ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್ ಗೆ ಬಗ್ಗಿದ ಗೂಗಲ್, ಫೇಸ್‌ಬುಕ್‌, ಆಕ್ಷೇಪಾರ್ಹ ಮಾಹಿತಿಗೆ ಕತ್ತರಿ

Last Updated 6 ಫೆಬ್ರುವರಿ 2012, 9:35 IST
ಅಕ್ಷರ ಗಾತ್ರ

ನವ ದೆಹಲಿ (ಪಿಟಿಐ): ಜಾಲತಾಣಗಳಲ್ಲಿರುವ ಆಕ್ಷೇಪಾರ್ಹ ಮಾಹಿತಿಗಳನ್ನು ತೆಗೆಯುವಂತೆ ನ್ಯಾಯಾಲಯವು ತನಗೆ ಹಾಗೂ ಇತರ 21 ಜಾಲತಾಣಗಳಿಗೆ ನೀಡಿದ ಆದೇಶವನ್ನು ತಾನು ಪಾಲಿಸಿರುವುದಾಗಿ ಫೇಸ್‌ಬುಕ್ ಸೋಮವಾರ ದೆಹಲಿ ನ್ಯಾಯಾಲಯಕ್ಕೆ ನೀಡಿದ ಅನುಸರಣಾ ವರದಿಯಲ್ಲಿ ತಿಳಿಸಿದೆ.

ಅರ್ಜಿದಾರರ ಆಕ್ಷೇಪಣೆಗೆ ಸ್ಪಂದಿಸಿರುವ ಗೂಗಲ್ ಸಹ ತನ್ನ ಕೆಲ ಅಂತರ್ಜಾಲ ಪುಟಗಳಲ್ಲಿರುವ ಆಕ್ಷೇಪಾರ್ಹ ಮಾಹಿತಿಗಳನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದೆ.

ಈ ಮಧ್ಯೆ ಪ್ರಕರಣದಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂಬುದಾಗಿ ನ್ಯಾಯಾಲಯಕ್ಕೆ ತಿಳಿಸಿರುವ ಫೇಸ್ ಬುಕ್, ಯಾಹೂ ಮತ್ತು ಮೈಕ್ರೋಸಾಫ್ಟ್ ಈ ವಿಷಯದಲ್ಲಿ ತಮ್ಮ ವಿರುದ್ಧ ಕ್ರಮಕ್ಕೆ ಕಾರಣವಿಲ್ಲ ಎಂದು ಹೇಳಿವೆ.

 ಬಳಕೆದಾರರು ಮಾಡುವ ಪ್ರಕಟಣೆಗಳಿಗಾಗಿ ಬ್ಲಾಗ್‌ಗಳ ಸೇವೆ ನೀಡುತ್ತಿರುವ ಕಂಪೆನಿಗಳನ್ನೂ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಬೇಕೆ ಎಂದು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರು ಅರ್ಜಿದಾರರಾದ ಮಫ್ತಿ ಏಜಾಜ್ ಅರ್ಷದ್ ಖ್ವಾಸ್ಮಿ ಅವರನ್ನು ಪ್ರಶ್ನಿಸಿದರು.

ಜತೆಗೆ ಕಳೆದ ಶುಕ್ರವಾರವೇ ನ್ಯಾಯಾಲಯದ ತೀರ್ಪಿನ ಪ್ರತಿ ತಲುಪಿದ್ದರೂ ಸಮರ್ಪಕ ಉತ್ತರದೊಂದಿಗೆ ಬಂದಿಲ್ಲವೇಕೆ? ಎಂದು ಗೂಗಲ್ ಕಂಪೆನಿಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ತೀರ್ಪಿನ ಪ್ರತಿ ಶುಕ್ರವಾರವಷ್ಟೇ ತಲುಪಿದೆ ಎಂದು ಸಬೂಬು ಹೇಳಬೇಡಿ ಕಟುಮಾತು ಹೇಳಿತು.

ಇಷ್ಟೊಂದು ತಿಂಗಳುಗಳಿಂದ ವ್ಯಾಪಕ ಸುದ್ದಿಯಾದ ಮೇಲೂ ಇಂತಹ ನಿರ್ಲಕ್ಷ್ಯವೇಕೆ? ಸಮರ್ಪಕ ವರದಿ ಸಿದ್ಧ ಪಡಿಸಿಕೊಂಡು ಬರಬೇಕಾಗಿತ್ತು ಎಂದು ಹೇಳಿದ ನ್ಯಾಯಾಲಯ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಸಾಕ್ಷಾಧಾರಗಳನ್ನು ಒದಗಿಸುವಂತೆ ಅರ್ಜಿದಾರರಿಗೆ ಸೂಚಿಸಿತು.

ಕಳೆದ ವರ್ಷ ಡಿಸೆಂಬರ್ 20ರಂದು ನ್ಯಾಯಾಲಯವು 22 ಸಾಮಾಜಿಕ ತಾಣಗಳಿಗೆ ಏಕಪಕ್ಷೀಯ ನೋಟಿಸ್ ಜಾರಿ ಮಾಡಿ ತಮ್ಮ ಅಂತರಜಾಲ ಪುಟದಲ್ಲಿ ಯಾವುದೇ ಧರ್ಮಕ್ಕೆ ಧಕ್ಕೆಯಾಗುವಂತಹ ಧರ್ಮ ವಿರೋಧಿ ಹಾಗೂ ಸಮಾಜ ವಿರೋಧಿ ಚಿತ್ರಗಳು, ದೃಶ್ಯಾವಳಿಗಳು ಅಥವಾ ಬರಹಗಳನ್ನು ಫೆ. 6ರ ಒಳಗೆ ತೆಗೆಯಬೇಕು ಎಂದು ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT