ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಬ ಕಣ್ಣಿಗೆ ಹಬ್ಬ ‘ಕುಡ್ಲ ಕಲಾಮೇಳ’

ಅಕ್ಷರ ಗಾತ್ರ

ಕರಾವಳಿ ಚಿತ್ರಕಲಾ ಚಾವಡಿ ಆಯೋಜಿಸಿದ ನಾಲ್ಕನೇ ಬೃಹತ್ ಚಿತ್ರಕಲಾ ಪ್ರದರ್ಶನವು ಮಂಗಳೂರಿನ ಕದ್ರಿವನದ ರಾಜರಸ್ತೆಯ ಇಕ್ಕೆಲಗಳಲ್ಲಿ ಹಬ್ಬಿ ಕಲಾವಿದರ ಹಾಗೂ  ಕಲಾಸಕ್ತ ಮನಸ್ಸುಗಳಿಗೆ ಮುದ ನೀಡಿತು. ಕರಾವಳಿಯ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ, ಕಾಸರಗೋಡು  ಅಲ್ಲದೆ, ಹಾಸನ, ಮೈಸೂರು, ತುಮಕೂರು ಬೆಂಗಳೂರು ಹಾಗೂ ಗೋವಾ, ಮುಂಬೈ
ಯಿಂದಲೂ ಕಲಾವಿದರು ಈ ಕಲಾಮೇಳದಲ್ಲಿ ಭಾಗವಹಿಸಿದ್ದು ವಿಶೇಷ.

ಚಾವಡಿಯ 32 ಸದಸ್ಯರು ಸೇರಿ 115 ಚಿತ್ರಕಲಾವಿದರು 132 ಸ್ಟಾಲ್‌ಗಳಲ್ಲಿ ಪೆನ್ಸಿಲ್, ಚಾರ್‌ಕೋಲ್, ಕ್ರೇಯಾನ್ಸ್ ಜಲವರ್ಣ, ತೈಲವರ್ಣ ಹಾಗೂ ಅಕ್ರಿಲಿಕ್ ಮಾಧ್ಯಮಗಳಲ್ಲಿ 8000ಕ್ಕೂ ಮಿಕ್ಕಿ ಚಿತ್ರ ಕಲಾಕೃತಿಗಳನ್ನು ಪ್ರದರ್ಶಿಸಿದರು. ಹಲವರು ಕುಂಭಕಲೆ, ಗ್ಲಾಸು ಪೈಂಟಿಂಗ್ಸ್, ಫೈಬರ್‌ನಿಂದ ರಚಿಸಿದ ಶಿಲ್ಪ ಹಾಗೂ ಉಬ್ಬು ಕಲಾಕೃತಿಗಳು ಕಲ್ಲಿನ ಶಿಲ್ಪಕಲಾ ಕೃತಿಗಳನ್ನು ಜೋಡಿಸಿದ್ದರು. ಹೆಸರಾಂತ ಚಿತ್ರಕಲಾಗುರುವರ್ಯ ದಿ ಬಿ.ಜಿ. ಮೊಹಮ್ಮದ್ ಅವರ ಮಗ ಸಮೀರ್‌ಆಲಿಯವರು ಅಡ್ಡಕ್ಕೆ ಕೊಯ್ದ ಮರದ ಹಲಗೆಗಳ ಮೇಲೆಯೇ ತನ್ನೆಲ್ಲಾ ಕಲಾ ಚಾಕಚಕ್ಯತೆ ಮೆರೆದರು. ಪ್ರಸಾದ್ ಕಲಾಶಾಲೆ, ಮಹಾಲಸಾ ಕಲಾಶಾಲೆ, ದೃಶ್ಯಕಲಾಶಾಲೆ ಉಡುಪಿ, ಸಾಧನಾ ಸಂಗಮ ಟ್ರಸ್ಟ್ ಕಾರ್ಕಳ, ಚಿತ್ತಾರ ಆರ್ಟ್ ಎಜುಕೇಶನ್ ಕಾರ್ಕಳ, ರವಿವರ್ಮ ಕಲಾಶಾಲೆ ಮೈಸೂರು, ಆರ್ಟಿಸ್ಟ್ಸ್ ಕಂಬೈನ್, ಕಲಾನಿಕೇತನ, ಮೈಸೂರು, ಕೆ.ಸಿ.ಆರ್ಟ್ಸ್ ಉಜ್ಜೋಡಿ, ಲ್ಯಾಮಿನ್ ಫ್ರೇಮ್ಸ್‌ ಹಾಗೂ ಆರ್ಕಿಡ್ ಗ್ಯಾಲರಿಗಳು ವಿಶೇಷ ರೀತಿಯಲ್ಲಿ ಭಾಗವಹಿಸಿ ಕಲಾಸಕ್ತರನ್ನು ಸೆಳೆದವು. ಈ ಸಲದ  ಕಲಾಚಾವಡಿ ಪುರಸ್ಕಾರ ವಿಜೇತ ಕೆ.ಪಿ.ಶೆಣೈ ಅವರ ಚಿತ್ರಕಲಾ ಕೃತಿಗಳೂ ಪ್ರದರ್ಶಿಸಿರು ವುದು ಸಂಘಟಕರ ಯೋಚನಾ ಸ್ಪಷ್ಟತೆಯನ್ನು ಸಾರಿ ಹೇಳಿತು. 

ಚಿತ್ರಕಲಾ ಕೃತಿಗಳ ಮೌಲ್ಯ ರೂ. 30ರಿಂದ ಕೆಲವು ನೂರು ಸಾವಿರಗಳಲ್ಲದೆ ಒಂದೂವರೆ ಲಕ್ಷದಷ್ಟಿದ್ದುದು ಏರಿಕೆಯಾಗುತ್ತಿರುವ ಕಲಾ ಮೌಲ್ಯದ ಕೈಗನ್ನಡಿ. ಕೆಲವು ಲಕ್ಷದ ಚಿತ್ರಕಲಾ ಕೃತಿಗಳನ್ನು ಜನರು ಕೊಂಡು ಖುಷಿಯಿಂದ ಒಯ್ಯುತ್ತಿರುವ ದೃಶ್ಯವು ಮಂಗಳೂರಿನ ಜನತೆಯಲ್ಲಿ ಕಲಾ ಪ್ರೌಢಿಮೆ ಮೂಡುತ್ತಿರುವ ಸಂಕೇತವೂ ಹೌದು.  ಇದರಲ್ಲಿ ಸಿಂಹಪಾಲು ಫೈಬರ್ ಶಿಲ್ಪ ಕಲಾ ಕೃತಿಗಳು ಹಾಗೂ ಉಬ್ಬು ಚಿತ್ರಗಳದ್ದು ಎನ್ನುವಾಗ ನೋಡುಗನ, ವಿಮರ್ಶಕನ ದೃಷ್ಟಿಯ ಅರಿವು ಆಗುವುದು. ಚಿತ್ರಕಲಾ ಚಾವಡಿಯ ಅಧ್ಯಕ್ಷರಾದ ವಿಷ್ಣುದಾಸ್ ಶೇವ್‌ಗೂರ್‌ ಅವರು ತನ್ನ ಚಿತ್ರಕಲಾ ಕೃತಿಗಳನ್ನು ಪ್ರದರ್ಶಿಸುವುದರೊಂದಿಗೆ, ಮಾರಿಹೋದ ಚಿತ್ರಕಲಾಕೃತಿಗಳ ಸಂಪೂರ್ಣ ಬೆಲೆಯನ್ನು ಅರ್ಬುದ ರೋಗಿಗಳ ಚಿಕಿತ್ಸೆಗೆ ಸಮರ್ಪಿಸಲಿರುವ ಫಲಕವನ್ನು ಲಗತ್ತಿಸಿದ್ದರು. ಅದರಲ್ಲಿ ಅವರು ಯಶಸ್ವಿಯೂ ಆದುದು. 

ಕಲಾಸಕ್ತರ ಹೃದಯ ವೈಶಾಲ್ಯದ ದ್ಯೋತಕವೂ ಹೌದು. ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಸಂತೊಷ ಅಂದ್ರಾದೆಯವರ ಛಾಪುಳ್ಳ ಒಂದೆಡೆ ನೈಜತೆಯೊಂದಿಗೆ ಅಮೂರ್ತತೆಯನ್ನು ಮೈಗೂಡಿಸಿಕೊಂಡು, ಮಧುಬನಿ ಶೈಲಿಯನ್ನು ಅಳವಡಿಸಿಕೊಂಡು ಮೈದಳೆದ ಕಲಾಕೃತಿಗಳು ಜನಾಕರ್ಷಣೆ ಯೊಂದಿಗೆ ಅತ್ಯಂತ ಬೆಲೆಯುಳ್ಳದ್ದೆಂದು ಸಾರುತ್ತಿತ್ತು. 

ಓತಪ್ರೋತವಾಗಿ ಜನಸಾಗರವೇ ಕಲಾಮೇಳಕ್ಕೆ ಹರಿದು ಬಂದುದು ಜನಪ್ರಿಯ ಗೊಳ್ಳುತ್ತಿರುವ ಕಲಾದಿಗಂತದ ಕುರುಹೇ ಸರಿ. ಅದರಲ್ಲೂ ಎಳೆಮನಸ್ಸುಗಳೊಂದಿಗೆ ವೀಕ್ಷಿಸಿ, ಅವರಲ್ಲೂ ಕಲೆಯ ಬೀಜ ಬಿತ್ತುವಂತಾದುದು, ಐಟಿ ಬಿಟಿ ಯುಗದಲ್ಲೂ ರಕ್ಷಕರ ಮನಸ್ಸು ಮರಳಿ ಕಲೆಯತ್ತ ವಾಲುತ್ತಿರುವ, ಹೆಚ್ಚು ಯುವ ಜನಾಂಗ ಕಲೆಯನ್ನೇ ವೃತ್ತಿಯಾಗಿ ಆರಿಸಿಕೊಳ್ಳುವಂತಾಗುವ ಸಂದೇಶವನ್ನು ಸಾರುವಂತಿತ್ತು.

ಇದು ಕೆಲವು ರಕ್ಷಕರನ್ನು ಕರೆದು ಮಾತನಾಡಿಸಿ ಅವರ ಅಭಿಪ್ರಾಯ ಸಂಗ್ರಹಿಸಿದಾಗ ಸೃಷ್ಟವಾಯಿತು. ಎಳೆಗೂಸುಗಳನ್ನು ಹೊತ್ತುಕೊಂಡೇ ಪ್ರದರ್ಶನ ವೀಕ್ಷಿಸಿದ ತಾಯಂದಿರು, ಭಾರವನ್ನು ತಾಳಿಕೊಂಡೇ ಇತ್ತ ಸರ್ವತ್ರ ನೋಡುತ್ತಲೇ ಬೇಸರಿಸದೆ ನೆಮ್ಮದಿಯಿಂದ ಏನೋ ಸಾಧಿಸಿದ ಭಾವನೆಯಿಂದ ಹಿಂತಿರುಗುತ್ತಿದ್ದುದು ನಮಗೆ ಸಾರ್ಥಕ್ಯದ ಭಾವವೂ ಹೌದು. 

ಈ ಸಲದ ಕಲಾಮೇಳ ಹಿಂದೆಂದಿಗಿಂತಲೂ ಹೆಚ್ಚು ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಮೂಡಿಬಂದಿದೆ ಎಂಬುದು ಭಾಗವಹಿಸಿದ ಕಲಾವಿದರನೇಕರ ನೇರ ನುಡಿ. ಕೆಲವು ಸ್ಟಾಲ್‌ಗಳಿಗೆ ಮೇಲ್ಛಾವಣಿ ಇಲ್ಲದೆ ಸೂರ್ಯನ ಕಡುಬಿಸಿಲಿಗೆ ನೋಡುಗ ಹಾಗೂ ಕಲಾವಿದ ಕಷ್ಟಪಡುವಂತಾದುದು, ಮೇಳದ ನಕಾರಾತ್ಮಕ ಅಂಶವಾದರೂ, ಮುಂಬರುವ ಮೇಳಗಳಲ್ಲಿ ಇನ್ನಷ್ಟು ವ್ಯವಸ್ಥಿತವಾಗಿ ಸಜ್ಜುಗೊಳಿಸುವರೇ ಅನುವಾಗುವುದರಲ್ಲಿ ನಿಸ್ಸಂಶಯ.

‘ಯಾಕೆ ಈ ಮೇಳದಲ್ಲಿ ಭಾಗವಹಿಸಿದ್ದೀರಿ?’ ಎಂದು ಬೆಂಗಳೂರಿನ ಕಲಾವಿದ ಜಯರಾಮ್ ಭಟ್ ಗಿಲಿಯಾಲ ಅವರನ್ನು ಪ್ರಶ್ನಿಸಿದಾಗ, ಅವರು ಕೊಟ್ಟ ಉತ್ತರ ‘ಒಂದೇ ಸೂರಿನಡಿ ಒಮ್ಮೆಲೇ ಹಲವು ಕಲಾವಿದರನ್ನು ಕಾಣುವ, ಒಡನಾಟ ಬೆಳೆಸುವ, ಕೊಡುಕೊಳ್ಳುವ ನೆಲೆಯಲ್ಲಿ ಅರಿಯುವ ಸುಸಂದರ್ಭವನ್ನು ಕಳಕೊಳ್ಳಬಾರದು’ ಎಂಬುದನ್ನು ಸ್ಪಷ್ಟಪಡಿಸಿದರು.

ಈ ಮೇಳದ ಗುಣಾತ್ಮಕ ಅಂಶವೆಂದರೆ ಶಾಲಾ ಮಕ್ಕಳಲ್ಲಿ ಕಲಾಭಿಜ್ಞತೆ ಮೂಡುವಂತೆ ಹಮ್ಮಿಕೊಳ್ಳಲಾದ  ರೇಖಾ ಚಳಕ  ಹಾಗೂ  ವರ್ಣಸೇತು ಕಾರ್ಯಕ್ರಮಗಳು. ಮೊದಲಿ ದ್ದನ್ನು ಮಂಗಳೂರು ವಿಶ್ವವಿದ್ಯಾಲಯದ ಎನ್.ಜಿ.ಪಾವಂಜೆ ಪೀಠದ ಸಹಯೋಗ
ದೊಂದಿಗೆ, ಸಂಪನ್ಮೂಲ ವ್ಯಕ್ತಿಯಾಗಿ ಚಾವಡಿಯ ಸದಸ್ಯರೂ ಆದ ಜಾನ್ ಚಂದ್ರನ್ ಅವರು  ವ್ಯಂಗ್ಯಚಿತ್ರ  ರಚಿಸುವು
ದೆಷ್ಟು ಬಹು ಸಲೀಲು ಎಂಬುದನ್ನು ತೋರಿಸಿ ಕೊಟ್ಟು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳೂ ಅದನ್ನು ಹಾಳೆ ಮೇಲೆ ತಮ್ಮ ರೀತಿಯಲ್ಲಿ ಪಡಿಮೂಡಿಸಿ ಯಶಸ್ವಿಯಾದರು. ಇನ್ನೊಬ್ಬ ಸದಸ್ಯ ಜೀವನ್ ಎಸ್., ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸುಲಲಿತ ಗೆರೆಗಳ ಸಹಾಯದಿಂದ ಚಿತ್ರರಚನಾ ಕೌಶಲ ತೋರಿಸಿ, ಅವರೆಲ್ಲರೂ ತಮ್ಮ ಇಷ್ಟದಂತೆ ಚಿತ್ರ ರಚಿಸಿ ತೋರಿಸಲು ಅನುವು ಮಾಡಿದರು.

300 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಪ್ರಮಾಣ ಪತ್ರ ದೊಂದಿಗೆ ಹಿಂತಿರುಗುತ್ತಿದ್ದ ದೃಶ್ಯ ಧನ್ಯತೆ ಮೂಡಿಸಿತು.
ಡಿ. 15ರ ವರ್ಣಸೇತು  ಕಾರ್ಯಕ್ರಮವು ಜನ ಮಾನಸದಲ್ಲಿ ಸಣ್ಣವರಿಂದ ದೊಡ್ಡವರಿಗೂ ಹೀಗೂ ಉಂಟೇ? ಎಂಬಂತೆ ಅಚ್ಚರಿ ಮೂಡಿಸಿ, ಕಲಾಮೇಳಕ್ಕೆ ಕಳೆಯೇರಿಸಿತು. ಹಾಸನದ ಚಿತ್‌ಕಲಾ ಪ್ರತಿಷ್ಠಾನದ ಕಲಾವಿದ ದೇಸಾಯಿಯವರ ಮಾರ್ಗದರ್ಶನದಲ್ಲಿ ದಿನೇಶ್ ಹೊಳ್ಳರ ಪರಿಸರ ಪ್ರೇರಿತ  ನೇತ್ರಾವತಿ ನದಿ ತಿರುವು  ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವ ಆಣತಿಯಂತೆ ಐದಾರು ಹೆಣ್ಮಕ್ಕಳು 10/5 ಅಡಿ ದೊಡ್ಡ ಚಿತ್ರಕಲಾ ಕೃತಿಯನ್ನು 15-/20 ನಿಮಿಷದಲ್ಲಿ ನೆರೆದವರು ಬೆರಗುಗೊಳ್ಳುವಂತೆ, ಚಿತ್ರಕಲಾ ಕೃತಿ ರಚಿಸುವುದು ಅದೆಷ್ಟು ಸುಲಭ ಎನ್ನುವಂತೆ ರಚಿಸಿ ಅಚ್ಚಳಿಯದ ಪರಿಣಾಮವನ್ನುಂಟು ಮಾಡಿದರು. ಬಳಿಕ 15 ಮಕ್ಕಳು ಪ್ರತ್ಯೇಕವಾಗಿ ಪ್ರಾತ್ಯಕ್ಷಿಕೆ ನಡೆಸಿ, ತಮ್ಮ ಕೈಚಳಕ ತೋರಿಸಿ ಇನ್ನಷ್ಟು ಸಂತಸ ಮೂಡಿಸಿದರು.

ಶರತ್ ಹೊಳ್ಳ ಮತ್ತ ಜಯರಾಮ ಭಟ್ ಗಿಲಿಯಾಲ್ ಅವರು ಮಕ್ಕಳು ತಮ್ಮಲ್ಲಿಗೆ ಬಂದು ಅವರಿಗೆ ತೋಚಿದಂತೆ ಚಿತ್ರ ಬರೆ
ಯುವಂತೆ ಸಲಕರಣೆ ಒದಗಿಸಿ, ಅನುವು ಮಾಡಿರುವುದು ಮಾತ್ರವಲ್ಲದೆ ಮುಂದಕ್ಕೆ ಅವೆಲ್ಲವುಗಳನ್ನು ಉಪಯೋಗಿಸಿ, ಕೊಲಾಜ್ ಚಿತ್ರ ರಚಿಸಿ, ಭಾಗವಹಿಸಿದ ವಿದ್ಯಾರ್ಥಿಗಳನ್ನು ಕರೆಸಲಿರುವ ಪ್ರಯತ್ನ ಶ್ಲಾಘನೀಯ. ಬಹಳಷ್ಟು ಪುಟಾಣಿಗಳು ಇದರಲ್ಲಿ ತೊಡಗಿಸಿ
ಕೊಂಡಿರುವುದು ಸ್ತುತ್ಯರ್ಹ.

ಹಲವು ಕಲಾವಿದರು ತಮ್ಮ ಸ್ಟಾಲ್‌ಗಳ ಎದುರು ಜನರನ್ನು, ಮಕ್ಕಳನ್ನು ಕೂರಿಸಿ, ಭಾವಚಿತ್ರ ರಚಿಸಿ ಕಲೆಯ ಜೀವಂತಿಕೆಯನ್ನು ಮೇಳದುದ್ದಕ್ಕೂ ಮೆರೆದು ಜನರಲ್ಲಿ ಅತ್ತಿಂದಿತ್ತ ಓಡುವಂತೆ, ಲವಲವಿಕೆ ಮೂಡುವಂತೆ ಮಾಡಿ ಯಶಸ್ವಿಯಾದರು.
ಚಾವಡಿಯು ಹಮ್ಮಿಕೊಂಡ ಕಲಾಮೇಳದ ಮುಖ್ಯ ವೇದಿಕೆ ಅತ್ಯಂತ ಮನೋಜ್ಞವಾಗಿ ಸೃಜನಶೀಲವಾಗಿ ಹೃದಯಸ್ಪರ್ಶಿಯೆನಿಸಿತು. ಲಾಂಛನದ ದೋಣಿ, ಸ್ವಾಗತ ಗೋಪುರದೆಡೆ ಹಾಗೂ ಮುಖ್ಯ ವೇದಿಕೆಯ ಪರದೆ ಮೇಲೆ ಹಾಗೂ ಸ್ಮರಣಿಕೆಯಲ್ಲಿ ಅತ್ಯಂತ ಸೃಜನಶೀಲ ವಾಗಿ ಕಲಶಪ್ರಾಯವೆಂಬಂತೆ ಮೂಡಿತ್ತು.

ಭಾವನೆಗಳನ್ನು ಚೌಕಟ್ಟಿನೊಳಗೆ ಹಿಡಿದಿಟ್ಟು, ಚಂದಗಾಣಿಸಿ ಜನಮಾನಸಕ್ಕೆ ತೆರೆದಿಡುವ, ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರತಿಕ್ರಿಯಿಸುವ ಪರಿ, ವೈಖರಿ ಇಂತಹ ಮೇಳಗಳಲ್ಲಿ ಕ್ರೋಢೀಕರಿಸಲ್ಪಟ್ಟು ಜನ ಸಾಮಾನ್ಯರ ಧ್ವನಿಯಾಗುವತ್ತ ದಿಟ್ಟ ಹೆಜ್ಜೆ
ಯಾಗುತ್ತಿರುವುದು ಪ್ರಶಂಸನೀಯ. ಒಟ್ಟಿನಲ್ಲಿ ಚಿತ್ರಕಲಾ ಚಾವಡಿಯ ಎಲ್ಲಾ ಪದಾಧಿಕಾರಿಗಳ, ಕಲಾವಿದರ ಸಾಹಸ, ಪರಿಶ್ರಮ ಅನುಕರಣೀಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT