ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲುಗುಲೈನ್ ಆವರಿಸಿದ ಸೂತಕದ ಛಾಯೆ

Last Updated 27 ಅಕ್ಟೋಬರ್ 2011, 7:50 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಕೆಜಿಎಫ್‌ನ ಕೆನಡೀಸ್ ಲೈನಿನ 6ನೇ ಬ್ಲಾಕ್‌ಗೆ ಸೇರಿದ ತೆಲುಗು ಲೈನ್‌ನಲ್ಲಿ ಸೂತಕದ ಛಾಯೆ ಆವರಿಸಿದೆ. ಇಡೀ ನಗರವು ದೀಪಾವಳಿ ಸಂಭ್ರಮದಲ್ಲಿದ್ದರೆ ಈ ಲೈನ್‌ನ ನಿವಾಸಿಗಳಲ್ಲಿ ದುಃಖ ಹೆಪ್ಪುಗಟ್ಟಿದೆ.

ದೀಪಾವಳಿಗೆ ಮುನ್ನಾದಿನವಾದ ಸೋಮವಾರ ಅಶೋಕ ನಗರದಲ್ಲಿ ಮಲದಗುಂಡಿ ಸ್ವಚ್ಛಗೊಳಿಸಲು ಇಳಿದು ದುರ್ಮರಣಕ್ಕೀಡಾದ ನಾಗೇಂದ್ರಬಾಬು, ಪ್ರಸಾದ್‌ಕುಟ್ಟಿ ಮತ್ತು ರವಿ ಇದೇ ಲೈನ್‌ನಲ್ಲಿ ವಾಸವಿದ್ದವರು.

ಮೂರು ತಿಂಗಳ ಹಿಂದೆ ನಗರಸಭೆಯು ತಾತ್ಕಾಲಿಕ ಅವಧಿಯಲ್ಲಿ 140 ಮಂದಿಗೆ ನೀಡಿದ್ದ ಗುತ್ತಿಗೆ ಕೆಲಸಕ್ಕಾಗಿ ಈ ಮೂವರು ಸೇರಿದಂತೆ ಈ ಲೈನಿನ 29 ಮಂದಿ ಆಯ್ಕೆಯಾಗಿದ್ದರು. ಗುತ್ತಿಗೆ ಅವಧಿ ಮುಗಿದು ಕೈ ಬರಿದಾದ ಕಾರಣ ಈ ಮೂವರು ಮಲದಗುಂಡಿ ಸ್ವಚ್ಛಗೊಳಿಸುವ ಕೆಲಸಕ್ಕೆ ಇಳಿದಿದ್ದರು.

ಲೈನ್‌ನಲ್ಲಿರುವ ಬಹುತೇಕರು ಸಂಬಂಧಿಕರೇ ಆಗಿರುವುದರಿಂಧ ಈಗ ಈ ಮೂವರ ಮನೆಯಷ್ಟೆ ಅಲ್ಲದೇ ಇಡೀ ಲೈನ್‌ನಲ್ಲಿ ಶೋಕ ಮಡುಗಟ್ಟಿದೆ. ಮಕ್ಕಳು ಮಾತ್ರ ಸೂತಕದ ಅರಿವಿಲ್ಲದೆ ಇದ್ದಾರೆ.

ಯುವಕ ನಾಗೇಂದ್ರ ಬಾಬು (26) ಅವರ ಮನೆಯಲ್ಲಿ ಮಗು ಹುಟ್ಟಿದ ಸಂಭ್ರಮ ಬಹಳ ಬೇಗ ಕದಡಿ ಸಾವಿನ ದುಃಖ ಆವರಿಸಿದೆ. 11 ದಿನದ ಹಿಂದೆ ನಾಗೇಂದ್ರ ಬಾಬು ಹೆಣ್ಣುಮಗುವಿನ ತಂದೆಯಾಗಿದ್ದರು. ತಂದೆತನದ ಹೊಸ್ತಿಲಲ್ಲಿರುವಾಗಲೇ ಮಲದಗುಂಡಿ ಅವರನ್ನು ಬಲಿತೆಗೆದುಕೊಂಡಿದೆ.

ನಾಗೇಂದ್ರ ಅವರದು ಈ ಬಗೆಯ ದುರಂತವಾದರೆ, 29ರ ಹರೆಯದ ರವಿ ಅವರದು ಮತ್ತೊಂದು ಘೋರ ದುರಂತ. ಏಕೆಂದರೆ ಅವರ ಮದುವೆಯಾಗಿ ಕೇವಲ ಮೂರು ತಿಂಗಳಾಗಿತ್ತು. ನವದಾಂಪತ್ಯದ ಸಂಭ್ರಮ ಬಹಳ ಬೇಗ ಕೊನೆಯಾಗಿದೆ.

ಮಲದ ಗುಂಡಿ ಸ್ವಚ್ಛಗೊಳಿಸುವ ಕುಶಲಕರ್ಮಿ ಎಂದೇ ಹೆಸರು ಪಡೆದಿದ್ದ ಪ್ರಸಾದ್ ಕುಟ್ಟಿಯವರ ಒಬ್ಬ ಮಗ ಅಜಿತ್‌ಕುಮಾರ್ 8ನೇ ತರಗತಿ ಮತ್ತು ಮತ್ತೊಬ್ಬ ಮಗ ನಿತೀಶ್ 3ನೇ ತರಗತಿಯಲ್ಲಿ ಓದುತ್ತಿದ್ದಾರೆ.

ಇಡೀ ಲೈನ್‌ನ ನಿವಾಸಿಗಳು ಪಡುತ್ತಿರುವ ದುಃಖ ಇನ್ನೂ ಆ ಮಕ್ಕಳ ಅನುಭವಕ್ಕೆ ಬಂದಿಲ್ಲ. ತಂದೆಯ ಸಾವು ಕೂಡ ಅವರಿಗೆ ಅರ್ಥವಾಗಿಲ್ಲ. ಬುಧವಾರ `ಪ್ರಜಾವಾಣಿ~ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸಹಜವಾಗಿ ತಮ್ಮ ಮನೆಯ ಆಚೀಚೆ ಓಡಾಡಿಕೊಂಡಿದ್ದರು.

ಈ ಮಕ್ಕಳ ತಾಯಿ, ಪ್ರಸಾದ್ ಪತ್ನಿ ಕೂಡ ಮಲದಗುಂಡಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದು, ಈಗ ನಿಲ್ಲಿಸಿದ್ದಾರೆ. ಅದಕ್ಕೆ ಆ ಕೆಲಸದ ಪರಿಣಾಮವಾಗಿ ಎದುರಾಗಿರುವ ಕಾಯಿಲೆಯೇ ಕಾರಣ ಎಂಬುದು ಅವರ ನೆರೆಯವರ ಮಾತು. ನಗರಸಭೆ ಪೂರ್ಣಾವಧಿ ಕೆಲಸ ಮಾಡಿದರೆ ಮಾತ್ರ ತಮ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದು ಅವರ ಒತ್ತಾಸೆಯ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT