ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀನ್ ಸೂರಿಂಜೆಗೆ ಜಾಮೀನು ನಕಾರ

Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳೂರಿನ ಪಡೀಲ್‌ನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಪತ್ರಕರ್ತ ನವೀನ್ ಸೂರಿಂಜೆಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಜಾಮೀನು ಕೋರಿ ನವೀನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಕೇಶವನಾರಾಯಣ ಅವರಿದ್ದ ಏಕಸದಸ್ಯ ಪೀಠ, ಬುಧವಾರ ಆದೇಶ ಪ್ರಕಟಿಸಿತು. ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಇದೇ ಪ್ರಕರಣದ ಆರೋಪಿಗಳಾದ ವೇಣುಗೋಪಾಲ ಮತ್ತು ತಾರಾನಾಥ ಅವರಿಗೂ ಜಾಮೀನು ನಿರಾಕರಿಸಿ ಆದೇಶ ಹೊರಡಿಸಿತು. `ಹೋಂ ಸ್ಟೇ ಮೇಲೆ ದಾಳಿ ನಡೆಯುವ ಮುನ್ನವೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಅರ್ಜಿದಾರರು ಮಾಡುತ್ತಿರುವ ವಾದದಲ್ಲಿ ಹುರುಳಿಲ್ಲ.

ದಾಳಿ ನಡೆದು 15 ನಿಮಿಷಗಳಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು ಎಂಬುದು ತನಿಖೆಯ ವೇಳೆ ಪತ್ತೆಯಾಗಿದೆ. ಅರ್ಜಿದಾರರು ಪೊಲೀಸರಿಗೆ ವಿಷಯ ತಿಳಿಸುವಾಗ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿತ್ತು. ದಾಳಿ ನಡೆಸಿದ ವ್ಯಕ್ತಿಗಳ ಜೊತೆ ಖುದ್ದಾಗಿ ಸ್ಥಳಕ್ಕೆ ತೆರಳಿದ್ದ ಅರ್ಜಿದಾರರು, ಘಟನೆಯನ್ನು ಚಿತ್ರೀಕರಿಸಿದ್ದಾರೆ. ಆ ಮೂಲಕ ಘಟನೆಗೆ ಉತ್ತೇಜನ ನೀಡಿದ್ದಾರೆ' ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

`ಅರ್ಜಿದಾರರು ಸ್ವತಃ ಹಲ್ಲೆ ನಡೆಸಿಲ್ಲ ಎಂಬುದು ಸತ್ಯ. ಆದರೆ, ಘಟನೆಯನ್ನು ಚಿತ್ರೀಕರಿಸಿ ಸುದ್ದಿ ವಾಹಿನಿಯಲ್ಲಿ ಪದೇ ಪದೇ ಪ್ರಸಾರ ಮಾಡಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿಗಳ ವೈಯಕ್ತಿಕ ಹಕ್ಕಿನಲ್ಲಿ ಪ್ರವೇಶಿಸಿದ್ದಾರೆ. ಅವರ ಮಾನಹಾನಿಗೂ ಕಾರಣರಾಗಿದ್ದಾರೆ. ಇದು ಹಲ್ಲೆ ನಡೆಸಿದಷ್ಟೇ ಘೋರ ಕೃತ್ಯ. ಈಗ ವಿದ್ಯಾರ್ಥಿಗಳಿಗೆ ಆದ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಇಂತಹ ಆರೋಪ ಎದುರಿಸುತ್ತಿರುವ ನವೀನ್ ಅವರಿಗೆ ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ' ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

`ನವೀನ್ ಈ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಬಹುದಾಗಿದೆ. ಅವರ ನಡವಳಿಕೆ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ. ಅವರಿಗೆ ಜಾಮೀನು ಮಂಜೂರು ಮಾಡಿದರೆ ಬಿಡುಗಡೆ ಬಳಿಕ ಸಾಕ್ಷಿಗಳಿಗೆ ಒತ್ತಡ ಹೇರುವ, ಬೆದರಿಕೆ ಹಾಕುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆದ್ದರಿಂದ ಅವರು ಪ್ರಕರಣದಲ್ಲಿ ಜಾಮೀನು ಪಡೆಯಲು ಅರ್ಹರಲ್ಲ' ಎಂದು ನ್ಯಾಯಪೀಠ ಹೇಳಿದೆ.ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವಂತೆ ಕೋರಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT