ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಗಂಬರ ಜಯಂತಿ ಸಂಭ್ರಮ

Last Updated 6 ಫೆಬ್ರುವರಿ 2012, 9:40 IST
ಅಕ್ಷರ ಗಾತ್ರ

ಗಂಗಾವತಿ: ಇಸ್ಲಾಂ ಧರ್ಮ ಪ್ರವರ್ತಕ ಮೊಹಮ್ಮದ್ ಪೈಗಂಬರ್ ಅವರ 1433ನೇ ಜನ್ಮ ದಿನಾಚರಣೆಯ ಅಂಗವಾಗಿ ಷಹರದ ಮೊಹಮದೀಯರು ಭಾನುವಾರ ಈದ್-ಎ-ಮಿಲಾದ್‌ನ್ನು ಅತ್ಯಂತ ವಿಜೃಂಭಣೆ, ಸಡಗರ, ಸಂತಸದಿಂದ ಆಚರಿಸಿದರು.

ನಗರದ ಬೇರೂನಿ ಅಬಾದಿ ಮಸೀದಿಯಿಂದ ಆರಂಭವಾದ ಗಂಧದ ಮೆರವಣಿಗೆ ಬಸ್ ನಿಲ್ದಾಣ ರಸ್ತೆ ಮಾರ್ಗವಾಗಿ ಸಾಗಿ ಪೀರಾಜಾದೆ ಮೊಹಲ್ಲಾ, ಪಂಪಾನಗರ ವೃತ್ತ, ಬಸವಣ್ಣ ವೃತ್ತಗಳನ್ನು ಹಾಯ್ದು ಜಾಮೀಯಾ ಮಸೀದಿಗೆ ಆಗಮಿಸಿತು.

ಸುಮಾರು ಎರಡು ಗಂಟೆಗೂ ಅಧಿಕ ಕಾಲ ನಡೆದ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮೊಹಮದೀಯರು ಭಾಗವಹಿಸಿ ಧಾರ್ಮಿಕ ಮತ್ತು ಇಸ್ಲಾಂ ಪ್ರಜ್ಞೆ ಮೆರೆದರು. ಶಾಲಾ ಮಕ್ಕಳಿಂದ ಹಿಡಿದು ವೃದ್ಧರವರೆಗಿನ ಎಲ್ಲ ವಯೋಮಾನದವರು ಪಾಲ್ಗೊಂಡಿದ್ದರು. ಮೆರವಣಿಗೆಯೂದ್ದಕ್ಕೂ ಇಸ್ಲಾಂ ಧರ್ಮದ ಪವಿತ್ರ ಹಾಗೂ ಹಜ್‌ಯಾತ್ರಾ ಕ್ಷೇತ್ರಗಳಾದ ಮೆಕ್ಕಾ, ಮದೀನಾ ಪ್ರಾರ್ಥನಾ ಮಂದಿರ ಹೋಲುವ ಬುರುಜು, ಗುಂಬಾಜು ಮೊದಲಾದ ಸ್ತಬ್ಧ ಚಿತ್ರ ಆಕರ್ಷಕವಾಗಿದ್ದು, ಗಮನ ಸೆಳೆದವು.

ಇಸ್ಲಾಂ ಧರ್ಮದ ಸಾಂಪ್ರದಾಯಿಕ ದಿರಿಸಾದ ಜುಬ್ಬಾ-ಪೈಜಾಮು, ಗೌನು-ಕೋಟು, ನಿಲುವಂಗಿ, ಮೇಲು ಹೊದಿಕೆ ಮೊದಲಾದವು ತೊಟ್ಟಿದ್ದ ಯುವಕರು ತಲೆಗೊಂದು ಟೋಪಿ ಹಾಕಿ ಮೆರವಣಿಗೆಯಲ್ಲಿ ಗಮನ ಸೆಳೆದರು.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರು ಬಾಯಾರಿಕೆ, ಹಸಿವಿನಿಂದ ಬಳಲದಿರಲಿ ಎಂದು ಸಮಾಜದ ಹಲವರು ರಸ್ತೆಯೂದ್ದಕ್ಕೂ ಅಲಲ್ಲಿ, ಕುಡಿಯುವ ನೀರು, ಷರಬತ್ತು, ಹಾಲು, ಮಜ್ಜಿಗೆ, ಬಾಳೆಹಣ್ಣು, ಬಿಸ್ಕತ್ತು, ಉಪ್ಮಾ, ಸಿರಾ ಮೊದಲಾದ ವ್ಯವಸ್ಥೆ ಮಾಡಿದ್ದರು.

ಮೆರವಣಿಗೆ ಜಾಮೀಯಾ ಮಸೀದಿ ಸೇರುತ್ತಿದ್ದಂತೆಯೆ ಧಾರ್ಮಿಕ ವಿಧಿ ಪೂರೈಸಿ ಸಾಮೂಹಿಕ ಪ್ರಾರ್ಥನೆ  ಸಲ್ಲಿಸಲಾಯಿತು. ಮಸೀದಿಯ ಮೌಲ್ವಿಗಳು ಮೊಹಮ್ಮದ್ ಪೈಗಂಬರ್ ಅವರ ಸಂರಕ್ಷಿತ ತಲೆಯ ರೋಮ ದರ್ಶನ ಮಾಡಿಸಿ, ಪೈಗಂಬರ್ ಅವರ ಜೀವನ ಸಂದೇಶ ಸಾರಿದರು.

ಸಮಾಜದ ಬಡ, ದಲಿತರಿಗಾಗಿ ಸಿಪಿಎಸ್ ಶಾಲೆಯ ಆವರಣ, ಅಂಗಡಿ ಸಂಗಣ್ಣಕ್ಯಾಂಪ್, ಇಲಾಹಿ ಕಾಲೋನಿ, ಹಿರೇಜಂಕತಲ್, ಇಸ್ಲಾಂಪುರ ಸೇರಿದಂತೆ ನಗರದ ವಿವಿಧ ಭಾಗದಲ್ಲಿ ಆಯಾ ಮೊಹಲ್ಲಾದ ಮಸೀದಿಗಳ ನೇತೃತ್ವದಲ್ಲಿ ಸಾಮೂಹಿಕ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT