ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ವಲಸೆಯಿಂದ ಕನ್ನಡವೂ ವಲಸೆ

Last Updated 4 ಫೆಬ್ರುವರಿ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: ರೈತರು ವಲಸೆ ಹೋದರೆ, ಕನ್ನಡವೂ ವಲಸೆ ಹೋಗುತ್ತದೆ. ಕನ್ನಡ ಉಳಿಯಬೇಕಾದರೆ ಮೊದಲು ವಲಸೆ ಹೋಗುವುದನ್ನು ತಪ್ಪಿಸಿ...

- ಇದು 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಗೀತಾ ನಾಗಭೂಷಣ ಅವರು ಸರ್ಕಾರಕ್ಕೆ ಮಾಡಿದ ಮನವಿ. ಕನ್ನಡ ಧ್ವಜವನ್ನು ಈ ಬಾರಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶ ಮತ್ತು ಕೃಷಿ ಕಾರ್ಮಿಕರು ಹೆಚ್ಚಾಗಿ ಕನ್ನಡ ಬಳಸುತ್ತಾರೆ. ಕನ್ನಡ ಮಾತನಾಡುವ ಜನ ವಲಸೆ ಹೋದರೆ, ಕನ್ನಡವೂ ವಲಸೆ ಹೋಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ವಲಸೆ ತಪ್ಪಿಸಲು ದುಡಿಯುವ ಕೈಗಳಿಗೆ ಮೊದಲು ಉದ್ಯೋಗ ಕೊಡಬೇಕು. ಈ ನಿಟ್ಟಿನಲ್ಲಿ ಅನ್ನ, ವಸತಿ, ಬಟ್ಟೆಗೆ ಮೊದಲ ಆದ್ಯತೆ ನೀಡಿ ಎಂದು ಮನವಿ ಮಾಡಿದರು.

ಕನ್ನಡದ ಮೊನಚು ಮೊಂಡಾಗುತ್ತಿದೆ ಎನ್ನುವ ಸಂದರ್ಭದಲ್ಲಿ, ಅದಕ್ಕೆ ಸಾಣೆ ಹಿಡಿದಂತೆ ಬೆಂಗಳೂರಿನಲ್ಲಿ ಸಮ್ಮೇಳನ ನಡೆಸುತ್ತಿರುವುದು ಸಂತೋಷವನ್ನುಂಟು ಮಾಡಿದೆ. ಆದರೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡುವಾಗ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಇದುವರೆಗೆ 77 ಸಮ್ಮೇಳನಗಳು ಆಗಿವೆ. ಆದರೆ ನಾಲ್ಕು ಬಾರಿ ಮಾತ್ರ ಮಹಿಳೆಯರು ಅಧ್ಯಕ್ಷರಾಗಿದ್ದರು. ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ.ಸಾಹಿತ್ಯ ಕ್ಷೇತ್ರದಲ್ಲಿ ಮೀಸಲಾತಿ ಕೊಡಿ ಎಂದು ಕೇಳುವುದಿಲ್ಲ. ಆದರೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಅವಧಿ ಮೂರು ವರ್ಷವಾಗಿದ್ದು, ಕನಿಷ್ಠ ಒಂದು ವರ್ಷವಾದರೂ ಮಹಿಳೆಯರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಆಶಯ ಭಾಷಣ ಮಾಡಿದ ಪರಿಷತ್ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್, ಬದುಕಿನಲ್ಲಿ ಸಾರ್ಥಕ ಭಾವ ಮೂಡಿದೆ. ಬೆಂಗಳೂರಿನಲ್ಲಿ ಸಮ್ಮೇಳನ ನಡೆಸುವ ತೀರ್ಮಾನ ತೆಗೆದುಕೊಂಡಾಗ, ಅನೇಕರು ಈ ಕಾರ್ಯದಲ್ಲಿ ವಿಫಲರಾಗುತ್ತೀರಿ ಎಂದು ಹೆದರಿಸಿದ್ದರು. ಆದರೆ ಸಮ್ಮೇಳನದ ಯಶಸ್ಸು ನೋಡಿದರೆ ಮಾತು ನಿಂತಿದೆ, ಕಣ್ಣೀರು ಬರುತ್ತಿದೆ ಎಂದು ಭಾವುಕರಾಗಿ ನುಡಿದರು.

ಕನ್ನಡದ ಜಾಗೃತಿ ಈ ನೆಲದ ಅಂತರಂಗದಲ್ಲಿ ಅಡಗಿದೆ ಎಂಬುದಕ್ಕೆ ಸಮ್ಮೇಳನವೇ ಸಾಕ್ಷಿ. ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಯುತ್ತಿದ್ದು, ಇದರ ಹಿಂದೆ ಹಲವರ ಶ್ರಮವಿದೆ ಎಂದರು.

ಸಮ್ಮೇಳನದ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಮಾತನಾಡಿ, ಕೆಂಪೇಗೌಡ ಕಟ್ಟಿದ ಬೆಂಗಳೂರಿನಲ್ಲಿ ಇಂತಹ ಸಮ್ಮೇಳನಗಳು ಹೆಚ್ಚಾಗಿ ನಡೆಯಲಿ ಎಂದು ಆಶಿಸಿದರು.

ಅಭಿಯಾನ ಶುರು ಮಾಡಿ:ವಿವಿಧ ಲೇಖಕರ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಸಂಸದ ಅನಂತಕುಮಾರ್, ‘ಕವಿಗಳು, ವಿದ್ವಾಂಸರಿಗೆ ಮಾತ್ರ ಸೀಮಿತವಾದ ಸಮ್ಮೇಳನವಲ್ಲ. ಇದು ಎಲ್ಲರ ಹಬ್ಬ. ಕನ್ನಡದಲ್ಲಿ ಬರೆಯುತ್ತೇನೆ, ಓದುತ್ತೇನೆ ಮತ್ತು ಮಾತನಾಡುತ್ತೇನೆ ಎಂದು ಶಪಥ ಮಾಡಬೇಕು. ಈ ನಿಟ್ಟಿನಲ್ಲಿ ಅಭಿಯಾನ ಶುರು ಮಾಡಿ’ ಎಂದು ಕರೆ ನೀಡಿದರು.

ಪುಸ್ತಕ ನೀತಿ ಜಾರಿಗೊಳಿಸಿ: ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಓದುಗರಿಗೆ ಅನುಕೂಲವಾಗುವ, ಬರಹಗಾರರಿಗೆ ನ್ಯಾಯ ಸಿಗುವ ಪುಸ್ತಕ ನೀತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತರಬೇಕು ಎಂದು ಮನವಿ ಮಾಡಿದರು. ‘ಕನ್ನಡದ ಉದ್ಧಾರಕ್ಕಾಗಿ ಪುಸ್ತಕ ಓದುತ್ತೇವೆ ಎಂಬ ಭಾವನೆಯನ್ನು ಬಿಟ್ಟು ನಮ್ಮ ಉದ್ಧಾರಕ್ಕಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳೊಣ’ ಎಂದರು.

ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಅವರು ‘ಬೆಂಗಳೂರು ಬಾಗಿನ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಹಿರಿಯ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಅವರು ಪರಿಷತ್ ಪ್ರಕಟಿಸಿರುವ ವಿವಿಧ ಪುಸ್ತಕಗಳನ್ನು ಲೋಕಾರ್ಪಡೆ ಮಾಡಿದರು. ಸಾಹಿತಿ ಡಾ.ಕಮಲಾ ಹಂಪನಾ ಪರಿಷತ್ ದಿನದರ್ಶಿಕೆಯನ್ನು ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್.ಭೈರಪ್ಪ ಸಾವಿರ ಕನ್ನಡ ಗೀತೆಗಳ ಧ್ವನಿಸಾಂದ್ರಿಕೆ ಬಿಡುಗಡೆ ಮಾಡಿದರು.

ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ, ಗೃಹ ಸಚಿವ ಆರ್.ಅಶೋಕ ಸ್ವಾಗತಿಸಿದರು. ಸಾಹಿತಿಗಳಾದ ಪ್ರೊ.ಯು.ಆರ್.ಅನಂತಮೂರ್ತಿ, ಪ್ರೊ.ಚಂದ್ರಶೇಖರ ಪಾಟೀಲ, ಜಿ.ಎಸ್.ಶಿವರುದ್ರಪ್ಪ, ಡಾ.ದೇ.ಜವರೇಗೌಡ, ಜಿ.ನಾರಾಯಣ, ಸಂಸದ ಎಂ.ರಾಮಾಜೋಯಿಸ್, ಶಾಸಕರಾದ ಡಿ.ಹೇಮಚಂದ್ರ ಸಾಗರ್, ಅಶ್ವತ್ಥನಾರಾಯಣ, ನೆ.ಲ.ನರೇಂದ್ರ ಬಾಬು, ಪ್ರೊ.ಎಂ.ಆರ್.ದೊರೆಸ್ವಾಮಿ, ಶ್ರೀನಾಥ್, ನಟಿ ಲೀಲಾವತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್, ಸ್ವಾಗತ ಸಮಿತಿಯ ಕಾರ್ಯದರ್ಶಿ ಸಿ.ಕೆ.ರಾಮೇಗೌಡ ಸೇರಿದಂತೆ ಕಲಾವಿದರು, ಸಾಹಿತಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT