ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪ ಪರ ಅಧಿಕಾರಿಗಳ ಪ್ರಚಾರ: ಕಾಂಗ್ರೆಸ್ ದೂರು

Last Updated 23 ಏಪ್ರಿಲ್ 2013, 8:13 IST
ಅಕ್ಷರ ಗಾತ್ರ

ಶಿವಮೊಗ್ಗ: ಕೋಮು ಪ್ರಚೋದಕ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದರೂ ಇದುವರೆಗೂ ಅವರನ್ನು ಬಂಧಿಸದಿರುವ ಪೊಲೀಸ್ ಇಲಾಖೆಯ ಕ್ರಮ ಖಂಡಿಸಿ ಕಾಂಗ್ರೆಸ್, ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದೆ ಎಂದು ಕೆಪಿಸಿಸಿ ವಕ್ತಾರ ಕೆ. ದಿವಾಕರ್ ಹೇಳಿದರು.

ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕೋಟೆ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿ ಹಲವು ದಿನಗಳಾದರೂ ಪೊಲೀಸರು ಅವರನ್ನು ಬಂಧಿಸಿಲ್ಲ. ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅವರು ದೂರಿದರು.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಕೆ.ಎಸ್. ಈಶ್ವರಪ್ಪ ಬಂಧನಕ್ಕೆ ಸಿಗುತ್ತಿಲ್ಲ; ತಲೆಮರೆಸಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ತನಿಖಾ ವರದಿಯಲ್ಲಿ ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸ್ ಭದ್ರತೆಯಲ್ಲೇ ಈಶ್ವರಪ್ಪ ನಗರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಅಧಿಕಾರಿಗಳನ್ನು ವರ್ಗಾಯಿಸಿ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಿಷ್ಪಕ್ಷಪಾತ ಚುನಾವಣೆ ಆಗಬೇಕಾದರೆ ಕೂಡಲೇ ಚುನಾವಣಾ ಆಯೋಗ ಕೆ.ಎಸ್. ಈಶ್ವರಪ್ಪ ಪರವಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಕೋಟೆ ಪೊಲೀಸ್ ಠಾಣೆಯ ಅಧಿಕಾರಿಗಳು, ತಹಶೀಲ್ದಾರ್ ಕೋಟ್ರೇಶ್, ಬಿಇಓ ಟಿ.ಎನ್. ಕಮಲಾಕರ್, ಪಶು ಇಲಾಖೆ ಸಹಾಯಕ ನಿರ್ದೇಶಕ ಕಲ್ಲಪ್ಪ, ಸಿಮ್ಸನ ಅಧ್ಯಾಪಕರಾದ ಡಾ.ಸಿದ್ದಪ್ಪ, ಡಾ.ತೇಜಸ್, ಡಾ.ಶ್ರೀಧರ್ ಈಶ್ವರಪ್ಪ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೂಡಲೇ ಈ ಅಧಿಕಾರಿಗಳ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಲ್ಲದೇ, ಉಪ ಮುಖ್ಯಮಂತ್ರಿ ಈಶ್ವರಪ್ಪ ಅವರ ವಿಶೇಷಾಧಿಕಾರಿ ಆಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಶ್ರೀನಾಥ್ ನಗರಗದ್ದೆ ಗುತ್ತಿಗೆ ಆಧಾರದ ಸರ್ಕಾರಿ ನೌಕರರಾಗಿದ್ದಾರೆ. ಅವರನ್ನು ಬೆಂಗಳೂರಿನಲ್ಲಿ ಇರುವಂತೆ ಚುನಾವಣಾ ಆಯೋಗ ಸೂಚಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಈಶ್ವರಪ್ಪ ಅಧಿಕಾರ ದುರುಪಯೋಗ ಪಡಿಸಿಕೊಳ್ಳು ತ್ತಿರುವುದು ಅಲ್ಲದೇ ಈಚೆಗೆ ಹೆಣ್ಣುಮಕ್ಕಳ ಬಗ್ಗೆ ಕೀಳುಭಾವನೆಯಿಂದ ಮಾತನಾಡಿ, ಕೋಮುಗಲಭೆಗೆ ಪ್ರಚೋದನೆ ನೀಡಲು ಮುಂದಾಗಿದ್ದಕ್ಕೆ ಪ್ರಜ್ಞಾವಂತ ಜನ ಹೇಸಿಗೆ ವ್ಯಕ್ತಪಡಿಸಿದ್ದಾರೆ ಎಂದರು.

ಯಾರನ್ನು ಎ.ಸಿ. ಮಾಡಿದ್ದಾರೆ?
ಹಾಗೆಯೇ ಕೆಜೆಪಿ ಅಭ್ಯರ್ಥಿ ರುದ್ರೇಗೌಡ ಒಳ್ಳೆಯ ಮನುಷ್ಯ. ಆದರೆ, ಅವರು ಕೆಪಿಎಸ್‌ಸಿ ಸದಸ್ಯರಾದಾಗ ಶಿವಮೊಗ್ಗದ ಯಾವ ಬಡವರನ್ನು ಎ.ಸಿ., ತಹಶೀಲ್ದಾರ್ ಮಾಡಿದ್ದಾರೆ ಎಂದು ದಿವಾಕರ್ ಪ್ರಶ್ನಿಸಿದರು. ಒಳಚರಂಡಿ; ಲೋಕಾಯುಕ್ತ ತನಿಖೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ  ಶಿವಮೊಗ್ಗ ಒಳಚರಂಡಿ ವ್ಯವಸ್ಥೆ ಮೇಲೆ ಲೋಕಾಯುಕ್ತ ತನಿಖೆ ಮಾಡಲಾಗುತ್ತದೆ. ಹಾಗೆಯೇ, ಚಾನಲ್ ಏರಿಯಾದ ನಿವಾಸಿಗಳು ಸೂಕ್ತ ಪುನರ್‌ವಸತಿ ಕಲ್ಪಿಸಲಾಗುತ್ತದೆ. ಕೊಳಚೆ ಪ್ರದೇಶದ ಜನರಿಗೆ ಹಕ್ಕುಪತ್ರ ನೀಡಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಲ್. ಸತ್ಯನಾರಾಯಣ ಹಾಗೂ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲೆಯ ಪಕ್ಷದ ವೀಕ್ಷಕ ಗೋವಾದ ಕಾಂಗ್ರೆಸ್ ಮುಖಂಡ ಜೀತೇಂದ್ರ ದೇಶಪ್ರಭು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಎಸ್.ಪಿ. ದಿನೇಶ್, ಶಿವಾನಂದ, ರಾಮೇಗೌಡ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT