ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಶಾಲಾ

Last Updated 5 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಮಧ್ಯಾಹ್ನ ಹನ್ನೆರಡರ ಸಮಯ. ಧರ್ಮಶಾಲಾದ ಹಸಿರು ಅಂಗಳದ ತುಂಬಾ ಚೆಲ್ಲಿದ್ದ ಪ್ರಖರ ಬಿಸಿಲಿನಲ್ಲಿ ಸ್ವೆಟರ್, ಕೈಗವಸು, ತಲೆಗೆ  ಟೋಪಿ ಇವೆಲ್ಲ ಮಂಕಾಗಿದ್ದವು. ಎತ್ತರದ ಓಕ್ ಮರಗಳ ಕಾಡಿನಿಂದ ಬೀಸಿ ಬರುತ್ತಿದ್ದ ತಣ್ಣನೆಯ ಗಾಳಿ ದೂರದ ಹಿಮಬೆಟ್ಟಗಳನ್ನು ಮುಟ್ಟಿ ಮರಳುತ್ತಿತ್ತು. ಮತ್ತಷ್ಟು ಚಳಿಯನ್ನು ಹೊತ್ತೂ ತರುತ್ತಿತ್ತು. ಓಕ್ ಮರಗಳ ಅರಣ್ಯ ಮತ್ತು ಎತ್ತರದ ಮಂಜಿನ ಶಿಖರಗಳ ನಡುವೆ ಇರುವ ಈ ಊರಿನಲ್ಲಿ ಹಗಲು ಹೊತ್ತಿನಲ್ಲಿ ಬಿಸಿಲು ಬಿದ್ದರೂ ಮೈ ಕೊರೆಯುವ ಚಳಿ.  

ಅದು ಧರ್ಮಶಾಲಾ!
ಸುಮಾರು ಇಪ್ಪತ್ತೊಂಬತ್ತು ಕಿ.ಮೀ. ವ್ಯಾಪ್ತಿಯ ಧರ್ಮಶಾಲಾ ಎರಡು ಭಾಗಗಳಲ್ಲಿ ವಿಂಗಡಣೆಯಾಗಿದೆ. ಕೆಳಭಾಗದ ಧರ್ಮಶಾಲಾ ಮತ್ತು ಮೇಲ್ಭಾಗದ ಧರ್ಮಶಾಲಾ (ಮೆಕ್ಲೋಡ್‌ಗಂಜ್) ಎಂದು ವಿಭಾಗಗಳಾಗಿವೆ. ಸಾಗರಮಟ್ಟದಿಂದ 1457 ಮೀಟರ್ ಎತ್ತರದಲ್ಲಿರುವ ಕೆಳಭಾಗದ ಧರ್ಮಶಾಲಾ ಕಾಂಗ್ರಾ ಕಣಿವೆಯಲ್ಲಿದೆ. ದೌಲಧಾರ ಪರ್ವತಗಳ ನಡುವಿನ ಈ ಕಣಿವೆಯಲ್ಲಿ ಅಸಂಖ್ಯಾತ ಗಿಡಮೂಲಿಕೆಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ. ಸ್ಥಳೀಯ ಭಾಷೆಯಲ್ಲಿ ದೌಲಧಾರ್ ಎಂದರೆ ಇಲ್ಲಿಯ ಪರ್ವತಗಳ ತುತ್ತತುದಿಯನ್ನು ಟೋಪಿಯಂತೆ ಅಲಂಕರಿಸಿರುವ ಬಿಳಿ ಹಿಮ.

ಬ್ರಿಟೀಷರು ಕಾಲಿಡುವ ಮುನ್ನ ಕಟೋಚಿ ಸಂಸ್ಥಾನಿಕರು ಕಾಂಗ್ರಾ ಪ್ರದೇಶವನ್ನು ಆಳುತ್ತಿದ್ದರು. ಈ ರಾಜಪರಿವಾರದ ಒಂದು ಸುಂದರವಾದ ಅರಮನೆ ‘ಕ್ಲೌಡ್ಸ್ ಎಂಡ್ ವಿಲ್ಲಾ’ ಇಂದಿಗೂ ಇದೆ. 1848ರಲ್ಲಿ ಬ್ರಿಟೀಷರು ಧರ್ಮಶಾಲಾದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದರು.

1855ರಲ್ಲಿ ಕಾಂಗ್ರಾಕ್ಕೆ ಧರ್ಮಶಾಲಾ ರಾಜಧಾನಿಯಾಗಿತ್ತು. 1860ರಲ್ಲಿ ಗೂರ್ಖಾ ಲೈಟ್‌ಇನ್‌ಫೆಂಟ್ರಿ ಸೈನಿಕ ದಳವೂ ಇಲ್ಲಿ ತಮ್ಮ ನೆಲೆ ಸ್ಥಾಪಿಸಿಕೊಂಡವು. ಪ್ರಥಮ ಮತ್ತು ದ್ವಿತೀಯ ವಿಶ್ವಯುದ್ಧಗಳಲ್ಲಿ ಈ ಗೂರ್ಖಾ ಪಡೆ ತೋರಿದ ಶೌರ್ಯ ವಿಶ್ವಪ್ರಸಿದ್ಧವಾಯಿತು. ಈಗಲೂ ಇಲ್ಲಿಯ ಗೂರ್ಖಾ ಪಡೆ ದೇಶದ ಸೈನ್ಯದಲ್ಲಿ ವಿಶೇಷ ಸ್ಥಾನಮಾನ ಪಡೆದಿದೆ. ಬ್ರಿಗೇಡಿಯರ್ ಶೇರ್‌ಜಂಗ್ ಥಾಪಾ, ಭಾರತೀಯ ಸೈನ್ಯದ ಕ್ಯಾಪ್ಟನ್ ರಾಮಸಿಂಗ್ ಠಾಕೂರ್ ಅವರ ಶೌರ್ಯದ ಬಗ್ಗೆ ಇಲ್ಲಿ ಹಲವು ಕಥೆಗಳಿವೆ.

ಧರ್ಮಶಾಲಾ ಈಗ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ. ಉಣ್ಣೆಬಟ್ಟೆ, ಮದ್ಯ, ಮಾಂಸದೂಟದ ಅಂಗಡಿಗಳು ಇಲ್ಲಿ ಸಾಕಷ್ಟಿವೆ. ಅಕ್ಕಿ, ಗೋಧಿ ಮತ್ತು ಚಹಾ ಇಲ್ಲಿಯ ಪ್ರಮುಖ ಬೆಳೆಗಳು. ಇಲ್ಲಿ ಇರುವವರು ಬಹುತೇಕ ಭಾರತೀಯ ಮೂಲದವರು.

ಮೆಕ್ಲೋಡಗಂಜ್‌ನಲ್ಲಿ ಕನ್ನಡ!
ಕೆಳಭಾಗದ ಧರ್ಮಶಾಲಾದಿಂದ ಒಂಬತ್ತು ಕಿ.ಮೀ. ದೂರದಲ್ಲಿರುವ ಮೇಲ್ಭಾಗದ ಧರ್ಮಶಾಲಾಕ್ಕೆ ಮೆಕ್ಲೋಡ್‌ಗಂಜ್ ಎನ್ನುತ್ತಾರೆ. ಇದು ಟಿಬೆಟಿಯನ್ನರ ಪವಿತ್ರ ಸ್ಥಳ. ಇಲ್ಲಿಯ ಬಹುತೇಕ ಎಲ್ಲ ಟಿಬೆಟಿಯನ್ನರೂ ಕನ್ನಡ ಮಾತನಾಡುತ್ತಾರೆ. ಮುಂದಿರುವವರು ಕರ್ನಾಟಕದವರು ಎಂದು ಗೊತ್ತಾದರೆ ತಾವೇ ಕನ್ನಡದಲ್ಲಿ ಮಾತು ಆರಂಭಿಸುತ್ತಾರೆ. ಇದಕ್ಕೆ ಕಾರಣ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮತ್ತು ಮೈಸೂರು ಸಮೀಪದ ಬೈಲುಕುಪ್ಪೆಯೊಂದಿಗೆ ಇವರ ಅವಿನಾಭಾವ ನಂಟು.

ಇಲ್ಲಿ ಬೌದ್ಧಗುರು ದಲೈಲಾಮ ಅವರ ಭವ್ಯ ಮಂದಿರವಿದೆ. ಸಮುದ್ರಮಟ್ಟದಿಂದ 5580 ಅಡಿ ಎತ್ತರದಲ್ಲಿರುವ ಮೆಕ್ಲೋಡಗಂಜ್‌ನಲ್ಲಿ ಶೇ.75ರಷ್ಟು ಟಿಬೆಟಿಯನ್ನರು ಇದ್ದಾರೆ. ಹಲವು ದೇಶಗಳ ಖಾದ್ಯಗಳೂ ಇಲ್ಲಿ ಸಿಗುತ್ತವೆ. ವಿಶೇಷವಾಗಿ ಇಟಾಲಿಯನ್, ಟೆಬೆಟಿಯನ್, ಅಮೆರಿಕನ್, ಚೈನಿಸ್, ನೇಪಾಳಿ, ಭೂತಾನ್ ಮಾತ್ರವಲ್ಲದೆ ಉತ್ತರ ಭಾರತ, ಪಂಜಾಬಿ ರುಚಿಯೂ ಲಭ್ಯ.

ಮೆಕ್ಲೋಡಗಂಜ್‌ನ ಎಲ್ಲ ರಸ್ತೆಗಳಲ್ಲಿಯೂ ಉಣ್ಣೆಯ ಬಟ್ಟೆಗಳು, ಲೋಹದ ಮೂರ್ತಿಗಳು, ಕಾಶ್ಮೀರಿ ಶಾಲ್‌ಗಳು, ವಿಶೇಷವಾಗಿ ಬುದ್ಧನ ಮೂರ್ತಿಗಳು ಸಿಗುತ್ತವೆ.

1905ರಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡು, ಧರ್ಮಶಾಲಾ ಬಹುತೇಕ ನಾಶವಾಗಿತ್ತು. ಆದರೆ ಮತ್ತೆ ಎದ್ದುನಿಂತು ತನ್ನ ಹಳೆಯ ವೈಭವದಲ್ಲಿ ಮೆರೆಯುತ್ತಿದೆ. ಗೂರ್ಖಾಗಳು ಧರ್ಮಶಾಲಾವನ್ನು ಮತ್ತೆ ಕಟ್ಟಿದ ರೀತಿ ಅದ್ಭುತ.

ದಲೈಲಾಮಾ ಮಂದಿರ, ಭಕ್ಷುನಾಥ ಮಂದಿರ, ದಾಲ್ ಸರೋವರ, ಕರೇರಿ ಸರೋವರಗಳಿಗೆ ಇಲ್ಲಿಂದ ಹೋಗಲು ಸೌಲಭ್ಯಗಳಿವೆ. ಚಾರಣಪ್ರಿಯರಿಗೂ ಇಲ್ಲಿ ವಿಪುಲ ಅವಕಾಶಗಳಿವೆ. ಕುಟುಂಬದೊಂದಿಗೆ ಹೋಗುವವರು ಮಕ್ಕಳ, ವೃದ್ಧರ ಆರೋಗ್ಯ ಕಾಳಜಿಗೆ ಔಷಧಗಳನ್ನು, ಹೆಚ್ಚಿನ ಪ್ರಮಾಣದಲ್ಲಿ ಉಣ್ಣೆಯ ಬಟ್ಟೆಗಳನ್ನು ಒಯ್ಯುವುದು ಸೂಕ್ತ. ಹಿಮಾಚಲಪ್ರದೇಶ ಸರ್ಕಾರದ ಪ್ಯಾಕೇಜ್ ಟೂರಿಸ್‌ಂನಲ್ಲಿ ಪ್ರವಾಸ ಕೈಗೊಳ್ಳುವುದು ಸುರಕ್ಷಿತ.

ಪ್ರವಾಸಿಗರು ಇಲ್ಲಿರುವವರೆಗೂ ಚಳಿಯ ಬಗ್ಗೆ ಬೇಸರಪಟ್ಟುಕೊಂಡರೂ ಮರಳಿ ಬರುವಾಗ ಮತ್ತೆ ಇಲ್ಲಿಗೆ ಭೇಟಿ ನೀಡುವ ಆಸೆಯಂತೂ ಇದ್ದೇ ಇರುತ್ತದೆ!

ಹೋಗುವುದು ಹೇಗೆ?
ರೈಲು, ಬಸ್, ವಿಮಾನಗಳ ಮೂಲಕ ಧರ್ಮಶಾಲಾಕ್ಕೆ ಹೋಗಬಹುದು. ದೆಹಲಿ, ಪಠಾಣ್ ಕೋಟ್, ಚಂಡೀಗಡಗಳಿಂದ ನೇರ ರೈಲು ಮತ್ತು ಬಸ್ ಸಂಪರ್ಕವಿದೆ. ವಿಮಾನದ ಮೂಲಕ ಪ್ರಯಾಣಿಸುವವರು ದೆಹಲಿಯಿಂದ ಕಾಂಗ್ರಾ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬಹುದು. ಕಾಂಗ್ರಾದಿಂದ ರಸ್ತೆ ಮಾರ್ಗವಾಗಿ ಹತ್ತು ಕಿಲೋಮೀಟರ್ ದೂರವಿರುವ ಧರ್ಮಶಾಲಾಕ್ಕೆ ಹೋಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT