ ಬೃಹತ್ ಸಾಂಸ್ಕೃತಿಕ ಉತ್ಸವವು ಬೆಂಗಳೂರು ಗಾಯನ ಸಮಾಜದಲ್ಲಿ ನಡೆಯಲಿದೆ.

ಫೆ.1ರಂದು ಬಾಂಬೆ ಜಯಶ್ರೀ, ಫೆ. 2 ಅಭಿಷೇಕ್ ರಘುರಾಂ, ಫೆ. 3ರಂದು ಟಿ.ಎಂ. ಕೃಷ್ಣ, ಫೆ. 4ರಂದು ವಿಶಾಖ ಹರಿ ಅವರು ಮೀರಾಬಾಯಿ ಚರಿತ್ರೆ ಕುರಿತ ಸಂಗೀತ ಉಪನ್ಯಾಸ ನಡೆಸಿಕೊಡುವರು. ಫೆಬ್ರುವರಿ 5ರಂದು ಮಲ್ಲಾಡಿ ಸಹೋದರರ ಯುಗಳ ಗಾಯನ, ಫೆ. 6ರಂದು ಡಾ.ಆರ್.ಎನ್. ಶ್ರೀಲತಾ ಅವರಿಂದ ಗಾಯನ, ಫೆ.7ರಂದು ಎಸ್. ಸೌಮ್ಯ ಅವರ ಗಾಯನ, ಫೆ.8ರಂದು ಡಾ. ಸುಧಾ ರಘುನಾಥನ್ ಅವರಿಂದ ಶಾಸ್ತ್ರೀಯ ಗಾಯನ, ಫೆ.9ರಂದು ಮೈಸೂರು ಎಂ. ನಾಗರಾಜ್ ಮತ್ತು ಮೈಸೂರು ಎಂ. ಮಂಜುನಾಥ್ ಅವರಿಂದ ಯುಗಳ ಪಿಟೀಲು ವಾದನ, ಫೆ. 10ರಂದು ಲಕ್ಷ್ಮಿ ಗೋಪಾಲಸ್ವಾಮಿ ಅವರಿಂದ ಭರತನಾಟ್ಯ, 11ರಂದು ಸಂಜಯ್ ಸುಬ್ರಹ್ಮಣ್ಯನ್ ಅವರ ಗಾಯನ ಹಾಗೂ ಫೆ. 12ರಂದು ರಂಜನಿ ಮತ್ತು ಗಾಯತ್ರಿ ಅವರಿಂದ ಯುಗಳ ಗಾಯನ ನಡೆಯಲಿದೆ.

ಈ ಸಂಗೀತೋತ್ಸವವನ್ನು ಶ್ರೀರಾಮ ಲಲಿತ ಕಲಾಮಂದಿರದ ಸಂಸ್ಥಾಪಕರಾದ ಕರ್ನಾಟಕ ಕಲಾಶ್ರೀ ಜಿ.ವಿ. ರಂಗನಾಯಕಮ್ಮ ಮತ್ತು ಡಾ.ಜಿ.ವಿ. ವಿಜಯಲಕ್ಷ್ಮಿ ಅವರ ಸ್ಮರಣಾರ್ಥ ಏರ್ಪಡಿಸಲಾಗಿದೆ. ಎಲ್ಲ ಸಂಗೀತ ಕಛೇರಿಗಳು ಸಂಜೆ 5.45ರಿಂದ ಆರಂಭ ಮತ್ತು ಪ್ರವೇಶ ಸಂಪೂರ್ಣ ಉಚಿತ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT