ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೆದ ಬಾವಿ 210: 32 ಮಾತ್ರ ಸಫಲ !

Last Updated 27 ಜನವರಿ 2012, 10:25 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ನೀರಿನ ಅಭಾವ ನಿವಾರಣೆ ನಿಟ್ಟಿನಲ್ಲಿ ಈಗಾಗಲೇ 210 ಕೊಳವೆಬಾವಿ ಕೊರೆಯಲಾಗಿದ್ದು, ಕೇವಲ 32 ಮಾತ್ರ ಸಫಲವಾಗಿದೆ. ವಾರಕ್ಕೆ ಒಮ್ಮೆಯಾದರೂ ಎಲ್ಲ ವಾರ್ಡ್‌ಗಳಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ವರ್ತೂರು ಪ್ರಕಾಶ್ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ 63ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಡನೆ ಮಾತನಾಡಿದರು.

ಕೆಟ್ಟಿರುವ 50 ಕೊಳವೆಬಾವಿ ರಿಪೇರಿ ಮಾಡಿಸಬೇಕಾಗಿದೆ. ಆದರೆ ಈ ಮೊದಲೇ ರಿಪೇರಿ ಮಾಡಿದವರಿಗೆ ದುಡ್ಡು ಕೊಟ್ಟಿಲ್ಲ. ಒಟ್ಟಾರೆ 100 ಕೊಳವೆಬಾವಿಗಳಿಗಾಗಿ 70 ಲಕ್ಷ ರೂಪಾಯಿ ಅಗತ್ಯವಿದೆ. ಅದನ್ನು ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿಯಲ್ಲಿ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವೆ ಎಂದು ತಿಳಿಸಿದರು.

ಎಲ್ಲ ವಾರ್ಡ್‌ಗಳಲ್ಲೂ ನೀರಿನ ಸಮಸ್ಯೆ ನಿವಾರಿಸಲು ಇನ್ನೂ 50 ಕೊಳವೆಬಾವಿ ಕೊರೆಯಲು ಸಿದ್ಧ. ನಗರಸಭೆ ಆಯುಕ್ತರು, ಸದಸ್ಯರು ಮತ್ತು ಸ್ಥಳೀಯ ಶಾಸಕ ಸರಿಯಾಗಿ ಕೆಲಸ ಮಾಡಿದರೆ ಸಮಸ್ಯೆಗಳೇ ಇರುವುದಿಲ್ಲ ಎಂದು ನುಡಿದರು.

ನನ್ನನ್ನು ನಂಬಿ ಜನ ನಗರಸಭೆ ಸದಸ್ಯರಿಗೆ ಮತ ಕೊಟ್ಟಿದ್ದಾರೆ. ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಲು ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನೆ ಪೂರ್ಣ ಹೊಣೆಗಾರ. ಈ ನಿಟ್ಟಿನಲ್ಲಿ ಯಾರನ್ನೂ ದೂಷಿಸುವುದಿಲ್ಲ ಎಂದರು.
ಕೆರೆಗಳ ಒತ್ತುವರಿ ತೆರವು ಮಾಡಲು ಸರ್ವೆ ಕಾರ್ಯ ನಡೆಯಬೇಕಾಗಿದೆ. ಆದರೆ ಸರ್ವೆಯರ್‌ಗಳು ದೊರಕದ ಹಿನ್ನೆಲೆಯಲ್ಲಿ ಕೆಲಸ ಶುರುವಾಗಿಲ್ಲ. ಅದಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು.

ರಸ್ತೆ: ನಗರದಲ್ಲಿರುವ ಎಲ್ಲ ರಸ್ತೆಗಳನ್ನೂ ಏಪ್ರಿಲ್ ಅಂತ್ಯದ ಒಳಗೆ ಅಭಿವೃದ್ಧಿಗೊಳಿಸಲಾಗುವುದು. ಡಾಂಬರೀಕರಣ ಮತ್ತು ಸಿಮೆಂಟ್ ರಸ್ತೆಗಳ ನಿರ್ಮಾಣ  ಮಾಡಲಾಗುವುದು. ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ನಿಧಿಯಿಂದ 20 ಕೋಟಿ ರೂಪಾಯಿ ಬಿಡುಗಡೆಯಾಗಿದೆ.  ಟೇಕಲ್ ಕ್ರಾಸ್ ಬಳಿ ರಸ್ತೆಯಲ್ಲಿರುವ ಚರಂಡಿಗೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದು ಪೂರ್ಣಗೊಂಡ ಕೂಡಲೇ ಡೂಂಲೈಟ್ ವೃತ್ತದವರೆಗೂ ಡಾಂಬರೀಕರಣ ಕಾಮಗಾರಿ ನಡೆಯಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೊಡ್ಡಕೆರೆ ವ್ಯಾಪ್ತಿ ಖಚಿತ-ಡಿಸಿ: ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ, ಬಂಗಾರಪೇಟೆ ವ್ಯಾಪ್ತಿಯ ದೊಡ್ಡಕೆರೆಯ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಕೆರೆಯ ವ್ಯಾಪ್ತಿಯನ್ನು ಸರ್ವೆ ಮಾಡಲಾಗಿದ್ದು, ಬೇಲಿ ಹಾಕಲಾಗಿದೆ. ವಿಧಾನ ಪರಿಷತ್ ಸದಸ್ಯೆ ಪ್ರೊ.ಎಸ್.ಆರ್.ಲೀಲಾ ಅವರೂ ಕೆರೆ ಒತ್ತುವರಿ ತೆರವು ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ತ್ಯಾಗರಾಜನ್ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಉಪಸ್ಥಿತರಿದ್ದರು.

ಹೋರಾಟದಿಂದ ನೀರು ಸಿಗಲ್ಲ: ವರ್ತೂರು
`ಶಾಶ್ವತ ನೀರಾವರಿ ಸಮಸ್ಯೆ ನಿವಾರಣೆಗೆ ಹೋರಾಟ ನಡೆಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಸಚಿವರು ಗುರುವಾರ ಹೇಳಿದರು.

 ಶಾಸಕರಾಗಿ, ಸಚಿವರಾಗಿ ಅಧಿಕಾರ ನಡೆಸುತ್ತಿದ್ದಾಗ ಸುಮ್ಮನಿದ್ದು, ಮತ್ತೆ ಚುನಾವಣೆಯಲ್ಲಿ ಸೋತ ಬಳಿಕ ನೀರು ಬೇಕು ಎಂದು ಹೋರಾಟ ನಡೆಸುವುದು ನಾಚಿಕೆಗೇಡಿನ ಸಂಗತಿ. ಜಿಲ್ಲೆಯ ನೀರಿನ ಸಮಸ್ಯೆಯನ್ನು ಪರಿಹರಿಸಬೇಕಾದರೆ ಅದು ನನ್ನಿಂದ ಮಾತ್ರ ಸಾಧ್ಯ~ ಎಂದರು.

`ಉಸ್ತುವಾರಿ ಸಚಿವನಾಗಿ ನಾನು ನೀರಿನ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳೊಡನೆ ಚರ್ಚಿಸಿರುವೆ. ಅವರು ಅನುದಾನ ಬಿಡುಗಡೆ ಮಾಡಿದ ಮೇಲೂ ಹಣ ವಿನಿಯೋಗವಾಗಬೇಕಾದರೆ ಆರೇಳು ತಿಂಗಳು ಬೇಕು. ಈ ಸಂದರ್ಭದಲ್ಲಿ ನಾನೂ ಹೋರಾಟ ಮಾಡಿದರೆ ಯಾವ ಪ್ರಯೋಜನವೂ ಆಗುವುದಿಲ್ಲ~ ಎಂದು ಹೇಳಿದರು.

ಪರಮಶಿವಯ್ಯ ವರದಿ ಜಾರಿ ಸಂಬಂಧ ಮುಖ್ಯಮಂತ್ರಿಗಳು ಶೀಘ್ರದಲ್ಲೆ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳು ಮತ್ತು ಹೋರಾಟಗಾರ ಮುಖಂಡರ ಸಭೆ ನಡೆಸಲಿದ್ದಾರೆ. ಅಲ್ಲಿ ಆಗುವ ನಿರ್ಧಾರವೇ ಅಂತಿಮ. ಹತ್ತು ಜನರ ನಿರ್ಧಾರವೇ ನನ್ನ ನಿರ್ಧಾರ~ ಎಂದು ಸ್ಪಷ್ಟಪಡಿಸಿದರು.

10 ದಿನದಲ್ಲಿ ಯರಗೋಳು ಕಾಮಗಾರಿ ಶುರು
ಬಂಗಾರಪೇಟೆ, ಮಾಲೂರು ಮತ್ತು ಕೋಲಾರ ಮತ್ತು ಮಾರ್ಗಮಧ್ಯದ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯರಗೋಳು ಯೋಜನೆಯ ಅಣೆಕಟ್ಟು ನಿರ್ಮಾಣಕ್ಕೆ ಇದ್ದ ಅಡೆ ತಡೆ ನಿರ್ಮೂಲನೆಯಾಗಿದೆ. ಒಂದು ವಾರ ಅಥವಾ 10 ದಿನದೊಳಗೆ ಕಾಮಗಾರಿ ಶುರುವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ತಿಳಿಸಿದರು.

ಯೋಜನೆ ಆರಂಭಿಸಲು ಅರಣ್ಯ ಇಲಾಖೆಯಿಂದ ತೊಂದರೆಯಾಯಿತು. ಈಗ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯೊಡನೆ ಚರ್ಚಿಸಲಾಗಿದೆ. ಸಮಸ್ಯೆ ಬಗೆಹರಿದಿದೆ ಎಂದರು.

ಜವಳಿ ಪಾರ್ಕ್‌ಗೆ ಹೂಡಿಕೆದಾರರಿಲ್ಲ
`ಜವಳಿ ಇಲಾಖೆಯು ನಿರ್ಮಿಸಲು ಉದ್ದೇಶಿಸಿರುವ ಜವಳಿ ಪಾರ್ಕ್‌ಗೆ ಬಂಡವಾಳ ಹೂಡುವವರು ಇನ್ನೂ ಸಿಕ್ಕಿಲ್ಲ.  ಮಾರ್ಚಿಯಲ್ಲಿ ವಿಶ್ವಮಟ್ಟದ ಜವಳಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುವುದು. ಅದಕ್ಕೆ ಬಂಡವಾಳಿಗರನ್ನು ಸ್ವಾಗತಿಸುವ ಸಲುವಾಗಿ ವಿದೇಶ ಪ್ರವಾಸವನ್ನೂ ಹಮ್ಮಿಕೊಳ್ಳಲಾಗಿದೆ~ ಎಂದು ತಿಳಿಸಿದರು.

`ಬಂಡವಾಳಿಗರನ್ನು ಆಕರ್ಷಿಸುವ ಜೊತೆಗೆ ಪಾರ್ಕ್‌ಗಳ ಸ್ಥಾಪನೆಗೆ ಅಗತ್ಯವಿರುವ ಮೂಲಸೌಕರ್ಯವನ್ನು ಸಿದ್ಧಪಡಿಸುವ ಕೆಲಸವೂ ನಡೆಯಬೇಕಾಗಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT