ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರ ಓಟದ ಧೀರ... ಪವನಂಜಯ್ಯ

Last Updated 19 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

`ಪವನಂಜಯ~ ಎಂಬ ಹೆಸರನ್ನು ಬಹುಶಃ ಬೆಳಗಾವಿಯ ಜನರೂ ಮರೆತಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಮೊಟ್ಟಮೊದಲ ಕನ್ನಡಿಗ ಅಥ್ಲೀಟ್ ಪಡೆಪ್ಪ ಧರೆಪ್ಪ ಚೌಗುಲೆ ಅವರಿಗೆ ಆಗ ಜನರೇ ನೀಡಿದ್ದ ಬಿರುದು ಇದು.

1920ರ ಆ್ಯಂಟ್‌ವರ್ಪ್ ಒಲಿಂಪಿಕ್ಸ್‌ನಲ್ಲಿ ಸ್ವಾತಂತ್ರ್ಯಪೂರ್ವ ಭಾರತ ತಂಡವನ್ನು ಪ್ರತಿನಿಧಿಸಿ ಮ್ಯಾರಥಾನ್ ಓಟವನ್ನು ಪೂರ್ತಿಗೊಳಿಸಿದ ಮೊದಲ ಭಾರತೀಯ ಅವರು. 2ತಾಸು, 50ನಿಮಿಷ, 45.4ಸೆಕೆಂಡುಗಳಲ್ಲಿ 42 ಕಿಲೋಮೀಟರ್ ಅಂತರದ ಮ್ಯಾರಥಾನ್ ಪೂರೈಸಿದ್ದ ಅವರು 19ನೇ ಸ್ಥಾನ ಪಡೆದಿದ್ದರು. ಆದರೆ ಇಡೀ ಜೀವನ ಬರಿಗಾಲಿನಲ್ಲಿ ಓಡಿ ರೂಢಿಯಿದ್ದ ಅವರಿಗೆ ಒಲಿಂಪಿಕ್ಸ್ ಬೂಟುಗಳನ್ನು ಧರಿಸಿ ಓಡುವ ನಿಯಮದಿಂದಾಗಿ ಪದಕ ಗೆಲ್ಲಲಾಗಲಿಲ್ಲ. (ಇವರೊಂದಿಗೆ ತೆರಳಿದ್ದ ಭಾರತದ ಇನ್ನೊಬ್ಬ ಅಥ್ಲೀಟ್ ಸದಾಶಿವ ದಾತಾರ್ ಓಟ ಪೂರ್ತಿಗೊಳಿಸಿರಲಿಲ್ಲ).

ಬೂಟು ಧರಿಸಿ ಆದ ಗಾಯದಿಂದಾಗಿ 10000 ಮೀಟರ್ ಓಟದಲ್ಲಿ ಭಾಗವಹಿಸಲೂ ಅವರಿಗೆ ಸಾಧ್ಯ ವಾಗಿರಲಿಲ್ಲ.  ಅವರ ಓಟದ ವೇಗವನ್ನು ಮೆಚ್ಚಿದ್ದ ಬೆಳ ಗಾವಿಯ ಜನರು ಅವರಿಗೆ `ಪವನಂಜಯ~ (ಗಾಳಿಗಿಂತಲೂ ವೇಗವಾಗಿ  ಓಡಿದವನು) ಎಂಬ ಬಿರುದು ನೀಡಿ ಗೌರವಿಸಿದ್ದರು. 1902ರಲ್ಲಿ ಬೆಳಗಾವಿಯಲ್ಲಿ ಜೈನ ಸಮುದಾಯದ ಕೃಷಿಕ ಕುಟುಂಬದಲ್ಲಿ ಜನಿಸಿದ ಪಡೆಪ್ಪ, ಬಾಲ್ಯದಿಂದಲೂ ಕ್ರೀಡಾಸಕ್ತರು. ವ್ಯಾಯಾಮ, ಕಸರತ್ತುಗಳ ಜೊತೆಗೆ ವೇಗ ವಾಗಿ ಓಡುವುದನ್ನೂ ರೂಢಿಸಿಕೊಂಡಿದ್ದರು. ಬೆಳಗಾವಿಯ ಸರ್ದಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿದ್ದರು. ಇಂಗ್ಲಿಷ್ ಕೂಡ ಬಲ್ಲವರಾಗಿದ್ದರು. ಶಾಲೆಯ ಶಿಕ್ಷಕರು, ಕುಟುಂಬದ ಸ್ನೇಹಿತರು ಇವರಿಗೆ ಪ್ರೋತ್ಸಾಹಿಸಿದರು.

16ನೇ ವಯಸ್ಸಿಗೇ ಬೆಳಿಗ್ಗೆ 4 ಗಂಟೆಗೆ ಎದ್ದು ಬೆಳಗಾವಿಯಿಂದ 27 ಕಿಲೋಮೀಟರ್ ದೂರದ ಖಾನಾಪುರದವರೆಗೆ `ಬರಿಗಾಲು~ಗಳಲ್ಲಿ ಓಡುತ್ತಿದ್ದರು. ಖಾನಾಪುರದ ಮಲಪ್ರಭಾ ನದಿಯಲ್ಲಿ ಸ್ನಾನ ಮಾಡಿಕೊಂಡು ಮರಳುತ್ತಿದ್ದರು. ಓಟದಲ್ಲಿ ವೇಗ ಸಾಧಿಸಲು ರೈಲುಗಳನ್ನು ಹಿಂಬಾಲಿಸಿ, ಹಳಿಗಳ ನಡುವೆ ಓಡುತ್ತಿದ್ದರು. 17ನೇ ವಯಸ್ಸಿಗೇ 25 ಮೈಲಿಗಳ ದೂರವನ್ನು ಮೂರು ತಾಸಿನೊಳಗೆ ಪೂರೈಸುವ ಸಾಮರ್ಥ್ಯ ರೂಢಿಸಿಕೊಂಡಿದ್ದರು. ಗರಡಿಮನೆಯಲ್ಲಿ ಕುಸ್ತಿಯನ್ನೂ ಕಲಿತಿದ್ದರು.

1919ರಲ್ಲಿ ಪುಣೆಯ ಡೆಕ್ಕನ್ ಜಿಮ್ಖಾನಾ ಕ್ಲಬ್ ಆಶ್ರಯದಲ್ಲಿ ನಡೆದ ಅಖಿಲ ಭಾರತಮಟ್ಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ 26 ಮೈಲಿಗಳ ದೂರವನ್ನು 2ತಾಸು, 48ನಿಮಿಷ, 49ಸೆಕೆಂಡುಗಳಲ್ಲಿ ಓಡಿ ಚಿನ್ನದ ಪದಕ ಗಳಿಸಿದ್ದರು. ಮುಂಬೈನ ವೈಎಂಸಿಎ ಕ್ಲಬ್ ಓವೆಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿಯೂ ಗೆದ್ದು ಒಲಿಂಪಿಕ್ಸ್‌ಗೆ ರಹದಾರಿ ಗಿಟ್ಟಿಸಿದ್ದರು.

ಆಗಿನ ಮುಂಬೈ ಗವರ್ನರ್ ಜಾರ್ಜ್ ಲಾಯ್ಡ ಅವರು ಭಾರತದಿಂದ ಕ್ರೀಡಾ ತಂಡವನ್ನು ಕಳುಹಿಸಿಕೊಡಲು ಕ್ರಮ ಕೈಗೊಂಡರು. ಕೈಗಾರಿಕೋದ್ಯಮಿ ಸರ್ ದೊರಾಬ್ಜಿ ಟಾಟಾ ಅವರ ಪ್ರಾಯೋಜಕತ್ವದಲ್ಲಿ ನಾಲ್ವರು ಓಟಗಾರರು ಮತ್ತು ಇಬ್ಬರು ಕುಸ್ತಿಪಟುಗಳ ತಂಡ ಬೆಲ್ಜಿಯಂಗೆ ಹೊರಟಿತು. ಆ ತಂಡದಲ್ಲಿ ಪಡೆಪ್ಪ ಚೌಗುಲೆ ಕೂಡ ಇದ್ದರು.

ಚೌಗುಲೆಯವರು ಬೆಳಗಾವಿಯಿಂದ ಮುಂಬೈಗೆ ತೆರಳಿ, ತಂಡದೊಂದಿಗೆ ಹಡಗಿನಲ್ಲಿ ಇಂಗ್ಲೆಂಡಿಗೆ 22 ದಿನಗಳ ಪ್ರಯಾಣ ಮಾಡಿದರು. ಲಂಡನ್‌ನಲ್ಲಿ ನಡೆದ ಸೆಮಿ ಮ್ಯಾರಥಾನ್‌ನಲ್ಲಿ 10 ಮೈಲಿ ಓಟವನ್ನು 45 ನಿಮಿಷದಲ್ಲಿ ಓಡಿ ಒಲಿಂಪಿಕ್ಸ್ ಅಂತಿಮ ಹಂತಕ್ಕೆ ಅರ್ಹತೆ ಗಿಟ್ಟಿಸಿದರು.

ಇಂಡಿಯನ್ ಪಂಚ್! ಸೆಮಿ ಮ್ಯಾರಥಾನ್‌ನಲ್ಲಿ ಚೌಗುಲೆ ಸಾಮರ್ಥ್ಯವನ್ನು ಗಮನಿಸುತ್ತಲೇ ಇದ್ದ ಇಂಗ್ಲೆಂಡ್ ಸ್ಪರ್ಧಿಯೊಬ್ಬ ಭಾರತೀಯರನ್ನು ಕೆಟ್ಟ ಶಬ್ದಗಳಿಂದ ನಿಂದಿಸುತ್ತಿದ್ದ. ಆದರೆ ಅವರು ಸಂಯಮ ಕಳೆದು ಕೊಂಡಿರಲಿಲ್ಲ. ಆ ಇಂಗ್ಲಿಷ್ ವ್ಯಕ್ತಿ ಚೌಗುಲೆಯವರನ್ನು `ಇಂಡಿಯನ್ ಪಿಗ್~ ಎಂದು ಹಿಯಾಳಿಸಿ, ಹೊಡೆದೂ ಬಿಟ್ಟ. ಆಗಲೂ ಅವರು, ಇದು ಸರಿಯಲ್ಲ ಸೌಜನ್ಯದಿಂದ ವರ್ತಿಸಿ ಎಂದು ವಿನಂತಿಸಿಕೊಂಡಿದ್ದರು. ಆದರೆ ಇಂಗ್ಲಿಷ್ ವ್ಯಕ್ತಿ ಇವರ ಮೇಲೆ ಮತ್ತೊಮ್ಮೆ ಕೈಮಾಡಲು ಬಂದಾಗ ತಿರುಗಿ ಗುದ್ದಿದ ಚೌಗುಲೆ, `ದಿಸ್ ಈಸ್ ಇಂಡಿಯನ್ ಪಂಚ್~ ಎಂದು ಘರ್ಜಿಸಿದ್ದರು. ಎದುರಾಳಿಯ ಎರಡು ಹಲ್ಲುಗಳು ಉದುರಿಹೋಗಿದ್ದವು. ಪೊಲೀಸರು, ಸಂಘಟಕರು ಬಂದಿದ್ದರಿಂದ ಆ ವ್ಯಕ್ತಿ ಓಡಿಹೋದ. ನಂತರ ಚೌಗುಲೆ ತಮ್ಮ ತಂಡದೊಂದಿಗೆ ಬೆಲ್ಜಿಯಂಗೆ ತೆರಳಿದರು. 

ಕಾಲು ಕಚ್ಚಿದ ಬೂಟು: ಆ್ಯಂಟ್‌ವರ್ಪ್‌ಗೆ ಬಂದ ಚೌಗುಲೆ ಯವರಿಗೆ ಎರಡು ಸಮಸ್ಯೆಗಳು ಕಾಡಿದವು. ಮೊದಲನೇಯದ್ದು ಅವರು ಶುದ್ಧ ಸಸ್ಯಾಹಾರಿಯಾಗಿದ್ದರಿಂದ ಅವರಿಗೆ ತಕ್ಕ ಊಟ ಅಲ್ಲಿ ಸಿಗಲಿಲ್ಲ. ಎರಡನೇಯದ್ದು ಒಲಿಂಪಿಕ್ಸ್ ನಿಯಮದಂತೆ ಬೂಟು ಧರಿಸಲೇಬೇಕಾದ ಅನಿವಾರ್ಯತೆ. ಬೂಟುಗಾಲಿನಲ್ಲಿ ಓಡುವುದು ಅವರಿಗೆ ದುಸ್ತರ ವಾಯಿತು. ಅಭ್ಯಾಸದ ಸಂದರ್ಭದಲ್ಲಿಯೇ ಕಾಲುಬೆರಳು ಗಳಿಗೆ ಗಾಯಗಳಾದವು. ಆದರೂ 1920ರ ಆಗಸ್ಟ್ 22ರಂದು  ಮ್ಯಾರಥಾನ್ ಸ್ಪರ್ಧೆಯ 26 ಮೈಲಿಗಳನ್ನು (2ಗಂ; 50ನಿ, 45.4ಸೆ) ಪೂರೈಸಿದರು. ಮಳೆ ಸುರಿಯು ತ್ತಿದ್ದರಿಂದ ರಸ್ತೆ ಹದಗೆಟ್ಟಿತ್ತು. ಬೆರಳುಗಳ ಗಾಯಕ್ಕೆ ನೀರು, ಕೆಸರು ಸೇರಿ ಮತ್ತಷ್ಟು ಉಲ್ಬಣಿಸಿದವು. ರಕ್ತ ಸೋರು ತ್ತಿದ್ದರೂ ಛಲ ಬಿಡದೇ ಓಡಿದರು.

ಆದರೆ ಹತ್ತು ಸಾವಿರ ಮೀಟರ್ ಓಟದಲ್ಲಿ ಪಾಲ್ಗೊಳ್ಳಲು ಅವರಿಗೆ ಸಾಧ್ಯ ವಾಗಲಿಲ್ಲ.  ಬೆಳಗಾವಿಯ ಸರ್ದಾರ್ ಪ್ರೌಢ ಶಾಲೆಯಲ್ಲಿ ಅವರ ಪ್ರಶಸ್ತಿಗಳು, ಟ್ರೋಫಿಗಳ ಪ್ರದರ್ಶನ ನಡೆಯಿತು. ಇಂಗ್ಲೆಂಡ್‌ನ ಕ್ರೀಡಾ ಕ್ಲಬ್‌ಯಿಂದ ತರಬೇತು ದಾರನಾಗಲು ಬಂದ ಆಹ್ವಾನವನ್ನು ತಿರಸ್ಕರಿಸಿದ ಅವರು, ಕ್ರಮೇಣ ಓಡುವುದನ್ನೂ ಬಿಟ್ಟರು. ಭಾರತದಲ್ಲಿಯೇ ಇರುವ ಸಂಕಲ್ಪದೊಂದಿಗೆ  ಕಾರು ಕೊಂಡು ಚಾಲಕ ವೃತ್ತಿ ಆರಂಭಿಸಿದರು.

50ನೇ ವಯಸ್ಸಿನಲ್ಲಿ ನಿಧನರಾದ ಚೌಗುಲೆಯವರ ಬಗ್ಗೆ  ಲಾವಣಿ ಪದಗಳು ಇವೆ. ಅವರ ಕುಟುಂಬದ ಕ್ರೀಡಾ ಪರಂಪರೆಯೂ ಮುಂದುವರೆದಿದೆ. ಮರಿಮೊಮ್ಮಕ್ಕಳಾದ ವಿಪುಲ್ ಚೌಗುಲೆ ಟೇಬಲ್ ಟೆನಿಸ್ ಆಟಗಾರರು. ಅವರ ಸಹೋದರ ದೀಪಕ್ ಚೌಗುಲೆ ರಣಜಿ ಕ್ರಿಕೆಟ್ ಆಟಗಾರ. ಸದ್ಯ ಜಾರ್ಖಂಡ್ ತಂಡಕ್ಕೆ ಅವರು ಆಡುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT