ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಮನ ರಂಜಿಸಿದ ಪ್ರತಿಮಾಲೆ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕಲಾ ಪ್ರೇಮಿ ಪ್ರತಿಷ್ಠಾನವು ಮಲ್ಲೇಶ್ವರದ ಸೇವಾ ಸದನದ ಸಭಾಂಗಣದಲ್ಲಿ ಶತಾವಧಾನಿ ಡಾ. ಗಣೇಶ್ ಮತ್ತು ಸಂಗಡಿಗರಿಂದ `ಪ್ರತಿಮಾಲೆ~ ಎಂಬ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಭಾರತೀಯ ಸಾಹಿತ್ಯ ಪರಂಪರೆಯ ಒಂದು ಪ್ರಾಚೀನ ಮನೋರಂಜನೆಯ ಆಟವಿದು.

`ಅಂತ್ಯಾಕ್ಷರಿ ಎಂದೂ ಕರೆಯಲಾಗುವ `ಪ್ರತಿಮಾಲೆ~ ಬಗ್ಗೆ ಪ್ರಸ್ತಾಪಿಸಿದ ಶತಾವಧಾನಿ ಡಾ. ಗಣೇಶ್ ಅವರು ಇತರ ವಿದ್ವಾಂಸರಾದ ಪ್ರೊ. ಕೆ.ಎಸ್. ಕಣ್ಣನ್, ಪ್ರೊ. ಎಸ್. ರಂಗನಾಥ್, ಡಾ. ಆರ್. ಶಂಕರ್, ಸುಧೀರ್ ಕೃಷ್ಣಸ್ವಾಮಿ ಮತ್ತು ಎನ್.ಎ.ರಾಮಚಂದ್ರ ಅವರನ್ನು ಪರಿಚಯಿಸಿದರು. ನಂತರ `ಪ್ರತಿಮಾಲೆ~ ಪ್ರಾರಂಭವಾಯಿತು. ವಿದ್ವಾಂಸರನ್ನು ಎರಡು ತಂಡಗಳಾಗಿ ವಿಂಗಡಿಸಿ, ಒಂದು ತಂಡವು ಹೇಳಿದ ಕಾವ್ಯ/ಶ್ಲೋಕದ ಕೊನೆಯ ಅಕ್ಷರದಿಂದ ಪ್ರಾರಂಭವಾಗುವ ಕಾವ್ಯ/ಶ್ಲೋಕವನ್ನು ಮತ್ತೊಂದು ತಂಡವು ಹೇಳಬೇಕು.

ಪ್ರೇಕ್ಷಕರಿಗೆ ಈ ಶ್ಲೋಕಗಳು ಅರ್ಥವಾಗಿ ಅವರು ಅವುಗಳ ಸೊಬಗನ್ನು ಆಸ್ವಾದಿಸಲು ವಿದ್ವಾಂಸರು ಕಾವ್ಯವನ್ನು ಹೇಳಿದ ನಂತರ ಅದರ ಅರ್ಥವನ್ನು ಹೇಳಿ ಅದು ಯಾವ ಕೃತಿಯಿಂದ ಆಯ್ದ ಭಾಗವೆಂದೂ ತಿಳಿಸುತ್ತಿದ್ದರು. ಇದರಿಂದ ಎಲ್ಲರೂ ಈ ಸಂಸ್ಕೃತ ಕಾವ್ಯಗಳ ಸೊಬಗನ್ನು ಸವಿಯುವಂತಾಯಿತು.

ವಾಲ್ಮೀಕಿ, ಕಾಳಿದಾಸ, ಭರ್ತೃಹರಿ, ಇತ್ಯಾದಿ ಹೆಸರಾಂತ ಕಾವ್ಯಪಂಡಿತರ ಕೃತಿಗಳಿಂದ ಆಯ್ದ ಕಾವ್ಯಗಳು ಗಂಭೀರ ವಿಚಾರಗಳಲ್ಲದೆ, ಜೀವನ ಮೌಲ್ಯಗಳು, ಹಾಸ್ಯ ಇತ್ಯಾದಿ ಅನೇಕ ವಿಷಯಗಳನ್ನು ಕುರಿತಾಗಿದ್ದವು. ತುಂಬಿದ ಸಭೆಯ ಪ್ರೇಕ್ಷಕರು ತನ್ಮಯತೆಯಿಂದ ಈ ಆಟವನ್ನು ಆಸ್ವಾದಿಸಿದರು.

ಡಾ. ಗಣೇಶ್ ಅವರು ಈ ಆಟದ ಮೂಲ ರೂಪದಲ್ಲಿ ಕಾವ್ಯಗಳನ್ನು ಅನುವಾದಿಸಿ ಹೇಳುವುದಿಲ್ಲ. ಆ ರೀತಿ ಆಡುವಾಗ ಆಟಗಾರರ ಮೇಲೆ ಬೀಳುವ ಒತ್ತಡ ಎಷ್ಟು ಎಂದು ತೋರಿಸಲು ಒಂದೆರಡು ಸುತ್ತುಗಳನ್ನು ಕನ್ನಡ ಅನುವಾದವಿಲ್ಲದೆ ಆಡಿತೋರಿಸಿದರು.

ಆ ಆಟದ ವೇಗ ಮತ್ತು ಆಟಗಾರರು ಅತ್ಯಲ್ಪ ಸಮಯದಲ್ಲಿ ಸ್ಪಂದಿಸಲು ಅವರ ಮೇಲಿದ್ದ ಒತ್ತಡ ಸಭಿಕರು ಉಸಿರು ಬಿಗಿಹಿಡಿದು ಕಾರ್ಯಕ್ರಮ ವೀಕ್ಷಿಸುವಂತೆ ಮಾಡಿತ್ತು.
ಈ ಆಟವು ಸಂಸ್ಕೃತವಲ್ಲದೆ ಮಲಯಾಳಂ ಮತ್ತು ತೆಲುಗಿನಲ್ಲೂ ಪ್ರಚಲಿತವಿದೆ. ಕನ್ನಡದಲ್ಲಿಯೂ ಬಳಕೆಗೆ ಬಂದರೆ ಚೆನ್ನಾಗಿರುತ್ತದೆ ಎಂದು ಡಾ. ಗಣೇಶ್ ಅಭಿಪ್ರಾಯಪಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT