ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳದೆ ನಿಮಗೆ ಕಾಡಿನ ಕೂಸುಗಳ ಗೋಳು?

Last Updated 26 ಡಿಸೆಂಬರ್ 2012, 6:26 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕುಡಿಯಲು ಗದ್ದೆ ನೀರು, ಬೆಳಕಿಗೆ ಬೆಂಕಿಕೊಳ್ಳಿ, ನಡೆದಾಡಲು ಕಾಡಿನೊಳಗಿನ ಕಾಲು ದಾರಿ, ಸಂಜೆಯಾದ ಕೂಡಲೇ ಆನೆಗಳ ಕಾಟ, ವಾಸಕ್ಕೆ ಪ್ಲಾಷ್ಟಿಕ್ ಹೊದಿಕೆಯ ಸಣ್ಣ ಗುಡಿಸಲು, ರಕ್ತಹೀನತೆಯಿಂದ ನರಳುತ್ತಿರುವ ಮಹಿಳೆಯರು, ಪೌಷ್ಟಿಕ ಆಹಾರದ ಕೊರತೆಯಿಂದ ಬಳುಲುತ್ತಿರುವ ಮಕ್ಕಳು...

ಸಮೀಪದ ದೊಡ್ಡರೇಷ್ಮೆಹಡ್ಲು ಗಿರಿಜನ ಹಾಡಿಯನ್ನು ಪ್ರವೇಶಿಸುತ್ತಿದ್ದಂತೆ ಇಂಥದೊಂದು ನೈಜ ಚಿತ್ರಣ ನಿಮ್ಮ ಕಣ್ಣಿಗೆ ಎದುರಾಗುತ್ತದೆ.

`ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆಂತಯ್ಯ...' ಎಂಬ ಅಕ್ಕಮಹಾದೇವಿ ವಚನ ಈ ಗಿರಿಜನ ಹಾಡಿಯನ್ನು ನೋಡಿದ ಕೂಡಲೇ ನೆನಪಾಗುತ್ತದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಈ ಹಾಡಿಯಲ್ಲಿ ಕಾಡಾನೆಗಳು ಹಿಂಡುಹಿಂಡಾಗಿ ಹಗಲಿನಲ್ಲಿಯೇ ಸಂಚರಿಸುತ್ತವೆ. ಆನೆಗಳ ಕಾಟಕ್ಕೆ ಇಲ್ಲಿನ ಜನ ಗದ್ದೆಯಲ್ಲಿ ಕೃಷಿ ಮಾಡುವುದನ್ನೆ ಬಿಟ್ಟಿದ್ದಾರೆ. ಕೂಲಿಯನ್ನೇ ನಂಬಿ ಬದುಕು  ನೂಕುವ ಪರಿಸ್ಥಿತಿ ಬಂದಿದೆ. ಇದೆಲ್ಲವನ್ನು ನೋಡಿದರೆ ಇಲ್ಲುನ ಜನ ನಾಗರಿಕತೆ ಸಮಾಜದಿಂದ ಇನ್ನೂ ನೂರು ವರ್ಷ ಹಿಂದಕ್ಕೆ ಹೋಗಿದ್ದಾರೆ ಅನ್ನಿಸದೇ ಇರದು.

ದೊಡ್ಡರೇಷ್ಮೆಹಡ್ಲು ಗೋಣಿಕೊಪ್ಪಲು- ತಿತಿಮತಿ ಮುಖ್ಯ ರಸ್ತೆಯಿಂದ ಕೇವಲ 5 ಕಿ.ಮೀ. ದೂರುದಲಿದೆ. ಇಲ್ಲಿ ಬೆಟ್ಟಕುರುಬರು, ಜೇನುಕುರುಬರು, ಯರವರು ಸೇರಿದಂತೆ ಸುಮಾರು 175ಕ್ಕೂ ಹೆಚ್ಚು ಕುಟುಂಬಗಳಿವೆ. ಹತ್ತನೇ ತರಗತಿ ಮತ್ತು ಪಿಂಯುಸಿ ವರೆಗೆ ವ್ಯಾಸಂಗ ಮಾಡಿದ ಹತ್ತಾರು ಯುವಕ ಯುವತಿಯರೂ ಇದ್ದಾರೆ. ಅವರಲ್ಲಿ ಕೆಲವರು ಖಾಸಗಿ ವಾಹನಗಳಲ್ಲಿ ಚಾಲಕರಾಗಿ ಕೆಲಸ ಮಾಡಿದರೆ ಮತ್ತೆ ಕೆಲವರು ಗೋಣಿಕೊಪ್ಪಲಿನ ಅಂಗಡಿ ಮುಂಗಟ್ಟುಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕತ್ತಲಿಗೆ ಬೆದರಿದ ಸೋಲಾರ್!
ಜಿಲ್ಲಾ ಐಟಿಡಿಪಿಯಿಂದ ಹಾಡಿಗಳಿಗೆ ಸೋಲಾರ್ ದೀಪ ಒದಗಿಸಿಕೊಡಲಾಗಿದೆ. ಆದರೆ, ಅವುಗಳೆಲ್ಲ ಕೇವಲ ಒಂದೇ ತಿಂಗಳಿಗೆ ತುಕ್ಕು ಹಿಡಿದು ಕತ್ತಲಿಗೆ ಬೆದರಿ ನಿಂತಿವೆ. ಕುಡಿಯುವ ನೀರಿನ ತೆರೆದ ಬಾವಿ ಒಣಗಿವೆ.

ಇಲ್ಲಿನ ಜನರು ಹಳ್ಳದಾಟಿ ಪಕ್ಕದ ಹಾಡಿಗಳನ್ನು ಸಂಪರ್ಕಿಸಲು ಒಂದೇ ಒಂದು ಕಚ್ಚಾ ರಸ್ತೆ ಇದೆ. ಇದಕ್ಕೆ ನಿರ್ಮಿಸಿರುವ ಕಿರು ಸೇತುವೆ ಕಳಪೆ ಕಾಮಗಾರಿಯಿಂರಾಗಿ ಕುಸಿದಿದೆ. ಇನ್ನೂ ಅಚ್ಚರಿ ಎಂದರೆ ಸೇತುವೆಯ ಹಿಂದೆ ಮುಂದೆ ರಸ್ತೆಯೇ ಇಲ್ಲ. ರೋಗಿಗಳು, ಗರ್ಭಿಣಿಯರು, ಶಾಲೆಗೆ ಹೋಗುವ ಪುಟಾಣಿ ಮಕ್ಕಳು ಇದರ ಮೇಲೆಯೇ ಸರ್ಕಸ್ ಮಾಡಿಕೊಂಡು ಹೋಗಬೇಕು.

ಮಳೆಗಾಲದಲ್ಲಂತೂ ಈ ಹಾಡಿಯ ಜನರ ಬದುಕು ಅಕ್ಷರಶಃ ನರಕ. ಹಗ್ಗದ ಮೇಲೆ ನಡೆದಂತೆ ಗದ್ದೆ ಬದುಗಳ ಕೆಸರಿನಲ್ಲಿ  ನಡೆದಾಡುವುದು ಅನಿವಾರ್ಯ. ತೀರ ಕಾಯಿಲೆಗೆ ತುತ್ತಾದ ರೋಗಿಗಳನ್ನು ಒಂದು ಕಿಲೋ ಮೀಟರ್ ದೂರ ಹೆಗಲ ಮೇಲೆ ಹೊತ್ತು ತರಬೇಕಾಗಿದೆ.

ಕಾಡಿನೊಳಗಿನ ಹಾಡಿಯ ಬದುಕು ನೈಜ ವನವಾಸದ ಬದುಕಾಗಿದೆ. ಗಿರಿಜನರ ಅಭಿವೃದ್ಧಿ ಎಂಬುದು ಕೇವಲ ಕಾಗದ ಮೇಲೆ ಉಳಿದಿದೆ. ಈಗಲಾದರೂ ಈ ಭಾಗದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಈ ಕಾಡಿನ ಕೂಸುಗಳ ಗೋಳು ಕಾಣುಸುವುದೇ?

ಹಾಡಿಗರ ಹಾಡು- ಪಾಡು

ಇನ್ನೂ ಹಕ್ಕುಪತ್ರ ನೀಡಿಲ್ಲ
ಹಾಡಿಯ ಶೇ.75ರಷ್ಟು ಜನರಿಗೆ ಜಾಗದ ಹಕ್ಕುಪತ್ರ ಇಲ್ಲ. ಇದರಿಂದ ಗ್ರಾಮ ಪಂಚಾಯಿತಿಯವರು ಮನೆ ಕಟ್ಟಲು ಜಾಗದ ಹಕ್ಕುಪತ್ರ ಕೇಳುತ್ತಾರೆ. ಆದರೆ, ನಾವೆಲ್ಲಿಂದ ಹಕ್ಕುಪತ್ರ ತಂದು ಕೊಡೋದು. ಹೀಗಾಗಿ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲೇ ನಮಗೆ ಆಸರೆ.
-ಬೆಟ್ಟಕುರುಬರ ಕುಮಾರ್

ಬಿಪಿಎಲ್ ಕಾರ್ಡ್ ನೀಡಿಲ್ಲ
ಕಳೆದ ಎರಡು ವರ್ಷದಿಂದ ಬಿಪಿಎಲ್ ಕಾರ್ಡ್ ಇಲ್ಲ. ಸರಿಪಡಿಸಿ ಹೊಸ ಕಾರ್ಡ್ ಕೊಡುತ್ತೇವೆ ಎಂದು ಹಳೆಯ ಕಾಡ್ ಕೇಳಿಕೊಂಡು ಎರಡು ವರ್ಷ ಆಗಿದೆ. ಆದರೆ ಈವರೆಗೂ ಕಾರ್ಡ್  ಕೊಟ್ಟಿಲ್ಲ. ಆಹಾರ ಪದಾರ್ಥ ಪಡೆಯುವುದಕ್ಕೂ ತೊಂದರೆಯಾಗಿದೆ. ಆನೆ ಕಾಟಕ್ಕೆ ಗದ್ದೆ ಪಾಳು ಬಿದ್ದಿವೆ.
-ಚಾತ

ಬತ್ತದ ಬೆಳೆಗೆ ನೀರಿಲ್ಲ

ನಮ್ಮ ಪಾಲಿಗೆ ಇರುವ ಅಲ್ಪಸ್ವಲ್ಪ  ಭೂಮಿಯಲ್ಲಿ ಬತ್ತ ಬೆಳೆಯು ತ್ತಿದ್ದೆವು. ಇದೀಗ ಹೊಸಕೆರೆಯಲ್ಲಿ ನೀರು ಇಲ್ಲದಿರವುದರಿಂದ ಭತ್ತ ಬೆಳೆ ಯುವುದನ್ನು ಬಿಡಲಾಗಿದೆ.
-ರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT