ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಪ್ರೀತಿಗೆ ಕಣ್ಣು ಬೇಕಿಲ್ಲ: ರಾಫ್ಲ್

ಆಟ ಸವಿಯಲು ಲಂಡನ್‌ನಿಂದ ಬಂದಿರುವ ಅಂಧ ಪ್ರೊ ಫೆಸರ್
Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ಕೋಲ್ಕತ್ತ: ಪ್ರೀತಿ ಕುರುಡು ಎನ್ನುತ್ತಾರೆ. ಆದರೆ ಲಂಡನ್‌ನ ವಿಶ್ವವಿದ್ಯಾಲಯ ವೊಂದರ ಪ್ರೊಫೆಸರ್ ಫ್ರೆಡ್ ರಾಫ್ಲ್ ಪಾಲಿಗೆ ಕ್ರಿಕೆಟ್ ಕೂಡ ಕುರುಡು. ಇಂಗ್ಲೆಂಡ್ ಕ್ರಿಕೆಟ್ ತಂಡ ಎಲ್ಲಿಗೇ ಪ್ರಯಾಣಿಸಲಿ. ಆ ಪಂದ್ಯಗಳನ್ನು ಸವಿಯಲು ಈ ಪ್ರೊಫೆಸರ್ ಜೊತೆಗಿರುತ್ತಾರೆ. ಆದರೆ ಒಂದೂ ಎಸೆತದ ಆಟವನ್ನು ಅವರು ವೀಕ್ಷಿಸಲಾರರು.

ಏಕೆಂದರೆ ಈ ರಾಫ್ಲ್‌ಗೆ ಎರಡೂ ಕಣ್ಣು ಕಾಣಿಸುವುದಿಲ್ಲ. ಹುಟ್ಟಿನಿಂದಲೇ ಅಂಧರು. ಹಾಗಾಗಿ ತಮ್ಮ ನೆಚ್ಚಿನ ಆಟಗಾರ ಕೆವಿನ್ ಪೀಟರ್ಸನ್ ಎದುರು ಬಂದು ನಿಂತರೂ ಅವರನ್ನು ಗುರುತಿಸಲಾರರು. ಆದರೆ ಕ್ರೀಡಾಂಗಣಕ್ಕೆ ಅರ್ಧ ಗಂಟೆ ಮೊದಲೇ ಬಂದು ಕೂರುವ ಫ್ರೆಡ್ ಕೊನೆಯ ಎಸೆತ ಮುಗಿದ ಮೇಲೆಯೇ ಎದ್ದು ಹೋಗುತ್ತಾರೆ.

`ಪ್ರೀತಿ ಮಾಡಲು ಕಣ್ಣು ಬೇಡ. ಹಾಗೇ, ಕ್ರಿಕೆಟ್ ಪ್ರೀತಿಸಲೂ ಕಣ್ಣು ಬೇಕಿಲ್ಲ. ನಾನು ಹೃದಯದ ಮೂಲಕ ಆಟ ಸವಿಯುತ್ತೇನೆ. ನನ್ನ ಹಾಗೂ ಕ್ರಿಕೆಟ್ ನಡುವಿನ ಪ್ರೇಮ 60 ವಷರ್ಗಳಷ್ಟು ಹಳೆಯದ್ದು. ಆ ಪ್ರೀತಿ ಉಳಿಸಿಕೊಳ್ಳಲು ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ' ಎಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ರಾಫ್ಲ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಅವರು 15 ವರ್ಷಗಳಿಂದ ಇಂಗ್ಲೆಂಡ್ ಕ್ರಿಕೆಟ್ ತಂಡದ ಜೊತೆಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ ಸೇರಿದಂತೆ ಪ್ರಮುಖ ದೇಶಗಳ ಅಂಗಳದಲ್ಲಿ ಆಟವನ್ನು ಸವಿದಿದ್ದಾರೆ.

ಮನೆಯಲ್ಲೇ ಕುಳಿತು ರೇಡಿಯೊ ಕಾಮೆಂಟರಿ ಕೇಳಬಹುದಲ್ಲವೇ ಎಂಬುದಕ್ಕೆ ಪ್ರತಿಕ್ರಿಯಿಸಿದ 73 ವರ್ಷ ವಯಸ್ಸಿನ ರಾಫ್ಲ್, `ಚಿತ್ರದಲ್ಲಿರುವ ಹುಡುಗಿಗೆ ಮುತ್ತು ಕೊಟ್ಟರೆ ಏನು ಪ್ರಯೋಜನ?' ಎಂದು ಒಂದೇ ಮಾತಿನಲ್ಲಿ ತಮ್ಮ ಕ್ರಿಕೆಟ್ ಪ್ರೀತಿಯ ಎಸಳುಗಳನ್ನು ಬಿಚ್ಚಿಡುತ್ತಾರೆ.

`ನೀವು ಕೂಡ ಕಚೇರಿಯಲ್ಲಿ ಕುಳಿತು ಕ್ರಿಕೆಟ್ ವರದಿ ಮಾಡಬಹುದಾಗಿತ್ತು. ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ ಹೇಳಿ? ನಾನು ಕ್ರೀಡಾಂಗಣದಲ್ಲೂ ರೇಡಿಯೊದಲ್ಲಿ ಕಾಮೆಂಟರಿ ಕೇಳುತ್ತೇನೆ. ಆದರೆ ಸಹ ಪ್ರೇಕ್ಷಕರ ಆ ಖುಷಿ, ಚೆಂಡು-ಬ್ಯಾಟ್‌ನ ಸ್ದ್ದದನ್ನು ನೇರವಾಗಿ ಕೇಳಿ ಖುಷಿಪಡಬೇಕು. ಅವರೊಂದಿಗೆ ನಾನು ಕುಣಿದಾಡಬೇಕು. ಆಟವನ್ನು ನೇರವಾಗಿ ಅನುಭವಿಸಬೇಕು' ಎನ್ನುತ್ತಾರೆ ಫ್ರೆಡ್.

ಅಂದಹಾಗೆ, ರಾಫ್ಲ್‌ಗೆ ಜೊತೆಯಾಗಿ 56 ವರ್ಷ ವಯಸ್ಸಿನ ಪತ್ನಿ ಕೂಡ ಇಲ್ಲಿಗೆ ಬಂದಿದ್ದಾರೆ. ಈಗಾಗಲೇ ಅವರು ಟೆಸ್ಟ್ ಪಂದ್ಯಗಳ ನಡುವಿನ ವಿರಾಮದ ಅವಧಿಯಲ್ಲಿ ತಾಜ್‌ಮಹಲ್ ವೀಕ್ಷಿಸಿ ಬಂದಿದ್ದಾರೆ. ಗೋವಾದ ಬೀಚ್‌ನಲ್ಲಿ ಸುತ್ತಾಡಿ ಖುಷಿಪಟ್ಟಿದ್ದಾರೆ.

`ಪ್ರೇಮದ ಗುಡಿ ಎನಿಸಿರುವ ತಾಜ್‌ಮಹಲ್ ಸ್ಪರ್ಶಿಸಬೇಕು ಎಂಬುದು ನನ್ನ ಜೀವನದ ಗುರಿಯಾಗಿತ್ತು. ಅದರ ಬಗ್ಗೆ ತುಂಬಾ ಕೇಳಿದ್ದೆ. ಹೋದ ವಾರ ತಾಜ್ ಮುಂದೆ ಪತ್ನಿ ಜೊತೆಯಲ್ಲಿ ನಿಂತು ಫೋಟೊ ಕೂಡ ತೆಗೆಸಿಕೊಂಡೆ. ಆದರೆ ಆ ಫೋಟೊ ನೋಡೋಣ ಎಂದರೆ ನನಗೆ ಕಣ್ಣುಗಳೇ ಇಲ್ಲ. ತಾಜ್‌ಮಹಲ್ ನೆನಪು ಬಂದಾಗಲೆಲ್ಲಾ ಆ ಫೋಟೊ ಸ್ಪರ್ಶಿಸಿ ಖುಷಿಪಡುತ್ತೇನೆ' ಎಂದು ರಾಫ್ಲ್ ಭಾವುಕರಾದರು.

ಭಾರತದ ಪ್ರವಾಸ ರಾಫ್ಲ್ ಪಾಲಿಗೆ ಎರಡನೆಯದ್ದು. 2006ರಲ್ಲಿ ಆ್ಯಂಡ್ರ್ಯೂ ಫ್ಲಿಂಟಾಫ್ ಸಾರಥ್ಯದ ತಂಡ ಭಾರತಕ್ಕೆ ಬಂದಿದ್ದಾಗ ಅವರು ಆಗಮಿಸಿದ್ದರು. ಲಂಡನ್‌ನ ಸ್ಕೈ ಟಿವಿಯಲ್ಲಿ ವಿಶೇಷ ಆಹ್ವಾನದ ಮೇರೆಗೆ ಅವರು ಕ್ರಿಕೆಟ್ ಬಗ್ಗೆ ಚರ್ಚೆಯಲ್ಲಿ ಕೂಡ ಪಾಲ್ಗೊಂಡಿದ್ದಾರೆ.

ಇಂಗ್ಲೆಂಡ್ ಕ್ರಿಕೆಟಿಗರಿಗೆ ಇವರು ಚಿರಪರಿಚಿತ. ಈಗಿನ ಕ್ರಿಕೆಟಿಗರು ಮಾತ್ರವಲ್ಲ; ಮಾಜಿ ಆಟಗಾರರು ಹಾಗೂ ನಾಯಕರಿಗೆ ಇವರನ್ನು ಕಂಡರೆ ವಿಶೇಷ ಪ್ರೀತಿಯಂತೆ. ವಿಶ್ವವಿದ್ಯಾಲಯದಲ್ಲಿ ರಾಫ್ಲ್ ಮನಃಶಾಸ್ತ್ರದ ವಿಷಯದ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT