ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯಕ್ಕೂ ತಪ್ಪು ಮಾಹಿತಿ!

Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಾಗ, ಮೌಲ್ಯಮಾಪನ ಮಾಡುವಾಗ, ಮೀಸಲಾತಿ ನಿಗದಿಪಡಿಸುವಾಗ ಬೇಕೆಂದ ಹಾಗೆ ನಡೆದುಕೊಳ್ಳುವ ಕೆಪಿಎಸ್‌ಸಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವಾಗಲೂ ಹೀಗೆಯೇ ಮಾಡುತ್ತದೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

1999ರಲ್ಲಿ ನಡೆದ ಗೆಜೆಟೆಡ್ ಅಧಿಕಾರಿಗಳ ನೇಮಕಾತಿಯಲ್ಲಿ ಕಾನೂನು ಐಚ್ಛಿಕ ವಿಷಯ ಪಡೆದ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿಗೆ ಕೆಪಿಎಸ್‌ಸಿ ಸಲ್ಲಿಸಿದ ಮಾಹಿತಿಗಳು ಒಂದಕ್ಕೊಂದು ತಾಳೆಯಾಗುವುದಿಲ್ಲ. ಒಂದೇ ವಿಷಯದ ಬಗ್ಗೆ ಕೆಪಿಎಸ್‌ಸಿಯ ಇಬ್ಬರು ಕಾರ್ಯದರ್ಶಿಗಳು ಬೇರೆ ಬೇರೆ ಅಂಕಿಸಂಖ್ಯೆ ನೀಡಿರುವುದು ಅದರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಸಹ ಕಾರ್ಯದರ್ಶಿ ಮತ್ತೊಂದು ಮಾಹಿತಿ ನೀಡುತ್ತಾರೆ!

2002ರ ಜುಲೈ 16ರಂದು ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಆರ್.ಶ್ರೀನಿವಾಸ್ ಅವರು ನ್ಯಾಯ ಮಂಡಳಿಗೆ ಪ್ರಮಾಣ ಪತ್ರವನ್ನು ಸಲ್ಲಿಸಿ, `1999ರ ಗೆಜೆಟೆಡ್ ಅಧಿಕಾರಿಗಳ ನೇಮಕಾತಿಗೆ ನಡೆದ ಪೂರ್ವಭಾವಿ ಪರೀಕ್ಷೆಗೆ ಕಾನೂನು ಐಚ್ಛಿಕ ವಿಷಯ ಪಡೆದ 1998 ಮಂದಿ ಅಭ್ಯರ್ಥಿಗಳು ಹಾಜರಾಗಿದ್ದರು. ಅವರಲ್ಲಿ ಕೇವಲ 53 ಮಂದಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದರು.

ಎಲ್ಲ ವಿಷಯಗಳೂ ಸೇರಿ ಒಟ್ಟಾರೆಯಾಗಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದವರ ಸಂಖ್ಯೆ 4,711' ಎಂದು ತಿಳಿಸಿದ್ದರು. ಅವರು ನಿವೃತ್ತರಾದ ನಂತರ ಇದೇ ಪ್ರಕರಣದ ಬಗ್ಗೆ ಆಗಿನ ಕೆಪಿಎಸ್‌ಸಿ ಕಾರ್ಯದರ್ಶಿ ಬಿ.ಎಸ್.ರಾಮಪ್ರಸಾದ್ ಅವರು ಮತ್ತೊಂದು ಪ್ರಮಾಣ ಪತ್ರವನ್ನು ಸಲ್ಲಿಸಿ, `1999 ಕೆಎಎಸ್ ಮುಖ್ಯ ಪರೀಕ್ಷೆಗೆ ಒಟ್ಟು 3,526 ಮಂದಿ ಹಾಜರಾಗಿದ್ದರು' ಎಂದು ತಿಳಿಸಿದರು.

ನಾವು ಅನನುಭವಿಗಳಲ್ಲ
2010ರ ಕೆಎಎಸ್ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ತಾವು ಅನನುಭವಿಗಳಲ್ಲ ಎಂದು ಮೈಸೂರು ವಿಶ್ವವಿದ್ಯಾಲಯದ ಡಾ.ಎಚ್.ಆರ್.ಮಂಜುನಾಥ್ ಮತ್ತು ಡಾ.ಆರ್.ಡಿ.ಪವಮಾನ ಸ್ಪಷ್ಟಪಡಿಸಿದ್ದಾರೆ.

2007ರಲ್ಲಿ ತಾವು ಮೈಸೂರು ವಿಶ್ವವಿದ್ಯಾಲಯದ ಕಾಯಂ ಅಧ್ಯಾಪಕರಾಗುವುದಕ್ಕೆ ಮೊದಲು 1990ರಿಂದ 1993ರವರೆಗೆ ಸರ್ಕಾರಿ ಕಾಲೇಜಿನಲ್ಲಿ ಹಾಗೂ 1993ರಿಂದ 2007ರವರೆಗೆ ಮೈಸೂರಿನ ಸೋಮಾನಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾಗಿ ಡಾ.ಮಂಜುನಾಥ್ ತಿಳಿಸಿದ್ದಾರೆ.

1997ರಿಂದ 2007ರವರೆಗೆ ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ತಾವು ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾಗಿ ಡಾ.ಪವಮಾನ ತಿಳಿಸಿದ್ದಾರೆ.

ಸರ್ಕಾರಿ ಅಥವಾ ಅನುದಾನಿತ ಕಾಲೇಜುಗಳಲ್ಲಿ ಪೂರ್ಣಾವಧಿಯಾಗಿ ಹತ್ತು ವರ್ಷ ಸೇವೆ ಸಲ್ಲಿಸಿದ ಅಧ್ಯಾಪಕರು ಮಾತ್ರ ಮೌಲ್ಯಮಾಪನಕ್ಕೆ ಅರ್ಹರು ಎನ್ನುವುದು ಕೆಪಿಎಸ್‌ಸಿ ನಿಯಮ.

ಈ ನಡುವೆ 1999ರ ಮುಖ್ಯ ಪರೀಕ್ಷೆಗೆ ಹಾಜರಾದ ಅಭ್ಯರ್ಥಿ ದ್ಯಾಮಾ ನಾಯ್ಕ ಅವರು 2009ರಲ್ಲಿ ಮಾಹಿತಿ ಹಕ್ಕಿನ ಪ್ರಕಾರ ಕೆಪಿಎಸ್‌ಸಿ ಅರ್ಜಿ ಸಲ್ಲಿಸಿ, `ಕಾನೂನು ಐಚ್ಛಿಕ ವಿಷಯವಾಗಿ ಪಡೆದವರು ಎಷ್ಟು ಮಂದಿ ಪೂರ್ವಭಾವಿ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ ಎಷ್ಟು ಮಂದಿ ಮುಖ್ಯ ಪರೀಕ್ಷೆಗೆ ಅರ್ಹರಾದರು.

ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳೂ ಎಷ್ಟು ಹಾಗೂ ನೌಕರಿ ಪಡೆದುಕೊಂಡವರು ಎಷ್ಟು ಹಾಗೂ ಒಟ್ಟಾರೆಯಾಗಿ ಮುಖ್ಯ ಪರೀಕ್ಷೆಗೆ ಹಾಜರಾದವರ ಸಂಖ್ಯೆ ಎಷ್ಟು' ಎಂದು ಮಾಹಿತಿ ಕೋರಿದರು.ಅವರಿಗೆ ಮಾಹಿತಿ ನೀಡಿದ ಆಯೋಗದ ಸಹಾಯಕ ಕಾರ್ಯದರ್ಶಿ ಒ.ನಾರಾಯಣ, `1999ರ ಪೂರ್ವಭಾವಿ ಪರೀಕ್ಷೆಗೆ ಕಾನೂನು ಐಚ್ಛಿಕ ವಿಷಯ ಪಡೆದ 2850 ಮಂದಿ ಹಾಜರಾಗಿದ್ದರು.

ಅದರಲ್ಲಿ 80 ಮಂದಿ ಮುಖ್ಯ ಪರೀಕ್ಷೆಗೆ ಅರ್ಹರಾಗಿದ್ದರು. ಸಂದರ್ಶನಕ್ಕೆ 13 ಮಂದಿ ಹಾಜರಾಗಿದ್ದರು. 3 ಮಂದಿಗೆ ಕೆಲಸ ದೊರಕಿದೆ. ಒಟ್ಟಾರೆಯಾಗಿ ಮುಖ್ಯಪರೀಕ್ಷೆಗೆ ಹಾಜರಾದವರ ಸಂಖ್ಯೆ 4771' ಎಂದು ಮಾಹಿತಿ ನೀಡಿದ್ದಾರೆ. ಅಂದರೆ ಕೆಪಿಎಸ್‌ಸಿ ನ್ಯಾಯಾಲಯಕ್ಕೂ ತಪ್ಪು ಮಾಹಿತಿಯನ್ನು ನೀಡುತ್ತದೆ. ಯಾವುದೇ ಕೆಲಸವನ್ನೂ ಅದು ಜವಾಬ್ದಾರಿಯಿಂದ ಮಾಡುವುದಿಲ್ಲ ಎಂದು ಅಭ್ಯರ್ಥಿಗಳು ಆರೋಪಿಸುತ್ತಾರೆ.

30-90-120-300
ಪೂರ್ವಭಾವಿ ಪರೀಕ್ಷೆಯಲ್ಲಿ ಒಂದು ಪ್ರಶ್ನೆ ಪತ್ರಿಕೆ ಒಟ್ಟು 120 ಪ್ರಶ್ನೆಗಳನ್ನು ಹೊಂದಿರುತ್ತದೆ. 120 ಪ್ರಶ್ನೆಗೆ 300 ಅಂಕ. 1999ರಲ್ಲಿ ನಡೆದ ಪೂರ್ವಭಾವಿ ಪರೀಕ್ಷೆಯ ಕಾನೂನು ಐಚ್ಛಿಕ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ 30 ಪ್ರಶ್ನೆಗಳನ್ನು ಪಠ್ಯಕ್ರಮದ ಹೊರಗಿನಿಂದ ಕೇಳಲಾಗಿತ್ತು. ಇದರಿಂದ ಅಭ್ಯರ್ಥಿಗಳು ಉತ್ತರ ಗೊತ್ತಿಲ್ಲದೆ ವಿಚಲಿತರಾಗಿದ್ದರು.

`ಪಠ್ಯಕ್ರಮದಲ್ಲಿ ಇಲ್ಲದ ವಿಷಯದ ಪ್ರಶ್ನೆ ಕೇಳಿರುವುದರಿಂದ ನಮಗೆ ಅನ್ಯಾಯವಾಗಿದೆ. ನ್ಯಾಯ ಒದಗಿಸಿ ಕೊಡಬೇಕು' ಎಂದು ಅಭ್ಯರ್ಥಿಗಳು ಕೆಪಿಎಸ್‌ಸಿಗೆ ಮನವಿ ಮಾಡಿಕೊಂಡರು. ಇದಕ್ಕೆ ಆಯೋಗದಿಂದ ಯಾವುದೇ ಉತ್ತರ ಬರಲಿಲ್ಲ. ಆಗ ಅಭ್ಯರ್ಥಿಗಳಾದ ಎನ್.ವೀರಭದ್ರಸ್ವಾಮಿ, ಪ್ರಮೋದ್ ಮತ್ತಿತರರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿದರು.

ಆಗ ಎಚ್ಚೆತ್ತುಕೊಂಡ ಕೆಪಿಎಸ್‌ಸಿ, `ಪೂರ್ವಭಾವಿ ಪರೀಕ್ಷೆಯ ಕಾನೂನು ಐಚ್ಛಿಕ ವಿಷಯದ ಪತ್ರಿಕೆಯಲ್ಲಿ 30 ಪ್ರಶ್ನೆಗಳನ್ನು ಪಠ್ಯಕ್ರಮದ ಹೊರಗಿನಿಂದ ಕೇಳಿದ್ದು ನಿಜ. ಆದರೆ ಈಗ ಇದೊಂದೇ ವಿಷಯಕ್ಕೆ ಮರು ಪರೀಕ್ಷೆ ನಡೆಸಿದರೆ ಇಡೀ ಪ್ರಕ್ರಿಯೆ ವಿಳಂಬವಾಗುತ್ತದೆ. ಅಲ್ಲದೆ ಇತರ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ 30 ಪ್ರಶ್ನೆಗಳನ್ನು ಬಿಟ್ಟು ಉಳಿದ 90 ಪ್ರಶ್ನೆಗಳಿಗೇ 300 ಅಂಕಗಳನ್ನು ನೀಡಲಾಗುವುದು.

ಕಾನೂನು ಐಚ್ಛಿಕ ವಿಷಯ ಪಡೆದ ಪ್ರತಿ ಅಭ್ಯರ್ಥಿಗೆ 3.33 ಅಂಕ ನೀಡಲು ಆಯೋಗ 2002ರ ಜೂನ್ 9ರಂದು ನಿರ್ಣಯ ಕೈಗೊಂಡಿದೆ' ಎಂದು ನ್ಯಾಯ ಮಂಡಳಿಗೆ ತಿಳಿಸಿತು. ಎಲ್ಲ ಅಭ್ಯರ್ಥಿಗಳಿಗೂ ಕೃಪಾಂಕ ನೀಡಲು ಆಯೋಗ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಮೋದ್ ನ್ಯಾಯ ಮಂಡಳಿಗೆ ಸಲ್ಲಿಸಿದ್ದ ತಮ್ಮ ಅರ್ಜಿಯನ್ನು ವಾಪಸು ಪಡೆದರು. ಅವರು ಮುಖ್ಯ ಪರೀಕ್ಷೆಗೆ ಅರ್ಹರಾದರು. ಆದರೆ ಕೆಪಿಎಸ್‌ಸಿ ತಾನು ಮಾತು ಕೊಟ್ಟಂತೆ ಎಲ್ಲ ಅಭ್ಯರ್ಥಿಗಳಿಗೆ ತಲಾ 3.33 ಕೃಪಾಂಕ ನೀಡಲಿಲ್ಲ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಕೃಪಾಂಕ ನೀಡಿತು.

ಕೆಪಿಎಸ್‌ಸಿ ತನಗೆ ಬೇಕಾದವರಿಗೆ ಮಾತ್ರ ಕೃಪಾಂಕ ನೀಡಿದೆ. ಇದರಿಂದ ತಮಗೆ ಅನ್ಯಾಯವಾಗಿದೆ ಎಂದು ಇನ್ನೊಂದಿಷ್ಟು ಮಂದಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿದರು. ಆ ಅರ್ಜಿಗಳ ವಿಚಾರಣೆ ಇನ್ನೂ ನಡೆಯುತ್ತಿದೆ. ಈ ಮಧ್ಯೆ 1999ರ ಕೆಎಸ್‌ಎಸ್ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಯೊಬ್ಬರು ಮಾಹಿತಿ ಹಕ್ಕಿನ ಪ್ರಕಾರ ಕೆಪಿಎಸ್‌ಸಿಗೆ ಅರ್ಜಿ ಸಲ್ಲಿಸಿ, `ಕೃಪಾಂಕ ನೀಡುವ ನಿರ್ಣಯ ಕೈಗೊಳ್ಳುವ ಅಧಿಕಾರ ಕೆಪಿಎಸ್‌ಸಿಗೆ ಇದೆಯೇ' ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಕೆಪಿಎಸ್‌ಸಿ `ನಿರ್ಣಯ ಕೈಗೊಳ್ಳುವ ಅಧಿಕಾರ ಆಯೋಗಕ್ಕೆ ಇಲ್ಲ' ಎಂದು ಹೇಳಿತು.

ಮಾಹಿತಿ ಹಕ್ಕಿನ ಅರ್ಜಿಗೆ `ನಿರ್ಣಯ ಕೈಗೊಳ್ಳುವ ಅಧಿಕಾರ ಇಲ್ಲ ಎಂದು ಹೇಳುವ ಕೆಪಿಎಸ್‌ಸಿ ನ್ಯಾಯ ಮಂಡಳಿಗೆ ತಾನು ಕೃಪಾಂಕ ನೀಡುವ ನಿರ್ಣಯ ಕೈಗೊಂಡಿರುವುದಾಗಿ ಪ್ರಮಾಣಪತ್ರ ಸಲ್ಲಿಸಿದೆ.ಇದರಲ್ಲಿ ಯಾವುದು ನಿಜ. ಯಾವುದು ಸುಳ್ಳು ಎನ್ನುವುದೇ ಗೊತ್ತಾಗುವುದಿಲ್ಲ. ಕೆಪಿಎಸ್‌ಸಿ ಅಧಿಕಾರಿಗಳು ತಮಗೆ ಅನುಕೂಲವಾದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಮತ್ತು ಉದ್ಯೋಗ ಆಕಾಂಕ್ಷಿಗಳಿಗೆ ಯಾವುದೇ ನೆರವು ನೀಡುತ್ತಿಲ್ಲ' ಎಂದು ಅಭ್ಯರ್ಥಿಗಳು ಆರೋಪಿಸುತ್ತಾರೆ.

ಕಾನೂನು ಐಚ್ಛಿಕ ವಿಷಯದ ಅಭ್ಯರ್ಥಿಗಳಿಗೆ ಕೃಪಾಂಕ ನೀಡಿದ್ದರಿಂದ ತಮಗೆ ಅನ್ಯಾಯವಾಗಿದೆ ಎಂದು ಇತರ ವಿಷಯಗಳನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳೂ ನ್ಯಾಯಾಲಯಕ್ಕೆ ಹೋದರು. ಅದರ ವಿಚಾರಣೆ ಕೂಡ ಕಳೆದ 12 ವರ್ಷಗಳಿಂದ ನಡೆಯುತ್ತಲೇ ಇದೆ. ಇನ್ನೂ ಇತ್ಯರ್ಥವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT