ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡೆಯಾಚೆಗಿನ ವ್ಯಕ್ತಿ ಗೋಚರ!

Last Updated 2 ಜುಲೈ 2013, 19:59 IST
ಅಕ್ಷರ ಗಾತ್ರ

ಕೋಣೆಯೊಳಗೆ ಅಥವಾ ಗೋಡೆಯ ಹಿಂಬದಿಯಲ್ಲಿ ಅಡಗಿ ಕುಳಿತ ಸಮಾಜ ಘಾತುಕರು ಇರುವ ಸ್ಥಳದ ನಿಖರ ಮಾಹಿತಿ ಪಡೆಯುವುದು ಇನ್ನು ಸುಲಭವಾಗಲಿದೆ. ಮ್ಯಾಸಾಚುಸೆಟ್ಸ್‌ನ `ಕಂಪ್ಯೂಟರ್ ಸೈನ್ಸ್ ಹಾಗೂ ಆರ್ಟಿಫಿಷಯಲ್ ಇಂಟಲಿಜೆನ್ಸಿ' ಸಂಸ್ಥೆಯ ವಿಜ್ಞಾನಿಗಳ ಸತತ ಪ್ರಯತ್ನದಿಂದ ಗೋಡೆಯ ಇನ್ನೊಂದು ಬದಿಯಲ್ಲಿ ಚಲಿಸುವ ಮನುಷ್ಯರ ಅಥವಾ ವಸ್ತುಗಳ `ಕ್ಷ-ಕಿರಣ' ನೋಟ ಸುಲಭ ಲಭ್ಯವಾಗಲಿದೆ.

ಕಡಿಮೆ ಬೆಲೆಯ ವೈ-ಫೈ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನದ ಮೂಲಕ ಕಡಿಮೆ ವಿದ್ಯುತ್ ಬೇಡುವ, ಪುಟ್ಟದಾದ ಹಾಗೂ ಸುಲಭವಾಗಿ ಬಳಸಬಹುದಾದ ಸಾಧನ ಇದಾಗಿದೆ. ಈ ಸಾಧನದ ಮೂಲಕ ಕೋಣೆಯ ಬಾಗಿಲು ಹಾಕಿದ್ದರೂ ಗೋಡೆಯ ಆಚೆ ಬದಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಪೂರ್ಣ ಮಾಹಿತಿ ಪಡೆಯಬಹುದಾಗಿದೆ.

`ಇದೇ ರೀತಿಯಲ್ಲಿ ಕೆಲಸ ಮಾಡಬಲ್ಲ ತಂತ್ರಜ್ಞಾನದ ಅಭಿವೃದ್ಧಿ ಈ ಹಿಂದೆಯೂ ನಡೆದಿತ್ತು. ಆದರೆ ಅದರಲ್ಲಿ ಬೃಹತ್ತಾದ ಹಾಗೂ ದುಬಾರಿ ಬೆಲೆಯ ರಾಡಾರ್‌ಗಳನ್ನು ಬಳಸಲಾಗಿತ್ತು. ಇದರ ಮೂಲಕ ಎಲೆಕ್ಟ್ರೊ ಮ್ಯಾಗ್ನೆಟಿಕ್ ಸ್ಪೆಕ್ಟ್ರಂ ಮೂಲಕ ಗೋಡೆಯಾಚೆಗಿನ ವಸ್ತುಗಳನ್ನು ಪತ್ತೆ ಮಾಡಬಹುದಿತ್ತು. ಇದೀಗ ಅದೇ ಮಾದರಿಯ, ಆದರೆ ಕಡಿಮೆ ಬೆಲೆಯ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ' ಎಂದಿದ್ದಾರೆ `ಎಂಐಟಿ' ವಿಭಾಗದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಡಿನಾ ಕಟಬಿ.

ಈ ಹೊಸ ಸಾಧನಕ್ಕೆ `ವೈ-ವೈ' (WiVi) ಎಂದು ಹೆಸರಿಡಲಾಗಿದ್ದು, ಇದು ರಾಡಾರ್ ಹಾಗೂ ಸೋನಾರ್ ಇಮೇಜಿಂಗ್‌ನ ಪ್ರತಿರೂಪದಂತಿದೆ. ಆದರೆ ಅವುಗಳಿಗೆ ಹೋಲಿಸಿದಲ್ಲಿ ಇದು ಕಡಿಮೆ ಸಾಮರ್ಥ್ಯದ ವೈ-ಫೈ ಸಿಗ್ನಲ್ಸ್(ನಿಸ್ತಂತು ಸಂಕೇತಗಳನ್ನು) ರವಾನಿಸಲಿದೆ. ಅದರ ಪ್ರತಿಫಲನ ವಸ್ತುಗಳ ಚಲನವನ್ನು ಆಧರಿಸಿದ್ದು, ಮನುಷ್ಯರ ಚಲನವಲನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಈ ಸಾಧನದ ಮೂಲಕ ವೈ-ಫೈ ಸಿಗ್ನಲ್‌ಗಳನ್ನು ಗೋಡೆಗೆ ಹಾಯಿಸಿದಾಗ ಅದು ಗೋಡೆಯನ್ನು ದಾಟಿಕೊಂಡ ಹೋಗಿ ಆಚೆಯ ಬದಿಗೆ ಇರುವ ವ್ಯಕ್ತಿಗೆ ತಗುಲಿ ಹಿಂದಿರುಗಲಿದೆ. ಇನ್ನೊಂದು ಕೋಣೆುಲ್ಲಓ, ಗೋಡೆಯಾಚೆಗೋ ಅಡಗಿ ಕುಳಿತ ಕಳ್ಳರು, ಭಯೋತ್ಪಾದಕರನ್ನು ಅಥವಾ ಬೇರೆ ಯಾವುದೇ ವ್ಯಕ್ತಿಗಳನ್ನು ಪತ್ತೆ ಹಚ್ಚುವುದು ಸುಲಭವಾಗಿದೆ.

ಗೋಡೆ ದಾಟಿ ಹೋದ ಕಿರಣವು ತನ್ನ ಹಾದಿಗೆ ಸಿಕ್ಕ ಎಲ್ಲಾ ಘನ ವಸ್ತುವಿನ ಮಾಹಿತಿಯನ್ನೂ ನೀಡುತ್ತಿತ್ತು. ಆದರೆ ಹೀಗೆ ಪ್ರತಿಫಲನವಾದ ಎಲ್ಲಾ ಮಾಹಿತಿಗಳನ್ನು ನಿರ್ಲಕ್ಷಿಸಿ ಕೇವಲ ಮನುಷ್ಯರ ದೇಹದ ಚಿತ್ರವನ್ನಷ್ಟೇ ನೀಡುವಂತೆ ತಂತ್ರಾಂಶದಲ್ಲಿ ಬಹಳಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ಇದಕ್ಕಾಗಿ ಸಂದೇಶ ರವಾನಿಸುವ ಎರಡು ಆ್ಯಂಟೆನಾಗಳು ಹಾಗೂ ಸಿಗ್ನಲ್ ಸ್ವೀಕರಿಸುವ ಒಂದು ಆ್ಯಂಟೆನಾ ಬಳಸಿಕೊಳ್ಳಲಾಗಿದೆ.

ಎರಡು ಆ್ಯಂಟೆನಾಗಳು ಒಂದೇ ಬಗೆಯ ಸಂಕೇತಗಳನ್ನು ರವಾನಿಸಿದರೆ, ಅದರಲ್ಲಿ ಒಂದು ಇನ್ನೊಂದರ ತಲೆಕೆಳಗಾದ ಚಿತ್ರವನ್ನು ರವಾನಿಸುತ್ತದೆ. ಇದರಿಂದ ಎರಡೂ ಚಿತ್ರಗಳು ಪರಸ್ಪರ ಸೇರಿ ಸ್ಥಿರ ವಸ್ತುಗಳ ಚಿತ್ರಗಳನ್ನು ಅದು ತೆಗೆದುಹಾಕಲಿದೆ. ಹೀಗಾಗಿ ಚಲಿಸುವ ಮನುಷ್ಯರ ಚಿತ್ರಗಳನ್ನು ಮಾತ್ರ ಇದು ಕಳುಹಿಸುವ ಸಾಮರ್ಥ್ಯ ಹೊಂದಿದೆ. ಈ ವೈ-ವೈ ಸಾಧನವನ್ನು ಹಾಂಕಾಂಗ್‌ನಲ್ಲಿ ಆಗಸ್ಟ್‌ನಲ್ಲಿ ನಡೆಯುವ ಸಿಗ್‌ಕಾಮ್ ಸಮ್ಮೇಳನದಲ್ಲಿ ಪ್ರದರ್ಶಿಸಲಾಗುವುದು ಎಂದು ಸಂಶೋಧಕ ಫೆಡಲ್ ಅಡಿಬ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT