ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚೆತ್ತ ಮಹಿಳೆಗೆ ಈಗ ಯಾವುದೇ ಕ್ಷೇತ್ರ ನಿಷಿದ್ಧವಾಗಿ ಉಳಿದಿಲ್ಲ

Last Updated 18 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ರಾಜಕೀಯ ಕ್ಷೇತ್ರದಲ್ಲಿ ಮಹಿಳೆಗೆ ಮೀಸಲಾತಿ ದೊರೆತ ಮೇಲೆ ನೀತಿ-ನಿರ್ಧಾರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಯಿತು ಎನ್ನುತ್ತಾ ರಾಜಕೀಯ ರಂಗದಲ್ಲಿ ಮೀಸಲಾತಿಯ ಮಹತ್ವವನ್ನು ಗುರುತಿಸುತ್ತಲೇ, ವ್ಯಕ್ತಿ ನೆಲೆಯಲ್ಲಿ, ಕೌಟುಂಬಿಕ ನೆಲೆಯಲ್ಲಿ ಹಾಗೂ
ಸಾಮಾಜಿಕ ನೆಲೆಯಲ್ಲಿ ಈಗ ಆಗಿರುವ ಬದಲಾವಣೆಗಳು ಸಕಾರಾತ್ಮಕವಾದುದು ಎನ್ನುತ್ತಾರೆ ಈ ಬಾರಿ ನಮ್ಮೊಂದಿಗೆ ತಮ್ಮ ವಿಚಾರ ಹಂಚಿಕೊಂಡಿರುವ ರಾಜ್ಯ ಕಾನೂನು ಸಚಿವ  - ಎಸ್. ಸುರೇಶಕುಮಾರ್


ಮ ಹಿಳೆ ಬದಲಾಗಿದ್ದಾಳೆ. ಈ ಬಗ್ಗೆ ಈಗ ಯಾರಿಗೂ ಅನುಮಾನ ಉಳಿದಿರಲಾರದು. ಅಂತೆಯೇ ಹೆಣ್ಣನ್ನು ನೋಡುವ, ಪರಿಭಾವಿಸುವ ಬಗೆಯಲ್ಲೂ ಗಮನಾರ್ಹ ಬದಲಾವಣೆ ಆಗಿದೆ. ವ್ಯಕ್ತಿ ನೆಲೆಯಲ್ಲಿ, ಕೌಟುಂಬಿಕ ನೆಲೆಯಲ್ಲಿ ಹಾಗೂ ಸಾಮಾಜಿಕ ನೆಲೆಯಲ್ಲೂ ಈ ಬದಲಾವಣೆಯನ್ನು ಕಾಣಬಹುದು. ಈ ಬದಲಾವಣೆ ಸಕಾರಾತ್ಮಕವಾದುದು ಎಂಬುದು ಗಮನಿಸಬೇಕಾದ ಮುಖ್ಯ ಸಂಗತಿ. ಇದಕ್ಕೆ ಮೂಲ ಕಾರಣ ಶಿಕ್ಷಣ. ಶಿಕ್ಷಣವೇ ಶಕ್ತಿ ಎಂಬುದು ಸ್ತ್ರೀ ಸಬಲೀಕರಣ ವಿಚಾರದಲ್ಲೂ ದೃಢಪಟ್ಟಿದೆ. ಈ ನಿಟ್ಟಿನಲ್ಲಿ ಈ ನೆಲದ ಕಾಯ್ದೆ-ಕಾನೂನುಗಳು ಕೂಡ ಪೂರಕವಾಗಿ ಕೆಲಸ ಮಾಡಿವೆ. ಹೆಣ್ಣಿನ ಪಾಲುದಾರಿಕೆಯು ಕಲೆ, ಸಾಹಿತ್ಯ, ಉದ್ಯಮ, ವ್ಯವಹಾರ, ರಾಜಕೀಯ ಸೇರಿದಂತೆ ಈಗ ಎಲ್ಲ ಕ್ಷೇತ್ರಗಳಿಗೂ ಚಾಚಿಕೊಂಡಿದೆ. ಎಚ್ಚೆತ್ತ ಮಹಿಳೆಗೆ ಈಗ ಯಾವುದೇ ಕ್ಷೇತ್ರ ನಿಷಿದ್ಧವಾಗಿ ಉಳಿದಿಲ್ಲ.

ನಡುರಸ್ತೆಯಲ್ಲಿ ‘ಕೈನೆಟಿಕ್ ಹೊಂಡಾ’ ಕಂಡಾಗೆಲ್ಲ ನನ್ನ ಕಣ್ಣಮುಂದೆ ಬದಲಾದ ಮಹಿಳೆಯ ಚಿತ್ರಣ ಹಾದುಹೋಗುತ್ತದೆ. ಮಹಿಳೆಯ ಅವ್ಯಕ್ತ ಶಕ್ತಿಯ ಪ್ರತೀಕವಾಗಿ, ಸ್ವಾವಲಂಬನೆಯ ಸಂಕೇತವಾಗಿ ಅದು ಗೋಚರಿಸುತ್ತದೆ. ಹೆಣ್ಣುಮಕ್ಕಳು ಇವತ್ತು ಹೆಚ್ಚು ಧೈರ್ಯವಂತರಾಗಿದ್ದಾರೆ. ಏನನ್ನಾದರೂ ಸಾಧಿಸಬಲ್ಲೆವು ಎಂಬ ಛಲ, ಆತ್ಮವಿಶ್ವಾಸ ಅವರಲ್ಲಿದೆ.

ಮಹಿಳೆಯರು ಮುಖ್ಯಮಂತ್ರಿಗಳಾಗಿ ರಾಜ್ಯಗಳನ್ನು ಮುನ್ನಡೆಸುತಿದ್ದಾರೆ. ರಾಷ್ಟ್ರದ ಚುಕ್ಕಾಣಿ ಹಿಡಿದಿರುವ ಮೈತ್ರಿಕೂಟದ (ಯುಪಿಎ) ಅಧ್ಯಕ್ಷರು, ಲೋಕಸಭೆಯ ಸ್ಪೀಕರ್ ಹಾಗೂ ವಿರೋಧ ಪಕ್ಷದ ನಾಯಕಿ ಈ ಮೂವರೂ ಮಹಿಳೆಯರು ಎಂಬುದು ಅಗ್ಗಳಿಕೆ. ರಾಷ್ಟ್ರಪತಿ ಕೂಡ ಮಹಿಳೆಯೇ ಆಗಿದ್ದಾರೆ. ವಿದೇಶಾಂಗ ಕಾರ್ಯದರ್ಶಿಯಾಗಿ ನಿರುಪಮಾ ರಾವ್ ಅವರು ನೆರೆಹೊರೆ ರಾಷ್ಟ್ರಗಳೊಂದಿಗೆ ವ್ಯವಹರಿಸುತ್ತಿರುವ ರೀತಿ ಬೆರಗುಗೊಳಿಸುತ್ತದೆ.

ಮಹಿಳೆಯ ಜವಾಬ್ದಾರಿ ಮನೆ ನಿರ್ವಹಣೆ. ಹೊರಗಿನ ದುಡಿಮೆಗೆ ಅವರು ಸರಿಹೊಂದುವುದಿಲ್ಲ ಎಂಬ ಮಡಿವಂತಿಕೆಯ ಧೋರಣೆ ಈಗ ಬಹುಮಟ್ಟಿಗೆ ಹೋಗಿದೆ. ಮಹಿಳೆಯರನ್ನು ಆದಾಯರೂಪಿಯಾಗಿ, ಮನೆಯ ಆಧಾರಸ್ತಂಭವಾಗಿ ಪರಿಗಣಿಸಲಾಗುತ್ತಿದೆ. ಈ ಮಾತು ಗ್ರಾಮೀಣ ಪ್ರದೇಶಕ್ಕೂ ಅನ್ವಯಿಸುತ್ತದೆ. ಮಹಿಳೆಯರು ಹೊರಗೆ ದುಡಿಯಲು ಹೋಗುವುದು ಅಸಹಜ ಅಂತ ಈಗ ಯಾರಿಗೂ ಅನ್ನಿಸುತ್ತಿಲ್ಲ. ಹಳ್ಳಿಗಾಡಿನ ಜನರ ಮನೋಧರ್ಮದಲ್ಲೂ ಗಮನಾರ್ಹ ಬದಲಾವಣೆಯನ್ನು ಕಾಣಬಹುದು.

ರಾಜಕೀಯ ಕ್ಷೇತ್ರದಲ್ಲಿ ಮಹಿಳೆಗೆ ಮೀಸಲಾತಿ ದೊರೆತ ಮೇಲೆ ನೀತಿ-ನಿರ್ಧಾರಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚಾಯಿತು. ಗ್ರಾಮೀಣ ಅಭಿವೃದ್ಧಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮೀಸಲಾತಿಯಿಂದಾಗಿ ಪ್ರಭಾವೀ ಮುಖಂಡರನ್ನಿಸಿಕೊಂಡವರೇ ಪತ್ನಿಯನ್ನು ಚುನಾವಣಾ ಕಣಕ್ಕೆ ಇಳಿಸಿ ತಾವು ಪಕ್ಕಕ್ಕೆ ಸರಿಯಬೇಕಾಯಿತು. ಅವರಿಗೆ ಮನ್ನಣೆ ನೀಡಬೇಕಾಯಿತು. ಸಮಾಜದಲ್ಲಿ ಮಹಿಳಾ ಅಧಿಕಾರಿಗಳ ಬಗೆಗೂ ಗೌರವಾದರಗಳಿವೆ. ತಿರಸ್ಕಾರದಿಂದ ಕಾಣುವ ಸ್ಥಿತಿ ಇಲ್ಲ.

ಅವಕಾಶ ದೊರೆತ ಪ್ರತಿ ಕ್ಷೇತ್ರದಲ್ಲಿ ಮಹಿಳೆ ತನ್ನ ಪ್ರತಿಭೆ ಮತ್ತು ಕ್ಷಮತೆ ತೋರಿದ್ದಾಳೆ. ಉನ್ನತ ಹುದ್ದೆ, ಸ್ಥಾನಮಾನಗಳನ್ನು ಸಮರ್ಪಕವಾಗಿ  ನಿಭಾಯಿಸಿದ್ದಾಳೆ. ಸಾಮರ್ಥ್ಯವನ್ನು ರುಜುವಾತುಪಡಿಸಿದ್ದಾಳೆ. ಧೈರ್ಯ, ಸಾಮರ್ಥ್ಯಗಳಿಗೆ ನಿದರ್ಶನವಾಗಿ ಕಿತ್ತೂರಿನ ರಾಣಿ ಚೆನ್ನಮ್ಮ, ಝಾನ್ಸಿಯ  ಲಕ್ಷ್ಮೀಬಾಯಿ ಅವರ ಹೆಸರುಗಳನ್ನು ಉಲ್ಲೇಖಿಸುವುದು ರೂಢಿ. ಆದರೆ ಇವತ್ತು ಪ್ರತಿಕ್ಷೇತ್ರದಲ್ಲೂ ನೂರಾರು ಚೆನ್ನಮ್ಮಂದಿರು ಕಾಣಿಸುತ್ತಾರೆ.

ಮಹಿಳೆಗೆ ನ್ಯಾಯವಾಗಿ ಸಿಗಬೇಕಾದ ಅವಕಾಶ, ಸ್ವಾತಂತ್ರ್ಯ, ಸ್ಥಾನಮಾನಗಳು ಸಿಗತೊಡಗಿವೆ. ಅದನ್ನು ಬಳಸಿಕೊಂಡು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ದಾಪುಗಾಲು ಇಡುತ್ತಿದ್ದಾರೆ. ಪುರುಷರಿಗೆ ಸರಿಸಾಟಿಯಾಗಿ ನಿಂತಿದ್ದಾರೆ. ಆದರೆ, ಸ್ಪರ್ಧೆಯ ಭರಾಟೆಯಲ್ಲಿ ಮಹಿಳೆಯರು ತಮ್ಮತನವನ್ನು  ಕಳೆದುಕೊಳ್ಳಬಾರದು. ಸ್ತ್ರೀ ಸಹಜ ಸೂಕ್ಷ್ಮಗಳು ಮತ್ತು ಸಂವೇದನೆ ಕಳೆದುಕೊಂಡರೆ ಅದರ ಪರಿಣಾಮ ಬೇರೆ ಬೇರೆ ನೆಲೆಯಲ್ಲಿ ದೊಡ್ಡ ಮಟ್ಟದ್ದಾಗಿರುತ್ತದೆ. ಈ ಎಚ್ಚರವನ್ನು ಸದಾ ಜೊತೆಯಲ್ಲಿ ಇರಿಸಿಕೊಂಡೇ ವೃತ್ತಿ ಬದುಕಿನಲ್ಲಿ ಮುನ್ನಡೆ ಸಾಧಿಸಬೇಕು.

ಆದರ್ಶ ಸ್ತ್ರೀ ಮಾದರಿಗಳಿಗೂ ಈಗ ಕೊರತೆ ಇಲ್ಲ. ಇನ್ಫೋಸಿಸ್‌ನ ಸುಧಾ ಮೂರ್ತಿ ಅವರ ಛಲ-ಸಾಧನೆ ಎಂತಹವರಿಗೂ ಸ್ಫೂರ್ತಿ ನೀಡುತ್ತದೆ. ಆ ಕಾಲದಲ್ಲಿಯೇ ಹಟ ತೊಟ್ಟು ಎಂಜಿನಿಯರಿಂಗ್ ಪದವಿ ಪೂರೈಸಿದರು. ಪತಿಯ ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡಿದರು, ಇನ್ಫೋಸಿಸ್ ಅಂತಹ ಸಂಸ್ಥೆ ರೂಪುಗೊಳ್ಳಲು ನೆರವಾದರು. ಇನ್ಫೋಸಿಸ್ ಪ್ರತಿಷ್ಠಾನದ ಮೂಲಕ ಸೇವಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇಂತಹ ನೂರಾರು ಆದರ್ಶ ಮಹಿಳೆಯರು ಈಗ ಕಾಣಸಿಗುತ್ತಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದವರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ.

ಈ ಬದಲಾವಣೆಯು ಮಹಿಳೆ ಮತ್ತು ಪುರುಷನ ಸಂಬಂಧದಲ್ಲಿ ನಕಾರಾತ್ಮಕ ಪರಿಣಾಮ ಬೀರಿದೆ ಎಂದೇನೂ ನನಗೆ ಅನ್ನಿಸುವುದಿಲ್ಲ. ಉದ್ಯೋಗಸ್ಥ ಮಹಿಳೆಯರಲ್ಲಿ ಅದರಲ್ಲಿಯೂ ಮಾಹಿತಿ ತಂತ್ರಜ್ಞಾನ ಅಂತಹ ಕ್ಷೇತ್ರಗಳಲ್ಲಿ ದುಡಿಯುವವರಲ್ಲಿ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚು ಎಂಬ ಮಾತಿದೆ. ಇದರ ಸತ್ಯಾಸತ್ಯತೆ ಒರೆಗೆ ಹಚ್ಚಬೇಕಾಗಿದೆ. ಮೇಲಾಗಿ ಇದು ವ್ಯಕ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆ. ಹೊಂದಾಣಿಕೆಗೆ ಸಂಬಂಧಿಸಿದ ವಿಷಯ. ದಂಪತಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಪರಸ್ಪರರ ಅಗತ್ಯಗಳಿಗೆ, ನೋವು-ನಲಿವಿಗೆ ಸ್ಪಂದಿಸುವ ಗುಣ ರೂಢಿಸಿಕೊಂಡರೆ ಸಂಬಂಧಗಳಲ್ಲಿ ಬಿರುಕು ಮೂಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT