ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದೊಡ್ಡವರು ಮರೆತರು: ಸಮಾಜ ಕೈ ಹಿಡಿಯಿತು'

Last Updated 11 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಅರಣ್ಯ, ಕಾಡು ಉತ್ಪನ್ನ ಹಾಗೂ ವನ ಸಂಪತ್ತನ್ನು ನಮ್ಮ ಮನೆಯವರು ಕುಟುಂಬದ ಒಂದು ಅಂಗದಂತೆ ಕಾಣುತ್ತಿದ್ದರು. ಹೀಗಾಗಿಯೇ ಒಂದು ಪ್ರಾಣಿಗಾಗಿ ಅವರು ಜೀವವನ್ನೇ ತೆತ್ತರು. ಅವರಿಂದ ಅನೇಕ ರೀತಿಯ ಲಾಭ ಪಡೆದುಕೊಂಡ `ದೊಡ್ಡವರು' ನಮ್ಮ ಕೈಬಿಟ್ಟಿದ್ದಾರೆ. ಆದರೆ ಯಾವುದೇ ಸಂಬಂಧ ಇಲ್ಲದ `ಬಂಧುಗಳು' ಸಹಾಯಕ್ಕೆ ಬಂದಿದ್ದಾರೆ. ಅವರ ಬೆಂಬಲದ ಭರವಸೆಯೇ ಈಗ ನಮ್ಮ ಬದುಕಿನ ಆಸರೆ...'  

ದಾಂಡೇಲಿ ಮೊಸಳೆ ಉದ್ಯಾನದಲ್ಲಿ ಅಕ್ರಮ ಚಟುವಟಿಕೆ ತಡೆಯಲು ಹೋಗಿ ಹತ್ಯೆಯಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮದನ ನಾಯಕ ಅವರ ಪತ್ನಿ ಸುಮತಿ ಅವರ ಮಾತು ಇದು.

ಮಕ್ಕಳ ಶಿಕ್ಷಣಕ್ಕಾಗಿ ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಬಳಿಯ ಮನೆಯಲ್ಲಿ ವಾಸವಾಗಿರುವ ಅವರ ಕಣ್ಣೀರು ದುರಂತ ನಡೆದು ಹತ್ತು ತಿಂಗಳು ಕಳೆದರೂ ಬತ್ತಿಲ್ಲ. ಪತಿಯ ವಿಷಯ ಪ್ರಸ್ತಾಪಿಸಿದಾಗಲೆಲ್ಲ ಗಳಗಳನೆ ಅಳುತ್ತಿರುವ ಸುಮತಿ, ಕಾನೂನಿನ ಮೇಲೆ ಭರವಸೆ ಇರಿಸಿದ್ದಾರೆ. ಆದರೆ ಜಾಮೀನಿನಲ್ಲಿ ಹೊರ ಬಂದಿರುವ ಆರೋಪಿಗಳ ಕರಾಮತ್ತಿನಿಂದ ಅನ್ಯಾಯ ಆಗಬಾರದು, ಹೀಗೆ ಆಗದಂತೆ ನೋಡಿಕೊಳ್ಳಲು ಸಮಾಜದ ಬೆಂಬಲ ಬೇಕಾಗಿದೆ ಎಂದು ಸೋಮವಾರ `ಪ್ರಜಾವಾಣಿ' ಜೊತೆ ಮಾತನಾಡಿದ ಸುಮತಿ ಮನವಿ ಮಾಡಿಕೊಂಡರು.

`ದಾಂಡೇಲಿ ವನ್ಯಜೀವಿ ವಿಭಾಗದಲ್ಲಿ ಎಸಿಎಫ್ ಆಗಿದ್ದಾಗ ದೊಡ್ಡವರು ಅನೇಕರು ವಿವಿಧ ಕಾರಣಗಳಿಗಾಗಿ ಮನೆಯವರಿಗೆ ದೂರವಾಣಿ ಕರೆ ಮಾಡುತ್ತಿದ್ದರು. ಈಗ ಅಂಥವರ ಪೈಕಿ ಒಬ್ಬರೂ ನಮ್ಮ ಸಹಾಯಕ್ಕೆ ಬಂದಿಲ್ಲ. ಹುಬ್ಬಳ್ಳಿಯಲ್ಲಿ ವಾಸವಾಗಿದ್ದರೂ ಸ್ಥಳೀಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಒಮ್ಮೆಯೂ ಮಾತನಾಡಿಸಿಲ್ಲ' ಎಂದು ಅವರು ದೂರಿದರು.

`ಪತಿಯ ನೌಕರಿಯನ್ನು ಹಿರಿಯ ಮಗಳು ಮೇಘಾಳಿಗೆ ಕೊಡುವುದಾಗಿ ಭರವಸೆ ನೀಡಿದ ಸರ್ಕಾರ ಈಗ ಆ ಮಾತನ್ನು ಮರೆತಂತಿದೆ. ಮುಖ್ಯಮಂತ್ರಿಗಳನ್ನು ವಿವಿಧ ಕಡೆಗಳಲ್ಲಿ ಭೇಟಿಯಾಗಿ ಮನವಿ ಮಾಡಿದ್ದಾಯಿತು.

ಉದ್ಯೋಗದ ಆಸೆಯನ್ನು ಈಗ ಬಿಟ್ಟಿದ್ದೇವೆ. ಎಂ.ಎಸ್‌ಸಿ ಮುಗಿಸಿದ ಮೇಘಾ ಬೇರೆ ಕೆಲಸ ಹುಡುಕುವ ಪರಿಸ್ಥಿತಿ ಬಂದಿದೆ. ಏನೂ ಸಿಗದೇ ಇದ್ದರೂ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು. ಅದೊಂದೇ ನಮ್ಮ ಆಸೆ' ಎಂದು ಹೇಳಿ ಅವರು ಕಣ್ಣೀರು ಒರೆಸಿಕೊಂಡರು.

`ಅರಣ್ಯ ದಾರಿಯಲ್ಲಿ ಪ್ರಯಾಣ ಮಾಡುವಾಗ ಕಾನೂನು ಬಾಹಿರ ಚಟುವಟಿಕೆ ಕಂಡುಬಂದರೆ ಅಲ್ಲೇ ಕಾರು ನಿಲ್ಲಿಸಿ ಕ್ರಮಕ್ಕೆ ಮುಂದಾಗುತ್ತಿದ್ದರು. ಅಂಥ ಕರ್ತವ್ಯ ನಿಷ್ಠೆ ಹೊಂದಿದ್ದ ಅಧಿಕಾರಿಯ ಹತ್ಯೆ ಆದಾಗ ಅನೇಕರು ಬೀದಿಗಿಳಿದು ಹೋರಾಟ ಮಾಡಿದರು. ಆದರೆ ಅವರಿಂದ ಲಾಭ ಪಡೆದ ದೊಡ್ಡವರು ಯಾಕೋ ವೈಯಕ್ತಿಕ ದ್ವೇಷ ಇರಿಸಿಕೊಂಡವರಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಹೋರಾಟದಲ್ಲಿ ಸೋತು ಹೋಗುತ್ತೇನೆಯೋ ಎಂಬ ಆತಂಕ ಕಾಡತೊಡಗಿದೆ. ಮಕ್ಕಳು ತೀರಾ ನಿರಾಶರಾಗಿದ್ದಾರೆ' ಎಂದರು ಅವರು.  

`ಪಪ್ಪನ ಹತ್ಯೆಯಾದಾಗ ಹೋರಾಟ ಮಾಡಿದವರ ಮೇಲೆ ಕೇಸು ದಾಖಲಿಸಲಾಗಿದೆ. ಅವರು ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಲಾಗಿದೆ. ಇದು ಅನ್ಯಾಯದ ಪರಮಾವಧಿ. ಅವರ ಮೇಲಿನ ಕೇಸು ವಾಪಸ್ ತೆಗೆದುಕೊಳ್ಳಲು ಸಂಬಂಧಪಟ್ಟವರು ಮುಂದಾಗಬೇಕು' ಎಂದು ಮದನ ನಾಯಕ ಅವರ ಪುತ್ರಿ, ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ಗ್ರೀಷ್ಮಾ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT