ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀರ್ಣೋದ್ಧಾರ ಕಾಣದ ಕೊಂಗಳ್ಳಿ ಬೆಟ್ಟದ ದೇಗುಲ

Last Updated 22 ಜುಲೈ 2012, 5:40 IST
ಅಕ್ಷರ ಗಾತ್ರ

ಚಾಮರಾಜನಗರ: ಸುತ್ತಲೂ ಬೆಟ್ಟಗುಡ್ಡದ ಸಾಲು. ಮಧ್ಯದಲ್ಲಿರುವ ದೇಗುಲವನ್ನು ನೋಡುವುದೇ ಆನಂದ. ಸುಂದರ ಪರಿಸರ ಹೊಂದಿರುವ ಜಿಲ್ಲೆಯ ಗಡಿಭಾಗದಲ್ಲಿರುವ ಕೊಂಗಳ್ಳಿ ಬೆಟ್ಟದ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ಪ್ರತಿದಿನವೂ ಕರ್ನಾಟಕದ ಭಕ್ತರು ದಾಂಗುಡಿ ಇಡುತ್ತಾರೆ.

ವಾಸ್ತವವಾಗಿ ಈ ದೇಗುಲ ತಮಿಳುನಾಡು ರಾಜ್ಯಕ್ಕೆ ಸೇರಿದೆ. ಆದರೆ, ಮುಕ್ಕಾಲು ಭಾಗದಷ್ಟು ಭಕ್ತರು ಕನ್ನಡಿಗರು ಎಂಬುದು ವಿಶೇಷ. ತಮಿಳು ಮತ್ತು ಕನ್ನಡದ ಬಾಂಧವ್ಯದ ಕೊಂಡಿಯಾಗಿರುವ ಈ ದೇಗುಲ ಜೀರ್ಣೋದ್ಧಾರ ಕಂಡಿಲ್ಲ. ಎರಡು ಸರ್ಕಾರಗಳ ದಿವ್ಯನಿರ್ಲಕ್ಷ್ಯದಿಂದ ಇಲ್ಲಿಗೆ ತೆರಳುವ ಭಕ್ತರು ಸೌಲಭ್ಯ ಇಲ್ಲದೆ ತೊಂದರೆ ಅನುಭವಿಸುವುದು ತಪ್ಪಿಲ್ಲ.

ಈ ದೇವಾಲಯಕ್ಕೆ ಮಹಿಳೆಯರು ಹೋಗುವುದಿಲ್ಲ. ಅಪ್ಪಿತಪ್ಪಿ ಅವರು ಬಂದರೆ ಕಲ್ಲಾಗುತ್ತಾರೆ ಎಂಬ ಪ್ರತೀತಿಯಿದೆ. ಆದರೆ, ಸ್ತ್ರೀಯರು ದೇವಸ್ಥಾನಕ್ಕೆ ತೆರಳಿ ಕಲ್ಲಾಗಿರುವ ನಿದರ್ಶನವಿಲ್ಲ. ಚಾಮರಾಜನಗರ- ತಾಳವಾಡಿ ಮಾರ್ಗ ಹಾಗೂ ಚಾಮರಾಜನಗರ- ಹರದನಹಳ್ಳಿ ಮಾರ್ಗವಾಗಿ ಈ ಬೆಟ್ಟಕ್ಕೆ ತೆರಳಬಹುದು. ಆದರೆ, ಈ ಮಾರ್ಗದ ರಸ್ತೆಗಳು ಹದೆಗೆಟ್ಟಿದ್ದು, ಭಕ್ತರು ಸಂಕಷ್ಟ ಅನುಭವಿಸುವಂತಾಗಿದೆ.

ಭಕ್ತರ ಅನುಕೂಲಕ್ಕಾಗಿ ಚಾಮರಾಜನಗರ ಮತ್ತು ಗುಂಡ್ಲುಪೇಟೆಯಿಂದ ತಲಾ ಒಂದೊಂದು ಕೆಎಸ್‌ಆರ್‌ಟಿಸಿ ಬಸ್ ನಿತ್ಯವೂ ಸಂಚರಿಸುತ್ತದೆ. ತಮಿಳುನಾಡು ಸರ್ಕಾರ 2 ಸಮುದಾಯ ಭವನವನ್ನು ಮಾತ್ರ ನಿರ್ಮಾಣ ಮಾಡಿದೆ. ಈ ದೇವಾಲಯ ಸತ್ಯಮಂಗಲ ಅರಣ್ಯ ವ್ಯಾಪ್ತಿಗೆ ಒಳಪಡುತ್ತದೆ. ಪ್ರತಿ ತಿಂಗಳ ವಿಶೇಷ ದಿನಗಳಂದು ಸಾವಿರಾರು ಭಕ್ತರು ದೇಗುಲಕ್ಕೆ ತೆರಳುತ್ತಾರೆ. ಹೀಗಾಗಿ, ತಿಂಗಳಿಗೆ ದೇಗುಲದ ಆದಾಯ 1ರಿಂದ 1.5 ಲಕ್ಷ ರೂ ಇದೆ. ಗೋಲಕದಲ್ಲಿ ಸಂಗ್ರಹವಾಗುವ ಹಣವನ್ನು ತಮಿಳುನಾಡು ಸರ್ಕಾರ ಎಣಿಸಿಕೊಂಡು ಹೋಗುತ್ತಿದೆ. ಆದರೆ, ದೇವಾಲಯದ ಅಭಿವೃದ್ಧಿಗೆ ಹಣವನ್ನು ವಿನಿಯೋಗಿಸುತ್ತಿಲ್ಲ ಎಂಬುದು ಭಕ್ತರ ಅಳಲು.

ದೇವಾಲಯದ ಬಳಿಯಲ್ಲಿ ಭಕ್ತರಿಗೆ ಅನುಕೂಲ ಕಲ್ಪಿಸಲು ಮೂಲ ಸೌಕರ್ಯ ಕಲ್ಪಿಸಿಲ್ಲ. ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ಈ ಪ್ರದೇಶದಲ್ಲಿ ಸ್ವಚ್ಛತೆಯೂ ಕಣ್ಮರೆಯಾಗಿದೆ. ಕರ್ನಾಟಕದ ಭಕ್ತರು ಸಂಘ ರಚಿಸಿಕೊಂಡು ದೇವಾಲಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಆದರೆ, ಅವರಿಗೆ ಸರ್ಕಾರಗಳು ಆರ್ಥಿಕ ನೆರವು ನೀಡುತ್ತಿಲ್ಲ. ದಾನಿಗಳ ನೆರವಿನಿಂದ ವಸತಿಗೃಹ ಮಾತ್ರ ನಿರ್ಮಿಸಲಾಗಿದೆ.

ಬೈಯ್ಯನಪುರ ಗ್ರಾಮ ಪಂಚಾಯಿತಿಯಿಂದ ಒಂದು ಟ್ಯಾಂಕ್ ಮತ್ತು ಸಂಪು ನಿರ್ಮಿಸಲಾಗಿದೆ. ಇಲ್ಲಿಂದ ಅರ್ಧ ಕಿ.ಮೀ. ದೂರದಲ್ಲಿ ನೀರು ಪೂರೈಕೆಗೆ ಕೊಳವೆಬಾವಿ ಕೊರೆಯಲಾಗಿದೆ. ಆದರೆ, ಸತ್ಯಮಂಗಲದ ವಿದ್ಯುತ್ ಸರಬರಾಜು ಇಲಾಖೆಯಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಹೀಗಾಗಿ, ಭಕ್ತರು ಕುಡಿಯುವ ನೀರಿಗೆ ತೊಂದರೆ ಅನುಭವಿಸುವಂತಾಗಿದೆ.

`ಯಾನಗಹಳ್ಳಿಯಿಂದ ಎತ್ತಗಟ್ಟಿಬೆಟ್ಟದವರೆಗಿನ ಕರ್ನಾಟಕಕ್ಕೆ ಸೇರಿದ ಎರಡು ಕಿ.ಮೀ. ಉದ್ದದ ರಸ್ತೆ ತೀವ್ರ ಹದಗೆಟ್ಟಿದೆ. ಹೀಗಾಗಿ, ರಸ್ತೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ದೇವಾಲಯಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಆದರೆ, ಅವರು ಸ್ವಚ್ಛತೆಗೆ ಒತ್ತು ನೀಡುತ್ತಿಲ್ಲ. ಮತ್ತೊಂದೆಡೆ ಸೌಲಭ್ಯವೂ ಇಲ್ಲ. ಎರಡು ರಾಜ್ಯ ಸರ್ಕಾರಗಳು ದೇವಾಲಯದ ಅಭಿವೃದ್ಧಿಗೆ ಒತ್ತು ನೀಡಬೇಕಿದೆ~ ಎಂಬುದು ಅರ್ಚಕರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT