ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ರಫ್ತು ನಿಷೇಧ ವಾಪಸ್‌ಗೆ ಆಗ್ರಹ

Last Updated 18 ಸೆಪ್ಟೆಂಬರ್ 2011, 12:10 IST
ಅಕ್ಷರ ಗಾತ್ರ

ಹಿರಿಯೂರು: ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ನಿಷೇಧವನ್ನು ತಕ್ಷಣ ಹಿಂದೆ ಪಡೆಯಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿ ಶನಿವಾರ ಒಂದೂವರೆ ತಾಸಿಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಾವಿರಾರು ರೈತರು, ಜನಪ್ರತಿನಿಧಿಗಳು ರಸ್ತೆತಡೆ ನಡೆಸಿದರು.

ಮುಖಂಡ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ದೇಶದಲ್ಲಿ ಇದುವರೆಗೂ ಒಬ್ಬ ರಾಜಕಾರಣಿಯೂ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡರೆ ಸರ್ಕಾರ ರೂ 1 ಲಕ್ಷ ಕೊಡುತ್ತದೆ. ಆದರೆ, ರಾಜಕಾರಣಿಗಳು ಆತ್ಮಹತ್ಯೆ ಮಾಡಿಕೊಂಡರೆ ರೈತ ಸಂಘ ರೂ 5 ಲಕ್ಷ  ಕೊಡುತ್ತದೆ.

ಮತದಾನಕ್ಕೆ ನಾಲ್ಕು ಗಂಟೆ ಇರುವಾಗ ವ್ಯವಸ್ಥೆಯನ್ನೇ ತಿರುವು- ಮುರುವು ಮಾಡುವ ತಂತ್ರಕ್ಕೆ ಜನತೆ ಮರುಳಾಗಬಾರದು. ಮತದಾರರಲ್ಲಿ ಜಾಗೃತಿ ಇದ್ದಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ರೈತ ಮುಖಂಡ ಕೆ.ಟಿ. ಗಂಗಾಧರ್ ಮಾತನಾಡಿ, ಹಗಲಿರುಳು ಬೆವರು ಹರಿಸಿ, ಬೆಳೆ ಕೈಗೆ ಬಂದಾಗ ಬೆಲೆ ಸಿಗದಂತೆ ಮಾಡಿ ರೈತರು ನಿರಂತರವಾಗಿ ಸಂಕಷ್ಟ ಅನುಭವಿಸುವಂತೆ ಮಾಡುವುದು ಆಳುವವರಿಗೆ ಹವ್ಯಾಸವಾಗಿದೆ.

ಈರುಳ್ಳಿ ಬೆಲೆ ಹೆಚ್ಚಾದರೆ ನಗರ ಪ್ರದೇಶದ ಜನರು ಮತ ಹಾಕುವುದಿಲ್ಲ ಎಂದು ಇಂತಹ ತಂತ್ರ ಮಾಡಲಾಗುತ್ತಿದೆ. ಈರುಳ್ಳಿ ಮೇಲಿನ ರಫ್ತು ನಿಷೇಧಿಸಿ ಸರ್ಕಾರ ರೈತರ ಬದುಕು ಹಾಳು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರೈತರ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿಗೆ ಮತ ಹಾಕುವಂತೆ ಕರೆ ನೀಡಿದರು.

ಶಾಸಕ ಡಿ. ಸುಧಾಕರ್ ಮಾತನಾಡಿ, ಈರುಳ್ಳಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ನ್ಯಾಯಕ್ಕಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ತನು-ಮನ-ಧನದ ಸಹಾಯ ನೀಡುತ್ತೇನೆ. ರಾಜಕಾರಣದ ಬಗ್ಗೆ ಜನರಲ್ಲಿ ಅಸಹ್ಯ ಮೂಡಿದೆ. ಇದನ್ನು ಸರಿಪಡಿಸಲು ಜನಪರ ತೀರ್ಮಾನಗಳನ್ನು ಆಡಳಿತ ನಡೆಸುವವರು ಕೈಗೊಳ್ಳಬೇಕಿದೆ ಎಂದರು.

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಎನ್.ಆರ್. ಲಕ್ಷ್ಮೀಕಾಂತ್ ಮಾತನಾಡಿ, ವಿದ್ಯುತ್ ಕಣ್ಣಾಮುಚ್ಚಾಲೆ, ದುಬಾರಿ ಬೆಲೆಯ ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ನಡುವೆ ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ಸಿಗದಿದ್ದರೆ ರೈತರು ಉಳಿಯುವುದಾದರೂ ಹೇಗೆ? ಆಳುವವರು ರೈತರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕು. ಹೊಲ-ಮನೆ ಬಿಟ್ಟು ನ್ಯಾಯಕ್ಕಾಗಿ ರೈತರು ಬೀದಿಗೆ ಬರಬೇಕಾದ ಸ್ಥಿತಿ ನಿರ್ಮಾಣ ಆಗಿರುವುದು ವಿಷಾದದ ಸಂಗತಿ ಎಂದರು.

ಜೆಡಿಎಸ್ ಮುಖಂಡ ಡಿ. ಯಶೋಧರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಚ್. ಮಂಜುನಾಥ್, ಟಿ. ನುಲೇನೂರು ಶಂಕರಪ್ಪ, ಜಿ.ಪಂ. ಸದಸ್ಯರಾದ ಕೆ. ದ್ಯಾಮೇಗೌಡ,ಎಚ್. ಚಂದ್ರಪ್ಪ, ಗ್ರಾ.ಪಂ. ಅಧ್ಯಕ್ಷ ಆರ್. ಹರೀಶ್‌ಕುಮಾರ್, ಚಿಕ್ಕಪ್ಪ, ಎನ್. ತಿಪ್ಪೀರಣ್ಣ, ಮಲ್ಲಯ್ಯ, ತುಳಸೀದಾಸ್, ನರೇಂದ್ರ, ಭೀಮರೆಡ್ಡಿ, ಆನಂದಪ್ಪ, ಮಹಾದೇವಪ್ಪ, ಎ. ಕೃಷ್ಣಸ್ವಾಮಿ, ಸಿ. ಸಿದ್ದರಾಮಣ್ಣ, ರಂಗಸ್ವಾಮಿ, ಮಲ್ಲಿಕಾರ್ಜುನ  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾಡಳಿತದ ಪರವಾಗಿ ಉಪ ವಿಭಾಗಾಧಿಕಾರಿ ನಾಗರಾಜು ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು. ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ, ಡಿವೈಎಸ್ಪಿ ಎನ್. ರುದ್ರಮುನಿ, ವೃತ್ತ ನಿರೀಕ್ಷಕ ರೋಷನ್ ಜಮೀರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT