ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನೀರಾವರಿ ಯೋಜನೆ ಪೂರ್ಣಗೊಳಿಸದ ಬಿಜೆಪಿ'

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕೆ
Last Updated 24 ಏಪ್ರಿಲ್ 2013, 6:34 IST
ಅಕ್ಷರ ಗಾತ್ರ

ವಿಜಾಪುರ: ಬಿಳಿ ಖುರ್ತಾ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಹವಾಯಿ ಮಾದರಿಯ ಚಪ್ಪಲಿ ಧರಿಸಿದ್ದ ರಾಹುಲ್ ಗಾಂಧಿ, ನಸುನಗುತ್ತ ವೇದಿಕೆ ಏರಿ ಶಿರಬಾಗಿ, ಕೈಮುಗಿದು ಜನತೆಗೆ ವಂದಿಸಿದರು. `ಉರಿಯುವ ಬಿಸಿಲಿ ನಲ್ಲಿಯೂ ದೂರದೂರದಿಂದ ಬಂದಿ ರುವ ತಮಗೆ ಧನ್ಯವಾದ' ಎಂದರು.

ತಮ್ಮ ಭಾಷಣದಲ್ಲಿ ಕರ್ನಾಟಕದ ಗತ ವೈಭವವನ್ನು ಬಹಳಷ್ಟು ನೆನಪಿಸಿದ ಅವರು, ಅದನ್ನು ಪುನರ್ ಸ್ಥಾಪಿಸಲು ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಮನವಿ ಮಾಡಿದರು. `ಕೃಷ್ಣಾ ಕಣಿವೆಯ ನೀರಾವರಿ ಯೋಜನೆಗಳನ್ನು ಬಿಜೆಪಿ ಸರ್ಕಾರ ಏಕೆ ಪೂರ್ಣಗೊಳಿಸಲಿಲ್ಲ' ಎಂದು ರಾಹುಲ್ ಪ್ರಶ್ನಿಸುತ್ತಿದ್ದಂತೆ ಜನ ಜೋರಾಗಿ ಕೂಗಿ ಚೆಪ್ಪಾಳೆ ತಟ್ಟಿದರು.

ಮಧ್ಯಾಹ್ನ 1.30ಕ್ಕೆ ಆಗಮಿಸಬೇಕಿದ್ದ ಅವರು 4 ಗಂಟೆಗೆ ಬಂದರು. ಇಡೀ ಕಾರ್ಯಕ್ರಮ ಅರ್ಧ ಗಂಟೆಯಲ್ಲಿ ಮುಗಿದು ಹೋಯಿತು. ರಾಹುಲ್ ಗಾಂಧಿ ಕೇವಲ ಎಂಟು ನಿಮಿಷ ಮಾತ ನಾಡಿದರು. ಎರಡೂವರೆ ಗಂಟೆ ತಡ ವಾದರೂ ಜನ ಕಾಯ್ದು ಕುಳಿತಿದ್ದರು.

ರಾಹುಲ್‌ರಿಗೂ ಮುನ್ನ ಭದ್ರಾತಾ ಸಿಬ್ಬಂದಿಯ ಹೆಲಿಕಾಪ್ಟರ್ ಬಂದಿಳಿ ಯಿತು. ನಂತರ ರಾಹುಲ್ ಖಾಸಗಿ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದರು. ಸಮಾವೇಶ ನಡೆದ ಬಿಎಲ್‌ಡಿಇ ಸಂಸ್ಥೆಯ ಹೊಸ ಕ್ಯಾಂಪಸ್‌ಗಳಲ್ಲಿಯೇ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿತ್ತು. ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಆಗಮಿಸಿ, ಅಲ್ಲಿಂದ ಸಿಂಧನೂರ, ಇಳಕಲ್- ವಿಜಾಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದರು. ನಂತರ ಸೋಲಾ ಪುರದ ವರೆಗೆ ಹೆಲಿಕಾಪ್ಟರ್‌ನಲ್ಲಿ, ಅಲ್ಲಿಂದ ವಿಶೇಷ ವಿಮಾನದಲ್ಲಿ ಮರಳಿದರು.


ಕಾಂಗ್ರೆಸ್ ಸೇವಾದಳದ ಜಿಲ್ಲಾ ಮುಖ್ಯ ಸಂಘಟಕ ಡಾ.ಗಂಗಾಧರ ಸಂಬಣ್ಣಿ, ಸೋಮನಾಥ ಕಳ್ಳಿಮನಿ ಗೌರವ ವಂದನೆ ಸಲ್ಲಿಸಿದರು. ಎಂ.ಬಿ. ಪಾಟೀಲ ಬರಮಾಡಿಕೊಂಡರು.

ಐವರಿಗೆ ಅವಕಾಶ: ವೇದಿಕೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧು ಸೂದನ ಮಿಸ್ತ್ರಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಸಮನ್ವಯ ಸಮಿತಿ ಸದಸ್ಯ, ಶಾಸಕ ಎಂ.ಬಿ. ಪಾಟೀಲ, ಕೆಪಿಸಿಸಿ ವಕ್ತಾರ ಪ್ರಕಾಶ ರಾಠೋಡ ಅವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ರಾಹುಲ್ ಭಾಷಣದ ನಂತರ ಜಿಲ್ಲೆಯ ವಿವಿಧ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಾದ ಶಿವಾನಂದ ಪಾಟೀಲ (ಬಸವನ ಬಾಗೇವಾಡಿ), ಯಶವಂತ ರಾಯಗೌಡ ಪಾಟೀಲ (ಇಂಡಿ), ರಾಜು ಆಲಗೂರ (ನಾಗಠಾಣ), ಡಾ.ಎಂ.ಎಂ. ಬಾಗವಾನ (ವಿಜಾಪುರ ನಗರ), ಸಿ.ಎಸ್. ನಾಡಗೌಡ (ಮುದ್ದೇಬಿಹಾಳ), ಶರಣಪ್ಪ ಸುಣಗಾರ (ಸಿಂದಗಿ), ಎ.ಎಸ್. ಪಾಟೀಲ ನಡಹಳ್ಳಿ (ದೇವರ ಹಿಪ್ಪರಗಿ) ಅವರನ್ನು ವೇದಿಕೆಗೆ ಆಹ್ವಾನಿಸಿ ಪರಿಚಯಿಸಲಾಯಿತು.

ಇದಕ್ಕೂ ಮುನ್ನ ರಾಹುಲ್, ಕಾಂಗ್ರೆಸ್ ಜಿಲ್ಲಾ ಘಟಕದ ಪದಾಧಿಕಾರಿ ಗಳು ಹಾಗೂ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಕೈಕುಲುಕಿ ವೇದಿಕೆಗೆ ಬಂದಿದ್ದರು.
ಪತ್ರಕರ್ತರ ಗ್ಯಾಲರಿ ಪಕ್ಕ ಕುಳಿತಿದ್ದ ಮಹಿಳೆಯೊಬ್ಬರು, ಸಿದ್ದರಾಮಯ್ಯ ಭಾಷಣಕ್ಕೆಆಗಮಿಸುತ್ತಿದ್ದಂತೆ  `ನೋಡ್, ಲುಂಗಿ ಮ್ಯಾಲೆ ಬಂದಾನ' ಎಂದು ಹೇಳಿ ನಗೆ ಉಕ್ಕಿಸಿದರು.

ಅತ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅರೆ ಸೇನಾ ಪಡೆಯ ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಶಾಮಿ ಯಾನ ದಿಂದ  ಏದೂರದಲ್ಲಿ ಪುಟ್ಟದೊಂದು ಎತ್ತರದ ವೇದಿಕೆಯನ್ನು ರಾಹುಲ್‌ರಿಗೆ ನಿರ್ಮಿಸಲಾಗಿತ್ತು. ಎರಡು ಕಿ.ಮೀ. ದೂರವೇ ವಾಹನಗಳನ್ನು ತಡೆಯ ಲಾಗುತ್ತಿತ್ತು. ಈ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು.

ಎಷ್ಟು ವರ್ಷ ಹಿಂದಕ್ಕೆ?: ಬಿಜೆಪಿ ಆಡಳಿತದಲ್ಲಿ ಕರ್ನಾಟಕ ಅಭಿವೃದ್ಧಿ ಯಲ್ಲಿ 20 ವರ್ಷ ಹಿಂದಕ್ಕೆ ಹೋಗಿದೆ ಎಂದು ಡಾ.ಜಿ. ಪರಮೇಶ್ವರ ಹೇಳಿದರೆ, 10 ವರ್ಷ ಹಿಂದಕ್ಕೆ ಹೋಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

`ಜನ ಬದಲಾವಣೆ ಬಯಸುತ್ತಿದ್ದಾರೆ. ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ. ಜೆಡಿಎಸ್ ಕೆಲವೇ ಜಿಲ್ಲೆಗೆ ಸೀಮಿತವಾಗಿದ್ದು, ಬಿಜೆಪಿ ಮುಳುಗುತ್ತಿರುವ ಹಡಗು. ಜೆಡಿಎಸ್-ಬಿಜೆಪಿ-ಕೆಜೆಪಿ ಅಧಿಕಾರಕ್ಕೆ ಬರುವ ಪಕ್ಷಗಳಲ್ಲ. ದಕ್ಷ-ಪ್ರಾಮಾಣಿಕ ನಾಯಕತ್ವ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ' ಎಂದು ಸಿದ್ದರಾಮಯ್ಯ ಹೇಳಿದರು.

`ಕೃಷ್ಣಾ ನ್ಯಾಯಮಂಡಳಿಯ ಅಂತಿಮ ತೀರ್ಪು ಬಂದು ಎರಡು ವರ್ಷವಾದರೂ ಬಿಜೆಪಿ ಸರ್ಕಾರ ಏನನ್ನೂ ಮಾಡಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ನೀರಾವರಿ ಯೋಜನೆಗಳನ್ನು ಮುಗಿಸಿ ಜನರ ಜಮೀನುಗಳಿಗೆ ನೀರು ಕೊಡುತ್ತೇವೆ. ಬರದ ಬವಣೆಯನ್ನು ನೀಗಿಸುತ್ತೇವೆ' ಎಂದರು.

`ಹೊಸ ಬದಲಾವಣೆ-ಜನಪರ ಸರ್ಕಾರ ನಮ್ಮ ಸಂಕಲ್ಪ. ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ನಂ.1 ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಕಾಂಗ್ರೆಸ್‌ಗೆ ಅಧಿಕಾರ ನೀಡಿ' ಎಂದು ಡಾ.ಜಿ. ಪರಮೇಶ್ವರ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT