ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಉಕ್ಕು'ತ್ತಿದೆ ಹಸಿರು

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಸುತ್ತಮುತ್ತ ಅಕ್ಷರಶಃ ಬಂಜರು ಭೂಮಿ. ಬಳ್ಳಾರಿ ಜಾಲಿ ಬೆಳೆಯಲು ಮಾತ್ರ ಲಾಯಕ್ಕಾದ ಜೇಡಿ ಮಿಶ್ರಿತ ಮಣ್ಣು. ಬೇಸಿಗೆಯಲ್ಲಂತೂ ಮನೆಯಿಂದ ಹೊರಗೆ ಕಾಲಿರಿಸಲು ಸಾಧ್ಯವಾಗದಂತಹ ಉಷ್ಣಾಂಶ. ಆದರೆ ಈ ಕೈಗಾರಿಕಾ ಪ್ರದೇಶ ಮಾತ್ರ ವಿಭಿನ್ನ.

ಕೈಗಾರಿಕಾ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ವಾತಾವರಣದ ಶಾಖ ಕನಿಷ್ಠ ಎರಡು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುತ್ತದೆ. ಎಲ್ಲೆಂದರಲ್ಲಿ ಹಸಿರು ತುಂಬಿಕೊಂಡ ಮರ ಗಿಡಗಳು ಎದ್ದು ಕಾಣುತ್ತವೆ. ಇದು ಬಳ್ಳಾರಿಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಸಂಡೂರು ತಾಲ್ಲೂಕಿನ ಜಿಂದಾಲ್ ಉಕ್ಕು ಘಟಕದ ಚಿತ್ರಣ.

ಭಾರತದಲ್ಲೇ ಅತಿ ದೊಡ್ಡದಾದ ಉಕ್ಕು ಉತ್ಪಾದನಾ ಸಂಸ್ಥೆಯ ಆವರಣದಲ್ಲಿ ಉತ್ಪಾದನಾ ಘಟಕವೂ ಸೇರಿದಂತೆ ಮೂರು ಟೌನ್‌ಷಿಪ್‌ಗಳು ಸುಮಾರು ಏಳು ಸಾವಿರ ಎಕರೆ ಪ್ರದೇಶದಲ್ಲಿ ತಲೆಯೆತ್ತಿವೆ. ಸಂಡೂರು ರಸ್ತೆಗೆ ಹೊಂದಿಕೊಂಡಂತೆ ಸುಮಾರು 10 ಕಿ.ಮಿ ಉದ್ದಕ್ಕೂ ಮರಗಳನ್ನು ಹಾಗೂ ವಿವಿಧ ಬಗೆಯ ಸಸ್ಯಗಳನ್ನು ಬೆಳೆಸಿದ್ದಾರೆ. ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದ್ದು, ಬಳ್ಳಾರಿ ವಾತಾವರಣವೇ ಇಲ್ಲಿ ಮಾಯವಾಗಿದೆ.

ಏಳು ಸಾವಿರ ಎಕರೆ ಪ್ರದೇಶ ಸಂಪೂರ್ಣವಾಗಿ ಮಲೆನಾಡಿನಂತೆ ಹಚ್ಚ ಹಸಿರಿನ ವಾತಾವರಣದಿಂದ ಕಂಗೊಳಿಸುತ್ತದೆ. ಎರಡು ದಶಕದಿಂದ ನಿರಂತರವಾಗಿ ನಡೆದುಬಂದ ಗಿಡ ನೆಡುವ ಕಾರ್ಯಕ್ರಮದಿಂದಾಗಿ ಸಸಿಗಳು ಇಂದು ಬೃಹತ್ ಮರಗಳಾಗಿ ಬೆಳೆದು ನಿಂತಿವೆ. ಕ್ಯಾಂಪಸ್‌ನಲ್ಲಿ ಸುಮಾರು ಹದಿನೈದು ಲಕ್ಷಕ್ಕಿಂತಲೂ ಹೆಚ್ಚಿನ ಮರ ಗಿಡಗಳಿವೆ. ಪಕ್ಷಿಗಳು ಚಿಲಿಪಿಲಿಗುಡುತ್ತಿವೆ. ಭೂಮಿ ತಂಪಾಗಿದೆ.

ಹಿಂದೆ ಹೀಗಿತ್ತು ನೋಡಿ...
ಕಾಲವನ್ನು ಸ್ವಲ್ಪ ಹಿಂದಕ್ಕೆ ಓಡಿಸೋಣ. ಅದು 1994ರ ಕಾಲ. ಸರ್ಕಾರ ಕೈಗಾರಿಕೆಗೆಂದು ಮಂಜೂರು ಮಾಡಿದ ಜಾಗ ಅಕ್ಷರಶಃ ಬಟಾಬಯಲು. ಅತೀವ ಉಷ್ಣಾಂಶ, ನಿಜವಾದ ಅರ್ಥದಲ್ಲಿ ಬಂಜರು ಭೂಮಿ, ಅಲ್ಲಲ್ಲಿ ಬಂಡೆಗಳಿಂದ ಕೂಡಿದ ಪ್ರದೇಶ. ಇದ್ದದ್ದು ಬೆರಳೆಣಿಕೆಯಷ್ಟು ಗಿಡಗಳು ಮಾತ್ರ. ಇಂತಹ ಸ್ಥಿತಿಯಲ್ಲೇ ಓ.ಪಿ.ಜೆ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿದ್ದ ದಿ. ಓಂ ಪ್ರಕಾಶ ಜಿಂದಾಲ್ ಹಾಗೂ ಈಗಿನ ಜೆ.ಎಸ್.ಡಬ್ಲ್ಯೂ (ಜಿಂದಾಲ್ ಸ್ಟೀಲ್ ವರ್ಕ್ಸ್) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಈ ಪ್ರದೇಶದ ಸ್ಥಳ ಪರಿಶೀಲನೆಗೆ ಬಂದಾಗ ಇಲ್ಲಿ ಕಾರ್ಖಾನೆ ಕಟ್ಟುವುದು ಹೇಗೆ ಎಂದು ಬೆಚ್ಚಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದರು. ಇಲ್ಲಿ ಉಕ್ಕು ಘಟಕ ತಲೆಯೆತ್ತಲು ತಡವಾಗಿದ್ದಕ್ಕೆ ಇದೂ ಒಂದು ಕಾರಣವಿರಬಹುದು. ಆದರೂ ಬೆದರದೆ ಪಟ್ಟ ಶ್ರಮದಿಂದ ಇಲ್ಲಿಯ ಪರಿಸರ ಚಿತ್ರಣವೇ ಬದಲಾಗಿ ಹಸಿರು ಉಕ್ಕುವಂತಾಗಿದೆ.

ಸಂಸ್ಥೆಯು ಗಿಡಗಳನ್ನು ನೆಡುವ ಮೂಲಕ ಕೇವಲ ಹಸಿರು ಉಕ್ಕುವ ಪ್ರಯತ್ನದಲ್ಲಿ ಮಾತ್ರ ನಿರತವಾಗಿಲ್ಲ. ಉಕ್ಕು ತಯಾರಿಕೆಯ ಪ್ರತಿ ಹಂತದಲ್ಲೂ ಪರಿಸರಸ್ನೇಹಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಉಕ್ಕು ಉತ್ಪಾದನೆಗೆ ಬಳಸಿದ ನೀರನ್ನು ತ್ಯಾಜ್ಯ ಪರಿಷ್ಕರಣಾ ಘಟಕದ ಮೂಲಕ ಶುದ್ಧೀಕರಿಸಿ ಮರು ಬಳಕೆ ಮಾಡುತ್ತಿದೆ. ಈ ನೀರನ್ನು ಗಿಡ ಮರಗಳಿಗೆ ಹಾಕಿ ಉಕ್ಕಿನ ಘಟಕವನ್ನು ಹಸಿರುಮಯ ಮಾಡಿದೆ. ಈ ಭೂಮಿಯಲ್ಲಿ ಎಲ್ಲಾ ರೀತಿಯ ಗಿಡಮರಗಳು ಬೆಳೆಯುವುದಿಲ್ಲ. ಭೂಮಿಗೆ ಸೂಕ್ತವಾದ ಗಿಡವನ್ನು ಹುಡುಕಿ ನೆಟ್ಟು ನಿರಂತರವಾಗಿ ಪಾಲನೆಮಾಡಿ ಬಂಜರು ಭೂಮಿಯನ್ನು ಫಲವತ್ತಾದ ಭೂಮಿಯಾಗಿ ಪರಿವರ್ತಿಸಲಾಗಿದೆ.

ಎಲ್ಲೆಲ್ಲೂ ಹಸಿರು
ಗಿಡ ನೆಡುವ ಮುನ್ನ ಮಣ್ಣಿನ ಸಂರಚನೆಯ ಬಗ್ಗೆ ಅಧ್ಯಯನ ನಡೆಸಿ ಮಣ್ಣಿನ ಗುಣ ಹಾಗೂ ಉಷ್ಣ ವಾತಾವರಣಕ್ಕೆ ತಕ್ಕಂತಹ ಸಸ್ಯಗಳನ್ನು ಪರಿಚಯಿಸಲಾಗಿದೆ. ಈ ಕೆಲಸದ ಹಿಂದೆ ತೋಟಗಾರಿಕೆಯಲ್ಲಿ ಪರಿಣತರಾದ ಸಂಸ್ಥೆಯ ಉದ್ಯೋಗಿಗಳಾದ ಸುರೇಶ್ ಕುಲಕರ್ಣಿ ಹಾಗೂ ಸಂಜಯ ಗೆಜ್ಜೆ ಅವರ ಪರಿಶ್ರಮವಿದೆ.

ಇಲ್ಲಿ ನೌಕರರಿಗಾಗಿ 6500 ಮನೆಗಳನ್ನು ಒಳಗೊಂಡ ಮೂರು ಟೌನ್‌ಷಿಪ್‌ಗಳನ್ನು ನಿರ್ಮಿಸಲಾಗಿದೆ. ನೆಲ ಅಂತಸ್ತಿನ ಮನೆಗಳಿಗೆ ಒಂದು ಉದ್ಯಾನವನ ನಿರ್ವಹಿಸುವುದು ಕಡ್ಡಾಯವಾಗಿದೆ. ಉದ್ಯಾನವನ ನಿರ್ವಹಣೆಗೆ ಅಗತ್ಯ ಬೆಂಬಲವನ್ನು ಟೌನ್‌ಷಿಪ್‌ನ ಆಡಳಿತ ಮಂಡಳಿ ನೀಡುತ್ತಿದೆ. ಸಂಸ್ಥೆಯು ತನ್ನ ನೌಕರರು ಅವರವರ ಅಭಿರುಚಿಗೆ ತಕ್ಕಂತೆ ವಿವಿಧ ಸಸ್ಯಗಳು, ತರಕಾರಿ, ಹೂವುಗಳು ಹಾಗೂ ಅಲಂಕಾರಿಕ ಸಸ್ಯಗಳನ್ನು ಅವರವರ ಮನೆಗಳಲ್ಲೇ ಬೆಳೆಸಲು ಪ್ರೋತ್ಸಾಹಿಸುತ್ತಿದೆ.

ಘಟಕದ ಒಳಗೆ, ಟೌನ್‌ಷಿಪ್ ಹಾಗೂ ಸುತ್ತಲಿನ ಹೊರ ಪ್ರದೇಶದಲ್ಲಿ ಬೆಳೆದುನಿಂತಿರುವ ಸುಮಾರು ಹದಿನೈದು ಲಕ್ಷ ಮರಗಳಿಂದಾಗಿ ಶುದ್ಧ ಗಾಳಿ ದೊರಕುತ್ತಿದೆ. ಶಬ್ದ ಮಾಲಿನ್ಯದ ಪ್ರಮಾಣ ಕಡಿಮೆಯಾಗಿದೆ. ಇದಕ್ಕಿಂತ ಮುಖ್ಯವಾಗಿ ಪಕ್ಕದ ನಗರಗಳಿಗೆ ಹೋಲಿಸಿದರೆ ಉಷ್ಣಾಂಶವು ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಿದೆ. ಇದರ ಜೊತೆಯಲ್ಲೇ ಈ ಹಿಂದೆ ವರ್ಷಕ್ಕೆ ಅಂದಾಜು 400ರಿಂದ 500 ಮಿಲಿ ಮೀಟರ್‌ನಷ್ಟು ಪ್ರಮಾಣದಲ್ಲಿ ಬೀಳುತ್ತಿದ್ದ ಮಳೆ, ಇದೀಗ ವರ್ಷಕ್ಕೆ 600-700 ಮಿಲಿ ಮೀಟರ್‌ಗೆ ಏರಿಕೆಯಾಗಿದೆ.

ಕಂಪೆನಿಗಳನ್ನು ನಡೆಸುವುದು ಕೇವಲ ಲಾಭ ಗಳಿಸಲು ಮಾತ್ರವೇ ಅಲ್ಲ. ಸಂಸ್ಥೆಯ ಅಭಿವೃದ್ಧಿಯ ಜೊತೆಯಲ್ಲಿ ನೌಕರರ ಅಭಿವೃದ್ಧಿ, ಪರಿಸರ ಅಭಿವೃದ್ಧಿಯೂ ಜೊತೆ ಜೊತೆಯಲ್ಲೇ ನಡೆಯುತ್ತಿರಬೇಕು. ಈ ಮೂಲ ಮಂತ್ರವೇ ಘಟಕ ಇಲ್ಲಿಯವರೆಗೆ ಬೆಳೆದುಬರಲು ಕಾರಣ ಎನ್ನುವ ಸಜ್ಜನ್ ಜಿಂದಾಲ್, ಹಸರೀಕರಣದ ಅಭಿವೃದ್ಧಿಗಾಗಿ ಪ್ರತ್ಯೇಕ ತಂಡವನ್ನೇ ರಚಿಸಿದ್ದಾರೆ. ಈ ಕಾಳಜಿಯ ಫಲದಿಂದ ಹಸಿರು ಚಿಮ್ಮುತ್ತಿದೆ.

ಕಾರ್ಖಾನೆ ಕಟ್ಟುವ ಸಮಯದ ಪ್ರದೇಶ ಮತ್ತು ಈಗಿನ ಪ್ರದೇಶವನ್ನು ಕಣ್ಣಾರೆ ಕಂಡವರೆಲ್ಲಾ ಪರಿಸರದಲ್ಲಿ ಆಗಿರುವ ಬದಲಾವಣೆ ಬಗ್ಗೆ ಹೆಮ್ಮೆಯಿದೆ. ಇದರಲ್ಲಿ ತಮ್ಮ ಕೊಡುಗೆಯೂ ಇದೆ ಎನ್ನುವ ಸಂತೃಪ್ತಿಯಿದೆ. ಕಂಪೆನಿಯ ಬೆಳವಣಿಗೆಯ ಜೊತೆ ಗುರುತಿಸಿಕೊಂಡಿರುವ ಹಿರಿಯ ನೌಕರರಾದ ಶ್ರೀಕೃಷ್ಣ ಕುಲಕರ್ಣಿ ಅವರ ಮಾತಿನಲ್ಲೇ ಹೇಳುವುದಾದರೆ, `1996ರಲ್ಲಿ ಬೆಂಗಳೂರಿನಿಂದ ಇಲ್ಲಿಗೆ ಬಂದಾಗ ಬಟಾಬಯಲು. ಎಲ್ಲೋ ಒಂದು ಗಿಡ ಮಾತ್ರ ಇತ್ತು.

ಬೆಂಗಳೂರಿನ ತಂಪು ವಾತಾವರಣ ಬಿಟ್ಟು ಯಾಕೆ ಬಂದೆ ಅನಿಸುತ್ತಿತ್ತು. ತೋಟಗಾರಿಕೆ ವಿಭಾಗದವರು ಗಿಡ ನೆಡುವ ಕಾರ್ಯಕ್ರಮ ಆರಂಭಿಸಿದ್ದರು. ಆ ಗಿಡಗಳು ಯಾವಾಗ ಬೆಳೆಯುತ್ತದೊ ಅನ್ನಿಸುತ್ತಿತ್ತು. ಅಂದು ಮನೆಯಲ್ಲಿ ಕುಳಿತರೆ ಆಡಳಿತ ವಿಭಾಗದ ಕಟ್ಟಡ ಕಾಣುತ್ತಿತ್ತು. ಅಂದು ನೆಟ್ಟ ಮರಗಳು ಎತ್ತರಕ್ಕೆ ಬೆಳೆದಿವೆ. ಮರದ ಒಂದು ರೆಂಬೆ- ಕೊಂಬೆ ಕಡಿಯಲೂ ಆಡಳಿತ ವರ್ಗದ ಅನುಮತಿ ಪಡೆಯಬೇಕು. ಮರಗಳನ್ನು ಮಕ್ಕಳಂತೆ ಬೆಳೆಸಿದ್ದಾರೆ. ಅಂದು ಮನೆಯಿಂದ ಹೊರಬಂದರೆ ಬಿಸಿಲು ರಾಚುತ್ತಿತ್ತು. ಈಗ ಎಲ್ಲೇ ಹೋದರೂ ಮರಗಳ ನೆರಳಿನಲ್ಲೇ ನಡೆಯಬಹುದು' ಎಂದರು.

ಅರಣ್ಯ ಇಲಾಖೆಯೂ ಹಲವು ದಶಕಗಳಿಂದ ಗಿಡ ನೆಡುವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಲೇ ಇದೆ. ಆದರೆ ಇವರ ಶ್ರಮದಿಂದ ಕಣ್ಣಿಗೆ ಕಾಣುವಂತೆ ಬೆಳೆದು ನಿಂತಿರುವ ಕಾಡಿನ ಪಟ್ಟಿ ಮಾತ್ರ ಇಲ್ಲವೇ ಇಲ್ಲ. ಖಾಸಗಿ ಕಂಪೆನಿಯೊಂದು ಸಾವಿರಾರು ಎಕರೆ ಭೂಮಿಯಲ್ಲಿ ಹಸಿರು ಬಿತ್ತಿದೆ. ಇದು ಸರ್ಕಾರಕ್ಕೂ ಮಾದರಿ ಎನಿಸುತ್ತದೆ.

ಹಲವು ಪ್ರಶಸ್ತಿಗಳಿಗೆ ಭಾಜನ
ಈ ಕೆಲಸವನ್ನು ಗುರುತಿಸಿಯೇ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಕಾರ್ಖಾನೆಯನ್ನು ಹುಡುಕಿಕೊಂಡು ಬಂದಿದೆ. ಅದರಲ್ಲಿ ಪ್ರಮುಖವಾಗಿ ದ್ರವ ತಾಜ್ಯ ನಿರ್ವಹಣೆಗೆ 2011-12ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ, 2009ನೇ ಸಾಲಿನ ಗ್ರೀನ್‌ಟೆಕ್ ಪರಿಸರ ಪ್ರಶಸ್ತಿ, ಲೋಹ ಮತ್ತು ಗಣಿ ವಿಭಾಗದ ಪರಿಸರ ನಿರ್ವಹಣೆ ಸಾಧನೆಗಾಗಿ 2009ನೇ ಸಾಲಿನ ಗ್ರೀನ್‌ಟೆಕ್ ಪರಿಸರ ಪ್ರಶಸ್ತಿ, 2007-08ನೇ ಸಾಲಿನಲ್ಲಿ ಸಮಗ್ರ ಉಕ್ಕು ಘಟಕ ವಿಭಾಗದಲ್ಲಿ ಪ್ರಧಾನಮಂತ್ರಿಗಳ ಪದಕದಲ್ಲಿ ಎರಡನೇ ಸ್ಥಾನ ದೊರಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT