ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಬೆಲೆ ಏರಿಕೆ; ಲಾಭ ಗಳಿಕೆ ಹುನ್ನಾರ?

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕಳೆದ ಒಂದೂವರೆ ವರ್ಷದೊಳಗೆ ಪೆಟ್ರೋಲ್ ದರವನ್ನು ಹಲವಾರು ಬಾರಿ ದರ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದರ ಹೆಚ್ಚಳ ಆಗುವ ಲಕ್ಷಣಗಳೂ ಈಗಾಗಲೇ ಕಂಡುಬಂದಿವೆ. 

ಇದರರ್ಥ ಸರ್ಕಾರದ ಬೊಕ್ಕಸಕ್ಕೆ ಇನ್ನಷ್ಟು ತೆರಿಗೆ ಮತ್ತು ಲಾಭಾಂಶ ಬಂದು ಬೀಳುತ್ತದೆ. ದರ ಹೆಚ್ಚಳವಾದಾಗ ಒಂದಿಷ್ಟು ಪ್ರತಿಭಟನೆಗಳು ನಡೆಯುತ್ತವೆ, ಮತ್ತೆ ತಣ್ಣಗಾಗಿ ಇನ್ನೊಮ್ಮೆ ದರ ಹೆಚ್ಚಳ ಆಗುವ ವರೆಗೆ ಎಲ್ಲವೂ ಯಥಾ ರೀತಿ ನಡೆಯುತ್ತ ಹೋಗುತ್ತದೆ.

ಸರ್ಕಾರ ಕಳೆದ ವರ್ಷದ ಜೂನ್‌ನಿಂದಲೇ ಪೆಟ್ರೋಲ್ ದರವನ್ನು ಆಡಳಿತಾತ್ಮಕ ದರ ನಿಯಂತ್ರಣ ವ್ಯವಸ್ಥೆಯಿಂದ (ಎಪಿಎಂ) ಹೊರಗೆ ತಂದಿದೆ. ಜತೆಗೆ ಇತರ ಪೆಟ್ರೋಲಿಯಂ ಉತ್ಪನ್ನಗಳನ್ನೂ ಇದೇ ರೀತಿಯಲ್ಲಿ ದರ ನಿಯಂತ್ರಣದಿಂದ ಮುಕ್ತಗೊಳಿಸಲು ಅದು ಸೂಕ್ತ ಸಮಯಕ್ಕಾಗಿ ಕಾಯುತ್ತಿದೆ. ಅಂದರೆ ಮುಂದಿನ ದಿನಗಳಲ್ಲಿ ತೈಲ ಮಾರುಕಟ್ಟೆ ಕಂಪೆನಿಗಳು ಅಥವಾ ಮಾರುಕಟ್ಟೆ ಶಕ್ತಿಗಳೇ ಎಲ್ಲಾ ತೈಲ ಉತ್ಪನ್ನಗಳ ದರ ನಿರ್ಧರಿಸುವ ಸಾಧ್ಯತೆಗಳು ಕಂಡುಬರುತ್ತಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಮೌಲ್ಯ ಹೆಚ್ಚಳ, ತೈಲ ಕಂಪೆನಿಗಳ ನಷ್ಟ, ಸಬ್ಸಿಡಿ ಹೊರೆ, ಸಮಾಜ ಕಲ್ಯಾಣದ ಹೊರೆಯಂತಹ ಹಲವು ಕಾರಣಗಳನ್ನು ಮುಂದೊಡ್ಡಿ ತೈಲ ದರ ಹೆಚ್ಚಳ ಮಾಡಲಾಗುತ್ತಿದೆ.

ಪೆಟ್ರೋಲ್ ದರ ಹೆಚ್ಚಳಕ್ಕೆ ಈಗ ನೀಡುತ್ತಿರುವ ಮತ್ತೊಂದು ಕಾರಣ ಎಂದರೆ ಡಾಲರ್ ಮುಂದೆ ರೂಪಾಯಿ ದುರ್ಬಲಗೊಂಡಿರುವುದು. ಸದ್ಯದ ವಿದೇಶಿ ವಿನಿಮಯ ದರ ಡಾಲರ್‌ಗೆ ರೂ 49ಯಷ್ಟಿದೆ. ಸೆಪ್ಟೆಂಬರ್ ಆರಂಭದಲ್ಲಿ ಇದು ರೂ 46 ಸುತ್ತಮುತ್ತ ಇತ್ತು.

ರೂಪಾಯಿಯ ಮೌಲ್ಯ ಒಂದೊಂದು ರೂಪಾಯಿಯಷ್ಟು ಕುಸಿದಾಗಲೂ ದೇಶೀಯ ಡೀಸೆಲ್, ಎಲ್‌ಪಿಜಿ, ಸೀಮೆಎಣ್ಣೆ ಮಾರಾಟದಿಂದ ವಾರ್ಷಿಕ ರೂ 8 ಸಾವಿರ ಕೋಟಿಗಳಷ್ಟು ನಷ್ಟ ಉಂಟಾಗುತ್ತದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಜೈಪಾಲ್ ರೆಡ್ಡಿ ಈಚೆಗೆ ಹೇಳಿದ್ದು ಇದೇ ಉದ್ದೇಶದಿಂದ.

ತೈಲ ಕಂಪೆನಿಗಳು ಪ್ರತಿದಿನ ರೂ 271 ಕೋಟಿಗಳ ವಸೂಲಾತಿ ಬಾಕಿ ಅನುಭವಿಸುತ್ತಿದ್ದು, 2011-12ನೇ ಸಾಲಿನಲ್ಲಿ ತೈಲ ಕಂಪೆನಿಗಳ ವಸೂಲಾತಿ ಬಾಕಿ ಪ್ರಮಾಣ ರೂ 1,21,000 ಕೋಟಿಗಳಿಗೆ ಹೆಚ್ಚಲಿದೆ ಎಂದೂ ಸಚಿವರು ಹೇಳಿದ್ದಾರೆ.

ಸರ್ಕಾರ ನೀಡುವ ನೀಡುವ ಸಬೂಬು ಎಲ್ಲವೂ ನಿಜವೆಂದೇ ತೋರುತ್ತದೆ. ಡಾಲರ್ ಎದುರಲ್ಲಿ ರೂಪಾಯಿಯ ಮೌಲ್ಯ ಕುಸಿದಷ್ಟೂ ಕಚ್ಚಾತೈಲ ಆಮದು ವೆಚ್ಚ ಹೆಚ್ಚುತ್ತದೆ. ಇದರ ಪರಿಣಾಮವನ್ನು ಅಳೆಯಬೇಕಾದರೆ ನಾವು ವಾರ್ಷಿಕ ಆಮದು ಲೆಕ್ಕವನ್ನು ನೋಡಬೇಕು.

`ಆರ್‌ಬಿಐ~ ಹೊರತಂದ 2010-11ನೇ ಸಾಲಿನ ಭಾರತದ ಆರ್ಥಿಕತೆಗೆ ಸಂಬಂಧಿಸಿದ ಕೈಪಿಡಿಯಲ್ಲಿ ಕಚ್ಚಾ ತೈಲ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳ ಆಮದು ವೆಚ್ಚ 1,06,068 ದಶಲಕ್ಷ ಡಾಲರ್ ಎಂದು ತಿಳಿಸಲಾಗಿದೆ.

ಆ ವರ್ಷದ ಒಟ್ಟು ಆಮದಿನಲ್ಲಿ ಇದರ ಪಾಲು ಶೇ 30ರಷ್ಟಾಗುತ್ತದೆ. ರೂಪಾಯಿಯಲ್ಲಿ ಇದನ್ನು ಲೆಕ್ಕ ಹಾಕಿದಾಗ ರೂ 4,82,714 ಕೋಟಿ ಗಳಷ್ಟು ಆಗುತ್ತದೆ. ಆಗ ಡಾಲರ್‌ಗೆ ರೂಪಾಯಿ ಮೌಲ್ಯ ರೂ 45.5ರಷ್ಟಿತ್ತು. ಇದೀಗ ಡಾಲರ್ ಎದುರು ರೂಪಾಯಿಯ ಮೌಲ್ಯ ರೂ 50ರಷ್ಟಿದೆ ಎಂದಿಟ್ಟುಕೊಂಡರೆ, ಪೆಟ್ರೋಲಿಯಂ ಉತ್ಪನ್ನಗಳ ಆಮದು ವೆಚ್ಚ ರೂ 5,30,340 ಕೋಟಿಗಳಿಗೆ ಹೆಚ್ಚುತ್ತದೆ.

ಅಂದರೆ ರೂಪಾಯಿ ಮೌಲ್ಯ ಒಂದೊಂದು ರೂಪಾಯಿಯಂತೆ ಕುಸಿದಷ್ಟೂ ಅದರಿಂದ ರೂ 47,626 ಕೋಟಿಗಳಷ್ಟು ಅಧಿಕ ವೆಚ್ಚ ಎದುರಾಗುತ್ತದೆ. ಇದು ಕಚ್ಚಾ ತೈಲದ ಬೆಲೆ ಸ್ಥಿರವಾಗಿದ್ದಾಗ ಮಾತ್ರ. ಅದು ಸ್ಥಿರವಾಗಿ ಇರುವುದಿಲ್ಲ.

2009-10ರಲ್ಲಿ ಪ್ರತಿ ಬ್ಯಾರೆಲ್‌ಗೆ 69.76 ಡಾಲರ್ ಇತ್ತು, ಇದೀಗ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 111 ಡಾಲರ್‌ಗೆ ಹೆಚ್ಚಿದೆ ಎಂದು ಪೆಟ್ರೋಲಿಯಂ ಸಚಿವರು ಹೇಳುತ್ತಾರೆ. ಈ ನಿಟ್ಟಿನಲ್ಲಿ ನೋಡಿದಾಗ ಸಹ ನಷ್ಟದ ಪ್ರಮಾಣ ದೊಡ್ಡದೇ ಆಗುತ್ತದೆ. ಈ ಎಲ್ಲ ಪರಿಸ್ಥಿತಿಯನ್ನು ಜನ ಅರ್ಥಮಾಡಿಕೊಳ್ಳಬೇಕು ಮತ್ತು ತಾನು ಅನಿವಾರ್ಯವಾಗಿ ದರ ಹೆಚ್ಚಳ ಮಾಡಬೇಕಾಯಿತು ಎಂದು ಬಿಂಬಿಸುವುದೇ ಸರ್ಕಾರದ ಉದ್ದೇಶವಾಗಿದೆ.

ದುರ್ಬಲ ರೂಪಾಯಿ; ಅಧಿಕ ವರಮಾನ
ಆದರೆ, ನಷ್ಟವನ್ನಷ್ಟೇ ತೋರಿಸುವ ಸರ್ಕಾರ ತನಗೆ ಬರುವ ಲಾಭವನ್ನು ಮುಚ್ಚಿಟ್ಟು ಜನರನ್ನು ವಂಚಿಸುತ್ತಿದೆ. ರೂಪಾಯಿ ಮೌಲ್ಯ ಕುಸಿದಿರುವುದರಿಂದ ಆಮದು ಮಾಡಿಕೊಳ್ಳುವಾಗ ನಮಗೆ ನಷ್ಟವಾಗಬಹುದು, ಆದರೆ ರಫ್ತು ಮಾಡುವಾಗ ನಮಗೆ ಅಧಿಕ ವರಮಾನ ಬರುತ್ತದೆ.

ಭಾರತ ಖಂಡಿತವಾಗಿಯೂ ಶೇ 70ರಷ್ಟು ತನ್ನ ಕಚ್ಚಾ ತೈಲ ಅಗತ್ಯವನ್ನು ಆಮದು ಮಾಡಿಕೊಳ್ಳುತ್ತದೆ ನಿಜ. ಆದರೆ, ಅದು ಹಲವು ಪೆಟ್ರೋಲಿಯಂ ಉತ್ಪನ್ನಗಳನ್ನೂ ರಫ್ತು ಮಾಡುತ್ತದೆ.

ಆರ್‌ಬಿಐ ಮಾಹಿತಿ ಪ್ರಕಾರ ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಪ್ರಮಾಣ 2010-11ರಲ್ಲಿ 41,918 ದಶಲಕ್ಷ ಡಾಲರ್‌ಗಳಾಗಿತ್ತು. ಅಂದರೆ, ಇದು ಭಾರತದ ಒಟ್ಟು ರಫ್ತಿನ ಪ್ರಮಾಣದಲ್ಲಿ ಶೇ 16.53ರಷ್ಟಾಗುತ್ತದೆ. ಪ್ರತಿ ಡಾಲರ್‌ಗೆ ರೂ 45.5  ಲೆಕ್ಕದಲ್ಲಿ ಈ ರಫ್ತನ್ನು ಲೆಕ್ಕ ಹಾಕಿದರೆ, ರಫ್ತು ಮಾಡುವ ಪೆಟ್ರೋಲಿಯಂ ಉತ್ಪನ್ನಗಳ ಮೌಲ್ಯ ರೂ 1,90,781 ಕೋಟಿಗಳಷ್ಟು ಆಗುತ್ತದೆ. ಡಾಲರ್‌ಗೆ ರೂ 50 ರಂತೆ ದರ ನಿಗದಿಪಡಿಸಿದರೆ ರಫ್ತಿನ ಮೌಲ್ಯ ರೂ 2,09,590 ಕೋಟಿಗಳಿಗೆ ಹೆಚ್ಚುತ್ತದೆ. ಅಂದರೆ ರೂ 18,809 ಕೋಟಿ ಹೆಚ್ಚುವರಿ ಲಾಭ ಸಿಕ್ಕಿದಂತಾಗುತ್ತದೆ.

ರಫ್ತಿನಲ್ಲಿ ಸಿಗುವ ಈ ಲಾಭಾಂಶವನ್ನೂ ಲೆಕ್ಕ ಹಾಕಿಕೊಂಡಾಗ ಒಟ್ಟಾರೆ ಪೆಟ್ರೋಲಿಯಂ ಉದ್ಯಮದ ನಷ್ಟ ತುಂಬಾ ಕಡಿಮೆ ಎಂದೇ ಹೇಳಬೇಕಾಗುತ್ತದೆ.

ನಷ್ಟ ಅಥವಾ ಲಾಭ ಎಂಬುದನ್ನು ನಿರ್ಧರಿಸಲು ಇನ್ನೂ ಹಲವು  ಸಂಗತಿಗಳೂ ಇವೆ. ವಿದೇಶಿ ವಿನಿಮಯದ ಬಗ್ಗೆ ಮಾತನಾಡುವವರು ದೇಶೀಯ ಕಚ್ಚಾ ತೈಲದ ಉತ್ಪಾದನೆ ವಿಚಾರವನ್ನು ಜಾಣತನದಿಂದ ಮರೆ ಮಾಚುತ್ತಾರೆ.

ದೇಶಕ್ಕೆ ಅಗತ್ಯವಾದ ಶೇ 30ರಷ್ಟು ಕಚ್ಚಾ ತೈಲ ದೇಶೀಯವಾಗಿಯೇ ಉತ್ಪಾದನೆಯಾಗುತ್ತಿದೆ. ಈ ದೇಶೀಯ ಉತ್ಪನ್ನಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಹೆಚ್ಚಳ ಅಥವಾ ವಿನಿಮಯ ದರದ ಏರುಪೇರು ತೊಂದರೆ ಕೊಡುವುದಿಲ್ಲ.

ನಾನು ಈ ಮೊದಲಿನ ಲೇಖನದಲ್ಲಿ ತಿಳಿಸಿದಂತೆ ಪೆಟ್ರೋಲಿಯಂ ಉತ್ಪನ್ನಗಳಿಂದ ಸರ್ಕಾರ ಭಾರಿ ಪ್ರಮಾಣದಲ್ಲಿ ವರಮಾನ ಗಳಿಸುತ್ತಿದೆ. ಪೆಟ್ರೋಲ್ ದರ ಹೆಚ್ಚಿದಂತೆ ಸರ್ಕಾರದ ಬೊಕ್ಕಸ ಇನ್ನಷ್ಟು ತುಂಬುತ್ತದೆ. ಸರ್ಕಾರಿ ಸ್ವಾಮ್ಯದ ಮೂರೂ ತೈಲ ಕಂಪೆನಿಗಳು ಲಾಭದಲ್ಲಿಯೇ ನಡೆಯುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಅವುಗಳ ಒಟ್ಟು ಲಾಭಾಂಶ ರೂ 36,653 ಕೋಟಿಗಳು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಹ ಭಾರಿ ವರಮಾನ ಪಡೆಯುತ್ತವೆ. ಇವುಗಳು ಕಳೆದ ನಾಲ್ಕು ವರ್ಷದಲ್ಲಿ ರೂ 4.73 ಲಕ್ಷ ಕೋಟಿಗಳಷ್ಟು ವರಮಾನ ಗಳಿಸಿವೆ.

ರಾಜ್ಯಗಳು ಮಾರಾಟ ತೆರಿಗೆ ರೂಪದಲ್ಲಿ ವರಮಾನ ಗಳಿಸುತ್ತವೆ. ಕಳೆದ ನಾಲ್ಕು ವರ್ಷಗಳಲ್ಲಿ ನೀಡಲಾದ ಸಬ್ಸಿಡಿ ಪ್ರಮಾಣ ರೂ 26 ಸಾವಿರ ಕೋಟಿ  ಮಾತ್ರ. ಈ ಕ್ಷೇತ್ರದಿಂದ ಸಂಗ್ರಹವಾದ ಆದಾಯದ ಶೇ 6ಕ್ಕಿಂತಲೂ ಕಡಿಮೆ ಸಬ್ಸಿಡಿ ನೀಡಲಾಗಿದೆ.

ಸಬ್ಸಡಿಯಿಂದಾಗಿ ತನಗೆ ಭಾರಿ ನಷ್ಟವಾಗುತ್ತಿದೆ ಎಂದು ಸರ್ಕಾರ ಬೊಬ್ಬೆ ಹಾಕುತ್ತಿದ್ದರೂ, ಸರ್ಕಾರಕ್ಕೆ ಪೆಟ್ರೋಲಿಯಂ ಉತ್ಪನ್ನಗಳಿಂದ ಭಾರಿ ಲಾಭವಾಗುತ್ತಿದೆಯೇ ಹೊರತು ನಷ್ಟವಿಲ್ಲ ಎಂಬುದನ್ನು ಜನರು ತಿಳಿದುಕೊಳ್ಳಬೇಕು.

ಇನ್ನಷ್ಟು ಲಾಭ
ತೈಲ ಕಂಪೆನಿಗಳ 2010-11ನೇ ಸಾಲಿನ ಬ್ಯಾಲೆನ್ಸ್ ಶೀಟ್ ನೋಡಿದಾಗ ಸರ್ಕಾರ ತಿಳಿಸಿದಂತೆ ಅವುಗಳು ತೀವ್ರ ಸಂಕಷ್ಟದ ಸ್ಥಿತಿಯಲ್ಲಿ ಇಲ್ಲ ಎಂಬುದು ಗೊತ್ತಾಗುತ್ತದೆ.

`ಐಒಸಿಎಲ್~ ರೂ 3,28,744 ಕೋಟಿಗಳ ವಹಿವಾಟು ನಡೆಸಿ ರೂ  7,445 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ. ಈ ಕಂಪೆನಿಯಿಂದ ಕೇಂದ್ರ ಬೊಕ್ಕಸಕ್ಕೆ ರೂ39,658 ಕೋಟಿ (ಕಳೆದ ವರ್ಷಕ್ಕಿಂತ ರೂ 13 ಸಾವಿರ ಕೋಟಿ   ಅಧಿಕ) ಕೊಡುಗೆ ಸಂದಾಯವಾಗಿದೆ.

`ಬಿಪಿಸಿಎಲ್~ನ ವಹಿವಾಟು ರೂ 1,66,038 ಕೋಟಿಗಳಾಗಿದ್ದು, ಅದು ರೂ 1,742.06 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ. ಕಂಪೆನಿ ಸರ್ಕಾರದ ಬೊಕ್ಕಸಕ್ಕೆ ರೂ 36,010  ಕೋಟಿ ವರಮಾನ ಒದಗಿಸಿದೆ (ಇದು ಕಳೆದ ವರ್ಷಕ್ಕಿಂತ ರೂ 10 ಸಾವಿರ ಕೋಟಿಯಷ್ಟು ಅಧಿಕ).
 
`ಎಚ್‌ಪಿಸಿಎಲ್~ನ ಒಟ್ಟು ವ್ಯವಹಾರ ರೂ 1,32,670 ಕೋಟಿ ಆಗಿದ್ದು, ಅದು ರೂ 1539  ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ. ಸರ್ಕಾರದ ಬೊಕ್ಕಸಕ್ಕೆ ಕಂಪೆನಿಯಿಂದಾಗಿ 28,864 ಕೋಟಿ ರೂಪಾಯಿ ಸಂಗ್ರಹವಾಗಿದೆ. (ಕಳೆದ ವರ್ಷಕ್ಕಿಂತ 7,700 ಕೋಟಿ ರೂಪಾಯಿ ಅಧಿಕ).

ಈ ಮೂರೂ ಕಂಪೆನಿಗಳು ಸರ್ಕಾರದ ಬೊಕ್ಕಸಕ್ಕೆ ಒಟ್ಟು ರೂ 1,04,532  ಕೋಟಿಗಳ ಕೊಡುಗೆ ನೀಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ರೂ 30,700 ಕೋಟಿಗಳಷ್ಟು ಅಧಿಕವಾಗಿದೆ.

ಈ ಎಲ್ಲ ಸಂಗತಿಗಳನ್ನು ನೋಡಿದಾಗ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ ಅಥವಾ ತೈಲ ಕಂಪೆನಿಗಳಿಗೆ ವಸೂಲಾತಿ ಬಾಕಿ ಇರುವುದರಿಂದ ಭಾರಿ ನಷ್ಟವಾಗುತ್ತಿದೆ ಎಂಬ ವಾದದಲ್ಲಿ ಅರ್ಥವಿಲ್ಲ ಎಂಬುದು ಗೊತ್ತಾಗುತ್ತದೆ. ಇದೊಂದು ಹಾದಿ ತಪ್ಪಿಸುವ ವಾದ ಮಾತ್ರ.

ಮತ್ತೊಮ್ಮೆ ದರ ಹೆಚ್ಚಳ ಮಾಡದೆ ದರ ಇಳಿಸುವ ಅವಕಾಶವೇ ಸರ್ಕಾರಕ್ಕೆ ಇದೆ. ಮುಖ್ಯವಾಗಿ ಹಣದುಬ್ಬರವನ್ನು ನೋಡಿಯಾದರೂ ಸರ್ಕಾರ ತೈಲ ಬೆಲೆ  ಇಳಿಸಬೇಕು.

ಹಣದುಬ್ಬರದಿಂದ ಭಾರಿ ಹೊಡೆತ ಬೀಳುವುದು ಸರಕು ಸಾಗಾಟದ ಮೇಲೆ. ತೈಲ ಬೆಲೆ ಹೆಚ್ಚಳದ ಬಿಸಿ ಪ್ರತಿ ವಸ್ತುವಿನ ಬೆಲೆ ಹೆಚ್ಚುವ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ತಟ್ಟುತ್ತದೆ.

ಜನಸಾಮಾನ್ಯರ ಕಷ್ಟವನ್ನು ತಗ್ಗಿಸುವುದಕ್ಕಾಗಿಯಾದರೂ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಸಬೇಕು. ಆದರೆ, ಇದು ಮಾತ್ರ ನಡೆಯುತ್ತಲೇ ಇಲ್ಲ. ಸರ್ಕಾರವೂ ಲಾಭದ ಮೇಲೆಯೇ ಕಣ್ಣಿಟ್ಟಿದೆ. ಸಾರ್ವಜನಿಕ ಹಿತಾಸಕ್ತಿ ಬದಲಿಗೆ ಲಾಭ ಗಳಿಸುವುದೇ ಸರ್ಕಾರದ ನೀತಿಯಾಗಿದೆ.

ಸರ್ಕಾರಕ್ಕೆ ಜನರ ಬಗ್ಗೆ ನಿಜವಾದ ಕಾಳಜಿ ಇದೆ ಎಂದಾದರೆ ಅದು ದರ ನಿಗದಿ ಸಹಿತ ತನ್ನ ಪೆಟ್ರೋಲಿಯಂ ನೀತಿಯನ್ನು ಪರಿಷ್ಕರಿಸಬೇಕು. ಪ್ರತಿಯೊಂದು ಕಡೆಯಲ್ಲೂ, ಪ್ರತಿಯೊಂದು ಉತ್ಪನ್ನದಲ್ಲೂ ಅದು ವಾಣಿಜ್ಯ ದೃಷ್ಟಿಯನ್ನಷ್ಟೇ ನೋಡಬಾರದು.

ಪೆಟ್ರೋಲಿಯಂ ಉತ್ಪನ್ನಗಳ ದರವನ್ನು ನಿಯಂತ್ರಣದಿಂದ ಮುಕ್ತಗೊಳಿಸುವ ಪ್ರಸ್ತಾವವನ್ನು ಅದರ ಪರಿಣಾಮ ತಿಳಿಯುವ ತನಕ ಕಾಯದೆ ತಕ್ಷಣ ವಿರೋಧಿಸಬೇಕು. ತಪ್ಪು ನೀತಿಗಳನ್ನು ಹಾಗೆಯೇ ಇರಲು ಬಿಟ್ಟು ಬೆಲೆ ಏರಿಕೆಯನ್ನು ತಡೆಗಟ್ಟಲು ಸಾಧ್ಯವಿಲ್ಲ.

ಈಗಿನ ಪೆಟ್ರೊಲಿಯಂ ನೀತಿ ಮುಂದುವರಿದದ್ದೇ ಆದರೆ ಪೆಟ್ರೋಲ್ ದರ ಮತ್ತೆ ಮತ್ತೆ ಹೆಚ್ಚುವುದು ನಿಶ್ಚಿತ. ಡೀಸೆಲ್, ಅಡುಗೆ ಅನಿಲ, ಸೀಮೆಎಣ್ಣೆಯಂತಹ ಇತರ ಉತ್ಪನ್ನಗಳನ್ನು ಸಹ ದರ ನಿಯಂತ್ರಣದಿಂದ ಮುಕ್ತಗೊಳಿಸಿದರೆ ಅವುಗಳ ದರ ಕೂಡ ಮೇಲಿಂದ ಮೇಲೆ ಹೆಚ್ಚುವ ಅಪಾಯ ಇದೆ.

ಪೆಟ್ರೋಲಿಯಂ ಉತ್ಪನ್ನಗಳೆಲ್ಲದರ ಮೇಲಿನ ದರ ನಿಯಂತ್ರಣ ತೆಗೆದು ಹಾಕುವುದೇ ಸರ್ಕಾರದ ಪ್ರಮುಖ ಕಾರ್ಯಸೂಚಿ ಇದ್ದಂತಿದೆ. ಅದಕ್ಕಾಗಿಯೇ ತನಗೆ ಪೆಟ್ರೋಲಿಯಂ ಉತ್ಪನ್ನಗಳಿಂದ ಆಗುತ್ತಿದೆ ಎನ್ನಲಾದ ನಷ್ಟವನ್ನು ದೊಡ್ಡದಾಗಿ ಬಿಂಬಿಸಲು ಅದು ತನಗೆ ಸಿಗುವ ಯಾವುದೇ ಸಣ್ಣ ಅವಕಾಶವನ್ನು ಕಳೆದುಕೊಳ್ಳುವುದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT