ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ಮರೆತುಹೋದ `ಕಾಡಾನೆ ಸಮಸ್ಯೆ'

Last Updated 26 ಏಪ್ರಿಲ್ 2013, 8:35 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಲ್ಲಿ ಮಾನವ- ಕಾಡಾನೆ ಸಂಘರ್ಷ ಕೂಡ ಒಂದಾಗಿದೆ. ಸಂಘರ್ಷವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ ಅಧಿಕಾರಾವಧಿ ಯಲ್ಲಿ ಅಂದಿನ ಅರಣ್ಯ ಸಚಿವ ವಿಜಯಶಂಕರ ಅವರು ಮಡಿಕೇರಿಯ ಕೋಟೆ ವಿಧಾನ ಸಭಾಂಗಣದಲ್ಲಿ ಸಭೆ ನಡೆಸಿ, ಚರ್ಚಿಸಿದ್ದರು. ಹಲವು ಸುತ್ತಿನ ಅರಣ್ಯಾಧಿಕಾರಿಗಳ ಸಭೆಗಳು ನಡೆದಿದ್ದವು. ಚರ್ಚೆಗಷ್ಟೇ ಅವರ ಪ್ರಯತ್ನ ಸೀಮಿತವಾಯಿತು. ಇದಕ್ಕೊಂದು ಶಾಶ್ವತ ಪರಿಹಾರ ಸಾಧ್ಯವಾಗಲಿಲ್ಲ.

ನಿನ್ನೆ- ಮೊನ್ನೆ ತಾನೆ ಸೋಮವಾರಪೇಟೆ ಬಳಿಯ ಕೆಂಚಮ್ಮನ ಬಾಣೆ ಗ್ರಾಮದ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆ, ಬೆಳೆ ನಾಶಪಡಿಸಿತ್ತು. ಜಿಲ್ಲೆಯ ಸುತ್ತಲೂ ಇರುವ ಅರಣ್ಯ ಪ್ರದೇಶದಿಂದ ಆಗಾಗ್ಗೆ ಕಾಡಾನೆಗಳು ನಾಡಿಗೆ ನುಗ್ಗಿ ಮನುಷ್ಯರ ಮೇಲೆ ದಾಳಿ ಮಾಡುವುದು, ಬೆಳೆ ನಾಶ ಮಾಡುವುದು ಸಾಮಾನ್ಯವಾಗಿದೆ.

ರೈತರು ಕಷ್ಟಪಟ್ಟು ಬೆಳೆದ ಲಕ್ಷಾಂತರ ಮೌಲ್ಯದ ಬತ್ತ, ಬಾಳೆ, ಕಾಫಿ ಬೆಳೆಯುವ ಪ್ರತಿವರ್ಷ ಕಾಡಾನೆ ದಾಳಿಗೆ ನಾಶವಾಗುತ್ತದೆ. ಹಲವರು ಜೀವ ಕೂಡ ತೆತ್ತಿದ್ದಾರೆ. ಶಾಶ್ವತ ಅಂಗವಿಕಲರಾಗಿದ್ದಾರೆ. ಘಟನೆ ಸಂಭವಿಸಿದಾಗ ಸುತ್ತಲಿನ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಆದರೆ, ಆ ಆಕ್ರೊಸ ಕ್ಷಣಕ್ಕಷ್ಟೇ ಸೀಮಿತವಾಗಿ ಬಿಡುತ್ತದೆ.

ಬೆಳೆ ನಾಶಕ್ಕೆ ಹಾಗೂ ಕಾಡಾನೆ ತುಳಿತದಿಂದ ಪ್ರಾಣ ಕಳೆದುಕೊಂಡ ಕುಟುಂಬದವರಿಗೆ, ಗಾಯಗೊಂಡವರಿಗೆ ಒಂದಿಷ್ಟು ಪರಿಹಾರ ಧನ ಕೊಟ್ಟು ಸರ್ಕಾರ ಮೌನಕ್ಕೆ ಶರಣಾಗುತ್ತದೆ. ಆದರೆ, ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕೆನ್ನುವ ಉಮೇದು ಯಾವ ಸರ್ಕಾರಕ್ಕಾಗಲೀ, ಜನಪ್ರತಿನಿಧಿಗಳಿಗಾಗಲೀ ಕಾಣುತ್ತಿಲ್ಲ.

ಕೊಡಗು ಜಿಲ್ಲೆಯಲ್ಲಿ 2000ದಿಂದ 2013 ಮಾರ್ಚ್‌ವರೆಗೆ ಕಾಡಾನೆ ದಾಳಿಗೆ ಸಿಲುಕಿ ಇದುವರೆಗೆ 75 ಜನರು ಪ್ರಾಣ ತೆತ್ತಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಅದೆಷ್ಟೋ ಕುಟುಂಬಗಳಲ್ಲಿ ಇವರೇ ಜೀವನಾಧಾರವಾಗಿದ್ದರು. ಇಂತಹ ಕುಟುಂಬಗಳು ಇಂದು ಬೀದಿಪಾಲಾಗಿವೆ. ಇಷ್ಟಾಗಿಯೂ ಈ ಬಾರಿ ಚುನಾವಣೆಯಲ್ಲಿ `ಕಾಡಾನೆ ಹಾವಳಿ ನಿಯಂತ್ರಣ' ವಿಷಯವು ಚುನಾವಣಾ ವಿಷಯವಾಗಿ ಚರ್ಚೆಯಾಗುತ್ತಿಲ್ಲ!

ಕಾಫಿ ಕೃಷಿ ಮೇಲೆ ಪರಿಣಾಮ
ಕಾಫಿ ತೋಟಗಳಲ್ಲಿ ಬೆಳೆಯುವ ಬಾಳೆ, ಹಲಸು ಸೇರಿದಂತೆ ಹಣ್ಣು ಹಂಪಲು ಮರಗಳನ್ನು ಅರಸಿ ಆನೆಗಳು ದಾಳಿ ಇಡುತ್ತವೆ. ವಿಶೇಷವಾಗಿ ಮಾರ್ಚ್- ಜೂನ್ ವರೆಗಿನ ಅವಧಿಯಲ್ಲಿ ಕಾಡಿನಲ್ಲಿ ನೀರಿನ ಕೊರತೆ, ಆಹಾರದ ಕೊರತೆ ಇರುವುದರಿಂದ ಆನೆಗಳು ಕಾಫಿ ತೋಟಗಳತ್ತ ಮುಖಮಾಡುತ್ತವೆ.

ಒಮ್ಮೆ ಕಾಫಿ ತೋಟಗಳಲ್ಲಿರುವ ಬಾಳೆ, ಹಲಸಿನ ರುಚಿಯನ್ನು ಆನೆಗಳು ನೋಡಿದರೆ, ಮತ್ತೆಂದೂ ಅವು ತೋಟಗಳನ್ನು ಬಿಟ್ಟು ಕದಲಲ್ಲ. ಜಿಲ್ಲೆಯ ಹಲವು ತೋಟಗಳಲ್ಲಿ ಹತ್ತಾರು ವರ್ಷಗಳಿಂದ ಆನೆಗಳು ಬೀಡುಬಿಟ್ಟಿರುವ ಉದಾಹರಣೆಗಳನ್ನು ನೋಡಬಹುದು.

ಇದರಿಂದ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಡಾನೆ ದಾಳಿಗೆ ಸಿಲುಕುತ್ತಾರೆ. ಇಲ್ಲಿಯವರೆಗೆ ಆನೆ ದಾಳಿಗೆ ಸಾವಿಗೀಡಾದವರು ಹಾಗೂ ಗಾಯಗೊಂಡವರನ್ನು ಅವಲೋಕಿಸಿದರೆ ಈ ಅಂಶ ವೇದ್ಯವಾಗುತ್ತದೆ. ಹೀಗಾಗಿ ಆನೆಗಳ ಭಯದಿಂದ ಇಂದು ತೋಟದ ಕೆಲಸಕ್ಕಾಗಿ ಕಾರ್ಮಿಕರು ಸಿಗುತ್ತಿಲ್ಲ. ತಮಿಳುನಾಡು, ಕೇರಳ, ಅಸ್ಸಾಂ, ರಾಜ್ಯಗಳಿಂದ ಕಾರ್ಮಿಕರನ್ನು ಕರೆದುಕೊಂಡು ಬರುವಂತಹ ಪರಿಸ್ಥಿತಿಯನ್ನು ತೋಟದ ಮಾಲೀಕರು ಎದುರಿಸುತ್ತಿದ್ದಾರೆ.

ಕಾರ್ಮಿಕರ ಸಮಸ್ಯೆಯಿಂದ ಎಷ್ಟೋ ತೋಟಗಳಲ್ಲಿ ಕಾಫಿ ಕೊಯ್ಯಲು ಸಾಧ್ಯವಾಗದೇ ಹಣ್ಣು ಉದುರಿ ವ್ಯರ್ಥವಾಗುತ್ತಿದೆ. ಇದರಿಂದ ತೋಟದ ಮಾಲೀಕರ ಆದಾಯ ಕುಂಠಿತವಾಗುತ್ತಿದೆ. ಇದಲ್ಲದೇ, ಕಾರ್ಮಿಕರ ದುಬಾರಿ ವೇತನ ಭರಿಸಲಾಗದೆ ಅದೆಷ್ಟೋ ಮಾಲೀಕರು ತಮ್ಮ ತೋಟಗಳನ್ನು ಗುತ್ತಿಗೆ ಆಧಾರದ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳಿಗೆ ನೀಡುತ್ತಿದ್ದಾರೆ. ತೋಟ ಮಾರಿದ ಮೇಲೆ ಅಥವಾ ಗುತ್ತಿಗೆ ನೀಡಿದ ಮೇಲೆ ಇಲ್ಲಿ ಇರುವ ಅವಶ್ಯಕತೆ ಇಲ್ಲವೆಂದುಕೊಂಡು ಹಲವು ತೋಟದ ಮಾಲೀಕರು ಬೆಂಗಳೂರು, ಮೈಸೂರಿನತ್ತ ಮುಖ ಮಾಡುತ್ತಿದ್ದಾರೆ.

ಸಾಮಾಜಿಕ ಸಮಸ್ಯೆ: ಕಾಡಾನೆ ಹಾವಳಿಯಿಂದ ಕೇವಲ ಪ್ರಾಣಹಾನಿ ಅಥವಾ ಬೆಳೆ ನಾಶವಾಗುತ್ತಿಲ್ಲ. ಆನೆ ಭಯದಿಂದ ಎಷ್ಟೋ ಕುಟುಂಬಗಳು ಹೊರಜಿಲ್ಲೆಗೆ ವಲಸೆ ಹೋಗುತ್ತಿವೆ. ಜಿಲ್ಲೆಯ ಮೂಲನಿವಾಸಿಗಳು ಹೀಗೆ ಹೋಗುವುದರಿಂದ ಅವರೊಂದಿಗೆ ಅವರ ಸಮುದಾಯದ ಸಂಸ್ಕೃತಿ ಕೂಡ ಹೊರಹೋಗುತ್ತದೆ. ಇದೆಲ್ಲೋ ಜಿಲ್ಲೆಯ ವಿಭಿನ್ನ ಸಂಸ್ಕೃತಿಗೆ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತಂದೊಡ್ಡುವ ಅಪಾಯವಿದೆ ಎಂದು ವಿಶ್ಲೇಷಿಸಬಹುದು.

ದೂಳು ತಿನ್ನುತ್ತಿರುವ ವರದಿ
ಕಾಡಾನೆ- ಮಾನವ ಸಂಘರ್ಷದ ಬಗ್ಗೆ ಸರ್ಕಾರಕ್ಕೆ ಇದುವರೆಗೆ ಹಲವು ವರದಿಗಳು ಸಲ್ಲಿಕೆಯಾಗಿವೆ. ಆನೆಗಳ ಪ್ರವೇಶವನ್ನು ತಡೆಯುವುದರ ಬಗ್ಗೆ, ಮನುಷ್ಯರು ವಾಸಿಸುವ ಸ್ಥಳಗಳನ್ನು ಸಂರಕ್ಷಿಸುವ ಬಗ್ಗೆ ಹಲವು ಸಲಹೆಗಳನ್ನು ನೀಡಲಾಗಿದೆ.

ಕಾಡಾನೆಗಳು ಪ್ರವೇಶಿಸುವ ಮಾರ್ಗದ ಸುತ್ತ ವಿಶೇಷವಾಗಿ ದಕ್ಷಿಣ ಕೊಡಗಿನ ಸುತ್ತ ಸೋಲಾರ್ ತಂತಿ ಬೇಲಿ ಹಾಗೂ ಆನೆ ಕಂದಕ ಎರಡನ್ನೂ ನಿರ್ಮಿಸುವ ಮೂಲಕ ಈ ಸಮಸ್ಯೆಗೆ ಬಹುಮಟ್ಟಿಗೆ ಪರಿಹಾರ ರೂಪಿಸಬಹುದು ಎಂದು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಸರ್ಕಾರಕ್ಕೆ ನೀಡಿರುವ ವರದಿಯೂ ಇದರಲ್ಲಿ ಒಂದಾಗಿದೆ.

ಈ ವರದಿಯ ಅನುಷ್ಠಾನವು ಅತ್ಯಂತ ಕಾರ್ಯಸಾಧು ಹಾಗೂ ಮಿತವ್ಯಯಕರವೆಂದು ಹೇಳಲಾಗುತ್ತಿದೆ. ಸೋಲಾರ್ ತಂತಿ ಬೇಲಿ  ಹಾಗೂ ಕಂದಕಗಳ ನಿರ್ಮಾಣಕ್ಕಾಗಿ ರೂ. 25 ಕೋಟಿ ಮತ್ತು ಇವುಗಳ ನಿರ್ವಹಣೆಗಾಗಿ (ಐದು ವರ್ಷಗಳ ಅವಧಿಗಾಗಿ) ರೂ 22 ಕೋಟಿ ವೆಚ್ಚವನ್ನು ಅಂದಾಜಿಸಲಾಗಿತ್ತು. ಒಟ್ಟು ಯೋಜನಾ ವೆಚ್ಚವು ಕೇವಲ ರೂ 47 ಕೋಟಿ ಆಗಿತ್ತು. ಈ ಕಾರ್ಯ ಯೋಜನೆಯು ಬಹುಮಟ್ಟಿಗೆ ಪರಿಣಾಮಕಾರಿಯಾಗಬಹುದಿತ್ತು ಎಂದು ವಿಶ್ಲೇಷಿಸಲಾಗಿತ್ತು.

ವರದಿ ಸಲ್ಲಿಕೆಯಾಗಿ ಆರು ತಿಂಗಳಿಗಿಂತ ಹೆಚ್ಚು ಸಮಯವಾಗಿದ್ದರೂ ಇದುವರೆಗೆ ಯಾವುದೇ ತೀರ್ಮಾನವನ್ನು ಸರ್ಕಾರ ಪ್ರಕಟಿಸಿಲ್ಲ. ಜಿಲ್ಲೆಯ ಜನತೆ ಒಕ್ಕೊರಲಿನಿಂದ ಒತ್ತಡ ಹಾಕುವವರೆಗೂ ಸರ್ಕಾರ ಎಚ್ಚೆತ್ತುಕೊಳ್ಳಲ್ಲವೇನೋ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT