ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿತು ಪ್ರಚಾರ

Last Updated 21 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಾಮಪತ್ರ ವಾಪಸ್ ಪಡೆಯುವ ಅವಧಿ ಮುಗಿದ ಬೆನ್ನಲ್ಲೇ ಪ್ರಮುಖ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಅಖಾಡಕ್ಕೆ ಇಳಿದಿರುವುದರಿಂದ ವಿಧಾನಸಭಾ ಚುನಾವಣೆಯ ಪ್ರಚಾರ ರಂಗೇರಿದೆ. ಈ ವಿಷಯದಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ. ಅದರ ಪ್ರಮುಖ ರಾಷ್ಟ್ರೀಯ ಮುಖಂಡರು ಭಾನುವಾರ ರಾಜ್ಯದ ವಿವಿಧೆಡೆ ಮಿಂಚಿನ ಪ್ರಚಾರ ನಡೆಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಚಿಕ್ಕೋಡಿಯಲ್ಲಿ, ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ರಾಣೆಬೆನ್ನೂರು ಮತ್ತು ದಾವಣಗೆರೆಯಲ್ಲಿ, ಸುಷ್ಮಾ ಸ್ವರಾಜ್ ಬೆಂಗಳೂರಿನಲ್ಲಿ, ವೆಂಕಯ್ಯ ನಾಯ್ಡು ರಾಯಚೂರು, ಸಿಂಧನೂರು ಮತ್ತು ಗಂಗಾವತಿಯಲ್ಲಿ, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬೀದರ್, ಶಹಾಬಾದ್‌ನಲ್ಲಿ, ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ.ಸದಾನಂದಗೌಡ ಮೈಸೂರಿನಲ್ಲಿ ಭಾನುವಾರ ಮತಯಾಚಿಸಿದರು.

ರಾಜನಾಥ್‌ಸಿಂಗ್ ಅವರು ಸೋಮವಾರ ಬಸವನಬಾಗೇವಾಡಿ, ಸಾಗರ, ಹೊಸಪೇಟೆಯಲ್ಲಿ ಬಹಿರಂಗ ಸಭೆ ನಡೆಸಿದ ನಂತರ ದೆಹಲಿಗೆ ಹಿಂತಿರುಗಲಿದ್ದಾರೆ. ಬಿಜೆಪಿ ಹಿರಿಯ ನಾಯಕರು ಒಟ್ಟಿಗೆ ಪ್ರಚಾರದಲ್ಲಿ ತೊಡಗುವ ಬದಲು, ತಂಡಗಳಲ್ಲಿ ಬೇರೆ ಬೇರೆ ಕಡೆ ಪ್ರಚಾರ ನಡೆಸಲು ತೀರ್ಮಾನಿಸಿದ್ದಾರೆ. ಬಹಿರಂಗ ಪ್ರಚಾರಕ್ಕೆ 13 ದಿನ ಮಾತ್ರ ಕಾಲಾವಕಾಶ ಇರುವುದರಿಂದ ಬಹುತೇಕ ಎಲ್ಲ ಪಕ್ಷಗಳ ನಾಯಕರು ತಂಡಗಳಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಮತಯಾಚಿಸಲು ವೇಳಾಪಟ್ಟಿ ಸಿದ್ಧಪಡಿಸಿದ್ದಾರೆ.

ಅಡ್ವಾಣಿಗೆ ಆಘಾತ: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸಿದೆ. ಕೇಂದ್ರದಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದರು. ಆದರೆ, ಈ ಯಾವ ಅವಧಿಯಲ್ಲಿ ಎಂದೂ ಕೇಳಿರದ ಭ್ರಷ್ಟಾಚಾರದ ಆರೋಪ ದಕ್ಷಿಣ ಭಾರತದಲ್ಲಿ ಅದೂ ಕರ್ನಾಟಕದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಕೇಳಿ ಬಂತು. ಇದು ತಮಗೆ ತೀವ್ರ ಆಘಾತ ಉಂಟುಮಾಡಿತು ಎಂದು ಅಡ್ವಾಣಿ ರಾಣೆಬೆನ್ನೂರಲ್ಲಿ ಪರೋಕ್ಷವಾಗಿ ಯಡಿಯೂರಪ್ಪ ಆಡಳಿತವನ್ನು ಟೀಕಿಸಿದರು.

ಅಬ್ಬರ:  ವಿಧಾನಸಭೆಯ 224 ಕ್ಷೇತ್ರಗಳಲ್ಲಿ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ದೊರೆಯುತ್ತಿದ್ದಂತೆಯೇ ಕಾಂಗ್ರೆಸ್, ಜೆಡಿಎಸ್, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್‌ನ ರಾಜ್ಯ ನಾಯಕರು ಕೂಡ ಪ್ರಚಾರದ ಅಬ್ಬರ ಹೆಚ್ಚಿಸಿದ್ದಾರೆ.

ಪ್ರಚಾರದಲ್ಲಿ ಭಾಗವಹಿಸುತ್ತಾರೋ, ಇಲ್ಲವೋ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ, ಭಾನುವಾರ ಬೆಂಗಳೂರಿನ ವಿಜಯನಗರ, ಗೋವಿಂದರಾಜನಗರ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.

ಚಿತ್ರನಟಿ ರಮ್ಯಾ ಅವರು ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ರೋಡ್ ಷೋ ನಡೆಸಿದರು.

ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದು, ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರ್ಕಾರ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟಿದೆ ಎಂಬ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದಾರೆ.

ಕಾಂಗ್ರೆಸ್‌ನ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ, ಅಂಬರೀಷ್ ಮಂಡ್ಯದಲ್ಲಿ, ಜೆಡಿಎಸ್‌ನ ಎಚ್.ಡಿ.ದೇವೇಗೌಡ ಹಾಸನ ಜಿಲ್ಲೆಯಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

ಅಭಿವೃದ್ಧಿ...
ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತನ್ನಿರಿ. ಕರ್ನಾಟಕವನ್ನು ಗುಜರಾತ್, ಮಧ್ಯಪ್ರದೇಶ, ಉತ್ತರಾಖಂಡ ರಾಜ್ಯಗಳಂತೆ ಅಭಿವೃದ್ಧಿ ಮಾಡಲಿದ್ದೇವೆ'.
-ರಾಣೆಬೆನ್ನೂರಿನಲ್ಲಿ ಎಲ್.ಕೆ. ಅಡ್ವಾಣಿ

ಕ್ಷಮೆಯಿರಲಿ

 ರಾ

ಜ್ಯದಲ್ಲಿ ಬಿಜೆಪಿ ಐದು ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದ್ದಕ್ಕೆ ಜನರ ಕ್ಷಮೆ ಕೋರುತ್ತೇನೆ. ರಾಜಕೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಇಂತಹ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಯಿತು'.
-ಚಿಕ್ಕೋಡಿಯಲ್ಲಿ ರಾಜನಾಥ ಸಿಂಗ್

ಎಲ್ಲೆಲ್ಲಿ ಯಾರ್ಯಾರ ಪ್ರಚಾರ

*ಅಡ್ವಾಣಿ- ರಾಣೆಬೆನ್ನೂರು, ದಾವಣಗೆರೆ
*ರಾಜನಾಥಸಿಂಗ್- ಚಿಕ್ಕೋಡಿ
*ಸುಷ್ಮಾ ಸ್ವರಾಜ್- ಬೆಂಗಳೂರು ಮಲ್ಲೇಶ್ವರ
*ಎಸ್.ಎಂ.ಕೃಷ್ಣ- ಬೆಂಗಳೂರು ವಿಜಯನಗರ
*ಡಾ.ಜಿ.ಪರಮೇಶ್ವರ- ದಕ್ಷಿಣ ಕನ್ನಡ
*ಸಿದ್ದರಾಮಯ್ಯ- ಹುಬ್ಬಳ್ಳಿ
*ಎಚ್.ಡಿ.ದೇವೇಗೌಡ- ಹಾಸನ
*ಕುಮಾರಸ್ವಾಮಿ- ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT