ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಆಧಾರ್

Last Updated 8 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ನಾವು ನಾವೇ ಎಂದು ದೃಢೀಕರಿಸಲು ನೀಡುವ ವಿಶಿಷ್ಟ ಗುರುತಿನ ಚೀಟಿ `ಆಧಾರ್~ ವಿತರಿಸುವ ಕಾರ್ಯಕ್ಕೆ ಬೆಂಗಳೂರಿನಲ್ಲಿ ಚಾಲನೆ ದೊರೆತಿದೆ. ಸದ್ಯ 35 ಅಂಚೆ ಕಚೇರಿಗಳಲ್ಲಿ ಈ ಸೌಲಭ್ಯ ಲಭ್ಯ. ಇದನ್ನು ಎಲ್ಲೆಡೆ ವಿಸ್ತರಿಸುವ ಪೂರ್ವಭಾವಿ ಕಾರ್ಯ ನಡೆಯುತ್ತಿದೆ.

ಮುಂಬೈ ದಾಳಿ, ಬೆಂಗಳೂರಿನ ಸರಣಿ ಸ್ಫೋಟದಂತಹ ಭಯೋತ್ಪಾದನಾ ಘಟನೆಗಳು ದೇಶಾದ್ಯಂತ ತಲ್ಲಣ ಮೂಡಿಸಿದ್ದವು. ಅಷ್ಟೇ ಅಲ್ಲ, ಈ ವ್ಯವಸ್ಥೆಯಲ್ಲಿ ಯಾರು, ಯಾರ ಹೆಸರಿನಲ್ಲಾದರೂ ಎಂಥ ದಾಖಲೆಗಳನ್ನಾದರೂ ಸೃಷ್ಟಿಸಿ ದೇಶದೊಳಕ್ಕೆ ನುಸುಳಿ ದಾಳಿ ನಡೆಸಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದವು. 
 
ಇಂಥ ನಕಲಿ ದಾಖಲೆ ಸೃಷ್ಟಿಗೊಂದು ಬ್ರೇಕ್ ಹಾಕಿ, ಭಾರತದ ಪ್ರತಿ ನಾಗರಿಕನಿಗೂ ವಿಶಿಷ್ಟವಾದ ಗುರುತಿನ ಚೀಟಿ ನೀಡುವ ಕಾರ್ಯವನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ. ಅದರ ಜವಾಬ್ದಾರಿಯನ್ನು ಇನ್ಫೋಸಿಸ್ ಸಹ ಸಂಸ್ಥಾಪಕರಾಗಿದ್ದ ನಂದನ್ ನಿಲೇಕಣಿ ಅವರಿಗೆ ವಹಿಸಿದೆ.

ನಾವು ನಾವೇ ಎಂದು ದೃಢೀಕರಿಸಲು ನೀಡುವ ಈ ವಿಶಿಷ್ಟ ಗುರುತಿನ ಚೀಟಿ `ಆಧಾರ್~ ವಿತರಿಸುವ ಕಾರ್ಯಕ್ಕೆ ಬೆಂಗಳೂರಿನಲ್ಲಿ ಚಾಲನೆ ದೊರೆತಿದೆ.ತುಮಕೂರು, ಮೈಸೂರಿನಲ್ಲಿ ವಿಶಿಷ್ಟ ಗುರುತಿನ ಚೀಟಿ ನೀಡುವ ಕಾರ್ಯ ಶೇ 95ರಷ್ಟು ಪೂರ್ಣಗೊಂಡಿದೆ.

ಆದರೆ ಒಂದು ಕೋಟಿಯ ಆಸುಪಾಸಿನ ಜನಸಂಖ್ಯೆ ಹೊಂದಿರುವ ಬೆಂಗಳೂರಿನಲ್ಲಿ ಗುರುತಿನ ಚೀಟಿ ನೀಡುವ ಕಾರ್ಯ ಇನ್ನೂ ಆರಂಭದ ಹಂತದಲ್ಲಿದೆ. ಮೂರು ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯನೂ ಈ ವಿಶಿಷ್ಟ ಗುರುತಿನ ಚೀಟಿ ಹೊಂದುವುದು ಕಡ್ಡಾಯ.

ನಡೆದಿದೆ ಟೆಂಡರ್
`ಬೆಂಗಳೂರಿನ ಬಹುತೇಕ ಎಲ್ಲಾ ಅಂಚೆ ಕಚೇರಿಗಳು ವಿಶಿಷ್ಟ ಗುರುತಿನ ಚೀಟಿ ನೀಡಲು ಸಿದ್ಧವಾಗಿವೆ. ಇದರೊಂದಿಗೆ ಖಾಸಗಿ ಸಹಭಾಗಿತ್ವದಲ್ಲೂ ವಿಶಿಷ್ಟ ಗುರುತಿನ ಚೀಟಿ ನೀಡುವ ಕಾರ್ಯ ಈಗ ಭರದಿಂದ ಸಾಗಿದೆ.

ಆಗಸ್ಟ್ 15ರೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. `ಆಧಾರ್~ ನೀಡುವ ಕಾರ್ಯದಲ್ಲಿ `ರಿಜಿಸ್ಟ್ರಾರ್~ಗಳದ್ದು ಪ್ರಮುಖ ಜವಾಬ್ದಾರಿ. ಇದಕ್ಕಾಗಿ ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶದೊಂದಿಗೆ ಒಪ್ಪಂದ ನಡೆದಿದೆ.

ಇದರೊಂದಿಗೆ ರಿಜಿಸ್ಟ್ರಾರ್‌ಗಳಾಗಿ ಅಂಚೆ ಇಲಾಖೆ, ಭಾರತೀಯ ಸ್ಟೇಟ್‌ಬ್ಯಾಂಕ್,  ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹೈದರಾಬಾದ್, ಟ್ರಾವೆಂಕೂರ್ ಸೇರಿದಂತೆ ಹಲವು ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೂ ಒಪ್ಪಂದ ಮಾಡಿಕೊಳ್ಳಲಾಗಿದೆ~ ಎಂದು ವಿಶಿಷ್ಟ ಗುರುತಿನ ಚೀಟಿ ಯೋಜನೆಯ ಉಪ ಮಹಾನಿರ್ದೇಶಕ (ಕರ್ನಾಟಕ)  ಅಶೋಕ್ ದಳವಾಯಿ ಹೇಳುತ್ತಾರೆ.

ರಿಜಿಸ್ಟ್ರಾರ್‌ಗಳು ತಮ್ಮ  ಅಧೀನದಲ್ಲಿ ದಾಖಲಾತಿ ಕೇಂದ್ರಗಳನ್ನು ಸ್ಥಾಪಿಸುತ್ತಾರೆ. ಈ ಪ್ರಕ್ರಿಯೆ ಟೆಂಡರ್ ಮೂಲಕ  ನಡೆಯುತ್ತದೆ. ಈ ದಾಖಲಾತಿ ಕೇಂದ್ರಗಳು ಸಂಗ್ರಹಿಸುವ ವ್ಯಕ್ತಿಯ `ಬಯೋಮೆಟ್ರಿಕ್~ (ಕೈಗಳ ಹತ್ತು ಬೆರಳು ಹಾಗೂ ಕಣ್ಣಿನ ರೆಟಿನಾ ಸ್ಕ್ಯಾನ್) ಹಾಗೂ `ಡೆಮೊಗ್ರಫಿ ` (ವ್ಯಕ್ತಿಯ ಹೆಸರು, ವಿಳಾಸ ಹಾಗೂ ವಯಸ್ಸಿನ ದಾಖಲೆಗಳು) ಮಾಹಿತಿಗಳು ರಿಜಿಸ್ಟ್ರಾರ್‌ಗಳ ಮೂಲಕ `ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ~ಕ್ಕೆ ಸೇರುತ್ತವೆ.

ಹೀಗೆ ದೇಶದ ನಾನಾ ಭಾಗದಿಂದ ಸಂಗ್ರಹವಾಗುವ ಮಾಹಿತಿಯು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ `ಸೆಂಟ್ರಲ್ ಐಡಿ ಡಾಟಾ ರೆಪಾಸೆಟರಿ~ (ಸಿಐಡಿಆರ್) ಮಾಹಿತಿ ಕೇಂದ್ರದಲ್ಲಿ ಶೇಖರವಾಗಲಿದೆ.
 
ಇದು ದೇಶದಲ್ಲಿರುವ ಏಕೈಕ ಮಾಹಿತಿ ಶೇಖರಣಾ ಘಟಕ. ಇಲ್ಲಿರುವ ತಂತ್ರಾಂಶವು ತನ್ನಲ್ಲಿ ಶೇಖರಗೊಂಡ ಪ್ರತಿಯೊಂದು ಮಾಹಿತಿಯ ನಡುವೆ ಪರಸ್ಪರ ತಾಳೆ ಮಾಡಿ ನೋಡುತ್ತದೆ. ಇದನ್ನು `ಡಿಡೂಪ್ಲಿಕೇಷನ್~ ಎಂದು ಕರೆಯಲಾಗುತ್ತದೆ.

ಇಲ್ಲಿ ದಾಖಲೆ ವೇಳೆ ಸಂಗ್ರಹಿಸಿದ ಪ್ರತಿಯೊಂದು ಮಾಹಿತಿಯೂ ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳೊಂದಿಗೆ ಹೋಲುತ್ತದೆಯೇ ಎಂದು ಪರೀಕ್ಷಿಸಲಾಗುತ್ತದೆ.

`ಬೃಹತ್ ಜನಸಂಖ್ಯೆಯ ಬೆಂಗಳೂರಿನ ನಾಗರಿಕರಿಗೆ ಆಧಾರ್  ಚೀಟಿ ನೀಡುವುದು ಪ್ರಾಧಿಕಾರದ ಮುಂದಿರುವ ಬಹುದೊಡ್ಡ ಸವಾಲು. ಹೀಗಾಗಿ ಸಾವಿರಕ್ಕೂ ಅಧಿಕ ಮಾಹಿತಿ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಪ್ರಾಧಿಕಾರದ್ದು. ಇದರಿಂದ ಬೆಂಗಳೂರಿಗರ ಮನೆಯ ಬಳಿಯೇ ಕೇಂದ್ರಗಳು ಸ್ಥಾಪನೆಯಾಗಲಿವೆ.

ಹೀಗಾಗಿ 2012ರ ಮಾರ್ಚ್ ವೇಳೆಗೆ ಬೆಂಗಳೂರಿಗರ ಮಾಹಿತಿ ಸಂಗ್ರಹಣಾ ಕಾರ್ಯ ಬಹುತೇಕ ಮುಗಿಯಲಿದೆ~ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ದಳವಾಯಿ.
ಈಗಾಗಲೇ ಬೆಂಗಳೂರಿನ 35 ಅಂಚೆ ಕಚೇರಿಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
 
ಆದರೆ ಅಂಚೆ ಕಚೇರಿ ಸಿಬ್ಬಂದಿ  ತಮ್ಮ ದೈನಂದಿನ ಕೆಲಸ ಕಾರ್ಯಗಳ ಜತೆಗೆ ಇದನ್ನೂ ಮಾಡಬೇಕಿದೆ. ಅಲ್ಲದೆ ವಿವರ ಸಂಗ್ರಹಣೆಗೆ ಈಗ ಸಾಕಷ್ಟು ಸಮಯ ಹಿಡಿಯುತ್ತಿದೆ. ಹೀಗಾಗಿ ದಿನಕ್ಕೆ ಹೆಚ್ಚೆಂದರೆ 40-50 ಜನರ ಕಾರ್ಡ್ ವಿವರ ದಾಖಲಿಸುತ್ತಿವೆ. ಈ ಕಾರಣಕ್ಕಾಗಿ ಹೆಸರು ನೋಂದಾಯಿಸಿದವರಿಗೆ ಜನವರಿ ನಂತರದಲ್ಲಿ ಸಂದರ್ಶನದ ವೇಳೆ ನಿಗದಿಪಡಿಸಲಾಗುತ್ತಿದೆ.

ಸರಳ, ಆದರೂ ಕಾಯಬೇಕು
ಆದರೆ ಇದು ಬಹಳ ಸರಳ ಹಾಗೂ ಅಷ್ಟೇ ಸುರಕ್ಷಿತ ನೋಂದಣಿ ಪ್ರಕ್ರಿಯೆ. ಒಬ್ಬರಿಗೆ ಹೆಚ್ಚೆಂದರೆ  15 ರಿಂದ 20 ನಿಮಿಷ ಸಾಕು. ಭಾರತದ ಯಾವುದೇ ಮೂಲೆಯಲ್ಲಿ ವಾಸಿಸುವ ವ್ಯಕ್ತಿ ಎಲ್ಲಿ ಬೇಕಾದರೂ ತಮ್ಮ ಹೆಸರು ಹಾಗೂ ಗುರುತು ನೋಂದಾಯಿಸಬಹುದು.

ಈ ವ್ಯವಸ್ಥೆಗೆ ನೀಡಬೇಕಾಗಿರುವುದು ಕೇವಲ ತಮ್ಮ ವೈಯಕ್ತಿಕ ಗುರುತಿನ ದಾಖಲೆ, ವಾಸಸ್ಥಾನದ ಹಾಗೂ ಹುಟ್ಟಿದ ದಿನಾಂಕದ ದಾಖಲೆ ಮಾತ್ರ. ಉಳಿದಂತೆ ನೋಂದಣಿ ಕೇಂದ್ರದಲ್ಲಿ ಕಣ್ಣಿನ ರೆಟಿನಾ ಗುರುತು ಹಾಗೂ ಹತ್ತು ಬೆರಳುಗಳ ಸ್ಕ್ಯಾನ್ ತೆಗೆಯಲಾಗುವುದು. ಅಂತಿಮವಾಗಿ ಭಾವಚಿತ್ರ ತೆಗೆದು ಅಂಗೀಕರಿಸಿದ್ದಕ್ಕೆ ರಸೀದಿ ನೀಡುತ್ತಾರೆ. ಇದಾದ ಕೇವಲ ಮೂವತ್ತು ದಿನಗಳಲ್ಲಿ ವಿಶಿಷ್ಟ ಗುರುತಿನ ಚೀಟಿ ನಿಮ್ಮ ಕೈಸೇರಲಿದೆ.

ಈಗಾಗಲೇ ಭಾರತದಲ್ಲಿ 5.5 ಕೋಟಿ ವ್ಯಕ್ತಿಗಳ ಮಾಹಿತಿಯನ್ನು ಪ್ರಾಧಿಕಾರ ಸಂಗ್ರಹಿಸಿದೆ. ಜತೆಗೆ 1.7 ಕೋಟಿ ಭಾರತೀಯರಿಗೆ ಆಧಾರ್ ಚೀಟಿ ವಿತರಿಸಲಾಗಿದೆ. ಮಾಹಿತಿ ನೀಡಿದ 30 ದಿನದೊಳಗಾಗಿ ಆಧಾರ್ ಕಾರ್ಡ್ ಕೈಸೇರಲಿದೆ ಎಂದು ಹೇಳಲಾಗಿತ್ತು.
 
ಆದರೆ ಆಧಾರ್ ಚೀಟಿ ಮುದ್ರಣ ಕಾರ್ಯ ಕೋಲ್ಕತ್ತದಲ್ಲಿರುವ ಭಾರತೀಯ ಅಂಚೆಯ ಸುಪರ್ದಿಯಲ್ಲಿ ನಡೆಯುವುದರಿಂದ ಹಾಗೂ ಇಡೀ ದೇಶದಲ್ಲಿ ಇದೊಂದೇ ಮುದ್ರಣಾ ಕೇಂದ್ರವಾಗಿರುವುದರಿಂದ `ಆಧಾರ್~ ಚೀಟಿ ಕೈತಲುಪಲು ಎರಡು ತಿಂಗಳಾದರೂ ಬೇಕು.

ಸುರಕ್ಷತೆ
`ಮಾಹಿತಿ ಕೇಂದ್ರಗಳಲ್ಲಿರುವ ಸಾಧನಗಳು ಭದ್ರತಾ ದೃಷ್ಟಿಯಿಂದ ಅತ್ಯಂತ ಸುರಕ್ಷಿತವಾಗಿವೆ. ಈ ಸಾಧನಗಳನ್ನು ಅಧಿಕೃತ ವ್ಯಕ್ತಿಗಳ ವಿನಃ ಬೇರೆ ಯಾರೂ ಬಳಸಲಾಗದು. ಜತೆಗೆ ಬೆರಳಿನ ಸ್ಕ್ಯಾನರ್ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕುಗಳು ಹರಡದಂತೆ ಪ್ರತೀ ಕೇಂದ್ರದಲ್ಲೂ ಉಪ್ಪಿನ ನೀರನ್ನು ಇಡಲಾಗಿದೆ.

ಬೆರಳು ಸ್ಕ್ಯಾನ್ ಆಗುವ ಮೊದಲು ಉಪ್ಪಿನ ನೀರಿನಲ್ಲಿ ಕೈಗಳನ್ನು ಅದ್ದುವುದು ಕಡ್ಡಾಯ~ ಎಂದು ಮಾಹಿತಿ ಕೇಂದ್ರ ನಡೆಸುವ ವ್ಯಕ್ತಿಯೊಬ್ಬರು ತಿಳಿಸುತ್ತಾರೆ.
ಕೆಲವೊಮ್ಮೆ ವಯಸ್ಸಾದವರು, ಮಕ್ಕಳು ಹಾಗೂ ಮನೆಗೆಲಸ ಮಾಡುವವರ ಕೈಗಳ ಬೆರಳಿನ ಗುರುತುಗಳು ಸ್ಪಷ್ಟವಾಗಿ ಗೋಚರಿಸದು.

ಅಂಥವರ ಬೆರಳಿನ ಸ್ಪಷ್ಟ ಸ್ಕ್ಯಾನ್‌ಗಾಗಿಯೂ ಉಪ್ಪಿನ ನೀರನ್ನು ಬಳಸಲಾಗುತ್ತಿದೆ. ಸ್ಕ್ಯಾನ್ ಅಸ್ಪಷ್ಟವಾದಾಗ ಪ್ರತಿ ವ್ಯಕ್ತಿಯನ್ನು ನಾಲ್ಕು ಬಾರಿ ಸ್ಕ್ಯಾನ್‌ಗೆ ಒಳಪಡಿಸಲಾಗುತ್ತದೆ. ಅವುಗಳಲ್ಲಿ ಉತ್ತಮವಾದ ಒಂದು ದಾಖಲೆಯನ್ನು ಈ ತಂತ್ರಾಂಶ ತೆಗೆದುಕೊಳ್ಳಲಿದೆ.

ಅಗತ್ಯ ದಾಖಲಾತಿ
ಹೆಸರು ಹಾಗೂ ಭಾವಚಿತ್ರ ದಾಖಲಾತಿ (ಯಾವುದಾದರೂ ಒಂದು)
1.  ಪಾಸ್‌ಪೋರ್ಟ್
2.  ಪಾನ್ ಕಾರ್ಡ್
3.  ಪಡಿತರ ಚೀಟಿ
4.  ಮತದಾರರ ಗುರುತಿನ ಚೀಟಿ
5.  ಸರ್ಕಾರಿ ಗುರುತಿನ ಚೀಟಿ
6.  ಎನ್‌ಆರ್‌ಇಜಿಎಸ್ ಜಾಬ್ ಕಾರ್ಡ್
7.  ಬಂದೂಕು ಪರವಾನಗಿ
8.  ಬ್ಯಾಂಕ್ ಖಾತೆ ಪುಸ್ತಕ /ಡೆಬಿಟ್/ ಕ್ರೆಡಿಟ್ ಕಾರ್ಡ್
9.  ಪಿಂಚಣಿ ಚೀಟಿ
10. ಸ್ವಾತಂತ್ರ್ಯ ಯೋಧರಿಗೆ ನೀಡುವ ಚೀಟಿ
11. ಕಿಸಾನ್ ಫೋಟೊ ಪಾಸ್‌ಬುಕ್
12. ಅಂಚೆ ಇಲಾಖೆ ನೀಡುವ ಹೆಸರು ಹಾಗೂ ಭಾವಚಿತ್ರ ಇರುವ ವಿಳಾಸ ಪತ್ರ
ವಿಳಾಸ ದಾಖಲೆ
1.  ಪಾಸ್‌ಪೋರ್ಟ್ 
2.  ಬ್ಯಾಂಕ್ ಸ್ಟೇಟ್‌ಮೆಂಟ್
3.  ಪಾಸ್‌ಬುಕ್
4.  ಅಂಚೆ ಇಲಾಖೆ ದಾಖಲೆ
5.  ಪಡಿತರ ಚೀಟಿ
6.  ಮತದಾರರ ಗುರುತಿನ ಚೀಟಿ/ ಚಾಲನ ಪರವಾನಗಿ
7.  ನೀರು/ ವಿದ್ಯುತ್/ ಸ್ಥಿರ ದೂರವಾಣಿ/ ಆಸ್ತಿ ತೆರಿಗೆ ರಸೀದಿ
8.  ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ (3 ತಿಂಗಳ ಈಚಿನದು)

9.  ಎನ್‌ಆರ್‌ಇಜಿಎಸ್ ಜಾಬ್ ಕಾರ್ಡ್
10. ಬಂದೂಕು ಪರವಾನಗಿ
11. ಫೊಟೊ ಇರುವ ಬ್ಯಾಂಕ್
  ಎಟಿಎಂ/ ಕ್ರೆಡಿಟ್ ಕಾರ್ಡ್
12. ಪಿಂಚಣಿ ಚೀಟಿ
13. ಸ್ವಾತಂತ್ರ ಯೋಧರ ಚೀಟಿ
14. ಕಿಸಾನ್ ಫೋಟೊ ಪಾಸ್‌ಬುಕ್

ಜನ್ಮದಾಖಲಾತಿ ಪತ್ರ
1.  ಪಾಸ್‌ಪೋರ್ಟ್
2.  ಎಸ್ಸೆಸೆಲ್ಸಿ ಅಂಕಪಟ್ಟಿ
3.  ಹುಟ್ಟಿದ ದಾಖಲಾತಿ ಪತ್ರ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT