ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆಯಲ್ಲಿ ಭ್ರಷ್ಟಾಚಾರದ ಕೆಸರೆರಚಾಟ

Last Updated 9 ಜೂನ್ 2011, 10:00 IST
ಅಕ್ಷರ ಗಾತ್ರ

ಬೆಳಗಾವಿ: ದೇಶದ ಎಲ್ಲೆಡೆ ಭ್ರಷ್ಟಾಚಾರದ್ದೇ ಗದ್ದಲ ನಡೆಯುತ್ತಿದ್ದರೆ ಇತ್ತ ಬೆಳಗಾವಿ ಮಹಾನಗರ ಪಾಲಿಕೆಯ ಸರ್ವ ಭಾಷಿಕ ಸಂವಿಚಾರಿ ವಿಕಾಸ ವೇದಿಕೆ ನೇತೃತ್ವದ ಆಡಳಿತ ಪಕ್ಷದಲ್ಲಿ ಮುಕ್ತವಾಗಿ `ಭ್ರಷ್ಟಾಚಾರ~ ನಡೆಸಿರುವ ಬಗ್ಗೆ ಕೆಸರೆರಚಾಟ ನಡೆದಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ಮಂದಾ ಬಾಳೇಕುಂದ್ರಿ, `ಪಾಲಿಕೆ ಸಾಮಾನ್ಯ ಸಭೆ ನಡೆಸಲು ವೇದಿಕೆಯ ಎಲ್ಲ ಸದಸ್ಯರು ಸಹಕಾರ ನೀಡಲು 15ರಿಂದ 20 ಲಕ್ಷ ರೂಪಾಯಿ ನೀಡಬೇಕು ಎಂದು ಉಪ ಮೇಯರ್ ಧನರಾಜ್ ಗೌಳಿ ಕೇಳಿದ್ದಾರೆ~ ಎಂದು ನೇರವಾಗಿ ಆರೋಪಿಸಿದರು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ವೇದಿಕೆ ಮುಖಂಡ ಸಾಂಭಾಜಿ ಪಾಟೀಲ, ಕಳೆದ ಬಾರಿ ನಡೆದ ಉಪಮೇಯರ್ ಚುನಾವಣೆಯಲ್ಲಿ ಗೌಳಿಯನ್ನು ಆಯ್ಕೆಮಾಡಲೆಂದು ಮತ ಚಲಾಯಿಸಲು ವೇದಿಕೆಯ ಎಲ್ಲ ಸದಸ್ಯರಿಗೆ (ಮಂದಾ ಬಾಳೇಕುಂದ್ರಿ ಸೇರಿದಂತೆ) 50 ಸಾವಿರ ರೂಪಾಯಿ ನೀಡಲಾಗಿದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ನನಗೆ ತಿಳಿಸಿದ್ದರು~ ಎಂದು ಆರೋಪಿಸಿದರು.

`ವೇದಿಕೆಯ ಸದಸ್ಯರು ಹಾಗೂ ಅಧಿಕಾರಿಗಳು ಆಡಳಿತಾತ್ಮಕ ಸಭೆ ನಡೆಸಲು ನನಗೆ ಸಹಕಾರ ನೀಡುತ್ತಿಲ್ಲ. ನನ್ನ ಅಧಿಕಾರ ಚಲಾಯಿಸಲು ಬಿಡುತ್ತಿಲ್ಲ. ಹೀಗಾಗಿ ಕಾಯ್ದು ನೋಡುವ ತಂತ್ರವನ್ನು ಪಾಲಿಸುತ್ತಿದ್ದೇನೆ~ ಎಂದು ಬಾಳೇಕುಂದ್ರಿ ತಿಳಿಸಿದರು.

`ಆಡಳಿತಾತ್ಮಕ ಸಭೆಯಲ್ಲಿ ವೇದಿಕೆ ಮುಖಂಡ ಪಾಟೀಲ ಹಾಗೂ ಪ್ರತಿಪಕ್ಷದ ನಾಯಕ ನೇತಾಜಿ ಜಾಧರ ಪಾಲ್ಗೊಂಡರೆ ಶಾಸಕ ಅಭಯ ಪಾಟೀಲ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಫಿರೋಜ್ ಸೇಟ್ ಸಿಟ್ಟಾಗುತ್ತಾರೆ ಎಂದು ಗೌಳಿ ಸಭೆಗೆ ವಿರೋಧ ವ್ಯಕ್ತಪಡಿಸಿದರು.

ನಂತರ, ಸಭೆ ನಡೆಸಲು ಸಹಕಾರ ನೀಡಬೇಕೆಂದರೆ, 15ರಿಂದ 20 ಲಕ್ಷ ರೂಪಾಯಿ ಕೊಡಬೇಕು ಎಂದು  ಸದಸ್ಯನ ಮೂಲಕ ಸಂದೇಶ ಕಳುಹಿಸಿ ಕೊಟ್ಟರು. ನಾನೊಬ್ಬ ಮಹಿಳೆ ಹಾಗೂ ಪರಿಶಿಷ್ಟ ಜಾತಿಯವಳಾಗಿರುವುದೇ ಇದಕ್ಕೆ ಕಾರಣವಂತೆ~ ಎಂದು ಬಾಳೇಕುಂದ್ರಿ ಅಳಲು ತೋಡಿಕೊಂಡರು.

`ಆಯುಕ್ತರು ಹಾಗೂ ಇನ್ನಿತರ ಅಧಿಕಾರಿಗಳು ನನಗೆ ಸಹಕಾರ ನೀಡುತ್ತಿಲ್ಲ. ಸಾಮಾನ್ಯಸಭೆ ನಡೆಸುತ್ತಿಲ್ಲ ಎಂಬ ಆರೋಪ ನನ್ನ ಮೇಲೆ ಬರುತ್ತಿದೆ. ನಾನಾದರೂ ಏನು ಮಾಡಲಿ?~ ಎಂದು ಮೇಯರ್ ಪ್ರಶ್ನಿಸಿದರು.
ಸಾಂಭಾಜಿ ಪಾಟೀಲ ಮಾತನಾಡಿ, `ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಸಂದರ್ಭದಲ್ಲಿ ಮತ ಚಲಾಯಿಸಲು ಹಣ ಕೇಳಿರುವುದು ಪಾಲಿಕೆಯಲ್ಲಿ ಎಲ್ಲರಿಗೂ ತಿಳಿದಿರುವ ವಿಚಾರ.
 
ಶಾಸಕರಾದ ಅಭಯ ಪಾಟೀಲ ಹಾಗೂ ಫಿರೋಜ್ ಸೇಟ್ ಅವರಿಗೆ ಸಂಸದ ಸುರೇಶ ಅಂಗಡಿ ಮನೆಯಲ್ಲಿ ಯಲ್ಲಪ್ಪ ಕುರಬಾರ್ ತಮ್ಮನ್ನು ಮೇಯರ್ ಮಾಡಲೆಂದು ದಳವಾಯಿ ಎಂಬ ವ್ಯಕ್ತಿಯ ಸಮ್ಮುಖದಲ್ಲಿ 25 ಲಕ್ಷ ರೂಪಾಯಿ ನೀಡಿದ್ದರು. ಮುಂದಿನ ಮೇಯರ್ ಚುನಾವಣೆಯಲ್ಲಿ ಎನ್.ಬಿ. ನಿರವಾಣಿ 30 ಲಕ್ಷ ರೂಪಾಯಿ ನೀಡಿದ್ದರು ಎಂದು ಹಿರಿಯ ಸದಸ್ಯ ದೀಪಕ್ ವಾಘೇಲಾ ತಿಳಿಸಿದ್ದರು~ ಎಂದು ವಿವರಿಸಿದರು.

ಶಾಸಕರ ಹಸ್ತಕ್ಷೇಪದಿಂದಾಗಿ ಪಾಲಿಕೆಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಬಜೆಟ್ ಮಂಡಿಸಿಲ್ಲ ಎಂದು ಅವರು ಹೇಳಿದರು. ಜೂನ್ 22 ಅಥವಾ 23ರಂದು ಸಾಮಾನ್ಯ ಸಭೆ ನಡೆಸಲು ಪ್ರಯತ್ನಿಸಲಾ ಗುವುದು ಎಂದು ಪಾಟೀಲ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT