ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಾರಿಯಲ್ಲಿ ಪ್ರಾಚೀನ ಶಿವಲಿಂಗ ಪತ್ತೆ

Last Updated 17 ಡಿಸೆಂಬರ್ 2012, 10:33 IST
ಅಕ್ಷರ ಗಾತ್ರ

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಇಂದಬೆಟ್ಟುವಿನ ದೇವನಾರಿ ಎಂಬ ಸ್ಥಳದಲ್ಲಿರುವ ಅರ್ಧನಾರೀಶ್ವರ  ದೇವಸ್ಥಾನದಲ್ಲಿ ಪೂಜೆಗೊಳ್ಳುತ್ತಿರುವ ಶಿವಲಿಂಗ ಕರ್ನಾಟಕದಲ್ಲಿ ದೊರೆತ ಅತ್ಯಂತ ಪ್ರಾಚೀನ ಶಿವಲಿಂಗ ಎಂದು ಶಿರ್ವ ಎಂಎಸ್‌ಆರ್‌ಎಸ್.ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಪ್ರೊ.ಟಿ. ಮುರುಗೇಶಿ ಹೇಳಿದಾರೆ.

ಶಿವಲಿಂಗ ಸಿಂಧೂ ಸಂಸ್ಕೃತಿಯಲ್ಲಿ ದೊರೆತ ಲಿಂಗಗಳಂತೆ ಪುರುಷ ಜನನೇಂದ್ರಿಯವನ್ನು ಹೋಲುತ್ತಿದ್ದು, ಆಂಧ್ರಪ್ರದೇಶದ ಗುಡಿಮಲ್ಲಂನಲ್ಲಿರುವ ಶಿವಲಿಂಗವನ್ನು ಹೋಲುತ್ತಿದೆ. ಗುಡಿಮಲ್ಲಂ ಲಿಂಗದ ಕಾಲ ಕ್ರಿಸ್ತ ಪೂರ್ವ 2ನೇ ಶತಮಾನವೆಂದು ಡಾ.ಟಿ.ಎ.ಗೋಪಿನಾಥ್‌ರಾವ್ ತಿಳಿಸಿದ್ದು, ಗುಡಿಮಲ್ಲಂನ ಶಿವಲಿಂಗ ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ಶಿವಲಿಂಗವಾಗಿದೆ.

ಇಂದಬೆಟ್ಟುವಿನ ಶಿವಲಿಂಗದ ಕಾಲವನ್ನು ಅದೇ ಕಾಲಕ್ಕೆ ಅನ್ವಯಿಸಬಹುದು ಎಂದು ಮುರುಗೇಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ ಇಂದಬೆಟ್ಟುವಿನ ಶಿವಲಿಂಗವೇ ಕರ್ನಾಟಕದ ಪ್ರಾಚೀನ ಶಿವಲಿಂಗವಾಗಿದೆ ಹಾಗೂ ದಕ್ಷಿಣ ಭಾರತದ ಎರಡನೇ ಅತ್ಯಂತ ಪ್ರಾಚೀನ ಶಿವಲಿಂಗವೆಂದು ಪರಿಗಣಿಸಬಹುದು.

ಇಂದಬೆಟ್ಟಿನಲ್ಲಿರುವ ಈಗಿನ ದೇವಸ್ಥಾನದ ಹಿಂಭಾದಲ್ಲಿರುವ ಗುಡ್ಡದ ಮೇಲೆ ಮಂಜು ಗುಂಡ ಎಂಬ ಸ್ಥಳದಲ್ಲಿ ಪ್ರಾಚೀನ ದೇವಾಲಯವಿತ್ತು, ಅದನ್ನು ಇತ್ತೀಚೆಗೆ ಗುಡ್ಡದ ಕೆಳಭಾಗಕ್ಕೆ ಸ್ಥಳಾಂತರಿಸಿ ನವೀಕೃತ ದೇವಸ್ಥಾನ ರಚನೆ ಮಾಡಲಾಗಿದೆ ಎಂದು ದೇವಸ್ಥಾನದ ಅರ್ಚಕ ಆನಂದ ಭಟ್ಟರು ತಿಳಿಸಿದ್ದಾರೆ.

ಮಂಜು ಗುಂಡ ಎಂಬ ಸ್ಥಳದ ಹೆಸರೇ ನಿಸ್ಸಂದೇಹವಾಗಿ ಈ ದೇವಾಲಯ ಸುಮಾರು 10-11ನೇ ಶತಮಾನದಲ್ಲಿ ನಾಥ ಪಂಥದ ಅಧೀನದಲ್ಲಿತ್ತು ಎಂಬುವುದನ್ನು ಸೂಚಿಸುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT