ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್‌ನೆಟ್ ಮಾಯೆ

Last Updated 2 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಐದನೇ ತರಗತಿಯ ವಿದ್ಯಾರ್ಥಿಗಳಿಗೆ `ಕಲ್ಲುಗಳ ವಯಸ್ಸು ಕಂಡುಹಿಡಿಯುವುದು ಹೇಗೆ?~ ಎಂದು ತಿಳಿದುಕೊಂಡು ಬರಲು ಶಾಲೆಯ ಶಿಕ್ಷಕಿ ಸೂಚಿಸಿದ್ದರು. ಕಲ್ಲುಗಳನ್ನೇ ಗೋಲಿಗಳಂತೆ ಭಾವಿಸಿ ಆಡುವ ವಯಸ್ಸಿನ ಮಗುವಿಗೆ ಕಲ್ಲುಗಳ ವಯಸ್ಸಿನ ಬಗ್ಗೆ ಪಾಠ ಮಾಡಬೇಕಾದ ಶಿಕ್ಷಕಿ, ಉತ್ತರವನ್ನು ಇಂಟರ್ನೆಟ್‌ನ (ಅಂತರ್ಜಾಲ) ಗೂಗಲ್‌ನಲ್ಲಿ ಹೇಗೆ ಹೆಕ್ಕಬೇಕು ಎಂಬುದರ ಮಾಹಿತಿಯನ್ನು ಸಹ ನೀಡಿದ್ದರು. ಇದು ಒಂದು ಉದಾಹರಣೆಯಷ್ಟೆ.

ರಾಜಧಾನಿಯ ಮಕ್ಕಳಿಗೆ ನಿತ್ಯ ವೆಬ್‌ನಲ್ಲಿ ತಡಕಾಡಲು ಒಂದಿಷ್ಟಾದರೂ `ಹೋಂವರ್ಕ್~ಗಳು ಇದ್ದೇ ಇರುತ್ತವೆ. ಇದು ಒಬ್ಬರ ಸಮಸ್ಯೆ ಅಲ್ಲ. ಬೆಂಗಳೂರಿನ ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಪೋಷಕರ ದಿನನಿತ್ಯದ ಅಳಲು ಇದು.

ಭಾರತದ ಸಿಲಿಕಾನ್ ನಗರ ಎಂಬ ಖ್ಯಾತಿ ಪಡೆಯುತ್ತಿದ್ದಂತೆ ಬೆಂಗಳೂರಿನ ಶಾಲಾ ಕಾಲೇಜುಗಳಲ್ಲಿ ಕಂಪ್ಯೂಟರ್ ಹಾಗೂ ಅಂತರ್ಜಾಲ ಪಠ್ಯಪುಸ್ತಕದಷ್ಟೇ ಮಹತ್ವ ಪಡೆದಿದೆ. ಹೀಗಾಗಿ ಇಲ್ಲಿ ಬಹುತೇಕ ಮನೆಗಳಲ್ಲಿ ಕಂಪ್ಯೂಟರ್‌ಗಳು, ಮಾಹಿತಿಗಾಗಿ ಅಂತರ್ಜಾಲ ವ್ಯವಸ್ಥೆ ಇದೆ. ಇದರಿಂದಾಗಿಯೇ ಬೇಕು-ಬೇಡ ಎಂಬುದರ ಪರಿವೆಯೇ ಇಲ್ಲದೆ `ಒಂದು ಕೇಳಿದರೆ ಸಾವಿರಾರು ಮಾಹಿತಿ~ ನೀಡುವ ಅಂತರ್ಜಾಲಕ್ಕೆ ಮಕ್ಕಳು ತಮ್ಮನ್ನು ಒಡ್ಡಿಕೊಂಡಿದ್ದಾರೆ. ವೆಬ್‌ಸೈಟ್ ಜಾಲಾಡುವಾಗ ತಮಗೇ ಅರಿವಿಲ್ಲದೆ ಅಶ್ಲೀಲ ಹಾಗೂ ವಯಸ್ಕ ಸಂಬಂಧಿ ವಿಷಯಗಳನ್ನು ನೋಡಿರುವುದಾಗಿ ಮಕ್ಕಳು ಒಪ್ಪಿಕೊಳ್ಳುತ್ತಾರೆ. ಇದರ ಪ್ರಮಾಣ ದೇಶದಲ್ಲಿ ಎಷ್ಟಿದೆ ಎಂದರೆ, ಮೊದಲ ಸ್ಥಾನದಲ್ಲಿರುವ ಮುಂಬೈ ನಗರದಲ್ಲಿ ಶೇ 40ರಷ್ಟು ಮಕ್ಕಳು ಹಾಗೂ ದ್ವಿತೀಯ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ಶೇ 28ರಷ್ಟು ಮಕ್ಕಳು ವಯಸ್ಕ ಸಂಬಂಧಿ ವಿಷಯಗಳನ್ನು ನೋಡಿದ್ದಾರಂತೆ.

ಇಂಥ ಆಘಾತಕಾರಿ ಸಂಗತಿಯನ್ನು ಕಂಪ್ಯೂಟರ್ ಆ್ಯಂಟಿವೈರಸ್ ಸಂಸ್ಥೆ `ಮೆಕ್‌ಕೆಫೆ~ ನಡೆಸಿದ ಸಮೀಕ್ಷೆ ಬಹಿರಂಗಗೊಳಿಸಿದೆ. ಇಷ್ಟೇ ಅಲ್ಲದೆ, ಶೇ 42ರಷ್ಟು ಮಕ್ಕಳು ತಮ್ಮ ಅಂತರ್ಜಾಲ ಬಳಕೆ ಕುರಿತು ಪೋಷಕರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಇವರಲ್ಲಿ 13ರಿಂದ 17 ವಯೋಮಾನದವರ ಪ್ರಮಾಣವೇ ಹೆಚ್ಚು.

ಪೋಷಕರೊಂದಿಗೆ ಏನನ್ನೂ ಹಂಚಿಕೊಳ್ಳದ ಮಕ್ಕಳು, ಅಂತರ್ಜಾಲದಲ್ಲಿ ಮಾತ್ರ ತಮ್ಮ ವೈಯಕ್ತಿಕ ಮಾಹಿತಿಯನ್ನು ಇತರರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವ ಮನೋಭಾವ ಹೊಂದಿದ್ದಾರೆ. ಇದು ಎಷ್ಟರ ಮಟ್ಟಿಗೆ ಎಂದರೆ ಶೇ 58ರಷ್ಟು ಮಕ್ಕಳು ತಮ್ಮ ಮನೆ ವಿಳಾಸವನ್ನು, ಶೇ 57ರಷ್ಟು ಮಕ್ಕಳು ತಮ್ಮ ಶಾಲಾ ವಿವರಗಳನ್ನು, ಶೇ 40ರಷ್ಟು ಮಕ್ಕಳು ತಮ್ಮ ಭಾವಚಿತ್ರವನ್ನು ಹಾಗೂ ಶೇ 30ರಷ್ಟು ಮಕ್ಕಳು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇದಕ್ಕೂ ಆಘಾತಕಾರಿ ವಿಷಯವೆಂದರೆ ಶೇ 12ರಷ್ಟು ಮಕ್ಕಳು ತಮ್ಮ ಪೋಷಕರ ಕ್ರೆಡಿಟ್ ಕಾರ್ಡ್ ವಿವರಗಳನ್ನೇ ಹಂಚಿಕೊಂಡಿದ್ದಾರಂತೆ.

ಇಂಥ ಬೆಳವಣಿಗೆಗೆ ಪೋಷಕರು ಬಹುಪಾಲು ಕಾರಣ ಎಂದು ಈ ಸಮೀಕ್ಷೆ ಹೇಳಿದೆ. ಏಕೆಂದರೆ ನಗರ ಪ್ರದೇಶದಲ್ಲಿ ವಾಸಿಸುವ ಶೇ 98ರಷ್ಟು ಮಕ್ಕಳು ಅಂತರ್ಜಾಲ ಬಳಸುತ್ತಾರೆ. ಇದಕ್ಕೆ ಶಾಲೆಯಲ್ಲಿ ಕೊಡುವ ಹೋಂವರ್ಕ್‌ಗಳು ಕಾರಣವಿರಬಹುದು ಅಥವಾ ಮಕ್ಕಳು ಹೆಚ್ಚು ಜ್ಞಾನ ಸಂಪಾದಿಸಬೇಕೆಂಬ ಹಂಬಲದಲ್ಲಿ ಪೋಷಕರೇ ಮಕ್ಕಳಿಗೆ ಕಂಪ್ಯೂಟರ್ ಹಾಗೂ ಇತರ ಅಂತರ್ಜಾಲ ಸೌಲಭ್ಯಗಳನ್ನು ಪೂರೈಸಿರುವುದೂ ದಾರಿಯಾಗಿರಬಹುದು.

ನಗರ ಪ್ರದೇಶದ ಶೇ 91ರಷ್ಟು ಮಕ್ಕಳು ಡೆಸ್ಕ್‌ಟಾಪ್ ಕಂಪ್ಯೂಟರ್ ಬಳಸುತ್ತಿದ್ದಾರೆ. ಶೇ 26 ಮಕ್ಕಳು ಲ್ಯಾಪ್‌ಟಾಪ್ ಹಾಗೂ ಇತ್ತೀಚಿನ ದಿನಗಳಲ್ಲಿ ಶೇ 31ರಷ್ಟು ಮಕ್ಕಳು ಅತ್ಯಾಧುನಿಕ ಮೊಬೈಲ್ ಮೂಲಕ  ಇಂಟರ್‌ನೆಟ್ ಬಳಸುತ್ತಿದ್ದಾರಂತೆ. ಮನೆಗಳನ್ನು ಹೊರತುಪಡಿಸಿದಂತೆ ಸೈಬರ್ ಕೆಫೆಗಳು, ಸ್ನೇಹಿತರ ಮನೆ ಹಾಗೂ ಶಾಲೆ ಅಂತರ್ಜಾಲ ಪ್ರವೇಶಿಸುವ ಬಹುಮುಖ್ಯ ಕೇಂದ್ರಗಳು.

ಶಾಲೆಯಲ್ಲೋ ಅಥವಾ ಮನೆಯ ಅಕ್ಕಪಕ್ಕದ ಸ್ನೇಹಿತರೊಂದಿಗೆ ಹೆಚ್ಚು ಕಾಲ ಕಳೆಯಬೇಕಾದ ಮಕ್ಕಳು  ಇಂಟರ್ನೆಟ್ ಮೋಹಿಗಳಾಗಿ ಆನ್‌ಲೈನ್ ಸ್ನೇಹಿತರೊಂದಿಗೆ ಬಹುಕಾಲ ಕಳೆಯುತ್ತಿದ್ದಾರೆ. 9ರಿಂದ 12ರ ವಯೋಮಾನದ ಮಕ್ಕಳು ನೇರವಾಗಿ ಸಿಗುವ ಸ್ನೇಹಿತರೊಂದಿಗೆ ಕಳೆಯುವ ಸಮಯ ಬರೀ ಒಂದು ಗಂಟೆ. ಆದರೆ ಸಾಮಾಜಿಕ ತಾಣಗಳ ಮೂಲಕ ಮಕ್ಕಳು ಆನ್‌ಲೈನ್ ಸ್ನೇಹಿತರೊಂದಿಗೆ ಹೆಚ್ಚು ಕಾಲ ಕಳೆಯಲು ಇಷ್ಟಪಡುತ್ತಿರುವುದು ಹೊಸ ಸಂಗತಿ.

ಅಂತರ್ಜಾಲದ ಆಳ ಅಗಲವನ್ನು ಅರಿತಿರುವ ಮಕ್ಕಳಿಗೆ ಆನ್‌ಲೈನ್ ಬೆದರಿಕೆಯ ಅರಿವೇ ಇಲ್ಲವಂತೆ. ಅಂದರೆ ಸೈಬರ್ ಹ್ಯಾಕಿಂಗ್, ಸೈಕಿಂಗ್ ಸ್ಟಾಕಿಂಗ್, ಸೈಬರ್ ಬುಲ್ಲಿಯಿಂಗ್ ಹಾಗೂ ತಮ್ಮ ವೈಯಕ್ತಿಕ ಮಾಹಿತಿಯ ಕಳ್ಳತನ ಕುರಿತು ಏನೇನೂ ಮಾಹಿತಿ ಇಲ್ಲವಂತೆ. ಈ ಬೆದರಿಕೆ ಹಾಗೂ ಆಕ್ರಮಣವನ್ನು ಸಮರ್ಥವಾಗಿ ಎದುರಿಸಬಲ್ಲ ತಂತ್ರಾಂಶದ ಕುರಿತೂ ಯಾವುದೇ ಮಾಹಿತಿ ಇಲ್ಲದಿರುವುದು ಆತಂಕದ ವಿಚಾರ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗಂಡುಮಕ್ಕಳಿಗೆ ಹೋಲಿಸಿದಲ್ಲಿ ಆನ್‌ಲೈನ್ ಬೆದರಿಕೆ ಕುರಿತು ಹೆಣ್ಣುಮಕ್ಕಳಿಗೆ ಹೆಚ್ಚು ತಿಳಿವಳಿಕೆ ಇದೆಯಂತೆ.

ಇನ್ನು ಮಕ್ಕಳ ಭವಿಷ್ಯಕ್ಕೆ ಹಗಲಿರುಳೂ ಶ್ರಮಿಸುವ ಪೋಷಕರಲ್ಲಿ ಅಂತರ್ಜಾಲ ಹಾಗೂ ಸೈಬರ್ ಅಪರಾಧದ ಬಗ್ಗೆ ಅಲ್ಪಸ್ವಲ್ಪ ತಿಳಿವಳಿಕೆ ಇದೆ. ಸೈಬರ್ ಹ್ಯಾಕಿಂಗ್ ಅಪಾಯಕಾರಿ ಎಂಬುದು ಬಹಳ ಪೋಷಕರಿಗೆ ಗೊತ್ತು. ಆದರೆ ಶೇ 20ರಷ್ಟು ಪೋಷಕರು ಮಾತ್ರ ಸೈಬರ್ ಸ್ಟಾಕಿಂಗ್ ಹಾಗೂ ಸೈಬರ್ ಬುಲ್ಲಿಂಗ್ ಬಗ್ಗೆ ತಿಳಿದುಕೊಂಡಿದ್ದಾರೆ. ಹೀಗೆ ಮಕ್ಕಳ ಇಂಟರ್‌ನೆಟ್ ಬಳಕೆಗೆ ಸಾಕಷ್ಟು ಸ್ವಾತಂತ್ರ್ಯ ನೀಡಿರುವ ಪೋಷಕರಲ್ಲಿ ಅರ್ಧಕ್ಕಿಂತ ಹೆಚ್ಚಿನವರಿಗೆ ಫೇಸ್‌ಬುಕ್, ಟ್ವಿಟ್ಟರ್ ಇತ್ಯಾದಿ ಸಾಮಾಜಿಕ ತಾಣಗಳಲ್ಲಿ ತಮ್ಮ ಮಕ್ಕಳು ತೊಡಗಿಕೊಂಡಿರುವುದರ ಕುರಿತು ತಿಳಿದಿದೆ. ಮತ್ತೊಂದೆಡೆ ಮಕ್ಕಳು ವಿಡಿಯೋ ಆಟವಾಡಲು ಕಂಪ್ಯೂಟರ್ ಬಳಸುತ್ತಿದ್ದಾರೆ ಎಂಬುದಾಗಿ ಮುಕ್ಕಾಲು ಪಾಲು ಪೋಷಕರು ನಂಬಿದ್ದಾರೆ. ಇದೆಲ್ಲದರ ನಡುವೆ 13 ರಿಂದ 17ರ ವಯೋಮಾನದ ಮಕ್ಕಳ ಪೋಷಕರಲ್ಲಿ `ಇಂಟರ್‌ನೆಟ್‌ನಿಂದ ತಮ್ಮ ಮಕ್ಕಳು ಅಡ್ಡ ದಾರಿ ಹಿಡಿಯಬಹುದು ಎಂಬ ಆತಂಕ ಇದೆ~ ಎನ್ನುತ್ತದೆ ಎಂದು ಸಮೀಕ್ಷೆ ಹೊರಗೆಡಹಿದೆ.

ಇಷ್ಟೆಲ್ಲಾ ಆತಂಕಗಳಿದ್ದರೂ ಮಕ್ಕಳ ಬೇಕು- ಬೇಡಗಳನ್ನು ಪೂರೈಸುವುದು ತಮ್ಮ ಕರ್ತವ್ಯವೆಂದೇ ಬಹಳಷ್ಟು ಪೋಷಕರು ನಂಬಿದ್ದಾರೆ. ಇದಕ್ಕೆ ಪೂರಕವಾಗಿ ಅಂತರ್ಜಾಲದ ಹಲವು ತೊಂದರೆಗಳಿಗೆ ಮಕ್ಕಳು ಸಿಲುಕದಂತ ಹಾಗೂ ಪೋಷಕರ ಆತಂಕ ದೂರ ಮಾಡುವ ಸಾಫ್ಟ್‌ವೇರ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ. ಆಯಾ ಮಕ್ಕಳ ವಯೋಮಾನಕ್ಕೆ ತಕ್ಕಂತೆ ಅವರಿಗೆ ಅಗತ್ಯವಿರುವ ತಾಣಗಳಿಗೆ ಮಾತ್ರ ಪ್ರವೇಶಿಸಲು ಅನುಕೂಲ ಮಾಡಿಕೊಡುವಂಥ ಹಾಗೂ ಸಂಗೀತ ಮತ್ತು ಆನ್‌ಲೈನ್ ಆಟಗಳನ್ನು ಆಡದಂತೆ ನಿರ್ಬಂಧ ಹೇರಬಲ್ಲ ವ್ಯವಸ್ಥೆಗಳಿವೆ. 30ಕ್ಕೂ ಅಧಿಕ ಆಕ್ಷೇಪಾರ್ಹ ತಾಣಗಳನ್ನು ತಡೆಯುವ ಸಾಮರ್ಥ್ಯ ಇದರಲ್ಲಿದೆ.

ಸಾಮಾಜಿಕ ತಾಣಗಳ ಬಳಕೆಯ ಮೇಲೆ ನಿರ್ಬಂಧ ಹಾಗೂ ಅಂತರ್ಜಾಲದಲ್ಲಿ ಎಷ್ಟು ಸಮಯ ಕಳೆಯಬೇಕೆಂಬುದನ್ನು ಮೊದಲೇ ನಿರ್ಧರಿಸಬಹುದಾದ ವ್ಯವಸ್ಥೆ ಇಂಥ ಸಾಫ್ಟ್‌ವೇರ್‌ಗಳಲ್ಲಿ ಲಭ್ಯ. ಇದರಿಂದ ಮಕ್ಕಳು ಜ್ಞಾನ ಹೆಚ್ಚಳಕ್ಕಷ್ಟೇ ಇಂಟರ್ನೆಟ್ ಬಳಸುವಂತೆ ಪರೋಕ್ಷವಾಗಿ ನಿರ್ಬಂಧ ಹೇರಬಹುದು. ಇದು ಒಳ್ಳೆಯದು ಕೂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT