ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಗುಟುಕು

Last Updated 2 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಟಿಟಿ: ಸ್ಫೂರ್ತಿಗೆ ಪ್ರಶಸ್ತಿ `ಡಬಲ್'
ಬೆಂಗಳೂರು: ಪಿಟಿಟಿಐ ಕ್ಲಬ್‌ನ ಎಂ.ವಿ. ಸ್ಫೂರ್ತಿ ಇಲ್ಲಿ ನಡೆಯುತ್ತಿರುವ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಜೂನಿಯರ್ ವಿಭಾಗದಲ್ಲಿ ಪ್ರಶಸ್ತಿ ಜಯಿಸುವ ಮೂಲಕ `ಡಬಲ್' ಪ್ರಶಸ್ತಿ ಗೆದ್ದ ಗೌರವಕ್ಕೆ ಪಾತ್ರರಾದರು.

ಶುಕ್ರವಾರ ನಡೆದ ಬಾಲಕಿಯರ ವಿಭಾಗದ ಫೈನಲ್ ಪಂದ್ಯದಲ್ಲಿ ಸ್ಫೂರ್ತಿ 7-11, 11-5, 11-9, 7-11, 11-8, 11-7ರಲ್ಲಿ ಅರ್ಚನಾ ಕಾಮತ್ ಎದುರು ಗೆಲುವು ಪಡೆದರು. ಗುರುವಾರ ಸ್ಫೂರ್ತಿ ಸಬ್ ಜೂನಿಯರ್ ವಿಭಾಗದಲ್ಲೂ ಚಾಂಪಿಯನ್ ಆಗಿದ್ದರು.

ಸೆಮಿಫೈನಲ್ ಪಂದ್ಯಗಳಲ್ಲಿ ಅರ್ಚನಾ 11-8, 11-1, 11-3, 11-3ರಲ್ಲಿ ಬಿಎನ್‌ಎಂ ಕ್ಲಬ್‌ನ ಆರ್. ಸಂಯುಕ್ತಾ ಮೇಲೂ, ಸ್ಫೂರ್ತಿ 11-1, 11-3, 11-7, 11-7ರಲ್ಲಿ ಯುಜಿಬಿ ಕ್ಲಬ್‌ನ ಪಿ. ಕೌಮುದಿ ವಿರುದ್ಧವೂ ಗೆಲುವು ಪಡೆದು ಪ್ರಶಸ್ತಿ ಘಟ್ಟ ತಲುಪಿದ್ದರು.

ಶ್ರೇಯಲ್ ಚಾಂಪಿಯನ್: ಬಿಎನ್‌ಎಂ ಕ್ಲಬ್‌ನ ಶ್ರೇಯಲ್ ಕೆ. ತೆಲಾಂಗ್ ಫೈನಲ್ ಹಣಾಹಣಿಯಲ್ಲಿ 7-11, 9-11, 11-9, 11-7, 11-9, 11-6ರಲ್ಲಿ ಎಸ್. ಕೇಶವ್ ರಾಜ್ ಎದುರು ಜಯ ಸಾಧಿಸಿದರು.

ನಾಲ್ಕರ ಘಟ್ಟದ ಹೋರಾಟದಲ್ಲಿ ಕೇಶವ್ 12-10, 11-8, 11-7, 11-3ರಲ್ಲಿ ಶ್ರೇಯಸ್ ಕುಲಕರ್ಣಿ ಮೇಲೂ, ಶ್ರೇಯಲ್ 11-8, 9-11, 11-8, 11-2, 12-10ರಲ್ಲಿ ಆರ್.ಬಿ. ರಕ್ಷಿತ್ ವಿರುದ್ಧವೂ ಜಯ ಪಡೆದ ಫೈನಲ್‌ಗೆ ಲಗ್ಗೆ ಇಟ್ಟಿದ್ದರು.

ಆರ್ಚರಿ: ಭಾರತಕ್ಕೆ ನಾಲ್ಕು ಪದಕ
ಉಲಾನ್‌ಬಾಟರ್, ಮಂಗೋಲಿಯಾ (ಐಎಎನ್‌ಎಸ್): ಭಾರತದ ಸ್ಪರ್ಧಿಗಳು ಶುಕ್ರವಾರ ಇಲ್ಲಿ ಕೊನೆಗೊಂಡ ಏಷ್ಯಾ ಗ್ರ್ಯಾನ್ ಪ್ರಿ ಆರ್ಚರಿ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಒಂದು ಬಂಗಾರ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿದ್ದಾರೆ.

ವೈ.ಚರಣ್ ರೆಡ್ಡಿ, ರಮಾಕಾಂತ್ ಶರ್ಮ ಹಾಗೂ ರವಿ ಶರ್ಮ ಅವರನ್ನೊಳಗೊಂಡ ಜೂನಿಯರ್ ಕಾಂಪೌಂಡ್ ಪುರುಷರ ತಂಡ ಬಂಗಾರದ ಸಾಧನೆ ತೋರಿದರೆ ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ಚರಣ್ ಹಾಗೂ ಮಿಹು ಮಸೆಲೊ ಬೆಳ್ಳಿ ಪದಕ ಗೆದ್ದರು.

ಮಿಹು, ದುಧ್ವಾಲ್ ಸ್ವಾತಿ ಹಾಗೂ ಯುಮಿ ಸೊರಂಗ್ ಅವರನ್ನೊಳಗೊಂಡ ತಂಡ, ಕಾಂಪೌಂಡ್ ಮಹಿಳೆಯರ ವಿಭಾಗದಲ್ಲಿ ಕಂಚು ಜಯಿಸಿತು. ಕಾಂಪೌಂಡ್ ಪುರುಷರ ವೈಯಕ್ತಿಕ ವಿಭಾಗದಲ್ಲಿ ಚರಣ್ ಕಂಚು ಗೆದ್ದರು. ಆದರೆ ಎರಡು ವೈಯಕ್ತಿಕ ಸ್ಪರ್ಧೆಗಳಲ್ಲಿ ಭಾರತ ನಿರಾಸೆ ಅನುಭವಿಸಿತು. ರಿಕರ್ವ್ ಪುರುಷ ಹಾಗೂ ಕಾಂಪೌಂಡ್ ಮಹಿಳೆಯರ ವಿಭಾಗಗಳಲ್ಲಿ ಬಿನೋದ್ ಸ್ವಾಂಶಿ ಹಾಗೂ ಮಿಹು ಅಲ್ಪದರಲ್ಲಿಯೇ ಕಂಚಿನ ಪದಕಗಳಿಂದ ವಂಚಿತರಾದರು.

ಎಎಐ ಅಭಿನಂದನೆ: ಟೂರ್ನಿಯಲ್ಲಿ ಪದಕ ಗೆದ್ದ ಸ್ಪರ್ಧಿಗಳಿಗೆ ಅಭಿನಂದನೆ ಸಲ್ಲಿಸಿರುವ ಭಾರತ ಆರ್ಚರಿ ಸಂಸ್ಥೆಯ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ, `ಅಂತರರಾಷ್ಟ್ರೀಯ ಸ್ಪರ್ಧೆ ಒಂದರಲ್ಲಿ ಕಾಂಪೌಂಡ್ ಸ್ಪರ್ಧಿಗಳು ನಾಲ್ಕು ಪದಕ ಜಯಿಸಿರುವುದು ಭಾರತ ಆರ್ಚರಿ ಇತಿಹಾಸದಲ್ಲಿ ಇದೇ ಮೊದಲು' ಎಂದು ಪ್ರತಿಕ್ರಿಯಿಸಿದ್ದಾರೆ.

ವಿಶ್ವಕಪ್ ಹಾಕಿ: ಭಾರತಕ್ಕೆ ಸೋಲು
ಮಾಂಚೆಂಗ್ಲಾಬ್ಲಾಕ್, ಜರ್ಮನಿ (ಪಿಟಿಐ): ಭಾರತ ಬಾಲಕಿಯರ ತಂಡದವರು ಮಹಿಳಾ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ 0-3 ಗೋಲುಗಳಿಂದ ಹಾಲೆಂಡ್ ಎದುರು ಸೋಲು ಅನುಭವಿಸಿದರು. ಇದರೊಂದಿಗೆ ಭಾರತದ ಕನಸಿನ ಓಟಕ್ಕೆ ತೆರೆಬಿದ್ದಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಲೈಕೆ ವಾನ್ ವಿಕ್ (17ನೇ ನಿಮಿಷ), ಲಿಸಾನ್ ಡಿ ಲಾಂಜ್ (57) ಮತ್ತು ಲಿಸಾ ಶೀರ್‌ಲಿಂಗ್ (68) ಅವರು ಹಾಲೆಂಡ್ ಪರ ಗೋಲು ಗಳಿಸಿದರು.
ಹಾಲೆಂಡ್ ಪ್ರಶಸ್ತಿಗಾಗಿ ಅರ್ಜೆಂಟೀನಾ ಜೊತೆ ಪೈಪೋಟಿ ನಡೆಸಲಿದೆ. ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ನ ಸವಾಲನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT