ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇದಿತಾ `3ಡಿ' ಪೇಪರ್ ಕಲೆ

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

`ವೃತ್ತಿ ಹಣ ನೀಡಿದರೆ ಪ್ರವೃತ್ತಿ ಖುಷಿ ನೀಡುತ್ತದೆ. ಇದೇ ಕಾರಣಕ್ಕೆ ಪ್ರವೃತ್ತಿಯನ್ನೇ ವೃತ್ತಿಯನ್ನಾಗಿ ಬದಲಾಯಿಸಿಕೊಂಡು ಸಂತೋಷವನ್ನು ಆಯ್ಕೆ ಮಾಡಿಕೊಳ್ಳುವ ಮಂದಿಯ ಸಾಲಿಗೆ ನಾನೂ ಸೇರುತ್ತೇನೆ' ಎನ್ನುವ ನಿವೇದಿತಾ ಅವರಿಗೆ ಒಲಿದಿದ್ದು `ಪೇಪರ್ ಕ್ವಿಲ್ಲಿಂಗ್' ಕಲೆ. ಮನಸ್ಸಿದ್ದರೆ ಕಸದಿಂದಲೂ ಕಲೆ ಒಡಮೂಡಲು ಸಾಧ್ಯ ಎಂಬುದನ್ನು ತೋರಿಸಿದ ಹಲವು ನಿದರ್ಶನಗಳು ಅವರಲ್ಲಿ ಕಾಗದದ ಕಲೆಯ ಅನಾವರಣಕ್ಕೆ ದಾರಿ ಮಾಡಿಕೊಟ್ಟಿದೆ.

ಓದಿದ್ದು ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಸಾಫ್ಟ್ ಸ್ಕಿಲ್ ತರಬೇತಿ ನೀಡುತ್ತಿದ್ದ ಇವರಿಗೆ ಅಪಘಾತವಾಗಿ ನಾಲ್ಕು ತಿಂಗಳು ಮನೆಯಲ್ಲಿರಬೇಕಾದ ಸ್ಥಿತಿ ಎದುರಾಯಿತಂತೆ. ಈ ಅವಧಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂಬ ಕಾರಣಕ್ಕೆ `ಪೇಪರ್ ಕ್ವಿಲ್ಲಿಂಗ್'ನಲ್ಲಿ ತೊಡಗಿಕೊಂಡರು. ಆದರೆ ಮೊದಮೊದಲು ಸಮಯ ಕಳೆಯಲು, ಹವ್ಯಾಸಕ್ಕೆಂದು ಆರಂಭಿಸಿದ ಈ ಕಲೆ ಈಗ ಪೂರ್ಣ ಕೆಲಸವಾಗಿ ಮಾರ್ಪಾಡು ಹೊಂದಿ `ಐಡಿ ಆರ್ಟಿಸ್ಟಿಕ್' ಎಂಬ ಹೆಸರಿನಲ್ಲಿ ಹಲವು ಪೇಪರ್‌ನಲ್ಲಿನ ವಿವಿಧತೆಯನ್ನು ಹೊರತಂದಿದ್ದಾರೆ.

ಪೇಪರ್ ಕ್ವಿಲ್ಲಿಂಗ್ ಮೂಲತಃ ಯುರೋಪಿನ ಪ್ರಾಚೀನ ಕಲೆ. ಚರ್ಚ್‌ಗಳನ್ನು ಅಲಂಕೃತಗೊಳಿಸಲೆಂದು ಕಾಗದದ ಈ ಸಾಮಗ್ರಿಗಳನ್ನು ಬಳಸುತ್ತಿದ್ದರಂತೆ. ಆದರೆ ಈಗ ಅದೇ ಫ್ಯಾಷನ್ ಆಗಿ ರೂಪುಗೊಂಡಿದೆ. ಅದಕ್ಕೆ ನೂತನ ರೂಪ ದೊರಕಿರುವುದು `ಪೇಪರ್ ಕ್ವಿಲ್ಲಿಂಗ್' ಮೂಲಕ. ಉಡುಗೊರೆಗಾಗಲೀ, ಮನೆಯ ಅಲಂಕಾರಕ್ಕಾಗಲೀ ಈ ಪೇಪರ್ ಕಲೆಯ ಫ್ರೇಮ್‌ಗಳನ್ನೇ ಜನ ಹೆಚ್ಚುಹೆಚ್ಚು ಕೊಂಡುಕೊಳ್ಳುತ್ತಿದ್ದಾರೆ.

`ಪೇಪರ್‌ನಿಂದ ಹಲವರು ವಿಭಿನ್ನ ಕಲಾಕೃತಿಗಳನ್ನು ತಯಾರಿಸುವುದನ್ನು ಕಂಡಿದ್ದೇನೆ. ಆದರೆ ನನ್ನ ಪೇಪರ್ ಕಲೆಯಲ್ಲಿ 3ಡಿ ಎಫೆಕ್ಟ್ ಇರುವುದು ವಿಶೇಷ. ಮೊದಲು ವಾರಾಂತ್ಯದಲ್ಲಷ್ಟೇ ಇವುಗಳ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದೆ. ಈಗ ಬೇಡಿಕೆ ಹೆಚ್ಚಿದ್ದರಿಂದ ನನ್ನ ಹವ್ಯಾಸವೇ ವೃತ್ತಿಯಾಗಿದೆ' ಎನ್ನುವ ನಿವೇದಿತಾ ಅವರು ಕಳೆದ 2 ವರ್ಷಗಳಿಂದಲೂ ಕಾಗದದಿಂದ ತರಾವರಿ ಕಲಾಕೃತಿಗಳನ್ನು ಮೂಡಿಸಿದ್ದಾರೆ.

`ಪೇಪರ್ ಕ್ವಿಲ್ಲಿಂಗ್ ಎಂದರೆ ಕಾಗದಕ್ಕೆ ನಿಮಗೆ ಇಷ್ಟವೆಂದ ರೂಪ ಕೊಡುವುದು. ಆ ರೂಪ ಕೊಡುವುದರಲ್ಲೇ ಚಾಕಚಕ್ಯತೆ ಇರುವುದು. ಕಾಗದ ಎಲ್ಲಿ ಹೋದರೂ ಸಿಗುತ್ತದೆ. ಅದರಲ್ಲಿ ಆಯ್ಕೆಯೂ ಹೆಚ್ಚು. ಅದರಲ್ಲೂ ಪೇಪರ್ ಕ್ವಿಲ್ಲಿಂಗ್‌ನಲ್ಲಿ ಬಣ್ಣಗಳೊಂದಿಗೆ ಆಟವಾಡಬಹುದು' ಎಂದು ವಿವರಿಸುತ್ತಾರೆ ನಿವೇದಿತಾ.

ಇದುವರೆಗೂ ಪೇಪರ್ ಕ್ವಿಲ್ಲಿಂಗ್‌ನಲ್ಲಿ 500 ವಿಭಿನ್ನ ಕಲಾಕೃತಿಗಳನ್ನು ಅವರು ಹೊರತಂದಿದ್ದಾರಂತೆ. ಅವುಗಳಲ್ಲಿ ಗಿಡ, ಮರ, ಪ್ರಾಣಿ ಪಕ್ಷಿ, ಒಟ್ಟಿನಲ್ಲಿ ಪ್ರಕೃತಿಯನ್ನೇ ಇಡಿಯಾಗಿ ತೋರುವ ಹಂಬಲ ಎದ್ದು ಕಾಣುತ್ತದೆ. 350 ರೂಪಾಯಿಯಿಂದ ಆರಂಭಗೊಂಡು 25,000 ರೂ.ವರೆಗಿನ ಕಲಾಕೃತಿಗಳು ಇವರ ಬಳಿಯಿವೆ.

ನಿವೇದಿತಾ ಅವರ ಈ ಕಲೆಯ ಒಲವಿಗೆ ತಾಯಿಯ ಬೆಂಬಲವೇ ಊರುಗೋಲಂತೆ. ಓದಷ್ಟೇ ನಮಗೆ ಸಂತಸ ನೀಡಬಲ್ಲದು ಎನ್ನುವುದು ಸುಳ್ಳು. ನಮ್ಮದೇ ಕ್ರಿಯಾಶೀಲತೆಯನ್ನು ಪ್ರದರ್ಶಿಸುವ ದಾರಿ ಹಲವು ಇವೆ. ಆದರೆ ಆಯ್ಕೆ ನಮ್ಮದು ಎಂದು ವಿವರಿಸುತ್ತಾರೆ.

ಮನೆಯ ಬಣ್ಣ, ವಿನ್ಯಾಸಕ್ಕೆ ಅನುಗುಣವಾಗಿ ಫ್ರೇಮ್‌ಗಳನ್ನು ತಯಾರು ಮಾಡುವ ಇವರ ಕಲೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆಯಂತೆ. ಈಗೀಗ ಉಡುಗೊರೆ ನೀಡಲು ಈ ಫ್ರೇಮನ್ನೇ ಹೆಚ್ಚು ಕೊಂಡುಕೊಳ್ಳುತ್ತಾರೆ ಎನ್ನುವುದು ಅವರ ವಿವರಣೆ.

ನಗರದ ಹಲವೆಡೆ ಮತ್ತು ದೆಹಲಿಯ ಮೇಳಗಳಲ್ಲೂ ಪ್ರದರ್ಶನ ನೀಡಿರುವ ನಿವೇದಿತಾ, ದಿನೇದಿನೇ ಬದಲಾದ ವಿನ್ಯಾಸಗಳನ್ನು ತಮ್ಮ ಕಲೆಗೂ ಅನ್ವಯಿಸಿಕೊಳ್ಳುತ್ತಾರೆ. `ಫ್ಯಾಷನ್‌ಗೆ ತಕ್ಕಂತೆ ನಾವೂ ಬದಲಾಗಬೇಕು' ಎನ್ನುವ ಅವರಿಗೆ ಈ ಕಲೆಯನ್ನು ಇನ್ನಷ್ಟು ಮಂದಿಗೆ ಪಸರಿಸುವ ಉದ್ದೇಶವಿದೆ.
ಸಂಪರ್ಕಕ್ಕೆ: 9632466455.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT