ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ರವಿ ಮೂಡಿ ಬಂದ...

ನೂರುಕಣ್ಣು ಸಾಲದು
Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕನ್ನಡ ರಂಗಭೂಮಿಯಲ್ಲಿ ಮಹತ್ವದ ಗುರುತುಗಳನ್ನು ಮೂಡಿಸಿರುವ ಗುಬ್ಬಿವೀರಣ್ಣನವರು ಕರ್ನಾಟಕದ ಚಲನಚಿತ್ರ ಚರಿತ್ರೆಯಲ್ಲೂ ಪ್ರಮುಖರು. ತಮ್ಮ ಕಂಪೆನಿಯಲ್ಲಿ ಪ್ರದರ್ಶಿಸುತ್ತಿದ್ದ ‘ಭಕ್ತ ಕಬೀರ್’ ನಾಟಕವನ್ನೇ ೧೯೨೪ರಲ್ಲಿ ಮೂಕಿ ಚಲನಚಿತ್ರವನ್ನಾಗಿಸಲು ಆರಂಭಿಸಿದ ವೀರಣ್ಣನವರು ತಮ್ಮದೇ ಆದ ಕರ್ನಾಟಕ ಪಿಕ್ಚರ್ಸ್ ಮೂಲಕ ಮೂರು ಮೂಕಿ ಚಿತ್ರಗಳನ್ನು ತಯಾರಿಸಿದರು. ಸಾಹಿತಿ ಶಿವರಾಮ ಕಾರಂತರೂ ಚಲನಚಿತ್ರ ತಂತ್ರಜ್ಞಾನವನ್ನು ತಾವೇ ಕಲಿತು ಮೂಕಿ ಚಿತ್ರಗಳನ್ನು ಸಿದ್ಧಪಡಿಸಿದರು.

ಭಾರತೀಯ ಮೂಕಿ ಚಿತ್ರ ಯುಗದಲ್ಲಿ ಕರ್ನಾಟಕದಲ್ಲಿ ಹಲವಾರು ಚಿತ್ರಗಳು ನಿರ್ಮಾಣಗೊಂಡವು. ಮುಂಬೈನ ಉದ್ಯಮಿಗಳೂ ಬೆಂಗಳೂರಿನಲ್ಲಿ ಕಂಪೆನಿ ಆರಂಭಿಸಿ (ಸೂರ್ಯ ಫಿಲಂ ಕಂಪನಿ) ೪೦ಕ್ಕೂ ಹೆಚ್ಚು ಮೂಕಿ ಚಿತ್ರಗಳನ್ನು ತಯಾರಿಸಿದರೆ, ಕನ್ನಡದ ಪ್ರಸಿದ್ಧ ನಾಟಕಕಾರ ಕೈಲಾಸಂ ಅವರ ನೇತೃತ್ವದಲ್ಲಿ ಮೂಕಿ ಚಿತ್ರ ಸಿದ್ಧವಾಯಿತು.

‘ಸತಿ ಸುಲೋಚನಾ’ ಕನ್ನಡದ ಪ್ರಥಮ ಮಾತಿನ ಚಿತ್ರ. ವೈ.ವಿ.ರಾವ್ ನಿರ್ದೇಶಿಸಿದ ಈ ಚಿತ್ರದಲ್ಲಿ ಎಂ.ಪಿ. ಸುಬ್ಬಯ್ಯ ನಾಯ್ಡು, ಆರ್. ನಾಗೇಂದ್ರರಾವ್, ಲಕ್ಷ್ಮೀಬಾಯಿ ಮೊದಲಾದವರ ತಾರಾಗಣವಿತ್ತು. ಚಿತ್ರೀಕರಣ ಮೊದಲು ಆರಂಭಿಸಿದರೂ ಎರಡನೆಯದಾಗಿ ಬಿಡುಗಡೆಗೊಂಡ ಚಿತ್ರ ‘ಭಕ್ತ ಧ್ರುವ’.

ಭಾರತದ ಬಹುತೇಕ ಭಾಷಾ ಚಿತ್ರಗಳಂತೆ ಕನ್ನಡದ ಚಿತ್ರರಂಗವೂ ಶುರುವಿನಲ್ಲಿ ಪೌರಾಣಿಕ ಕಥಾವಸ್ತುಗಳನ್ನು ಆಧರಿಸಿಯೇ ಹೆಚ್ಚಿನ ಚಿತ್ರಗಳನ್ನು ತಯಾರಿಸಿತು. ಆದರೆ, ಇವೆಲ್ಲವೂ ಸಿದ್ಧಗೊಂಡಿದ್ದು ನೆರೆ ರಾಜ್ಯಗಳ ಸ್ಟುಡಿಯೊಗಳಲ್ಲಿ. ಬೇರೆ ರಾಜ್ಯಗಳನ್ನು ಚಿತ್ರ ತಯಾರಿಕೆಗೆ ಅವಲಂಬಿಸಬೇಕಿದ್ದ ಕನ್ನಡ ಚಿತ್ರರಂಗ ಎರಡು ದಶಕಗಳಲ್ಲಿ ನಿರ್ಮಿಸಿದ್ದು ೩೦ ಚಿತ್ರಗಳನ್ನು ಮಾತ್ರ. ಸಂಖ್ಯೆಯಲ್ಲಿ ಹೆಚ್ಚೆನ್ನಿಸದಿದ್ದರೂ ಮಹತ್ವದ ಚಿತ್ರಗಳು ಈ ಎರಡು ದಶಕಗಳು ತೆರೆಗೆ ಬಂದವು. ಅವುಗಳಲ್ಲಿ ದಕ್ಷಿಣ ಭಾರತದ ಮೊದಲ ಸಾಂಸಾರಿಕ ಚಿತ್ರ ‘ಸಂಸಾರ ನೌಕೆ’ ಕೂಡ ಒಂದು. ಪೌರಾಣಿಕ ಚಿತ್ರಗಳ ಏಕತಾನತೆಯನ್ನು ಮುರಿಯಲು ಎಚ್.ಎಲ್.ಎನ್. ಸಿಂಹ ಆಯ್ಕೆ ಮಾಡಿಕೊಂಡಿದ್ದು ತಾವೇ ಬರೆದು ರಂಗದಲ್ಲಿ ಪ್ರದರ್ಶಿಸುತ್ತಿದ್ದ ‘ಸಂಸಾರ ನೌಕಾ’ ನಾಟಕವನ್ನು.

ಹಳೆಯ ಮೈಸೂರು ಭಾಗದಲ್ಲಿಯೇ ಕೇಂದ್ರಿಕೃತಗೊಂಡಿದ್ದ ಚಿತ್ರೋದ್ಯಮಕ್ಕೆ ಉತ್ತರ ಹಾಗೂ ಮುಂಬೈ ಕರ್ನಾಟಕ ಭಾಗದಿಂದಲೂ ಪ್ರಾತಿನಿಧ್ಯ ಶುರುವಾಗಿದ್ದು ‘ಚಿರಂಜೀವಿ’, ‘ಚಂದ್ರಹಾಸ’ ಚಿತ್ರಗಳ ಮೂಲಕ. ಕನ್ನಡ ಮಾತನಾಡುವವರೆಲ್ಲರೂ ಒಂದೇ ಆಡಳಿತಕ್ಕೆ ಸೇರಬೇಕೆಂಬ ಆಕಾಂಕ್ಷೆ ೧೯೫೬ರಲ್ಲಿ ಏಕೀಕರಣದ ಮೂಲಕ ಈಡೇರಿತು. ಆ ದಶಕದಲ್ಲೂ ಕನ್ನಡ ಚಿತ್ರರಂಗಕ್ಕೆ ಭದ್ರ ತಳಹದಿ ಇನ್ನೂ ಸಿಕ್ಕಿರಲಿಲ್ಲ. ಕನ್ನಡ ಚಿತ್ರರಂಗ ಮದ್ರಾಸ್‌ನಲ್ಲಿದ್ದ ಸೌಲಭ್ಯಗಳ ಮೇಲೆ ಅವಲಂಬಿಸಬೇಕಿತ್ತು.

  ಬೆಂಗಳೂರು, ಮೈಸೂರುಗಳಲ್ಲಿ ಸ್ಟುಡಿಯೊಗಳು ಅಸ್ತಿತ್ವಕ್ಕೆ ಬಂದರೂ ಗಟ್ಟಿಯಾಗಿ ನಿಂತುಕೊಂಡಿದ್ದು ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಮಾತ್ರ. ಆದರೆ ೧೯೫೦ರ ದಶಕ ಕನ್ನಡ ಚಿತ್ರೋದ್ಯಮಕ್ಕೆ ತನ್ನದೇ ಹಾದಿ ರೂಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ದಶಕ. ಈ ಅವಧಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಅನೇಕ ಉತ್ಸಾಹಿಗಳ ಪ್ರವೇಶವಾಯಿತು. ಅವರಲ್ಲಿ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರಿದ್ದರು. 

ವಿರಳವಾಗಿ ತೆರೆಗೆ ಬರುತ್ತಿದ್ದ ಕನ್ನಡ ಚಿತ್ರಗಳು ೧೯೫೦ರ ನಂತರ ಹೆಚ್ಚಾಗಲು ‘ರಾಜಾ ವಿಕ್ರಮ’ ಹಾಗೂ ‘ಜಗನ್ಮೋಹಿನಿ’ ಚಿತ್ರಗಳು ಪ್ರೇರಣೆ ನೀಡಿದವು. ಆವರೆಗೂ ಕನ್ನಡ ಚಿತ್ರಗಳಿಗೆ ಬಂಡವಾಳ ಹೂಡಲು ಹಿಂಜರಿಯುತ್ತಿದ್ದ ಜನ ಕೂಡ ಕನ್ನಡ ಚಿತ್ರಗಳನ್ನು ತಯಾರಿಸಲು ಮುಂದಾದರು. 
ಗ್ರಾಮೀಣ ಪ್ರದೇಶಗಳಲ್ಲಿ ‘ಶನಿ ಮಹಾತ್ಮೆ’ ಕಥೆ ಬಹಳ ಜನಪ್ರಿಯ. ಇದು ನಾಟಕಗಳಾಗಿ, ಹರಿಕಥೆಗಳಾಗಿ ಜನತೆಯನ್ನು ತಲುಪುತ್ತಿದ್ದ ಆ ಸಂದರ್ಭದಲ್ಲಿ ಅದೇ ಕಥೆಯನ್ನು ಆಧರಿಸಿದ ತಯಾರಾದ ‘ರಾಜಾ ವಿಕ್ರಮ’ ಚಿತ್ರವನ್ನು ಡಿ. ಕೆಂಪರಾಜ ಅರಸು ತಯಾರಿಸಿದರು. ‘ರಾಜಾ ವಿಕ್ರಮ’ ಜನರನ್ನು ಆಕರ್ಷಿಸಿ ಗಲ್ಲಾಪೆಟ್ಟಿಗೆಯನ್ನು ತುಂಬಿಸಿತು. ಇದರ ಹಿಂದೆಯೇ ಶಂಕರ ಸಿಂಗ್, ವಿಠಲಾಚಾರ್ಯ ತಂಡ ತಯಾರಿಸಿದ ‘ಜಗನ್ಮೋಹಿನಿ’ ತುಂಬಿದ ಗೃಹದಲ್ಲಿ ಪ್ರದರ್ಶನವಾಗತೊಡಗಿತು. ಇವರೆಡೂ ಚಿತ್ರಗಳು ಮಾಡಿದ ಪರಿಣಾಮದಿಂದ ಕನ್ನಡ ಚಿತ್ರರಂಗದಲ್ಲಿ ಹೊಸ ಚೈತನ್ಯ ಉಂಟಾಯಿತು.

ಮೈಸೂರನ್ನು ಕೇಂದ್ರವನ್ನಾಗಿಟ್ಟುಕೊಂಡು ಹಲವಾರು ಮಂದಿ ಚಲನಚಿತ್ರ ನಿರ್ಮಾಣಕ್ಕೆ ಕೈಹಾಕಿದರು. ಹಲವಾರು ಮಂದಿ ಕಲಾವಿದರು, ಛಾಯಾಗ್ರಾಹಕರು ಹಾಗೂ ಬರಹಗಾರರು ಚಿತ್ರರಂಗ ಪ್ರವೇಶಿಸಿದರು. ಪೌರಾಣಿಕ ನಾಟಕಗಳೇ ಹೆಚ್ಚಾಗಿದ್ದ ಆ ಸಮಯದಲ್ಲಿ ಜಾನಪದ, ಸಾಂಸಾರಿಕ ಹಾಗೂ ಸಾಮಾಜಿಕ ಚಿತ್ರಗಳು ಹೆಚ್ಚು ಹೆಚ್ಚಾಗಿ ತೆರೆಗೆ ಬಂದವು. ‘ಸತಿ ಸುಲೋಚನಾ’ ಚಿತ್ರದಿಂದ ಕನ್ನಡ ತೆರೆಗೆ ಬಂದಿದ್ದ ಆರ್. ನಾಗೇಂದ್ರರಾಯರು ತಮ್ಮದೇ ಆದ ಚಿತ್ರಗಳನ್ನು ತಯಾರಿಸಲು ಲಾಂಛನ ಆರಂಭಿಸಿದರು. ಮೂರು ಭಾಷೆಗಳಲ್ಲಿ ಚಿತ್ರ ತಯಾರಿಸುವ ಸಾಹಸಕ್ಕೂ ಆರೆನ್ನಾರ್‌ ಮುಂದಾದರು.
 
ಗುಬ್ಬಿ ವೀರಣ್ಣನವರು ತಯಾರಿಸಿದ ‘ಬೇಡರ ಕಣ್ಣಪ್ಪ’ (1954) ಮೂಲಕ ರಾಜ್‌ಕುಮಾರ್‌ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಇವರೊಂದಿಗೆ ಜಿ.ವಿ. ಅಯ್ಯರ್, ನರಸಿಂಹರಾಜು, ಬಾಲಕೃಷ್ಣ, ಕಲ್ಯಾಣಕುಮಾರ್, ಉದಯಕುಮಾರ್, ಹರಿಣಿ, ಲೀಲಾವತಿ, ಪ್ರತಿಮಾದೇವಿ, ಜಯಶ್ರೀ ಅವರೂ ಬೆಳ್ಳಿತೆರೆಗೆ ಪ್ರವೇಶ ಮಾಡಿದರು. ರಾಜಕುಮಾರ್ ಅವರು ಮುಂದಿನ ಐದು ದಶಕಗಳ ಕಾಲ ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಕಾಣಿಸಿಕೊಂಡಿದ್ದು ಈಗ ಇತಿಹಾಸ. 
ಜಾನಪದ, ಪೌರಾಣಿಕ ಹಾಗೂ ಫ್ಯಾಂಟಸಿ ಚಿತ್ರಗಳ ಮೂಲಕ ದಕ್ಷಿಣ ಭಾರತವನ್ನು ದೇಶದೆತ್ತರಕ್ಕೆ ಕೊಂಡ್ಯೊಯ್ದ
ಬಿ. ವಿಠಲಾಚಾರ್ಯ ಅವರು ಕನ್ನಡ ಚಿತ್ರರಂಗದಲ್ಲಿಯೇ ಮೊದಲು ಹೆಸರು ಮಾಡಿದವರು. ಇವರೊಡನಿದ್ದ ಡಿ. ಶಂಕರ್ ಸಿಂಗ್ ಅವರು ಮಹಾತ್ಮ ಪಿಕ್ಚರ್ಸ್‌ ಮೂಲಕ ನಿರಂತರವಾಗಿ ಕನ್ನಡ ಚಿತ್ರರಂಗವನ್ನು ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗದ ಬುನಾದಿಯನ್ನು ಗಟ್ಟಿಗೊಳಿಸಿದರು.

‘ಸಂಸಾರ ನೌಕೆ’ಯ ಮೂಲಕ ಚಿತ್ರರಂಗದಲ್ಲಿ ಕಾಣಿಸಿಕೊಂಡ ಹೆಚ್.ಎಲ್.ಎನ್. ಸಿಂಹ, ಬಿ.ಆರ್. ಪಂತಲು, ಎಂ.ವಿ. ರಾಜಮ್ಮ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸಾಧನೆಗಳನ್ನು ಮಾಡಿದರು.  ಗುಬ್ಬಿ ವೀರಣ್ಣ, ಹೊನ್ನಪ್ಪ ಭಾಗವತರು, ಎಂ.ವಿ ಸುಬ್ಬಯ್ಯ ನಾಯ್ಡು, ಬಿ.ಎಸ್.ರಂಗ, ಆರ್. ನಾಗೇಂದ್ರರಾವ್ ಅವರುಗಳು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. 

ಮೈಸೂರು ಹಾಗೂ ಮದ್ರಾಸ್ ಸ್ಟುಡಿಯೊಗಳನ್ನು ನಂಬಿಕೊಂಡು ನಡೆಯುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಹಲವು ತಂತ್ರಜ್ಞರು, ಸಂಗೀತಗಾರು, ಹಿನ್ನೆಲೆ ಗಾಯಕರೂ ಆಗ ಪದಾರ್ಪಣೆ ಮಾಡಿದರು. ಅವರೂ ಕೂಡ ಕನ್ನಡ ಚಿತ್ರಸಂಗೀತ ಕ್ಷೇತ್ರವನ್ನು ಮುನ್ನಡೆಸಿದರು. 

ನಾಟಕಗಳನ್ನು ಚಿತ್ರತೆರೆಯ ಮೇಲೆ ತರುವ ಪರಿಪಾಠ ಹೆಚ್ಚಿದ್ದ ಕನ್ನಡ ಚಿತ್ರರಂಗದಲ್ಲಿ ಸ್ವತಂತ್ರ ಮನೋಭಾವ ೧೯೫೦ರ ದಶಕದ ನಂತರ ಮೊದಲಾಯಿತು. ಸ್ವತಂತ್ರ ಕಥಾ ವಸ್ತುಗಳು, ನಾಡು–ನುಡಿಗೆ ಸಂಬಂಧಿಸಿದ ಘಟನೆಗಳು ಇದೇ ಸಂದರ್ಭದಲ್ಲಿ ತೆರೆಗೆ ಬಂದವು. ಸಾಮಾಜಿಕ ಹಾಗೂ ಐತಿಹಾಸಿಕ ಚಿತ್ರಗಳೂ ಹೆಚ್ಚಾದವು. ನಿಧಾನವಾಗಿ ಏಕೀಕೃತ ಕರ್ನಾಟಕದಲ್ಲಿ ಕನ್ನಡ ಚಿತ್ರಗಳ ಮಾರುಕಟ್ಟೆಯೂ ವಿಸ್ತರಿಸಿತು. ಇಷ್ಟೆಲ್ಲಾ ಆದರೂ ಕನ್ನಡ ಚಿತ್ರರಂಗ ತನ್ನ ನೆಲದಲ್ಲಿ ಕಾಲೂರಿರಲಿಲ್ಲ. ಎಲ್ಲವೂ ಪಕ್ಕದ ಮದರಾಸಿನಲ್ಲಿಯೇ ನಡೆಯುತ್ತಿತ್ತು. ಚಿತ್ರಗಳ ತಯಾರಿಕೆ ನಿಧಾನವಾಗಿ ಹೆಚ್ಚುತ್ತಿದ್ದರೂ ಮೂಲ ಸೌಲಭ್ಯಗಳು ನಮ್ಮಲ್ಲಿರಲಿಲ್ಲ. ಆಗಾಗ ಚಿತ್ರ ತಯಾರಿಕಾ ಕೊರತೆಗಳೂ ಹೆಚ್ಚುತ್ತಿದ್ದವು. ಸಿದ್ಧಗೊಳ್ಳುವ ಚಿತ್ರಗಳಿಗೆ ಕರ್ನಾಟಕದಲ್ಲಿಯೇ ಚಿತ್ರ ಮಂದಿರಗಳು ದೊರಕದೇ ಅನಾನುಕೂಲ ಆಗಾಗ ತಲೆದೂರಿತು.

ಇಂತಹ ಹಲವಾರು ಸಮಸ್ಯೆಗಳ ನಡುವೆಯೇ ಕನ್ನಡ ಚಿತ್ರರಂಗ ಹೆಜ್ಜೆ ಹಾಕುತ್ತಾ ಇರುವ ಸಂದರ್ಭದಲ್ಲಿ ಕನ್ನಡಿಗರು ಕನ್ನಡ ಚಿತ್ರಗಳಿಗೆ ಎಲ್ಲಾ ಬಗೆಯ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಜೊತೆಯಾದರು. ಕನ್ನಡ ಸಿನಿಮಾಗಳ ಅಭಿವೃದ್ಧಿಗೆ ಸಾಹಿತಿ, ಕಲಾವಿದರೂ ಕೂಡ ಬೆಂಬಲವಿತ್ತರು. ಕ್ರಮೇಣ ಕನ್ನಡ ಚಿತ್ರರಂಗ ಕರ್ನಾಟಕದಲ್ಲಿಯೇ ಬೇರುಗಳನ್ನು ಬಿಡಬೇಕೆಂಬ ಅಭೀಪ್ಸೆ ಹೆಚ್ಚತೊಡಗಿತು. 
(ಮುಂದುವರೆಯುವುದು)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT