ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ರೈಲ್ವೇಸ್‌ಗೆ ಪ್ರಶಸ್ತಿ

Last Updated 6 ಮಾರ್ಚ್ 2011, 17:10 IST
ಅಕ್ಷರ ಗಾತ್ರ

ಬೈಂದೂರು: ಹೊನಲು ಬೆಳಕಿನಲ್ಲಿ ಹರ್ಷೊದ್ಘಾರಗಳ ಮಧ್ಯೆ ನಾಯಕಿ ಪಟ್ಟಕ್ಕೆ ಅರ್ಹವಾಗಿಯೇ ಆಡಿದ ಮಮತಾ ಪೂಜಾರಿ ಇಂಡಿಯನ್ ರೈಲ್ವೇಸ್ ತಂಡ, ಮಹಾರಾಷ್ಟ್ರದ ವಿರುದ್ಧ ಸಾಧಿಸಿದ ಸುಲಭ ಗೆಲುವಿನಲ್ಲಿ ಮಿಂಚಿದರು. 58ನೇ ಸೀನಿಯರ್ ರಾಷ್ಟ್ರೀಯ ಸೂಪರ್‌ಲೀಗ್ ಕಬಡ್ಡಿ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲೂ ರೈಲ್ವೇಸ್ ತಂಡ ಚಾಂಪಿಯನ್ ಆಗುವುದರೊಂದಿಗೆ ಆ ತಂಡಕ್ಕೆ ಅವಳಿ ಪ್ರಶಸ್ತಿಯ ಸಂಭ್ರಮ.

ಭಾನುವಾರ ಪಟ್ಟಣದ ಗಾಂಧಿ ಮೈದಾನದಲ್ಲಿ ಸೇರಿದ್ದ ಸುಮಾರು 25 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ಅನುಭವಿ ರೈಲ್ವೇಸ್ ಮಹಿಳೆಯರ ತಂಡ 21-12 ಪಾಯಿಂಟ್‌ಗಳಿಂದ ಮಹಾರಾಷ್ಟ್ರ ತಂಡವನ್ನು ಸೋಲಿಸಿತು. 1984 ರಿಂದ ರೈಲ್ವೇಸ್ ರಾಷ್ಟ್ರೀಯ ಚಾಂಪಿಯನ್ ಪಟ್ಟವನ್ನು ಬೇರೆಯವರಿಗೆ ಬಿಟ್ಟುಕೊಟ್ಟಿಲ್ಲ ಎಂದರೆ ಅದರ ಪಾರಮ್ಯವನ್ನು ಊಹಿಸಬಹುದು.

ಪುರುಷರ ಫೈನಲ್‌ನಲ್ಲಿ ಹೋರಾಟ ನಿರೀಕ್ಷಿಸಲಾಗಿತ್ತು. ಆದರೆ ರೈಲ್ವೇಸ್ ಉತ್ತರಾರ್ಧದಲ್ಲಿ ಕೆಲಮಟ್ಟಿಗೆ ಪ್ರತಿರೋಧ ಎದುರಿಸಿದರೂ ಅಂತಿಮವಾಗಿ 31-20ರಲ್ಲಿ ರಾಜಸ್ತಾನ ತಂಡವನ್ನು ಮಣಿಸಿತು. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡದ ನಾಯಕ ರಾಕೇಶ್ ಕುಮಾರ್ ಅವರ ಅಮೋಘ ರೈಡಿಂಗ್ ರೈಲ್ವೇಸ್ ಗೆಲುವಿನಲ್ಲಿ ಎದ್ದುಕಾಣಿಸಿತು. ರಾಜಸ್ತಾನ ಇಡೀ ಪಂದ್ಯದಲ್ಲಿ ಒಂದೇ ಒಂದು ಕ್ಯಾಚಿಂಗ್‌ನಲ್ಲಿ ಯಶಸ್ವಿಯಾಗಲಿಲ್ಲ. ಅದರ ರೈಡರ್ ವಝೀರ್ ತಂಡಕ್ಕೆ ಹೆಚ್ಚಿನ ಪಾಯಿಂಟ್‌ಗಳನ್ನು ತಂದುಕೊಟ್ಟರು. ಆದರೆ ಅರ್ಜುನ ಪ್ರಶಸ್ತಿ ಪುರಸ್ಕೃತ ನವನೀತ್ ಗೌತಮ್ ಸೇರಿದಂತೆ ಉಳಿದವವರು ವಿಫಲರಾದರು. ವಿರಾಮದ ವೇಳೆಗೆ ರೈಲ್ವೇಸ್ 22-10 ಪಾಯಿಂಟ್‌ಗಳಿಂದ ಮುಂದಿತ್ತು.

ಮಮತಾ ಪ್ರಾಬಲ್ಯ: ಮಹಿಳೆಯರ ಫೈನಲ್‌ನಲ್ಲಿ ಮಮತಾ ಪೂಜಾರಿ ಅವರದ್ದೇ ಕಾರುಬಾರು. ಪ್ರತಿ ರೈಡಿಂಗ್‌ಗೆ ಜನರ ಒಕ್ಕೊರಲ ಹರ್ಷೊದ್ಘಾರ. ಅವರು ಅದಕ್ಕೆ ತಕ್ಕಂತೆ ಸ್ಪಂದಿಸಿದರು ಕೂಡ. ವಿರಾಮದ ವೇಳೆ ಸ್ಕೋರ್ 16-6. ಮಹಾರಾಷ್ಟ್ರ ತಂಡ, ಅಂತರರಾಷ್ಟ್ರೀಯ ಆಟಗಾರ್ತಿ ದೀಪಿಕಾ ಜೋಸೆಫ್ ಅವರನ್ನು ಅತಿಯಾಗಿ ನೆಚ್ಚಿ ಕೊಂಡಿತ್ತು. ಆದರೆ ಅವರು ರೇಡಿಂಗ್‌ನಲ್ಲಿ ಯಶಸ್ಸು ಕಾಣದ ಕಾರಣ ಪರದಾಡಬೇಕಾಯಿತು.

ವಿಜೇತ ತಂಡಗಳು ಮೂಕಾಂಬಿಕಾ ಟ್ರೋಫಿಯ ಜೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಪಡೆದವು. ರನ್ನರ್ ಅಪ್ ಸ್ಥಾನ ಪಡೆದ ತಂಡ ತಲಾ ರೂ. 50000 ಬಹುಮಾನ ಪಡೆದವು.

ಸೆಮಿಫೈನಲ್: ಪುರುಷರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ರೈಲ್ವೇಸ್ ತಂಡ 14-11 ಪಾಯಿಂಟ್‌ಗಳಿಂದ ದೆಹಲಿ ತಂಡವನ್ನು ಸೋಲಿಸಿದರೆ, ಇನ್ನೊಂದರಲ್ಲಿ ರಾಜಸ್ತಾನ ತೀವ್ರ ಹೋರಾಟದ ನಂತರ ಮಹಾರಾಷ್ಟ್ರ ತಂಡವನ್ನು 13-10 (ವಿರಾಮ: 9-7) ಪರಾಭವಗೊಳಿಸಿತು.

ಮಹಿಳೆಯರ ವಿಭಾಗದ ಸೆಮಿಫೈನಲ್‌ನಲ್ಲಿ ಇಂಡಿಯನ್ ರೈಲ್ವೇಸ್ 32-16 (ವಿರಾಮ: 9-6) ಪಾಯಿಂಟ್‌ಗಳಿಂದ ಹಿಮಾಚಲ ಪ್ರದೇಶವನ್ನು ಸುಲಭವಾಗಿ ಸೋಲಿಸಿತು. ಮೊದಲ ಭಾಗದಲ್ಲಿ ಪ್ಯಾಸೆಂಜರ್ ರೈಲಿನಂತೆ ಚಲಿಸಿದ ಇಂಡಿಯನ್ ರೈಲ್ವೇಸ್ ಉತ್ತರಾರ್ಧದಲ್ಲಿ ಎಕ್ಸ್‌ಪ್ರೆಸ್‌ನಂತೆ ವೇಗವಾಗಿ ಪಾಯಿಂಟ್ಸ್ ಬಾಚಿತು. ಎರಡನೇ ಸೆಮಿಫೈನಲ್‌ನಲ್ಲಿ ಮಹಾರಾಷ್ಟ್ರ 20-12 ಪಾಯಿಂಟ್‌ಗಳಿಂದ ಹರಿಯಾಣ ತಂಡವನ್ನು ಹಿಮ್ಮೆಟ್ಟಿಸಿತು.

ಪ್ರಥ್ವಿ ಕ್ರೀಡಾ ಕ್ಲಬ್ ಆಶ್ರಯದಲ್ಲಿ ನಡೆದ ಈ ಚಾಂಪಿಯನ್‌ಷಿಪ್‌ನ ಸಮಾರೋಪದಲ್ಲಿ ಮಮತಾ ಪೂಜಾರಿ ಮತ್ತು ಏಷ್ಯನ್ ಕ್ರೀಡೆಗಳ ಅವಳಿ ಚಿನ್ನ ಗೆದ್ದ ಅಥ್ಲೀಟ್ ಅಶ್ವಿನಿ ಚಿದಾನಂದ ಶೆಟ್ಟಿ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT