ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು ಆಸ್ಪತ್ರೆ; ಹಣವಿದ್ದರಷ್ಟೇ ಪ್ರಸೂತಿ ಸೇವೆ

Last Updated 8 ಜೂನ್ 2011, 10:25 IST
ಅಕ್ಷರ ಗಾತ್ರ

ಕಡೂರು: ಹಣ ನೀಡಿದರಷ್ಟೇ ಇಲ್ಲಿ ಸುಸೂತ್ರ ಹೆರಿಗೆಗೆ ಅಗತ್ಯ `ಸೇವೆ~ ಲಭ್ಯ. ಕೆಲವು ಪ್ರಭಾವಿ ಸ್ಥಳೀಯ ವೈದ್ಯರ ರಾಜಕೀಯ ಪ್ರಭಾವದ ಕರಿ ನೆರಳು ಈ ಸಾರ್ವಜನಿಕ ಆಸ್ಪತ್ರೆ ಮೇಲಿರುವುದರಿಂದ ವರ್ಗಾವಣೆ ಬಯಸಿ ಬರುವ ವೈದ್ಯರು, ಈ ಆಸ್ಪತ್ರೆಗೆ ಕರ್ತವ್ಯಕ್ಕೆ ಬರಲು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಇಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. 

1970ರಲ್ಲಿ ಅಂದಿನ ಆರೋಗ್ಯ ಸಚಿವ ವೈ.ರಾಮಕೃಷ್ಣ ಶಂಕುಸ್ಥಾಪನೆ ಮಾಡಿ, 1973ರಲ್ಲಿ ಶಾಸಕ ಕೆ.ಆರ್.ಹೊನ್ನಪ್ಪ ಅವರ ಅಧ್ಯಕ್ಷತೆಯ್ಲ್ಲಲಿ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಉದ್ಘಾಟಿಸಿದ ಸಾರ್ವಜನಿಕ ಆಸ್ಪತ್ರೆ ಇದು. ಈಗ 100 ಹಾಸಿಗೆ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿ ನೂತನ ಕಟ್ಟಡದಲ್ಲಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ.

ಜಿಲ್ಲೆಯ್ಲ್ಲಲ್ಲಿಯೇ ಕಡೂರು ಅತಿ ದೊಡ್ಡ ತಾಲ್ಲೂಕು. ಈ ಆಸ್ಪತ್ರೆಯಲ್ಲಿ 12 ವೈದ್ಯರು ಕಾರ್ಯನಿರ್ವಹಿಸಬೇಕಿದೆ. ಹಲವು ವರ್ಷಗಳಿಂದ 7ರಿಂದ 8 ವೈದ್ಯರ ಕೊರತೆ ಕಾಣಿಸುತ್ತಿದೆ. ಪ್ರತಿದಿನ 300ಕ್ಕೂ ಹೆಚ್ಚು ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತಜ್ಞ ವೈದ್ಯರ ಕೊರತೆಯೂ ಇಲ್ಲಿದೆ. ಮಕ್ಕಳ ತಜ್ಞ, ನೇತ್ರತಜ್ಞ, ಇಎನ್‌ಟಿ, ಫಿಜಿಷಿಯನ್, ರೇಡಿಯಾಲಜಿಸ್ಟ್ ಸೇರಿದಂತೆ ಸಿಬ್ಬಂದಿಯೇತರ ಹುದ್ದೆ ಖಾಲಿ ಇವೆ. ಈ ವಿಭಾಗಕ್ಕೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ದೂರದ ಶಿವಮೊಗ್ಗ, ಮಣಿಪಾಲದ ದಾರಿ ತೋರಿಸಿ ಕೈತೊಳೆದುಕೊಳ್ಳುವುದು ಮಾಮೂಲಿ ಆಗಿದೆ.

ರಾಷ್ಟ್ರೀಯ ಹೆದ್ದಾರಿ ಕಡೂರು -ಬೀರೂರು ಪಟ್ಟಣದಲ್ಲಿ ಹಾದು ಹೋಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತ ನಡೆಯುವುದು ಸಾಮಾನ್ಯ ಎನ್ನುವಂತಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರು ಆಸ್ಪತ್ರೆಗೆ ಬಂದರೆ, `ಇವರು ಬದುಕುವುದು ಕಷ್ಟ. ತಕ್ಷಣವೇ ಶಿವಮೊಗ್ಗಕ್ಕೆ ಕರೆದೊಯ್ಯಿರಿ~ ಎಂದು ರೋಗಿಯ ಬಂಧುಗಳಿಗೆ ಭಯಪಡಿಸುವ ಪರಿಪಾಠ ಆಸ್ಪತ್ರೆಯಲ್ಲಿ ಆಗ್ಗಾಗ್ಗೆ ಕಾಣಬಹುದು ಎನ್ನುತ್ತವೆ ಆಸ್ಪತ್ರೆಯ ಪರಿಸ್ಥಿತಿ ಬಲ್ಲ ಮೂಲಗಳು.

ತಾಲ್ಲೂಕಿನದ್ಯಾಂತ 23 ಪ್ರಾಥಮಿಕ ಆರೋಗ್ಯ ಕೇಂದ್ರ, ಬೀರೂರು, ಪಂಚನಹಳ್ಳಿ, ಯಗಟಿ ಸೇರಿದಂತೆ 3 ಸಮುದಾಯ ಆರೋಗ್ಯ ಕೇಂದ್ರ, 20 ಆಯುರ್ವೇದ ಆಸ್ಪತ್ರೆ, 1 ಹೋಮಿಯೋಪಥಿ ಹಾಗೂ 1 ಪ್ರಕೃತಿ ಚಿಕಿತ್ಸಾಲಯ ಕಾರ್ಯನಿರ್ವಹಿಸುತ್ತಿವೆ. ಇಲ್ಲಿರುವ ವೈದ್ಯರನ್ನು ವಾರಕ್ಕೊಮ್ಮೆ ಕಡೂರು ಸಾರ್ವಜನಿಕ ಆಸ್ಪತ್ರೆಗೆ ನಿಯುಕ್ತಿ ಮಾಡಲಾಗುತ್ತಿದೆ. 

`ವರ್ಷಕ್ಕೆ ರೂ. 18.80 ಲಕ್ಷ ಮೌಲ್ಯದ ಔಷಧಿ ಖರೀದಿಗೆ ಅವಕಾಶವಿದ್ದು, ನಾವು ಕಳುಹಿಸುವ ಔಷಧಿ ಪಟ್ಟಿಗೆ ವಿರುದ್ಧವಾಗಿ ಸರ್ಕಾರ ಔಷಧಿಗಳನ್ನು ಸರಬರಾಜು ಮಾಡುತ್ತಿದೆ. ನಮ್ಮ ಅವಶ್ಯಕತೆಗೆ ತಕ್ಕಂತೆ ಔಷಧಿಗಳು ವಿತರಣೆಯಾಗುತ್ತಿಲ್ಲ~ ಎಂದು ಸಹಾಯಕ ಫಾರ್ಮಾಸಿಸ್ಟ್ ಆಸ್ಪತ್ರೆ ಎದುರಿಸುತ್ತಿರುವ ಇನ್ನೊಂದು ಸಮಸ್ಯೆಯನ್ನು ಅನಾವರಣಗೊಳಿಸಿದರು.

ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ನಂತರ ರೋಗಿಗಳಿಗೆ ಅಗತ್ಯ ಔಷಧಿಗಳು ಆಸ್ಪತ್ರೆಯಲ್ಲಿ ವಿತರಣೆ ಆಗುತ್ತಿಲ್ಲ. ಹೊರಗಿಂದಲೇ ಖರೀದಿಸಿ ತರುವಂತೆ ಚೀಟಿ ಬರೆದುಕೊಡುವುದೂ ಇದೆ. ಪರಿಣಾಮ ಆಸ್ಪತ್ರೆ ಮುಂಭಾಗದಲ್ಲಿರುವ ಖಾಸಗಿ ಮೆಡಿಕಲ್ಸ್‌ಗಳ ವಹಿವಾಟು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಹೆರಿಗೆ, ಶಸ್ತ್ರಚಿಕಿತ್ಸೆ ಮತ್ತು ಔಷಧಿಗಳು ಸೇರಿದಂತೆ ಪರೋಕ್ಷವಾಗಿ ರೋಗಿಗಳಿಂದ ಪಡೆಯುವ ಹಣ ರೂ. 4 ಸಾವಿರದಿಂದ 5 ಸಾವಿರವರೆಗೂ ತಲುಪುತ್ತದೆ. ಖಾಸಗಿ ಮೆಡಿಕಲ್ಸ್ ಸ್ಟೋರ್‌ಗೆ ಚೀಟಿ ನೀಡಿ ಹಣ ಸಂದಾಯ ಮಾಡಿರುವುದಕ್ಕೆ ಪುರಾವೆ ನೀಡಿದರೆ ಮಾತ್ರ ಚಿಕಿತ್ಸೆ ಎಂಬ ಅಲಿಖಿತ ನಿಯಮವೂ ಇಲ್ಲಿ ಚಾಲ್ತಿಯಲ್ಲಿದೆ ಎಂದು ಶಸ್ತ್ರಚಿಕಿತ್ಸೆಗೊಳಗಾದ ಶಾರದಮ್ಮ ಎಂಬವರ ಪತಿ ರಾಜಪ್ಪ ಪತ್ರಿಕೆ ಬಳಿ ಅಳಲುತೋಡಿಕೊಂಡರು. ಪ್ರಯೋಗಶಾಲೆಯಲ್ಲಿ ಮೂತ್ರ, ರಕ್ತ ಪರೀಕ್ಷೆ, ಎಕ್ಸ್-ರೇಗೆ ಇಂತಿಷ್ಟು ಹಣ ಎಂದು ನಿಗದಿಗೊಳಿಸಲಾಗಿದೆ.
ಸ್ಕ್ಯಾನಿಂಗ್ ಉಪಕರಣ ಇದ್ದರೂ ಉಪಯೋಗಿಸಲು ತಜ್ಞವೈದ್ಯರಿಲ್ಲ. ಖಾಸಗಿ ಆಸ್ಪತ್ರೆಗಳಿಗೇ ಹೋಗಿ ಎಂದು ಆಸ್ಪತ್ರೆಯಲ್ಲಿ ಹೇಳುತ್ತಾರೆಂದು ರೋಗಿಗಳ ಬಂಧುಗಳು ದೂರುತ್ತಾರೆ.

ಕಳೆದ ವರ್ಷ ಇಲ್ಲಿ 4421 ಹೆರಿಗೆ ಮಾಡಿಸಲಾಗಿದ್ದು, 26 ಶಿಶುಗಳು ಮರಣ ಹೊಂದಿವೆ. ತಾಲ್ಲೂಕಿನಾದ್ಯಂತ ಸಾಂಕ್ರಾಮಿಕ ರೋಗ ಒಮ್ಮಮ್ಮೆ ಕಾಣಿಸಿಕೊಳ್ಳುತ್ತದೆ. ಪ್ಲೋರೈಡ್ ಮಿಶ್ರಿತ ಕುಡಿಯುವ ನೀರು ಹೆಚ್ಚಿನ ಭಾಗದಲ್ಲಿರುವುದರಿಂದ ಕೀಲು-ಮೈ-ಕೈ ನೋವಿನ ಪ್ರಕರಣಗಳೇ ಹೆಚ್ಚಿದೆ. ಚಿಕೂನ್ ಗುನ್ಯ, ಡೆಂಗೆ ಪ್ರಕರಣಗಳು ಈ ವರ್ಷ ಅಷ್ಟಾಗಿಲ್ಲ. 12ಮಲೇರಿಯ ಪ್ರಕರಣ ದಾಖಲಾಗಿವೆ. ಶುದ್ಧ ಕುಡಿಯುವ ನೀರು ಈ ಭಾಗದ ತಕ್ಷಣದ ಅಗತ್ಯವಾಗಿದೆ.

ಮಕ್ಕಳ ಆಸ್ಪತ್ರೆ: ಪ್ರತ್ಯೇಕ ಮಕ್ಕಳ ಆಸ್ಪತ್ರೆ ಬೇಕಾಗಿದೆ. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇಲ್ಲದಿರುವುದರಿಂದ ವೈದ್ಯಕೀಯ ಸಂಶೋಧನೆ, ಪರೀಕ್ಷೆಗಳಿಗೆ ಮಣಿಪಾಲ್, ಬೆಂಗಳೂರುಗಳಿಗೆ ತೆರಳಬೇಕಾಗಿದೆ.

ಅಗತ್ಯ ಸೌಲಭ್ಯ ಕೊರತೆ-ತಜ್ಞ ವೈದ್ಯರು ಇಲ್ಲದೇ ಇರುವುದು, ಔಷಧ ಕೊರತೆ, ಬಡ ರೋಗಿಗಳೂ `ಉತ್ತಮ ಚಿಕಿತ್ಸೆ~ಗಾಗಿ ಆಸ್ಪತ್ರೆಯ ಸಿಬ್ಬಂದಿಯ `ಕೈಬಿಸಿ~ ಮಾಡಬೇಕಿರುವುದು. ಹೀಗೆ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಹಾಗಾಗಿ ತಾಲ್ಲೂಕಿನ ಜನರ ಆರೋಗ್ಯ ಕಾಪಾಡಬೇಕಾದ ಈ ಆಸ್ಪತ್ರೆಗೇ ಮೊದಲು ಸರ್ಜರಿ ಆಗಬೇಕಾಗಿದೆ.

ಕಡೂರು 364 ಹಳ್ಳಿಗಳನ್ನು ಹೊಂದಿರುವ ದೊಡ್ಡ ತಾಲ್ಲೂಕು. ಗ್ರಾಮೀಣ ಪ್ರದೇಶಕ್ಕೆ ಉತ್ತಮ ಆರೋಗ್ಯ ಸೇವೆ ತಲುಪಬೇಕೆಂದರೆ ಇಲ್ಲಿನ ಇಬ್ಬರು ಶಾಸಕರೂ ಕಾರ್ಯೋನ್ಮುಖವಾಗಬೇಕಿದೆ. ಸ್ಥಳೀಯ ಶಾಸಕ ಡಾ. ವೈ.ಸಿ.ವಿಶ್ವನಾಥ್ ಮೊದಲು ಇಲ್ಲಿನ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಇಲ್ಲಿನ ಕುಂದು ಕೊರತೆಗಳ ಅರಿವಿದ್ದವರೇ ಆಗಿದ್ದು ತಮ್ಮ ಸಮಸ್ಯೆ ಶೀಘ್ರವಾಗಿ ಸ್ಪಂದಿಸುತ್ತಾರೆ ಎಂದೇ ತಾಲ್ಲೂಕಿನ ಜನ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಿರೀಕ್ಷೆ ನಿರಾಶೆಗೆ ಕಾರಣವಾಗುವುದೇ ಅಥವಾ `ಆರೋಗ್ಯ ಕವಚ~ವನ್ನೇ ಒದಗಿಸುವುದೇ ಕಾದುನೋಡಬೇಕಿದೆ.
ಎ.ಜೆ.ಪ್ರಕಾಶಮೂರ್ತಿ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT