ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಾತುರಿಯಲ್ಲಿ ರಸ್ತೆಗೆ ತೇಪೆ ಕಾರ್ಯ

ಶಿರಸಿ–ಬನವಾಸಿ ರಸ್ತೆ: ಕಾಟಾಚಾರದ ಕಾಮಗಾರಿ ಆರೋಪ
Last Updated 10 ಜನವರಿ 2014, 8:12 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವಕ್ಕೆ ಎಂಟು ದಿನಗಳು ಬಾಕಿ ಇರುವಾಗ ಶಿರಸಿ–ಬನವಾಸಿ ರಸ್ತೆಗೆ ತೇಪೆ ಹಚ್ಚುವ, ರಸ್ತೆ ಬದಿ ಮಣ್ಣು ಹಾಕಿ ಸಮತಟ್ಟುಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ.

ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಮಣ್ಣಿನ ರಾಶಿ ಹಾಕಿದ್ದು, ಸಿಂಗಲ್‌ ರಸ್ತೆಯಲ್ಲಿ ವಾಹನ ಸವಾರರು ಸರ್ಕಸ್‌ ಮಾಡಿ ವಾಹನ ಚಲಾಯಿಸಬೇಕಾದ ಸ್ಥಿತಿ ಎದುರಾಗಿದೆ. ಚಿಕ್ಕದಾದ ರಸ್ತೆಯಲ್ಲಿ ಫುಟ್‌ಪಾತ್‌ ಮತ್ತು ರಸ್ತೆ ತುದಿಯ (ಎಡ್ಜ್‌) ನಡುವೆ ಅಂತರ ಇರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಎದುರಿನಿಂದ ಬಸ್‌ ಬಂದರೆ ರಸ್ತೆಯಿಂದ ಕೆಳಗೆ ಇಳಿಯಲು ಸಾಧ್ಯವಾಗದ ಸ್ಥಿತಿ ಇದೆ.

ಹೀಗಾಗಿ ರಸ್ತೆ ಸಮತಟ್ಟುಗೊಳಿಸಲು ತರಾತುರಿಯಲ್ಲಿ ಮಣ್ಣು ತುಂಬುವ ಕೆಲಸ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದೆ.
ಕದಂಬೋತ್ಸವದ ತರಾತುರಿಯಲ್ಲಿ ರಸ್ತೆ ಬದಿ ಮಣ್ಣು ತುಂಬುವುದರಿಂದ ಬನವಾಸಿಯ ಮಾರ್ಗದಲ್ಲಿ ಸಾಗುವವರಿಗೆ ದೂಳಿನ ಸಿಂಚನವಾಗುತ್ತದೆ. ಅಲ್ಲದೇ ದೊಡ್ಡ ವಾಹನಗಳು ಬಂದಾಗ ಬದಿ ನೀಡುವ ಭರದಲ್ಲಿ ದ್ವಿಚಕ್ರ ವಾಹನ ಸವಾರರು ಹೊಸದಾಗಿ ಹಾಕಿದ ಮಣ್ಣಿನಲ್ಲಿ ಆಯತಪ್ಪಿ ಬೀಳುವ ಸಾಧ್ಯತೆಗಳಿವೆ. ಅದಕ್ಕಾಗಿ ಮಣ್ಣು ತುಂಬಿ ತೇಪೆ ಹಚ್ಚುವ ಕಾರ್ಯ ಬೇಡ. ಶಿರಸಿ–ಬನವಾಸಿ ರಸ್ತೆಯನ್ನು ಡಬಲ್‌ ರಸ್ತೆಯಾಗಿ ಅಭಿವೃದ್ಧಿಪಡಿಸಬೇಕು ಎಂಬ ಆಗ್ರಹ ಕದಂಬೋತ್ಸವ ಪೂರ್ವಭಾವಿ ಸಭೆಯಲ್ಲಿ ಬನವಾಸಿ ಭಾಗದ ಜನರಿಂದ ವ್ಯಕ್ತವಾಗಿತ್ತು.

ಇದಕ್ಕೆ ಒಪ್ಪಿಕೊಂಡಿದ್ದ ಲೋಕೋಪಯೋಗಿ ಇಲಾಖೆ ಈಗ ಮತ್ತೆ ಹಿಂದಿನ ಕದಂಬೋತ್ಸವಗಳಂತೆ ಜನರು, ಜನಪ್ರತಿನಿಧಿಗಳ ಕಣ್ಣೊರೆಸುವ ಕೆಲಸ ಪ್ರಾರಂಭಿಸಿದೆ. ಯಥಾಪ್ರಕಾರ ರಸ್ತೆ ಬದಿಯಲ್ಲಿ ಕಿಲೋಮೀಟರ್ ದೂರದ ವರೆಗೆ ತಂದು ಹಾಕಿರುವ ಮಣ್ಣು ರಾಶಿಯನ್ನು ಹರಡುವ ಕಾಮಗಾರಿ ನಡೆಸುತ್ತಿದೆ. ಇನ್ನೊಂದೆಡೆ  ಹೊಂಡ–ಗುಂಡಿಗಳಿಂದ ಚಿಂದಿಯಾಗಿರುವ ಬನವಾಸಿ ರಸ್ತೆಯಲ್ಲಿ ಶಿರಸಿ ಕಡೆಯಿಂದ ಹೊಂಡ ಮುಚ್ಚುವ ಕಾರ್ಯ ನಡೆಯುತ್ತಿದೆ.

‘ಕದಂಬೋತ್ಸವಕ್ಕೆ ಮುಖ್ಯಮಂತ್ರಿ ಬರುತ್ತಾರೆಂಬ ಗಡಿಬಿಡಿಯಲ್ಲಿ ಕಾಟಾಚಾರದ ಕೆಲಸ ನಡೆಸಿದರೆ ನಿತ್ಯ ಸಂಚರಿಸುವ ಸ್ಥಳೀಯ ನಾಗರಿಕರಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಪ್ರಸ್ತುತ ನಡೆಸುತ್ತಿರುವ ಕಾಮಗಾರಿಯ ಗುಣಮಟ್ಟ ನೋಡಿದರೆ ಕದಂಬೋತ್ಸವದ ಒಳಗಾಗಿ ರಸ್ತೆಯ ಹೊಂಡ ಯಥಾಸ್ಥಿತಿಗೆ ಮರಳುವ ಸಾಧ್ಯತೆ ಇದೆ ’ ಎಂದು ಸುಹಾಸ್‌ ಹೆಗಡೆ ಹುಲೇಮಳಗಿ, ಲಕ್ಷ್ಮೀಶ ಹೆಗಡೆ ಕಲ್ಗುಂಡಿಕೊಪ್ಪ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT