ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡಾಗಿ ಬಾಳಲು ಬಿಡಿ ...

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಗಂಡಾಗಿದ್ದೇನೆ. ಗಂಡು ಆಗಿಯೇ ಬಾಳಲು ಬಯಸುತ್ತೇನೆ. ನನಗೆ ಬದುಕಲು ಬಿಡಿ, ಬದುಕು ಕೊಡಿ...’ ಹೀಗಂತ ಸಮಾಜವನ್ನು ಬೇಡಿಕೊಳ್ಳುತ್ತಿರುವುದು ಮಹತ್ವಾಕಾಂಕ್ಷಿ ಮಹಾಂತ್. ತರೀಕೆರೆಯ ಬೆಟ್ಟದಹಳ್ಳಿಯಲ್ಲಿ ಹುಟ್ಟಿದ ಮಮತಾ, ಹದಿನಾರನೆ ವಯಸ್ಸಿನವರೆಗೂ ಹೆಣ್ಣಾಗಿಯೇ ಗೆಳತಿ­ಯ­ರೊಂದಿಗೆ ಕೂಡಿ ಆಡಿ ಬೆಳೆದವಳು.

ಹತ್ತನೇ ತಗರಗತಿ ಯಲ್ಲಿ ಮೊದಲದರ್ಜೆಯಲ್ಲಿ ಉತ್ತೀರ್ಣ­ಳಾಗುವ ಹೊತ್ತಿಗೆ ಹುಡುಗರ ಧ್ವನಿ, ಚಿಗುರು ಮೀಸೆ, ಗಡ್ಡದ ಛಾಯೆ ಕಾಣಿಸಿಕೊಳ್ಳತೊಡಗಿದ್ದು ನಿಚ್ಚಳವಾಗಿ ತೋರ ತೊಡಗಿತು. ಸಹಪಾಠಿಗಳಿಗೆ ಹುಡುಗನ ಬಳಿ ಕುಳಿತಿರುವ ಭಾವ,  ಅಧ್ಯಾಪಕರಿಗೆ ಈ ಹುಡುಗಿಯ ಲ್ಲೇನೋ ಅಸಹಜತೆಯ ನೋಟ.

‘ಸೈಕಲ್ ಓಟವಿರಲಿ, ಹೈಜಂಪ್ ಇರಲಿ ನಾನು ಮುಂಚೂಣಿಯಲ್ಲಿ­ರುತ್ತಿದ್ದೆ. ಹದಿನಾರಾದರೂ ಹೆಣ್ಣು ಮಕ್ಕಳಲ್ಲಿ ಕಂಡುಬರುವ ಯಾವುದೇ ವಯೋಸಹಜ ಬದಲಾವಣೆಗಳು ನನ್ನಲ್ಲಿ ಕಂಡುಬರಲಿಲ್ಲ. ಋತಮತಿ­ಯಾಗುವ ಸೂಚನೆಯೂ ಕಾಣಲಿಲ್ಲ. `ಎದೆ'ಯೂ ಗಂಡೆದೆಯಾಗಿಯೇ ಇತ್ತು. ಸಾಲದೆಂಬಂತೆ ಧ್ವನಿಯಲ್ಲಿ ಒಡಕು ಹೆಚ್ಚುತ್ತಾ ಹೋಯಿತು. ಎಲ್ಲರದೂ ಒಂದೇ ಪ್ರಶ್ನೆ ‘ನೀನ್ಯಾಕೆ  ಹೀಗೆ ಎಂಬುದು’ ಎಂದು ತಮ್ಮ ಪೂರ್ವಾಶ್ರಮದ ದಿನಗಳನ್ನು ಸಂಕಟದಿಂದಲೇ ಹೇಳಿಕೊಳ್ಳುತ್ತಾನೆ.

ಹೆಣ್ಣಾಗಿರಲಿಲ್ಲ!: ‘ನೀನು ಗಂಡೋ ಹೆಣ್ಣೋ ಎಂಬ ಪ್ರಶ್ನೆಗೆ ಕುಗ್ಗಿಹೋಗಿದ್ದ ನಾನು ಅಮ್ಮನೊಂದಿಗೆ ಬೆಂಗಳೂರಿಗೆ ಬಂದು ಯಲಹಂಕ ಬಳಿಯ ರಾಜಾನುಕುಂಟೆ­ಯಲ್ಲಿ ವಾಸಿಸತೊ­ಡಗಿದೆ.  ಕನಿಷ್ಠ ಪದವಿವರೆಗಾದರೂ ಓದಿ ಶಿಸ್ತು ಮತ್ತು ಸ್ವಾಭಿಮಾನದಿಂದ ದುಡಿದು ಬದು ಕಬೇಕೆಂಬ ಆಸೆ ನನಗಿತ್ತು. ಇತ್ತು ಏನು ಈಗಲೂ ಇದೆ.

ಆದರೆ ಮತ್ತೆ ಸ್ತ್ರೀಲಿಂಗವೋ ಪುಲ್ಲಿಂಗವೋ ಎಂಬ ಕುಹಕದ ಪ್ರಶ್ನೆ. ಇದರಿಂದ ರೋಸಿಹೋದ ನಾನು ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಪದ್ಮಿನಿ ಪ್ರಸಾದ್‌ ಅವರನ್ನು ಕೆಲದಿನಗಳ ಹಿಂದೆ ಭೇಟಿಯಾಗಿ ನನ್ನೆಲ್ಲ ಸಮಸ್ಯೆ ಗಳನ್ನು ಹೇಳಿಕೊಂಡೆ. ಅವರು ಸಮಗ್ರವಾಗಿ ವೈದ್ಯಕೀಯ ತಪಾಸಣೆ, ಎಂಆರ್ಐ ಸ್ಕ್ಯಾನಿಂಗ್ ಎಲ್ಲಾ ಮಾಡಿದಾಗ ಒಂದು  ಅಚ್ಚರಿಯ ಸಂಗತಿ ತಿಳಿಯಿತು.  ನಾನು ಅಸಲಿಗೆ ಹೆಣ್ಣಾಗಿರಲಿಲ್ಲ,  ಒಳಗಿಂದ ಸಂಪೂರ್ಣ ಗಂಡೇ  ಆಗಿದ್ದೆ ಎಂದು.

ಗರ್ಭಕೋಶದ  ಛಾಯೆಯೂ ಇರಲಿಲ್ಲ. ಅಷ್ಟೇ  ಅಲ್ಲ ಹುಡುಗರಿರಬೇಕಾದ ಎಲ್ಲಾ ಅಂಗಾಂಗಗಳು ನನಗಿದ್ದುದು ಸ್ಕ್ಯಾನಿಂಗ್ ವೇಳೆ ಪತ್ತೆಯಾಯಿತು’ ಎಂದು ವಿವರಿಸುತ್ತಾನೆ ಮಹಾಂತ್. ಅವನು ಮಹಾಂತ...: ಹಾಗೆ ಗಂಡಿನ ಎಲ್ಲಾ ದೇಹ ಲಕ್ಷಣಗಳು ಸುಪ್ತವಾಗಿದ್ದರೂ ಬರೋಬ್ಬರಿ 16 ವರ್ಷ ಹೆಣ್ಣಾಗಿಯೇ ಬದುಕಿದ್ದ ಮಮತಾಳಿಗೆ ಡಾ.ಪದ್ಮಿನಿ ಪ್ರಸಾದ್ ಅವರ ಸಲಹೆಯ ಮೇರೆಗೆ ಕಳೆದ ತಿಂಗಳು ಬೆಂಗಳೂರಿನಲ್ಲೇ ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಮಮತಾ ಆಗಿದ್ದ ಜೀವಕ್ಕೆ ಮಹಾಂತ್ ಎಂಬ ನಾಮಕರಣವೂ ಆಗಿದೆ. ಅಲ್ಲಿಗೆ ಮಹಾಂತನ ಗೊಂದಲದ ಬದುಕಿಗೆ ತೆರೆ ಬಿದ್ದಿದೆ. ಡಾ.ನಾರಾಯಣ ಸ್ವಾಮಿ, ಡಾ.ದೇವರಾಜ್ ಅವರನ್ನೊಳಗೊಂಡ ತಂಡ ಈ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಮಾಡಿ ಕೊಟ್ಟಿತು ಎಂದು ಕಣ್ತುಂಬಿಕೊಳ್ಳುತ್ತಾನೆ, ಮಹಾಂತ.

ಇದೆಂಥಾ ಪ್ರಕರಣ?: ಆದರೆ, ಹೊಸ ಆಶಾಕಿರಣ ದೊಂದಿಗೆ ಭವಿಷ್ಯದ ಕಡೆಗೆ ನೋಡುವಷ್ಟರಲ್ಲಿ ಮಹಾಂತನಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಲಿಂಗ ಪರಿವರ್ತನೆಯಾದ ಬಗ್ಗೆ ಸಮಗ್ರ ವೈದ್ಯಕೀಯ ದಾಖಲೆಗಳು ಮಹಾಂತನ ಕೈಲಿದ್ದರೂ ಶಿಕ್ಷಣ ಇಲಾಖೆ ಅವನಿಗೆ ನಿರಾಸೆ ಮಾಡಿದೆ.

ಹತ್ತನೇ ತರಗತಿಯ ಅಂಕಪಟ್ಟಿ ಮತ್ತು ಎಲ್ಲಾ ದಾಖಲೆಪತ್ರಗಳಲ್ಲಿ ಅವನು ಲಿಂಗಪರಿವರ್ತನೆಗೊಂಡ ಹುಡುಗ ಎಂಬುದನ್ನು ನಮೂದಿಸಿ ಲಿಂಗ ಪ್ರಮಾಣ ಪತ್ರ ಕೊಟ್ಟರೆ ಮಾತ್ರ ಮಹಾಂತ  ಮುಂದೆ ಶಿಕ್ಷಣ ಪಡೆಯಬಹುದು ಅಥವಾ ಸಣ್ಣ ನೌಕರಿಯನ್ನಾದರೂ ದಕ್ಕಿಸಿಕೊಳ್ಳ­ಬಹುದು. ಆದರೆ, ಈ ಸಂಬಂಧ ತರೀಕೆರೆ ಯ ಶಿಕ್ಷಣಾಧಿಕಾರಿಗಳ ಕಚೇರಿಗೆ ಮನವಿಪತ್ರ ಸಲ್ಲಿಸಿ ದರೆ, ‘ಇಂಥ ಕೇಸು ನಾವೆಂದೂ ನೋಡಿಲ್ಲ ಕಣಪ್ಪಾ.

ಹಾಗಾಗಿ ನಾವು ಪ್ರಮಾಣಪತ್ರ ಕೊಡಲು ಸಾಧ್ಯವಿಲ್ಲ’ ಎಂದು ಮನವಿ  ತಿರಸ್ಕರಿಸಿದ್ದಾರೆ. ಇದರಿಂದಾಗಿ ಯಾವುದೇ ನೌಕರಿಗೆ ಅರ್ಜಿ ಸಲ್ಲಿಸಿದರೂ ಶೈಕ್ಷಣಿಕ ಪ್ರಮಾಣಪತ್ರ, ಅಂಕಪಟ್ಟಿಯಿಲ್ಲದೆ ಯಾರೂ ನೌಕರಿ ಕೊಡುತ್ತಿಲ್ಲ. ತರೀಕೆರೆಯಂತಹ ಸಣ್ಣ ಊರಿನಲ್ಲಿ ಲಿಂಗ ಪರಿವರ್ತನೆಯ ಬಗ್ಗೆ ಜನರಿಗೆ ತಿಳಿಹೇಳುವುದು ಮತ್ತು ಅಲ್ಲಿಯೇ ನೆಲೆಸುವುದು ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಮಹಾಂತ್ ಬೆಂಗಳೂರಿ­ನಲ್ಲಿಯೇ ಭವಿಷ್ಯ ಕಂಡುಕೊಳ್ಳಲು ನಿರ್ಧರಿಸಿದ್ದಾನೆ.

‘ಕೆಲಸ ಮಾಡಿ ಕೊಂಡಾ­ದರೂ ಓದುತ್ತೇನೆ, ಅದಕ್ಕಾಗಿ ಶೈಕ್ಷಣಿಕ ದಾಖಲೆ ಪತ್ರಗಳಲ್ಲಿ ಹುಡುಗ ಎಂಬುದು ದಾಖಲಾಗಬೇಕು. ಶಿಕ್ಷಣ ಇಲಾಖೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಪ್ರಮಾಣಪತ್ರ ಅತಿಶೀಘ್ರ ಒದಗಿಸಬೇಕು’ ಎಂಬುದು ಅವನ ಒತ್ತಾಯ. ಜತೆಗೆ, ಇನ್ನಷ್ಟು ವೈದ್ಯಕೀಯ ವೆಚ್ಚ ಗಳನ್ನು ಭರಿಸಲು ದಾನಿಗಳ ನೆರವೂ ಅಗತ್ಯವಿದೆ ಎನ್ನುತ್ತಾನೆ ಅವರು. ‘ಮಂಗಳಮುಖಿ’ಯರಂತೆ ಬಾಳುವೆ ಮಾಡುವುದಾಗಲಿ, ಭಿಕ್ಷೆ ಬೇಡುವು­ದಾಗಲಿ ಒಲ್ಲೆ ಎನ್ನುತ್ತಾನೆ ಮಹಾಂತ. ಮೊಬೈಲ್‌: 91646 50987.

ಕೋರ್ಟ್ ಹೇಳುವುದೇನು?
ಇದೇ ಸ್ವರೂಪದ ಪ್ರಕರಣ ಇತ್ತೀಚೆಗೆ ರಾಜ್ಯ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತ್ತು. ಅಲ್ಲಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿ, ಗಂಡಾಗಿ ಹುಟ್ಟಿದ್ದ. ಆದರೆ ದೈಹಿಕ ನ್ಯೂನತೆಯೊಂದರ ಕಾರಣ ಆತನ ಪಾಲ ಕರು ಅವರನ್ನು ‘ಹೆಣ್ಣು’ ಎಂದು ಭಾವಿಸಿದ್ದರು. ತಾನು ಹೆಣ್ಣಲ್ಲ, ಗಂಡು ಎಂದು ಗೊತ್ತಾದಾಗ, ಅಗತ್ಯ ಶಸ್ತ್ರಚಿಕಿತ್ಸೆಗೆ ಒಳಗಾದ.

ತಾನು ‘ಗಂಡು’ ಎಂಬ ಬಗ್ಗೆ ವೈದ್ಯಕೀಯ ದಾಖಲೆಗಳನ್ನು ಪಡೆದು ಕೊಂಡ. ಅದನ್ನು ಸಲ್ಲಿಸಿದರೂ ಅಧಿಕಾರಿಗಳು ಸರ್ಕಾರಿ ದಾಖಲೆಗಳಲ್ಲಿ ಆತನ ಲಿಂಗವನ್ನು ‘ಗಂಡು’ ಎಂದು ಬದಲಾಯಿಸಲು ಒಪ್ಪಲಿಲ್ಲ. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್‌ ಮೆಟ್ಟಿಲೇರಿದ್ದ. ಅರ್ಜಿಯ ವಿಚಾ ರಣೆ ನಡೆಸಿದ್ದ ಏಕಸದಸ್ಯ ಪೀಠ, ಆತನ ಪರವಾಗಿ ಇತ್ತೀಚೆಗೆ ಆದೇಶ ನೀಡಿದೆ.

ಇದಕ್ಕೂ ಮುನ್ನ ಗುಜ ರಾತ್‌ ಹೈಕೋರ್ಟ್‌ನ ವಿಭಾಗೀಯ ಪೀಠ ಕೂಡ  2000ರಲ್ಲಿ ಇಂಥಹುದೇ ಪ್ರಕರಣವೊಂದರ ವಿಚಾ ರಣೆ ನಡೆಸಿತ್ತು. ‘ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿ, ಅಗತ್ಯ ವೈದ್ಯಕೀಯ ದಾಖಲೆ ಪಡೆದು, ಸರ್ಕಾರಿ ದಾಖಲೆ­ಗಳಲ್ಲಿ ಬದಲಾವಣೆ ತರಲು ಅಡ್ಡಿಯಿಲ್ಲ’ ಎಂದು  ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT